ಸೋಮವಾರ, ಅಕ್ಟೋಬರ್ 25, 2021
25 °C

IPL 2021:ರಾಯ್-ವಿಲಿಯಮ್ಸನ್ ಫಿಫ್ಟಿ; ಸತತ 5 ಸೋಲುಗಳ ಬಳಿಕ ಹೈದರಾಬಾದ್‌ಗೆ ಗೆಲುವು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದುಬೈ: ಜೇಸನ್ ರಾಯ್ (60) ಹಾಗೂ ನಾಯಕ ಕೇನ್ ವಿಲಿಯಮ್ಸನ್ (51*) ಸಮಯೋಚಿತ ಅರ್ಧಶತಕಗಳ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಸೋಮವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಈ ಮೂಲಕ ಸತತ ಐದು ಸೋಲುಗಳ ಬಳಿಕ ಹೈದರಾಬಾದ್ ತಂಡವು ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟಿದೆ. ಅತ್ತ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟವು ವ್ಯರ್ಥವೆನಿಸಿದೆ. 

ಇದನ್ನೂ ಓದಿ: 

ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್, ನಾಯಕ ಸಂಜು ಬಿರುಸಿನ ಅರ್ಧಶತಕದ (82) ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 164 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಗುರಿ ಬೆನ್ನತ್ತಿದ ಹೈದರಾಬಾದ್, 18.3 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿತು.

ಇದರೊಂದಿಗೆ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿರುವ ಹೈದರಾಬಾದ್, ಆಡಿರುವ 10 ಪಂದ್ಯಗಳಲ್ಲಿ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅತ್ತ ರಾಜಸ್ಥಾನ್ ಅಷ್ಟೇ ಪಂದ್ಯಗಳಲ್ಲಿ ಎಂಟು ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. 

ಸವಾಲಿನ ಮೊತ್ತ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಓಪನರ್‌ಗಳಾದ ಜೇಸನ್ ರಾಯ್ ಹಾಗೂ ವೃದ್ಧಿಮಾನ್ ಸಹಾ ಮೊದಲ ವಿಕೆಟ್‌ಗೆ 5.1 ಓವರ್‌ಗಳಲ್ಲಿ 57 ರನ್‌ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ 18 ರನ್ ಗಳಿಸಿದ ಸಹಾ ಔಟ್ ಆದರು. 

ಬಳಿಕ ನಾಯಕ ಕೇನ್ ವಿಲಿಯಮ್ಸನ್ ಅವರೊಂದಿಗೂ ರಾಯ್ 57 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ರಾಜಸ್ಥಾನ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಜೇಸನ್, ಕೇವಲ 36 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. 

ಹೈದರಾಬಾದ್ ಪರ ಚೊಚ್ಚಲ ಐಪಿಎಲ್ ಪಂದ್ಯವನ್ನಾಡುತ್ತಿರುವ ಜೇಸನ್ ರಾಯ್ ಕೇವಲ 42 ಎಸೆತಗಳಲ್ಲಿ 60 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.  ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಡೇವಿಡ್ ವಾರ್ನರ್ ಸ್ಥಾನಕ್ಕೆ ಆಯ್ಕೆಯಾಗಿರುವ ರಾಯ್, ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. 

ಈ ನಡುವೆ ಪ್ರಿಯಂ ಗಾರ್ಗ್ (0) ವಿಕೆಟ್ ನಷ್ಟವಾದರೂ ನಾಯಕ ಕೇನ್ ವಿಲಿಯಮ್ಸನ್ ತಂಡವನ್ನು ಗೆಲುವಿನ ಗುರಿ ಸೇರಿಸಲು ನೆರವಾದರು. ನಾಯಕನ ಇನ್ನಿಂಗ್ಸ್ ಕಟ್ಟಿದ ವಿಲಿಯಮ್ಸನ್ 41 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 51 ರನ್ ಗಳಿಸಿ ಔಟಾಗದೆ ಉಳಿದರು. ಇವರಿಗೆ ತಕ್ಕ ಸಾಥ್ ನೀಡಿದ ಅಭಿಷೇಕ್ ಶರ್ಮಾ 21 ರನ್ ಗಳಿಸಿ ಅಜೇಯರಾಗುಳಿದರು. ಈ ಮೂಲಕ ಇನ್ನು ಒಂಬತ್ತು ಎಸೆತಗಳು ಬಾಕಿ ಉಳಿದಿರುವಾಗ ಸಮಾಧಾನಕರ ಗೆಲುವು ದಾಖಲಿಸಿತು. 

ನಾಯಕನ ಆಟವಾಡಿದ ಸ್ಯಾಮ್ಸನ್...
ಈ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ತಂಡಕ್ಕೆ ಹೈದರಾಬಾದ್ ವೇಗಿ ಭುವನೇಶ್ವರ್ ಕುಮಾರ್ ಮೊದಲ ಆಘಾತ ನೀಡಿದರು. 6 ರನ್ ಗಳಿಸಿದ ಎವಿನ್ ಲೆವಿಸ್ ನಿರಾಸೆ ಮೂಡಿಸಿದರು. 

ಈ ಹಂತದಲ್ಲಿ ಯುವ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ಮಹತ್ವದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. ಆದರೆ ಉತ್ತಮವಾಗಿ ಆಡುತ್ತಿದ್ದ ಜೈಸ್ವಾಲ್ ವಿಕೆಟ್ ಒಪ್ಪಿಸಿ ಹಿನ್ನೆಡೆ ಅನುಭವಿಸಿದರು. 23 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 36 ರನ್ (5 ಬೌಂಡರಿ, 1 ಸಿಕ್ಸರ್) ರನ್ ಗಳಿಸಿದರು. 

ಇದಾದ ಬೆನ್ನಲ್ಲೇ ಲಯಮ್ ಲಿವಿಂಗ್‌ಸ್ಟೋನ್ (4) ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲಿಲ್ಲ. ಇನ್ನೊಂದೆಡೆ ನಾಯಕನ ಇನ್ನಿಂಗ್ಸ್ ಕಟ್ಟಿದ ಸಂಜು ಸ್ಯಾಮ್ಸನ್, ಮಹಿಪಾಲ್ ಲೊಮ್ರೊರ್ ಜೊತೆ ಸೇರಿ ತಂಡವನ್ನು ಮುನ್ನಡೆಸಿದರು.

ಕೊನೆಯ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಸ್ಯಾಮ್ಸನ್ ಆಕರ್ಷಕ ಅರ್ಧಶತಕ ಬಾರಿಸಿದರು. ಅಲ್ಲದೆ ಐಪಿಎಲ್‌ನಲ್ಲಿ 3,000 ರನ್‌ಗಳ ಮೈಲಿಗಲ್ಲು ಕ್ರಮಿಸಿದರು. 

ಸಂಜು ಹಾಗೂ ಲೊಮ್ರೊರ್ ನಾಲ್ಕನೇ ವಿಕೆಟ್‌ಗೆ 84 ರನ್‌ಗಳ ಜೊತೆಯಾಟ ಕಟ್ಟಿದರು. ಈ ಮೂಲಕ ರಾಜಸ್ಥಾನ್ ಐದು ವಿಕೆಟ್ ನಷ್ಟಕ್ಕೆ 164 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. 

57 ಎಸೆತಗಳನ್ನು ಎದುರಿಸಿದ ಸ್ಯಾಮ್ಸನ್ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 82 ರನ್ ಗಳಿಸಿದರು. ಲೊಮ್ರೊರ್ 29 ರನ್ ಗಳಿಸಿ ಅಜೇಯರಾಗುಳಿದರು. ಹೈದರಾಬಾದ್ ಪರ ಸಿದ್ದಾರ್ಥ್ ಕೌಲ್ ಎರಡು ವಿಕೆಟ್ ಕಬಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು