ಶನಿವಾರ, ಅಕ್ಟೋಬರ್ 24, 2020
27 °C

ರಾಜಸ್ಥಾನ ರಾಯಲ್ಸ್ ಮುಂದಿನ ಪಂದ್ಯಗಳಲ್ಲಿ ಚೆನ್ನಾಗಿ ಆಡಲಿದೆ: ತ್ಯಾಗಿ, ಉತ್ತಪ್ಪ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಶಾರ್ಜಾ: ರಾಜಸ್ಥಾನ ರಾಯಲ್ಸ್‌ ತಂಡವು ಟೂರ್ನಿಯಲ್ಲಿ ಆಡಿದ ಮೊದಲೆರೆಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ನಂತರ ಹ್ಯಾಟ್ರಿಕ್‌ ಸೋಲು ಕಂಡಿದೆ. ಈ ಬಗ್ಗೆ ಮಾತನಾಡಿರುವ ತಂಡದ ಯುವ ವೇಗಿ ಕಾರ್ತಿಕ್‌ ತ್ಯಾಗಿ ಮತ್ತು ಅನುಭವಿ ಬ್ಯಾಟ್ಸ್‌ಮನ್‌ ರಾಬಿನ್‌ ಉತ್ತಪ್ಪ, ಟೂರ್ನಿಯ ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ಶಾರ್ಜಾದಲ್ಲಿ ಆಡಿದ ಮೊದಲೆರಡು ಪಂದ್ಯಗಳಲ್ಲಿ ರಾಯಲ್ಸ್‌ ಕ್ರಮವಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡಗಳನ್ನು ಮಣಿಸಿತ್ತು. ನಂತರ ದುಬೈನಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧ, ಅಬುಧಾಬಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್‌ ವಿರುದ್ಧ ಸೋಲುಕಂಡಿತ್ತು.

ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ 19 ವರ್ಷದ ತ್ಯಾಗಿ ತಮ್ಮ ಮೊದಲ ಓವರ್‌ನಲ್ಲಿಯೇ ಕ್ವಿಂಟನ್‌ ಡಿ ಕಾಕ್‌ ಅವರನ್ನು ಔಟ್‌ ಮಾಡಿದ್ದರು. ಈ ಪಂದ್ಯದಲ್ಲಿ ಅವರು 36 ರನ್‌ ನೀಡಿ 1 ವಿಕೆಟ್ ಪಡೆದು ಸಂಭ್ರಮಿಸಿದ್ದರು.

ರಾಯಲ್ಸ್‌ ಪ್ರದರ್ಶನದ ಬಗ್ಗೆ ಮಾತನಾಡಿರುವ ತ್ಯಾಗಿ, ‘ನಮ್ಮ ಮುಂದಿನ ಪಂದ್ಯಗಳಿಗೆ ಸಿದ್ಧತೆ ನಡೆಸಿಕೊಂಡಿದ್ದೇವೆ. ಡೆಲ್ಲಿ ತಂಡ ಶ್ರೇಷ್ಠ ಲಯದಲ್ಲಿದೆ ಮತ್ತು ಚೆನ್ನಾಗಿ ಆಡುತ್ತಿದೆ. ನಾವು ಸ್ವಲ್ಪ ಲಯ ಕಳೆದುಕೊಂಡಿದ್ದೇವೆ. ಅದರಿಂದ ಚೇತರಿಸಿಕೊಳ್ಳಲಿದ್ದು ಖಂಡಿತಾ ಉತ್ತಮ ಪ್ರದರ್ಶನ ಮತ್ತು ಕಠಿಣ ಪೈಪೋಟಿ ನೀಡಲಿದ್ದೇವೆ. ಚೆನ್ನಾಗಿ ಆಡಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್‌ನ ಆಲ್ರೌಂಡರ್‌ ಬೆನ್ ಸ್ಟೋಕ್ಸ್‌ ಶೀಘ್ರವೇ ತಂಡ ಕೂಡಿಕೊಳ್ಳಲಿದ್ದು, ಇದರಿಂದ ತಂಡದ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ರಾಬಿನ್‌ ಅಭಿಪ್ರಾಯಪಟ್ಟಿದ್ದಾರೆ.

‘ನಾವು ಉತ್ತಮ ಆಟವಾಡಿ ಮುಂದಕ್ಕೆ ಹೋಗಲಿದ್ದೇವೆ ಎಂಬ ವಿಶ್ವಾಸವಿದೆ. ಐಪಿಎಲ್‌ನಲ್ಲಿ ನಾವು ಹೇಗೆ ಆರಂಭ ಮಾಡಿದ್ದೇವೆ ಎಂಬುದಕ್ಕಿಂತ, ಹೇಗೆ ಮುಗಿಸಿದ್ದೇವೆ ಎಂಬುದು ತುಂಬಾ ಮುಖ್ಯ. ನನ್ನ ಅನುಭವದಂತೆ, ಮುಂದಿನ ಪಂದ್ಯಗಳಲ್ಲಿ ನಾವು ಉತ್ತಮ ಆಟವಾಡಿ ಗೆಲುವಿನ ಉತ್ಸಾಹವನ್ನು ಮರಳಿ ಪಡೆದರೆ ನಮ್ಮ ತಂಡಕ್ಕೆ ನೆರವಾಗಲಿದೆ. ಅದನ್ನು ಖಂಡಿತಾ ಮಾಡಲಿದ್ದೇವೆ ಎಂಬ ನಂಬಿಕೆ ಇದೆ’ ಎಂದು ಹೇಳಿದ್ದಾರೆ.

‘ನಮ್ಮ ತಂಡದ ಸಮತೋಲನ ಮತ್ತು ಸಂಯೋಜನೆ ಉತ್ತಮವಾಗಿದೆ ಎಂದು ನನಗನಿಸುತ್ತದೆ. ಉತ್ತಮ ಬ್ಯಾಟ್ಸ್‌ಮನ್‌ಗಳು ನಮ್ಮ ತಂಡದಲ್ಲಿದ್ದಾರೆ. ಅದೇ ರೀತಿ ಬೆನ್‌ ಸ್ಟೋಕ್ಸ್‌ ಅವರೂ ಶೀಘ್ರವೇ ತಂಡಕ್ಕೆ ಮರಳಲಿದ್ದಾರೆ. ಅವರು ತಂಡದ ಬಲ ಹೆಚ್ಚಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

ಇಂದು ಶಾರ್ಜಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ಸ್‌ – ಡೆಲ್ಲಿ ಕ್ಯಾಪಿಟಲ್ಸ್‌ ಸೆಣಸಾಟ ನಡೆಸಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು