ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಮೊದಲು 5 ವಿಕೆಟ್, ಬಳಿಕ ಗೆಲುವಿನ ರನ್ ಬಾರಿಸಿದ ಹರ್ಷಲ್ ಪಟೇಲ್

ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಮುಂಬೈಗೆ ಸೋಲಿನ ರುಚಿ ತೋರಿಸಿದ ಆರ್‌ಸಿಬಿ
Last Updated 9 ಏಪ್ರಿಲ್ 2021, 18:39 IST
ಅಕ್ಷರ ಗಾತ್ರ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಈ ಮೂಲಕ ಹಾಲಿ ಚಾಂಪಿಯನ್ನರಿಗೆ ಸೋಲಿನ ರುಚಿ ತೋರಿಸಿರುವ ಆರ್‌‌ಸಿಬಿ, ಗೆಲುವಿನೊಂದಿಗೆ ಶುಭಾರಂಭ ಮಾಡಿಕೊಂಡಿದೆ.

ಮೊದಲು ಐದು ವಿಕೆಟ್ ಬಳಿಕ ಗೆಲುವಿನ ರನ್ ಬಾರಿಸಿದ ಹರ್ಷಲ್ ಪಟೇಲ್ ಪಂದ್ಯದ ಹೀರೊ ಎನಿಸಿದರು. 27 ಎಸೆತಗಳಲ್ಲಿ 48 ರನ್ ಬಾರಿಸಿದ ಎಬಿ ಡಿ ವಿಲಿಯರ್ಸ್ ಸಹ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಸವಾಲಿನ ಮೊತ್ತ ಬೆನ್ನತ್ತಿದ ಬೆಂಗಳೂರು ತಂಡವು ಉತ್ತಮ ಆರಂಭವನ್ನೇ ಪಡೆದುಕೊಂಡಿತ್ತು. ದೇವದತ್ ಪಡಿಕ್ಕಲ್ ಅನುಪಸ್ಥಿತಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಜೊತೆಗೆ ವಾಷಿಂಗ್ಟನ್ ಸುಂದರ್ ಇನ್ನಿಂಗ್ಸ್ ಆರಂಭಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 36 ರನ್‌ಗಳ ಜೊತೆಯಾಟ ನೀಡಿದರು.

ಆದರೆ ಸುಂದರ್ (10) ಹಾಗೂ ಚೊಚ್ಚಲ ಪಂದ್ಯ ಆಡುತ್ತಿರುವ ರಜತ್ ಪಾಟೀದಾರ್ (8) ವಿಕೆಟ್‌ಗಳನ್ನು ಕಳೆದುಕೊಂಡ ಆರ್‌ಸಿಬಿ ಹಿನ್ನೆಡೆ ಅನುಭವಿಸಿತ್ತು. ಇನ್ನೊಂದೆಡೆ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದರು.

ಕೊಹ್ಲಿ, ಮ್ಯಾಕ್ಸ್‌ವೆಲ್ ಬಿರುಸಿನ ಆಟ...
ಈ ಹಂತದಲ್ಲಿ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ತಂಡಕ್ಕೆ ಚೈತನ್ಯ ತುಂಬಿದರು. ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ನಿರ್ಣಾಯಕ ಜೊತೆಯಾಟದಲ್ಲಿ ಭಾಗಿಯಾದರು.

10 ಓವರ್‌ಗಳ ವೇಳೆಗೆ ಆರ್‌ಸಿಬಿ ಎರಡು ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿತ್ತು. ಅಲ್ಲದೆ ಕೊನೆಯ 60 ಎಸೆತಗಳಲ್ಲಿ ಗೆಲುವಿಗೆ 85 ರನ್‌ಗಳನ‌ ಅವಶ್ಯಕತೆಯಿತ್ತು.

ಬೂಮ್ರಾ ದಾಳಿಗೆ ಸಿಲುಕಿದ ಕೊಹ್ಲಿ...
ಈ ನಡುವೆ ಉತ್ತಮವಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ ಅವರನ್ನು ಜಸ್‌ಪ್ರೀತ್ ಬೂಮ್ರಾ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು. ಇದರೊಂದಿಗೆ 52 ರನ್‌ಗಳ ಜೊತೆಯಾಟವು ಮುರಿದು ಬಿತ್ತು. 29 ಎಸೆತಗಳನ್ನು ಎದುರಿಸಿದ ಕೊಹ್ಲಿ ನಾಲ್ಕು ಬೌಂಡರಿಗಳಿಂದ 33 ರನ್ ಗಳಿಸಿದರು.

ಕೊಹ್ಲಿ ಬೆನ್ನಲ್ಲೇ ಮ್ಯಾಕ್ಸ್‌ವೆಲ್ ಪತನ...
ಕೊಹ್ಲಿ ಬೆನ್ನಲ್ಲೇ ಕ್ರೀಸಿನಲ್ಲಿ ನೆಲೆಯೂರಿದ ಗ್ಲೆನ್ ಮ್ಯಾಕ್ಸ್‌ವೆಲ್ ವಿಕೆಟ್ ಕಳೆದುಕೊಂಡಿರುವುದು ಆರ್‌ಸಿಬಿ ಹಿನ್ನೆಡೆಗೆ ಕಾರಣವಾಯಿತು. 28 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದರು.

ಶಹಬಾಜ್ ಅಹ್ಮದ್ (1) ಅವರಿಂದಲೂ ಹೆಚ್ಚೇನು ಮಾಡಲಾಗಲಿಲ್ಲ. ಅಂತಿಮ ಐದು ಓವರ್‌ಗಳಲ್ಲಿ ಆರ್‌ಸಿಬಿ ಗೆಲುವಿಗೆ 54 ರನ್‌ಗಳ ಅವಶ್ಯಕತೆಯಿತ್ತು. ಎಲ್ಲರ ನಿರೀಕ್ಷೆಯು ಎಬಿ ಡಿ ವಿಲಿಯರ್ಸ್ ಮೇಲೆ ಉಳಿದುಕೊಂಡಿತ್ತು.

ಎಬಿ ಡಿ ಆಸರೆ...
ಡ್ಯಾನಿಯಲ್ ಕ್ರಿಸ್ಟಿಯನ್ (1) ಸಹ ನಿರಾಸೆ ಮೂಡಿಸಿದರು. ಇನ್ನೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಎಬಿ ಡಿ ವಿಲಿಯರ್ಸ್ ತಂಡವನ್ನು ಗೆಲುವಿನ ಅಂಚಿಗೆ ತಲುಪಿಸಿದರು.

27 ಎಸೆತಗಳನ್ನು ಎದುರಿಸಿದ ವಿಲಿಯರ್ಸ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 48 ರನ್ ಗಳಿಸಿದರು. ಆದರೆ ಗೆಲುವಿಗೆ ಇನ್ನೆರಡು ರನ್ ಮಾತ್ರ ಬಾಕಿ ಉಳಿದಿರುವಂತೆಯೇ ರನೌಟ್ ಆಗಿ ನಿರಾಸೆ ಮೂಡಿಸಿದರು.

ಬಳಿಕ ಹರ್ಷಲ್ ಪಟೇಲ್ ಗೆಲುವಿನ ರನ್ ಬಾರಿಸುವ ಮೂಲಕ ಪಂದ್ಯದ ಹೀರೊ ಎನಿಸಿದರು.

ಹರ್ಷಲ್‌ಗೆ 5 ವಿಕೆಟ್, ಮುಂಬೈಗೆ ಕಡಿವಾಣ...
ಈ ಮೊದಲು ಹರ್ಷಲ್ ಪಟೇಲ್ ಚೊಚ್ಚಲ ಐದು ವಿಕೆಟ್ ಸಾಧನೆಗೆ ನಲುಗಿದ ಮುಂಬೈ ಒಂಬತ್ತು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಕ್ರಿಸ್ ಲಿನ್ ಎಚ್ಚರಿಕೆಯ ಆರಂಭವೊದಗಿಸಿದರು.

ಈ ನಡುವೆ ರನೌಟ್ ಆದ ರೋಹಿತ್ ಶರ್ಮಾ ಪೆವಿಲಿಯನ್‌ಗೆ ಮರಳಿದರು. ನಾಯಕ ವಿರಾಟ್ ಕೊಹ್ಲಿ ಅದ್ಭುತ ಕ್ಷೇತ್ರರಕ್ಷಣೆ ಮಾಡುವ ಮೂಲಕ ರೋಹಿತ್ ಅವರನ್ನು ರನೌಟ್ ಮಾಡುವಲ್ಲಿ ಯಶಸ್ವಿಯಾದರು. 15 ಎಸೆತಗಳನ್ನು ಎದುರಿಸಿದ ರೋಹಿತ್ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 19 ರನ್ ಗಳಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಕ್ರಿಸ್ ಲಿನ್ ಹಾಗೂ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಿದರು. ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿಯು ಆರ್‌ಸಿಬಿ ಪಾಳೇಯದಲ್ಲಿ ಆತಂಕ ಸೃಷ್ಟಿಸಿದರು.

ಲಿನ್-ಸೂರ್ಯ ಅರ್ಧಶತಕದ ಜೊತೆಯಾಟ.
ಕ್ರಿಸ್ ಲಿನ್ ಹಾಗೂ ಸೂರ್ಯಕುಮಾರ್ ಯಾದವ್ 70 ರನ್‌ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ದಾಳಿಗಿಳಿದ ಕೈಲ್ ಜೇಮಿಸನ್, ಸೂರ್ಯ ಅವರ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇದು ಐಪಿಎಲ್‌ನಲ್ಲಿ ಜೇಮಿಸನ್ ಅವರ ಚೊಚ್ಚಲವಿಕೆಟ್ ಸಾಧನೆಯಾಗಿದೆ.

23 ಎಸೆತಗಳನ್ನು ಎದುರಿಸಿದ ಸೂರ್ಯ ನಾಲ್ಕು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 31 ರನ್ ಗಳಿಸಿದರು.

ಅರ್ಧಶತಕ ವಂಚಿತ ಲಿನ್.
ಇದಾದ ಬೆನ್ನಲ್ಲೇ ಉತ್ತಮವಾಗಿ ಆಡುತ್ತಿದ್ದ ಕ್ರಿಸ್ ಲಿನ್, ರನ್ ಗತಿ ಏರಿಸುವ ಭರದಲ್ಲಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ಪರ ಚೊಚ್ಚಲ ಅರ್ಧಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. 35 ಎಸೆತಗಳನ್ನು ಎದುರಿಸಿದ ಲಿನ್ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರು.

ಡಬಲ್ ಆಘಾತ ನೀಡಿದ ಹರ್ಷಲ್ ಪಟೇಲ್...
ಈ ನಡುವೆ ಮುಂಬೈ ಓಟಕ್ಕೆ ಕಡಿವಾಣ ಹಾಕುವಲ್ಲಿ ಆರ್‌ಸಿಬಿ ಬೌಲರ್‌ಗಳು ಯಶಸ್ವಿಯಾದರು. ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದ ಹರ್ಷಲ್ ಪಟೇಲ್ ಡಬಲ್ ಆಘಾತ ನೀಡಿದರು.

19 ಎಸೆತಗಳನ್ನು ಎದುರಿಸಿದ ಕಿಶನ್ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 28 ರನ್ ಗಳಿಸಿದರು. ಅತ್ತ ಪಾಂಡ್ಯ 10 ಎಸೆತಗಳಲ್ಲಿ ಎರಡು ಬೌಂಡರಿ ನೆರವಿನಿಂದ 13 ರನ್ ಗಳಿಸಿದರು.

ಹರ್ಷಲ್ ಪಟೇಲ್‌ಗೆ 5ರ ಗೊಂಚಲು...
ಇಲ್ಲಿಗೂ ಹರ್ಷಲ್ ಪಟೇಲ್ ಪರಾಕ್ರಮ ನಿಲ್ಲಲಿಲ್ಲ. ಕೊನೆಯ ಓವರ್‌ನಲ್ಲಿ ಮೂರು ವಿಕೆಟ್ ಕಬಳಿಸಿ ಪಂದ್ಯದಲ್ಲಿ ಒಟ್ಟು ಐದು ವಿಕೆಟ್ ಸಾಧನೆ ಮಾಡಿದರು. ಈ ಮೂಲಕ ಐಪಿಎಲ್‌ನಲ್ಲಿ ಪಂದ್ಯವೊಂದರಲ್ಲಿ ಐದು ವಿಕೆಟ್ ಕಬಳಿಸಿದ ಬೌಲರ್‌ಗಳ ಎಲೀಟ್ ಪಟ್ಟಿಗೆ ಸೇರ್ಪಡೆಯಾದರು.

ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 27 ರನ್ ತೆತ್ತ ಹರ್ಷಲ್, ಐದು ವಿಕೆಟ್ ಕಬಳಿಸಿದರು. ಪರಿಣಾಮ ಮುಂಬೈ ಒಂಬತ್ತು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು. ಇನ್ನುಳಿದಂತೆ ಕೀರಾನ್ ಪೊಲಾರ್ಡ್ (7), ಕೃಣಾಲ್ ಪಾಂಡ್ಯ (7), ಮಾರ್ಕೊ ಜಾನ್ಸೆನ್ (0), ರಾಹುಲ್ ಚಹರ್ (0) ಹಾಗೂ ಜಸ್‌ಪ್ರೀತ್ ಬೂಮ್ರಾ (1*) ನಿರಾಸೆ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT