ಸೋಮವಾರ, ಜನವರಿ 17, 2022
19 °C

T20 WC | ಭಾರತ–ಪಾಕ್ ಟಿ20: ಒಂದು ಸೋಲಿಗಿವೆ ಹತ್ತಾರು ಮುಖಗಳು

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

‘ಟಿ20 ಕ್ರಿಕೆಟ್‌ ನಲ್ಲಿ ರೋಹಿತ್ ಶರ್ಮಾ ಅವರನ್ನು ಬಿಟ್ಟು ತಂಡ ಕಟ್ಟುವುದೇ? ಕಳೆದ ಪಂದ್ಯದಲ್ಲಿ ಅವರು ನೀಡಿದ ಕಾಣಿಕೆ ನಿಮಗೆ ಗೊತ್ತಿಲ್ಲವೇ? ಈ ಪ್ರಶ್ನೆಯ ಹಿಂದೆ ವಿವಾದ ಸೃಷ್ಟಿಸುವ ಉದ್ದೇಶವಿದ್ದರೆ ಮೊದಲೇ ಹೇಳಿಬಿಡಿ’–

ಟ್ವಿಂಟಿ–20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಪಾಕಿಸ್ತಾನದ ಎದುರು ಸೋತ ನಂತರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ ಮಾತು ಇದು. ಪಾಕಿಸ್ತಾನದ ಪತ್ರಕರ್ತರೊಬ್ಬರು ‘ರೋಹಿತ್ ಬಿಟ್ಟು ಇಶಾನ್ ಕಿಶನ್ ಆಯ್ಕೆ ಮಾಡಿದ್ದರೆ ಹೆಚ್ಚು ಉಪಯುಕ್ತವಾಗುತ್ತಿತ್ತಲ್ಲವೇ’ ಎಂದು ಕೇಳಿದ ಪ್ರಶ್ನೆಗೆ ವಿರಾಟ್ ಈ ಉತ್ತರ ಕೊಟ್ಟು ಮುಸಿಮುಸಿ ನಕ್ಕಿದ್ದರು. ‘ನಾವು ಕಣಕ್ಕಿಳಿಸಿದ್ದ 11 ಜನರ ತಂಡವು ಸಮರ್ಥವಾಗಿಯೇ ಇದೆ. ಪಾಕ್ ಆಟಗಾರರು ಅದ್ಭುತವಾಗಿ ಅಡಿದರು. ಗೆಲುವು ಅವರದ್ದಾಯಿತು’ ಎಂದೂ ಹೇಳಿದರು.

ವಿಶ್ವಕಪ್ ಇತಿಹಾಸದಲ್ಲಿಯೇ ಪಾಕಿಸ್ತಾನದೆದುರು ಭಾರತ ತಂಡ ಅನುಭವಿಸಿದ ಮೊದಲ ಸೋಲು ಇದು.  ಹೈವೋಲ್ಟೇಜ್, ಬೆಂಕಿ ಬಿರುಗಾಳಿ, ರಾಷ್ಟ್ರೀಯತೆ ಇತ್ಯಾದಿ ಎಂದು ಬಿಂಬಿತವಾದ ಈ ಪಂದ್ಯ ಲಕ್ಷಾಂತರ ಅಭಿಮಾನಿಗಳಿಗೆ ಭಾವನಾತ್ಮಕವಾಗಿ ಗೆಲ್ಲಲೇಬೇಕಾದ ಪಂದ್ಯ ಇದು. ‘ವಿಶ್ವಕಪ್ ಗೆಲ್ಲದಿದ್ದರೂ ಚಿಂತೆಯಿಲ್ಲ ಪಾಕ್ ವಿರುದ್ಧ ಸೋಲಬಾರದು’ ಎಂಬ ಭಾವನೆಗಳ ಮಹಾಪೂರಕ್ಕೂ ಕಮ್ಮಿಯೇನಿಲ್ಲ. ಆದ್ದರಿಂದಲೇ ಈಗ ಈ ಸೋಲು ಹತ್ತಾರು ವಿಶ್ಲೇಷಣೆ, ಟೀಕೆಗಳಿಗೆ ತುತ್ತಾಗಿದೆ. ಗೆದ್ದುಬಿಟ್ಟಿದ್ದರೆ ಸಂಭ್ರಮದ ಒಂದೇ ಮುಖ ಕಾಣುತ್ತಿತ್ತು. ಆದರೆ ಈ ಸೋಲು ಹತ್ತಾರು ಮುಖಗಳನ್ನು ತೋರಿಸುತ್ತಿದೆ. ಪಾಠವನ್ನೂ ಕಲಿಸಿದೆ.


ಪಾಕ್‌ ಆಟಗಾರರ ಸಂಭ್ರಮ

ಎಲ್ಲ ಭಾವುಕತೆಗಳನ್ನೂ ಬದಿಗಿಟ್ಟು  ನೋಡುವುದಾದರೆ ‘ಪಾಕಿಸ್ತಾನ ತಂಡದ ಆಟಗಾರರು ವೃತ್ತಿಪರವಾಗಿ ಮತ್ತು ಶ್ರೇಷ್ಠವಾಗಿ ಆಡಿದರು’ ಎಂದು ವಿರಾಟ್ ಹೇಳುವ ಮಾತನ್ನು ಕಡೆಗಣಿಸುವಂತಿಲ್ಲ. ಆದರೆ, ಅನುಭವ, ತಾಂತ್ರಿಕ ಕೌಶಲಗಳಲ್ಲಿ ಅವರಿಗಿಂತ ಬಹಳಷ ಮೇಲಿರುವ ಭಾರತ ತಂಡ ಯಾಕೆ ವಿಫಲವಾಯಿತು ಎಂಬುದನ್ನೂ ನೋಡಬೇಕು.

ಮೊದಲನೇಯದಾಗಿ  ಆಡುವ 11ರ ಬಳಗದ ಆಯ್ಕೆ ನೋಡುವುದಾದರೆ, ಬ್ಯಾಟಿಂಗ್‌ ಪಡೆಯ ಸಂಯೋಜನೆ ಸರಿಯಾಗಿಯೇ ಇದೆ. ರೋಹಿತ್, ರಾಹುಲ್  ಈ ಹಿಂದೆ ಹಲವು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ ದಾಖಲೆಗಳು ಇವೆ. ಅದಕ್ಕಾಗಿಯೇ ಇವರಿಬ್ಬರನ್ನೂ ಕಟ್ಟಿಹಾಕಲು ಶಾಹೀನ್ ಶಾ ಆಫ್ರಿದಿ ಬಹಳಷ್ಟು ಅಭ್ಯಾಸ ಮಾಡಿ ಬಂದಿದ್ದರ ಫಲ ದಕ್ಕಿತು. ಅದರಲ್ಲೂ ಎಡಗೈ ವೇಗಿ ಶಾಹೀನ್ ಅವರು ರಾಹುಲ್‌ಗೆ ಹಾಕಿದ ಆ ಎಸೆತ ಎಂತಹ ಬ್ಯಾಟ್ಸ್‌ಮನ್‌ಗಳನ್ನೂ ವಿಚಲಿತಗೊಳಿಸುವಂತದ್ದು. ರಾಹುಲ್ ಔಟಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಶಾಹೀನ್ ಬೌಲಿಂಗ್‌ಗೆ ಇಲ್ಲಿ ಪೂರ್ಣ ಅಂಕ ಕೊಡಲೇಬೇಕು. 

ವಿಕೆಟ್‌ಕೀಪರ್ –ಬ್ಯಾಟ್ಸ್‌ಮನ್ ಆಗಿ ಸಮರ್ಥರಾಗಿರುವ  ರಿಷಭ್ ಪಂತ್ ಇರುವಾಗ ಇಶಾನ್ ಕಿಶನ್‌ಗೆ ಅವಕಾಶ ಕೊಡುವುದಕ್ಕಿಂತ ಇನ್ನೊಬ್ಬ ಬ್ಯಾಟರ್‌ ಕಣಕ್ಕಿಳಿಯುವುದು ಉತ್ತಮ ಎಂಬ ಭಾವನೆಯಿಂದಲೇ ಸೂರ್ಯಕುಮಾರ್ ಯಾದವ್ ಅವಕಾಶ ಪಡೆದಿದ್ದರು.   ಚೆನ್ನಾಗಿಯೇ ಆರಂಭ ಮಾಡಿದ್ದರು. ಆದರೆ, ಅದೇ ಲಯವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಅವರು ವಿರಾಟ್ ಜೊತೆಗೆ ದೊಡ್ಡ ಪಾಲುದಾರಿಕೆಯ ಆಟವಾಡಿದ್ದರೆ ಚಿತ್ರಣ ಬೇರೆಯೇ ಇರುತ್ತಿತ್ತು. ಇನ್ನು ರಿಷಭ್  ಉತ್ತಮವಾಗಿ ಆಡುವಾಗಲೇ ಒಂದು ತಪ್ಪು ಹೊಡೆತ ಪ್ರಯೋಗಿಸುವ ಚಟದಿಂದ ವಿಮುಕ್ತರಾಗಬೇಕು. ವೈಯಕ್ತಿಕ 30 ರನ್‌ಗಳು ದಾಟಿದಾಗಲೆಲ್ಲ ಅವರು ಈ ದೌರ್ಬಲ್ಯಕ್ಕೆ ಬೆಲೆ ತೆರುತ್ತಿದ್ದಾರೆ. ಅದು ತಂಡದ ಪಾಲಿಗೆ ದುಬಾರಿಯಾಗುತ್ತಿದೆ. ಇಲ್ಲಿ ಆಗಿದ್ದೂ ಹಾಗೆಯೇ ಅಲ್ಲವೇ? ಅವರು ಇನ್ನೊಂದೆರಡು ಓವರ್‌ಗಳವರೆಗೆ ಕ್ರೀಸ್‌ನಲ್ಲಿದ್ದಿದ್ದರೆ 25–30 ರನ್‌ಗಳು ಹೆಚ್ಚು ಸೇರಿರುತ್ತಿದ್ದವು. 

ಆದರೆ ಇಲ್ಲಿ ನಿಜಕ್ಕೂ ಅಚ್ಚರಿ ಮೂಡಿಸಿದ್ದು ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿದ್ದು. ಕಳೆದ ಕೆಲವು ತಿಂಗಳುಗಳಿಂದ ಅವರು ಬೌಲಿಂಗ್ ಮಾಡಲು ಫಿಟ್ ಆಗಿಲ್ಲ. ಬ್ಯಾಟಿಂಗ್‌ನಲ್ಲಿಯೂ ಅಂತಹ ದೊಡ್ಡ ಸ್ಕೋರ್ ಗಳಿಸಿಲ್ಲ. ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಅವರ ಫೀಲ್ಡಿಂಗ್‌ನಲ್ಲಿಯೂ ಮೊದಲಿನ ಚುರುಕುತನ ಕಾಣುತ್ತಿಲ್ಲ. ಇದರಿಂದಾಗಿ ಆರನೇ ಬೌಲರ್‌ ಕೊರತೆ ಮತ್ತು ಡೆತ್‌ ಓವರ್‌ಗಳಲ್ಲಿ ರನ್‌ ಸೂರೆ ಮಾಡುವ ಬ್ಯಾಟರ್ ಕೊರತೆ ಕಾಡಿದ್ದು ಸುಳ್ಳಲ್ಲ.  ಉತ್ತಮ ಆಲ್‌ರೌಂಡರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಹಾರ್ದಿಕ್ ಜಾಗದಲ್ಲಿ ಕಣಕ್ಕಿಳಿಸಬಹುದಿತ್ತು. ಈ ಹಿಂದೆ ಹಾರ್ದಿಕ್ ಹಲವು ಪಂದ್ಯಗಳಲ್ಲಿ ಚೆನ್ನಾಗಿ ಆಡಿದ ದಾಖಲೆಗಳಿವೆ. ಆದರೆ ಈ ಹಂತದಲ್ಲಿ ಅವರು ದೈಹಿಕವಾಗಿ ಫಿಟ್‌ ಇಲ್ಲ ಎಂಬುದು ಗೊತ್ತಿದ್ದರೂ  ಅವಕಾಶ ಕೊಡುತ್ತಿರುವುದು ಏಕೆ ಎಂಬುದನ್ನು ತಂಡದ ಮ್ಯಾನೇಜ್‌ಮೆಂಟ್ ಹೇಳಬೇಕಷ್ಟೇ?


ಬಾಬರ್ ಆಜಂ ಮತ್ತು ಮೊಹಮ್ಮದ್ ರಿಜ್ವಾನ್

ಹೊಸ ಹುಡುಗ ವರುಣ್ ಚಕ್ರವರ್ತಿ ಅವರ ಪ್ರತಿಭೆಯ ಬಗ್ಗೆ ಯಾರಿಗೂ ಸಂಶಯವಿಲ್ಲ. ಆದರೆ, ಪಾಕ್ ವಿರುದ್ಧದ ಒತ್ತಡದ ಪಂದ್ಯದಲ್ಲಿ ಅನುಭವವಿಲ್ಲದ ಚಕ್ರವರ್ತಿಯನ್ನು ಕಣಕ್ಕಿಳಿಸಿದ್ದು ಕೂಡ ಈಗ ಟೀಕೆಗೊಳಗಾಗುತ್ತಿದೆ. ‘ಮಿಸ್ಟ್ರಿ ಸ್ಪಿನ್ನರ್‌’ ಎಂದೇ ಕರೆಸಿಕೊಳ್ಳುವ ವರುಣ್  ಒಬ್ಬರೇ ಅಲ್ಲ, ಅನುಭವಿ ಬೂಮ್ರಾ, ಶಮಿ, ಭುವನೇಶ್ವರ್ ಕೂಡ ಒಂದೇ ಒಂದು ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಬಾಬರ್ ಆಜಂ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಉತ್ಕೃಷ್ಟ ಬ್ಯಾಟಿಂಗ್‌ಗೆ ಕಡಿವಾಣ ಹಾಕಲು ಇವರ ಬಳಿ ಯಾವುದೇ ಅಸ್ತ್ರವೇ ಇರಲಿಲ್ಲವೇ?

ಆರನೇ ಬೌಲರ್ (ಸಾಂದರ್ಭಿಕ) ಲಭ್ಯತೆ ಇದ್ದಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು. ಆದರೆ, ಅಂತಹ ಒಂದು ಆಯ್ಕೆಯನ್ನು ವಿರಾಟ್ ಇಟ್ಟುಕೊಂಡಿರಲಿಲ್ಲ.

31ರಂದು ವಿರಾಟ್ ಬಳಗವು ಎರಡನೇ ಪಂದ್ಯ ಆಡಲಿದ್ದು, ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಎರಡನೇ ಗುಂಪಿನಲ್ಲಿರುವ ಭಾರತಕ್ಕೆ ಹೆಚ್ಚು ಪೈಪೋಟಿ ನೀಡಬಲ್ಲ ತಂಡ ಇದು. ಏಕೆಂದರೆ ಇನ್ನುಳಿದ ಪಂದ್ಯಗಳಲ್ಲಿ ಅಷ್ಟೇನೂ ಬಲಾಢ್ಯರಲ್ಲದ ಅಫ್ಗಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮಿಬಿಯಾ ತಂಡಗಳನ್ನು ಎದುರಿಸಬೇಕು. ಆದ್ದರಿಂದ ಸೆಮಿಫೈನಲ್ ಪ್ರವೇಶ ಪಡೆಯುವುದು ಕಷ್ಟವೇನಲ್ಲ. ಅದಕ್ಕಾಗಿ ಎಲ್ಲ ನಾಲ್ಕು ಪಂದ್ಯಗಳಲ್ಲಿಯೂ ಗೆದ್ದರೆ ನಾಲ್ಕರ ಘಟ್ಟದ ಹಾದಿ ಸುಗಮ. ಏನೇ ಪ್ರಯೋಗಗಳನ್ನು ನಡೆಸಿದರೂ ಗೆಲುವು ಮುಖ್ಯ. 

‘ಇದಿನ್ನೂ ಮೊದಲ ಪಂದ್ಯ. ಇನ್ನೂ ಕೆಲವು ಪಂದ್ಯಗಳು ಇವೆ. ಚೆನ್ನಾಗಿ ಆಡುತ್ತೇವೆ’ ಎಂದು ವಿರಾಟ್ ಹೇಳಿದ್ದಾರೆ. ಅಲ್ಲದೇ ಪಂದ್ಯ ಮುಗಿದ ಮೇಲೆ ಅವರು ಮತ್ತು ಮೆಂಟರ್ ಮಹೇಂದ್ರಸಿಂಗ್ ಧೋನಿ ಅವರು ಪಾಕ್ ಆಟಗಾರರೊಂದಿಗೆ ನಡೆಸಿದ ಸೌಹಾರ್ದಯುತ ಒಡನಾಟದ ದೃಶ್ಯ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ. ಕ್ರೀಡೆಯಿಂದ ನಿಜವಾಗಲೂ ಹೊರಹೊಮ್ಮಬೇಕಾದ ಫಲಿತಾಂಶ ಇದು. ಸೋಲು–ಗೆಲುವಿನಾಚೆ ಸ್ನೇಹ ಅರಳಬೇಕಷ್ಟೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು