ಗುರುವಾರ , ಸೆಪ್ಟೆಂಬರ್ 23, 2021
22 °C
ಟಿ20 ಸರಣಿ

IND VS WI | ರಾಹುಲ್ ಕಮಾಲ್, ರೋಹಿತ್–ವಿರಾಟ್ ವೀರಾವೇಷ: ವಿಂಡೀಸ್‌ಗೆ ಬೃಹತ್ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಟಿ20 ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್‌ ಇಂಡೀಸ್‌ ತಂಡ ಫೀಲ್ಡಿಂಗ್‌ ಆಯ್ಕೆಮಾಡಿಕೊಂಡು ಎಡವಟ್ಟು ಮಾಡಿಕೊಂಡಿತು. ಟಾಸ್‌ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವಿರಾಟ್‌ ಕೊಹ್ಲಿ ಪಡೆ ರನ್‌ಗಳ ಶಿಖರ ಕಟ್ಟಿತು.

ಇನಿಂಗ್ಸ್‌ ಆರಂಭಿಸಿದ ಹಿಟ್‌ ಮ್ಯಾನ್‌ ರೋಹಿತ್‌ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್‌ ರಾಹುಲ್‌ ಮೊದಲ ವಿಕೆಟ್‌ಗೆ 11.4 ಓವರ್‌ಗಳಲ್ಲಿ 135 ರನ್‌ಗಳಿಸಿ ಅಬ್ಬರಿಸಿದರು. 34 ಎಸೆತಗಳಲ್ಲಿ 6 ಬೌಂಡರಿ 5 ಸಿಕ್ಸರ್‌ ಸಹಿತ 71 ರನ್‌ ಗಳಿಸಿದ್ದ ರೋಹಿತ್‌ ಕೆಸ್ರಿಕ್‌ ವಿಲಿಯಮ್ಸನ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು.

ಇದನ್ನೂ ಓದಿ: ವಿರಾಟ್ ಕೊಹ್ಲಿ–ರೋಹಿತ್ ಶರ್ಮಾ ಪೈಪೋಟಿ!

ಬಳಿಕ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ವಿಕೆಟ್ ಕೀಪರ್‌ ರಿಷಭ್‌ ಪಂತ್‌ ಮತ್ತೊಮ್ಮೆ ಅವಕಾಶ ಬಳಸಿಕೊಳ್ಳುವಲ್ಲಿ ವಿಫಲರಾದರು.

ಬಳಿಕ ಬಂದ ವಿರಾಟ್‌ ಕೊಹ್ಲಿ ವೀರಾವೇಷದಿಂದ ಬ್ಯಾಟ್‌ ಬೀಸಿದರು. ಕೇವಲ 29 ಎಸೆತಗಳಲ್ಲಿ ಏಳು ಭರ್ಜರಿ ಸಿಕ್ಸರ್‌ ಹಾಗೂ 4 ಬೌಂಡರಿ ಸಿಡಿಸಿದ ಅವರು ಎಪ್ಪತ್ತು ರನ್‌ ಚಚ್ಚಿದರು.

ಇದನ್ನೂ ಓದಿ: ಮತ್ತೆರಡು ದಾಖಲೆಗಳ ಮೇಲೆ ಕ್ಯಾಪ್ಟನ್‌ ಕೊಹ್ಲಿ ಕಣ್ಣು

ಆರಂಭದಿಂದಲೂ ಅಬ್ಬರಿಸಿದ ಕನ್ನಡಿಗ ರಾಹುಲ್‌ 56 ಎಸೆತಗಳಲ್ಲಿ 91 ರನ್‌ ಗಳಿಸಿದರು. ಶತಕ ಹೊಸ್ತಿಲಲ್ಲಿ ಸಿಕ್ಸರ್‌ ಸಿಡಿಸಲು ಯತ್ನಿಸಿ ಶೆಲ್ಡನ್ ಕಾಟ್ರೆಲ್‌ಗೆ ವಿಕೆಟ್‌ ಒಪ್ಪಿಸಿದರು.

ಅಂತಿಮವಾಗಿ ಭಾರತ ತಂಡ ಕೇವಲ 3 ವಿಕೆಟ್‌ ನಷ್ಟಕ್ಕೆ 240 ರನ್‌ ಕಲೆ ಹಾಕಿತು.

ರೋಹಿತ್‌ ಶರ್ಮಾ 400 ಸಿಕ್ಸ್‌
ಇನಿಂಗ್ಸ್‌ನಲ್ಲಿ ಒಟ್ಟು 5 ಸಿಕ್ಸರ್‌ ಸಿಡಿಸಿದ ರೋಹಿತ್‌ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಸಿಕ್ಸರ್‌ ಗಳಿಕೆಯನ್ನು 404ಕ್ಕೆ ಹೆಚ್ಚಿಸಿಕೊಂಡರು. ಆ ಮೂಲಕ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಸಿಕ್ಸರ್‌ ಸಿಡಿಸಿದ ದಾಖಲೆ ವೆಸ್ಟ್ಇಂಡೀಸ್‌ನ ಕ್ರಿಸ್‌ ಗೇಲ್‌ ಹೆಸರಿನಲ್ಲಿದೆ. ಅವರು 534 ಸಿಕ್ಸರ್‌ ಬಾರಿಸಿದ್ದಾರೆ. ನಂತರದ ಸ್ಥಾನದಲ್ಲಿ ಪಾಕಿಸ್ತಾನದ ಶಾಹಿದ್‌ ಅಫ್ರಿದಿ(476) ಇದ್ದಾರೆ.

ಗೇಲ್‌ ಏಕದಿನ ಕ್ರಿಕೆಟ್‌ನಲ್ಲಿ 331, ಟೆಸ್ಟ್‌ ಕ್ರಿಕೆಟ್‌ನಲ್ಲಿ 98 ಹಾಗೂ ಟಿ20ಯಲ್ಲಿ 105 ಸಿಕ್ಸರ್‌ ಚಚ್ಚಿದ್ದಾರೆ.

351 ಸಿಕ್ಸರ್‌ ಸಿಡಿಸಿ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಸಿಕ್ಸರ್‌ ಗಳಿಸಿದ ಆಟಗಾರ ಎನಿಸಿರುವ ಅಫ್ರಿದಿ ಟೆಸ್ಟ್‌ ಹಾಗೂ ಟಿ20ಯಲ್ಲಿ ಕ್ರಮವಾಗಿ 52 ಮತ್ತು 73 ಸಿಕ್ಸರ್‌ ಬಾರಿಸಿದ್ದಾರೆ.

ಟಿ20 ಯಲ್ಲಿ 120 ಸಿಕ್ಸರ್‌ ಹೊಡೆದು ಮೊದಲ ಸ್ಥಾನದಲ್ಲಿರುವ ರೋಹಿತ್‌ ಶರ್ಮಾ, ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಕ್ರಮವಾಗಿ 232 ಹಾಗೂ 52 ಸಿಕ್ಸರ್‌ ದಾಖಲಿಸಿದ್ದಾರೆ.

ಅತಿಹೆಚ್ಚು ರನ್‌: ಅಗ್ರಸ್ಥಾನ ಹಂಚಿಕೊಂಡ ನಾಯಕ–ಉಪನಾಯಕ
ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಸ್ಥಾನಕ್ಕೆ ಲಗ್ಗೆ ಹಾಕುವ ಹಣಾಹಣಿ ಕಳೆದ ಒಂದು ತಿಂಗಳಿಂದಲೂ ನಡೆದೇ ಇತ್ತು. ಈ ಪಟ್ಟಿಯಲ್ಲಿ ಒಂದು ತಿಂಗಳ ಹಿಂದೆ ಅಗ್ರಸ್ಥಾನಕ್ಕೆ ಏರಿದ್ದ ರೋಹಿತ್ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ ಕೊಹ್ಲಿ ಹಿಂದಿಕ್ಕಿದ್ದರು.

ಈ ಪಂದ್ಯಕ್ಕೂ ಮುನ್ನ ರೋಹಿತ್ 95 ಪಂದ್ಯಗಳನ್ನು ಆಡಿ 2562 ರನ್‌ ಪೇರಿಸಿದ್ದರು. ಕೊಹ್ಲಿ ವಿರಾಟ್ 69 ಪಂದ್ಯಗಳಿಂದ 2563 ರನ್‌ ಗಳಿಸಿದ್ದರು. ಕೇವಲ ಒಂದು ರನ್‌ ಅಂತರದಿಂದ ಮುಂದಿದ್ದ ನಾಯಕ ಮುಂದಿದ್ದರು.

ಈ ಇನಿಂಗ್ಸ್‌ನಲ್ಲಿ ಮೊದಲು 71 ರನ್‌ ಗಳಿಸಿದ ರೋಹಿತ್‌ ತಮ್ಮ ರನ್‌ ಗಳಿಕೆಯನ್ನು 2,633 ಕ್ಕೆ ಹೆಚ್ಚಿಸಿಕೊಂಡು ಕೊಹ್ಲಿಗಿಂತ 69 ರನ್‌ ಮುಂದಿದ್ದರು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಕೊಹ್ಲಿ 70 ರನ್‌ ಗಳಿಸಿ ರೋಹಿತ್‌ ರಷ್ಟೇ ರನ್‌ ಕಲೆ ಹಾಕಿದರು. ಹೀಗಾಗಿ ವರ್ಷಾಂತ್ಯದಲ್ಲಿ ಈ ಇಬ್ಬರೂ ಅಗ್ರಪಟ್ಟ ಉಳಿಸಿಕೊಂಡರು.

ಸ್ಕೋರ್‌ ವಿವರ
ಭಾರತ: 
ರೋಹಿತ್‌ ಶರ್ಮಾ 71 ರನ್‌, ಕೆ.ಎಲ್‌ ರಾಹುಲ್‌ 91 ರನ್‌, ವಿರಾಟ್‌ ಕೊಹ್ಲಿ ಔಟಾಗದೆ 70 ರನ್‌
ಶೇಲ್ಡನ್‌ ಕಾಟ್ರೆಲ್‌ 40ಕ್ಕೆ 1 ವಿಕೆಟ್‌, ಕೆಸ್ರಿಕ್ ವಿಲಿಯಮ್ಸ್ 37ಕ್ಕೆ 1 ವಿಕೆಟ್‌, ಕೀರನ್ ಪೊಲಾರ್ಡ್ 33ಕ್ಕೆ 1 ವಿಕೆಟ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು