ಮಂಗಳವಾರ, ಅಕ್ಟೋಬರ್ 20, 2020
21 °C

IPL 2020I ಕ್ರಿಕೆಟ್‌ ಜತೆ ನನಗೆ ಪ್ರೀತಿ-ದ್ವೇಷದ ಸಂಬಂಧವಿದೆ: ವಿರಾಟ್‌ ಕೊಹ್ಲಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌(ಯುಎಇ)ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮತ್ತೊಮ್ಮೆ ಫಾರ್ಮ್ ಕಂಡುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಯಕ ವಿರಾಟ್‌ ಕೊಹ್ಲಿ, ತಾವು ಕ್ರಿಕೆಟ್‌ನೊಂದಿಗೆ ಪ್ರೀತಿ ಮತ್ತು ದ್ವೇಷಗಳೆರಡನ್ನೂ ಹೊಂದಿರುವುದಾಗಿ ಹೇಳಿದ್ದಾರೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಶನಿವಾರ ಸಾಧಿಸಿದ 8 ವಿಕೆಟ್‌ಗಳ ಜಯದ ಆಟದಲ್ಲಿ ವಿರಾಟ್‌ ಕೊಹ್ಲಿ ಅಜೇಯ 72 ರನ್ ಗಳಿಸಿದ್ದರು. ಬಲಗೈ ಆಟಗಾರ ಕೊಹ್ಲಿ ತಮ್ಮ ಮೊದಲ ಮೂರು ಪಂದ್ಯಗಳಲ್ಲಿ 14, 1 ಮತ್ತು 3 ರನ್‌ಗಳನ್ನಷ್ಟೇ ಗಳಿಸಿದ್ದರು. ಈ ಆವೃತ್ತಿಯ ಮೊದಲ ಮೂರು ಪಂದ್ಯಗಳಲ್ಲಿ ರನ್‌ ಬರ ಕಂಡಿದ್ದ ಅವರು, ಟೀಕೆಗಳನ್ನೂ ಎದುರಿಸಬೇಕಾಯಿತು. 

‘ನೀವು ಹೆಚ್ಚು ಹೆಚ್ಚು ಕ್ರಿಕೆಟ್ ಆಡುವಾಗ, ಕೆಲವೊಮ್ಮೆ ಏನು ಮಾಡಬೇಕೆಂಬುದನ್ನು ನಿಯಂತ್ರಿಸಲು ಆಗುತ್ತಿಲ್ಲ ಎಂಬ ಭಾವನೆಗಳು ಕಾಡುತ್ತವೆ. ತಂಡವು ಉತ್ತಮವಾಗಿ ಆಡುತ್ತಿದ್ದರೆ ಎಲ್ಲವೂ ಸರಿ ಎಂದೆನಿಸುತ್ತದೆ. ತಂಡದ ಅನುಕೂಲಕ್ಕಾಗಿ ನನ್ನ ಬ್ಯಾಟಿಂಗ್ ರೀತಿಯನ್ನು ಹೇಗೆ ಹೊಂದಿಸಿಕೊಳ್ಳಬೇಕು ಎಂಬುದನ್ನು ಕಂಡುಕೊಳ್ಳಲು ನನಗೆ ಇನ್ನೂ ಹೆಚ್ಚಿನ ಸಮಯವಿದೆ. ನಿಮಗೆ ಗೊತ್ತೆ? ಇದೊಂದು ರೀತಿ ತಮಾಷೆಯ ಆಟ. ಇದೊಂದು ಅದ್ಭುತವಾದ ಆಟ. ನಾನು ಈ ಆಟವನ್ನು ಪ್ರೀತಿಸುತ್ತೇನೆ ಮತ್ತು ದ್ವೇಷಿಸುತ್ತೇನೆ. ಬ್ಯಾಟ್‌ ಮಾಡುವಾಗ ಜೋಸ್ (ಬಟ್ಲರ್)ಗೆ ಈ ವಿಷಯ ಹೇಳಿದ್ದೆ,’ ಎಂದು ಅವರು ಪಂದ್ಯದ ಗೆಲುವಿನ ನಂತರ ತಿಳಿಸಿದ್ದಾರೆ.

ಕೊಹ್ಲಿಯ ಫಾರ್ಮ್ ಬಗ್ಗೆ ತಾವು ಎಂದಿಗೂ ಚಿಂತಿಸುವುದಿಲ್ಲ ಎಂದು ಮುಖ್ಯ ತರಬೇತುದಾರ ಸೈಮನ್ ಕಟಿಚ್ ಹೇಳಿದ್ದಾರೆ.

ಸೋಮವಾರ ಲೀಗ್‌ನ ಅಗ್ರ ಎರಡು ತಂಡಗಳ ನಡುವಿನ ಪಂದ್ಯ ನಡೆಯಲಿದ್ದು, ಅದರಲ್ಲಿ ಬೆಂಗಳೂರು ಮತ್ತು ಡೆಲ್ಲಿ ತಂಡಗಳು ಮುಖಾಮುಖಿಯಾಗಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು