ಮಂಗಳವಾರ, ಮಾರ್ಚ್ 28, 2023
33 °C

ಐಪಿಎಲ್‌ ಟೂರ್ನಿಗೆ ಬೆನ್ ಸ್ಟೋಕ್ಸ್‌ ಅನುಮಾನ: ಮೆಕ್‌ಡೋನಾಲ್ಡ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಇಂಗ್ಲೆಂಡ್‌ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಬರುವುದು ಅನುಮಾನವೆಂದು ರಾಜಸ್ಥಾನ ರಾಯಲ್ಸ್‌ ತಂಡದ ಮುಖ್ಯ ಕೋಚ್ ಆ್ಯಂಡ್ರ್ಯೂ ಮೆಕ್‌ಡೋನಾಲ್ಡ್‌ ಹೇಳಿದ್ದಾರೆ.

ನ್ಯೂಜಿಲೆಂಡ್‌ನಲ್ಲಿರುವ ಬೆನ್ ಸ್ಟೋಕ್ಸ್‌ ಅವರ ತಂದೆ ಮಿದುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಆದ್ದರಿಂದ ಪಾಕಿಸ್ತಾನ ಎದುರಿನ ಸರಣಿ ಸಂದರ್ಭದಲ್ಲಿಯೇ ಬೆನ್‌ ಸ್ಟೋಕ್ಸ್‌ ನ್ಯೂಜಿಲೆಂಡ್‌ಗೆ ತೆರಳಿದ್ದರು. ತಂದೆಯ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

‘ಸ್ಟೋಕ್ಸ್‌ ಕುಟುಂಬಕ್ಕೆ ಮೊದಲ ಆದ್ಯತೆ ನೀಡಿರುವುದು ಸೂಕ್ತ. ಇದೊಂದು ಬಹಳ ಕಠಿಣ ಸಮಯವಾಗಿದೆ. ಆದ್ದರಿಂದ ನಾವು ಅವರಿಗೆ ಯಾವುದೇ ಒತ್ತಡ ಹಾಕುತ್ತಿಲ್ಲ. ಅವರು ಎಷ್ಟು ಸಮಯ ಬೇಕಾದರೂ ತೆಗೆದುಕೊಳ್ಳಲಿ. ಅವರೊಂದಿಗೆ ನಾವಿದ್ದೇವೆ’ ಎಂದು ಮೆಕ್‌ಡೋನಾಲ್ಡ್‌ ಹೇಳಿದ್ದಾರೆ.

‘ಸ್ಟೋಕ್ಸ್‌ ಈ ಬಾರಿ ಇಲ್ಲಿ (ಐಪಿಎಲ್) ಆಡುವ ಕುರಿತು ಇನ್ನೂ ಖಚಿತವಾಗಿಲ್ಲ. ಆದ್ದರಿಂದ ಈಗಲೇ ಬದಲೀ ಆಟಗಾರ ಹೆಸರು ಹೇಳುವುದಿಲ್ಲ. ಅವರಿಂದ ಸ್ಪಷ್ಟ ಸಂದೇಶ ಬಂದ ನಂತರವೇ ನಾವು ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಪೋ ವೆಬ್‌ಸೈಟ್‌ಗೆ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡುತ್ತಿರುವ ಆಸ್ಟ್ರೇಲಿಯಾದ ಆಟಗಾರ ಸ್ಟೀವ್ ಸ್ಮಿತ್ ರಾಜಸ್ಥಾನ ತಂಡಕ್ಕೆ ನಾಯಕರಾಗಿದ್ದಾರೆ.  ಈಚೆಗೆ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ತಲೆಗೆ ಚೆಂಡು ಬಡಿದ ಕಾರಣ ಅವರು ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ.

‘ಸ್ಮಿತ್ ಅವರಿಗೆ ಹೆಚ್ಚು ಪೆಟ್ಟಾಗಿಲ್ಲ. ಅವರು ಇಲ್ಲಿಗೆ ಬರುವುದು ಬಹುತೇಕ ಖಚಿತ. ನಮ್ಮಲ್ಲಿ ಈಗ  ಇರುವ ಅನುಜ್ ರಾವತ್ ಮತ್ತು ಯಶಸ್ವಿಜೈಸ್ವಾಲ್ ಅವರು ಬ್ಯಾಟಿಂಗ್ ಪಡೆಯ ಬಲ ಹೆಚ್ಚಿಸಿದ್ದಾರೆ. ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಉತ್ತಮ ಫಿನಿಷರ್ ಆಗಿದ್ದಾರೆ’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು