ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ್-ಆವೇಶ್‌-ಅಶ್ವಿನ್‌ಗೆ ಗೆಲುವಿನ 'ಶ್ರೇಯಸ್'; ಮುಂಬೈ ಪ್ಲೇ-ಆಫ್ ಹಾದಿ ಕಠಿಣ!

Last Updated 2 ಅಕ್ಟೋಬರ್ 2021, 14:24 IST
ಅಕ್ಷರ ಗಾತ್ರ

ಶಾರ್ಜಾ: ಬೌಲರ್‌ಗಳ ಮಿಂಚಿನ ದಾಳಿಯ ಬಳಿಕ ಶ್ರೇಯಸ್ ಅಯ್ಯರ್ (33*) ಹಾಗೂ ರವಿಚಂದ್ರನ್ ಅಶ್ವಿನ್ (20*) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಇದರೊಂದಿಗೆ ಹಾಲಿ ಚಾಂಪಿಯನ್ ಮುಂಬೈ ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣವೆನಿಸಿದೆ. ಆಡಿರುವ 12 ಪಂದ್ಯಗಳಲ್ಲಿ 10 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಅತ್ತ ಡೆಲ್ಲಿ 12 ಪಂದ್ಯಗಳಲ್ಲಿ ಒಂಬತ್ತು ಗೆಲುವಿನೊಂದಿಗೆ ಒಟ್ಟು 18 ಅಂಕ ಸಂಪಾದಿಸಿದ್ದು, ಎರಡನೇ ಸ್ಥಾನ ಕಾಯ್ದುಕೊಂಡಿದೆ.



ಆವೇಶ್ ಖಾನ್ (15ಕ್ಕೆ 3) ಹಾಗೂ ಅಕ್ಷರ್ ಪಟೇಲ್ (21ಕ್ಕೆ 3) ದಾಳಿಗೆ ತತ್ತರಿಸಿರುವ ಮುಂಬೈ ಇಂಡಿಯನ್ಸ್, ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 129 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಬಳಿಕ ಸುಲಭ ಗುರಿ ಬೆನ್ನತ್ತಿದ ಡೆಲ್ಲಿ ಒಂದು ಹಂತದಲ್ಲಿ 13.1 ಓವರ್‌ಗಳಲ್ಲಿ 93 ರನ್ನಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಪೃಥ್ವಿ ಶಾ (6), ಶಿಖರ್ ಧವನ್ (8), ಸ್ಟೀವ್ ಸ್ಮಿತ್ (9), ಅಕ್ಷರ್ ಪಟೇಲ್ (9) ಹಾಗೂ ಶಿಮ್ರೊನ್ ಹೆಟ್ಮಯೆರ್ (15) ನಿರಾಸೆ ಮೂಡಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಅಯ್ಯರ್ ಹಾಗೂ ಅಶ್ವಿನ್ ಮುರಿಯದ ಏಳನೇ ವಿಕೆಟ್‌ಗೆ 39ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ನಾಯಕ ರಿಷಭ್ ಪಂತ್ ಕೂಡಾ 26 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು.

ಈ ಮೂಲಕ ಇನ್ನು ಐದು ಎಸೆತಗಳು ಬಾಕಿ ಉಳಿದಿರುವಂತೆಯೇ 19.1ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಅಕ್ಷರ್-ಆವೇಶ್ ದಾಳಿಗೆ ಮುಂಬೈ ತತ್ತರ...
ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಮುಂಬೈ ಆರಂಭ ಉತ್ತಮವಾಗಿರಲಿಲ್ಲ. ತಂಡವು 37 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ನಾಯಕ ರೋಹಿತ್ ಶರ್ಮಾ (7) ಹಾಗೂ ಕ್ವಿಂಟನ್ ಡಿ ಕಾಕ್ (19) ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಎರಡು ವಿಕೆಟ್‌ಗಳನ್ನು ಆವೇಶ್ ಖಾನ್ ಹಾಗೂ ಅಕ್ಷರ್ ಪಟೇಲ್ ಹಂಚಿದರು.

ಬಳಿಕ ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್ ಯಾದವ್ (33) ಹಾಗೂ ಸೌರಭ್ ತಿವಾರಿ (15) ಅವರಿಗೂ ಪೆವಿಲಿಯನ್ ಹಾದಿ ತೋರಿಸಿದ ಅಕ್ಷರ್ ಪಟೇಲ್ ಮೋಡಿ ಮಾಡಿದರು. ಪರಿಣಾಮ ಮುಂಬೈ 87 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಅಂತಿಮ ಹಂತದಲ್ಲಿ ಆವೇಶ್ ಖಾನ್ ಮಗದೊಮ್ಮೆ ಡೆಲ್ಲಿ ತಂಡಕ್ಕೆ ಪೆಟ್ಟು ಕೊಟ್ಟರು. ಇದರಿಂದಾಗಿ ಎಂಟು ವಿಕೆಟ್ ನಷ್ಟಕ್ಕೆ 129 ರನ್ ಗಳಿಸಲಷ್ಟೇ ಶಕ್ತವಾಯಿತು. ಕೀರನ್ ಪೊಲಾರ್ಡ್ (6), ಹಾರ್ದಿಕ್ ಪಾಂಡ್ಯ (17), ಕೃಣಾಲ್ ಪಾಂಡ್ಯ (13*) ನಥನ್ ಕೌಲ್ಟರ್ ನೈಲ್ (1), ಜಯಂತ್ ಯಾದವ್ (11) ರನ್ ಗಳಿಸಿದರು.

ಡೆಲ್ಲಿ ಪರ ಮಿಂಚಿದ ಅಕ್ಷರ್ ಹಾಗೂ ಆವೇಶ್ ತಲಾ ಮೂರು ವಿಕೆಟ್‌ಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT