ಭಾನುವಾರ, ಮೇ 16, 2021
22 °C

IPL 2021: ಮುಂಬೈ ಸರ್ವಾಂಗೀಣ ಪ್ರದರ್ಶನದ ಮುಂದೆ ಹೈದರಾಬಾದ್ 'ಹಿಟ್ ವಿಕೆಟ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಮಗದೊಂದು ಲೋ-ಸ್ಕೋರಿಂಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 13 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. 

ಇದರೊಂದಿಗೆ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಬಾರಿಸಿದೆ. ಅತ್ತ ಸನ್‌ರೈಸರ್ಸ್ ಹೈದರಾಬಾದ್ ಹ್ಯಾಟ್ರಿಕ್ ಸೋಲಿನ ಮುಖಭಂಗಕ್ಕೊಳಗಾಗಿದೆ. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿರುವ ಮುಂಬೈ ಇಂಡಿಯನ್ಸ್, ನಾಯಕ ರೋಹಿತ್ ಶರ್ಮಾ (32) ಹಾಗೂ ಕ್ವಿಂಟನ್ ಡಿ ಕಾಕ್ (40)  ಆರಂಭಿಕ ಜೊತೆಯಾಟ ಮತ್ತು ಕೊನೆಯ ಹಂತದಲ್ಲಿ ಕೀರಾನ್ ಪೊಲಾರ್ಡ್ (35*)ಬಿರುಸಿನ ಆಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 150 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. 

ಬಳಿಕ ಗುರಿ ಬೆನ್ನತ್ತಿದ್ದ ಹೈದರಾಬಾದ್‌ಗೆ ಜಾನಿ ಬೆಸ್ಟೊ (43) ಹಾಗೂ ಡೇವಿಡ್ ವಾರ್ನರ್ (36) ಉತ್ತಮ ಆರಂಭವನ್ನೇ ನೀಡಿದರೂ ಅನನುಭವಿ ಬ್ಯಾಟಿಂಗ್ ಪಡೆಯು ನಿರಂತರ ಅಂತರಾಳಗಳಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಅಂತಿಮವಾಗಿ 137 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. 

ಜಾನಿ ಬೆಸ್ಟೊ ಹಿಟ್ ವಿಕೆಟ್ ಆಗಿರುವುದು ಪಂದ್ಯದ ತಿರುವಿಗೆ ಕಾರಣವಾಯಿತು. ಅಲ್ಲಿಂದ ಬಳಿಕ ಹೈದರಾಬಾದ್ ಚೇತರಿಸಿಕೊಳ್ಳಲೇ ಇಲ್ಲ. ಮುಂಬೈ ಪರ ಮಗದೊಮ್ಮೆ ಕೈಚಳಕ ತೋರಿದ ರಾಹುಲ್ ಚಾಹರ್ 19 ರನ್ ತೆತ್ತು ಮೂರು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಡೆತ್ ಬೌಲಿಂಗ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬೂಮ್ರಾ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 14 ರನ್ ನೀಡಿದ್ದರಲ್ಲದೆ ವಿಜಯ್ ಶಂಕರ್ (28) ಅವರ ಮಹತ್ವದ ವಿಕೆಟ್ ಪಡೆದು ಹೈದರಾಬಾದ್ ಓಟಕ್ಕೆ ಕಡಿವಾಣ ಹಾಕಿದರು. 

ಅದ್ಭುತ ಫೀಲ್ಡಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಎರಡು ರನೌಟ್ ಮಾಡುವ ಮೂಲಕ ಮುಂಬೈ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಸಹ ಮೂರು ವಿಕೆಟ್ ಪಡೆದು ಮುಂಬೈ ಸರ್ವಾಂಗೀಣ ಹೋರಾಟವನ್ನು ಪ್ರದರ್ಶಿಸುವಲ್ಲಿ ನೆರವಾದರು. 

ಜಾನಿ ಬೆಸ್ಟೊ ಹಿಟ್ ವಿಕೆಟ್, ಹೈದರಾಬಾದ್‌ಗೆ ಕಾಡಿದ ದುರಾದೃಷ್ಟ...
ಸವಾಲಿನ ಮೊತ್ತ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಆರಂಭಿಕರಾದ ನಾಯಕ ಡೇವಿಡ್ ವಾರ್ನರ್ ಹಾಗೂ ವಿಕೆಟ್ ಕೀಪರ್ ಜಾನಿ ಬೆಸ್ಟೊ ಬಿರುಸಿನ ಆರಂಭವೊದಗಿಸಿದರು. ಈ ಪೈಕಿ ವಾರ್ನರ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ ಬೆಸ್ಟೊ ಮೈದಾನದ ಸುತ್ತಲೂ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದರು. 

ಪರಿಣಾಮ 4.4 ಓವರ್‌ಗಳಲ್ಲೇ ತಂಡದ ಮೊತ್ತ 50ರ ಗಡಿ ದಾಟಿದ್ದವು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಬೆಸ್ಟೊ ಹಿಟ್ ವಿಕೆಟ್ ಆಗಿ ನಿರಾಸೆ ಮೂಡಿಸಿದರು. ಆಗಲೇ ವಾರ್ನರ್ ಜೊತೆಗೂಡಿ ಮೊದಲ ವಿಕೆಟ್‌ಗೆ 7.2 ಓವರ್‌ಗಳಲ್ಲೇ 67 ರನ್‌ಗಳ ಜೊತೆಯಾಟ ನೀಡಿದ್ದರು. 22ಎಸೆತಗಳನ್ನು ಎದುರಿಸಿದ ಬೆಸ್ಟೊ 43 ರನ್ ಗಳಿಸಿದರು. ಈ ಅಬ್ಬರದ ಆಟದಲ್ಲಿ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು. 

ನಿಧಾನಗತಿಯ ಇನ್ನಿಂಗ್ಸ್‌ಗಾಗಿ ಟೀಕೆಗೊಳಗಾಗಿದ್ದ ಮನೀಶ್ ಪಾಂಡೆ ಮಗದೊಮ್ಮೆ ಏಳು ಎಸೆತಗಳಲ್ಲಿ ಕೇವಲ ಎರಡು ಮಾತ್ರ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. 

ಅಂತಿಮ 10 ಓವರ್‌ಗಳಲ್ಲಿ ಹೈದರಾಬಾದ್‌ ಗೆಲುವಿಗೆ 77 ರನ್‌ಗಳ ಅವಶ್ಯಕತೆಯಿತ್ತು. ಆದರೆ ನಿರ್ಣಾಯಕ ಹಂತದಲ್ಲಿ ನಾಯಕ ಡೇವಿಡ್ ವಾರ್ನರ್ ರನೌಟ್ ಆಗುವ ಮೂಲಕ ಪಂದ್ಯಕ್ಕೆ ಮಹತ್ವದ ತಿರುವು ಲಭಿಸಿತು. ಹಾರ್ದಿಕ್ ಪಾಂಡ್ಯ ನೇರ ಥ್ರೋ ಮಾಡುವ ಮೂಲಕ ವಾರ್ನರ್ ಅವರನ್ನು ಪೆವಿಲಿಯನ್‌ಗೆ ಹಿಂತಿರುಗಿಸಿದರು. 34 ಎಸೆತಗಳನ್ನು ಎದುರಿಸಿದ ವಾರ್ನರ್ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ 36 ರನ್ ಗಳಿಸಿದರು. 

ಅನನುಭವಿ ಚೊಚ್ಚಲ ಪಂದ್ಯವನ್ನಾಡುತ್ತಿರುವ ವಿರಾಟ್ ಸಿಂಗ್ (11) ಹಾಗೂ ಅಭಿಷೇಕ್ ಶರ್ಮಾ (2) ನಿರಾಸೆ ಮೂಡಿಸುವುದರೊಂದಿಗೆ 104 ರನ್ ಗಳಿಸಿದ್ದ ಹೈದರಾಬಾದ್ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. 

ಅತ್ತ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 19 ರನ್ ಮಾತ್ರ ಬಿಟ್ಟುಕೊಟ್ಟು ಮೂರು ವಿಕೆಟ್‌ಗಳನ್ನು ಕಬಳಿಸಿದ ರಾಹುಲ್ ಚಾಹರ್ ಮಗದೊಮ್ಮೆ ಮಿಂಚಿನ ದಾಳಿ ಸಂಘಟಿಸಿದರು. 

ಕೃುಣಾಲ್ ಪಾಂಡ್ಯ ಎಸೆದ ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ ಸತತ ಎರಡು ಸಿಕ್ಸರ್ ಸೇರಿದಂತೆ 16 ರನ್ ಸೊರೆಗೈದ ವಿಜಯ್ ಶಂಕರ್, ಹೈದರಾಬಾದ್ ಪಾಳೇಯದಲ್ಲಿ ನಿರೀಕ್ಷೆ ಮೂಡಿಸಿದರು. 

ಆದರೆ ಕೊನೆಯ ಹಂತದಲ್ಲಿ ಜಸ್‌ಪ್ರೀತ್ ಬೂಮ್ರಾ ಹಾಗೂ ಟ್ರೆಂಟ್ ಬೌಲ್ಟ್ ನಿಖರ ದಾಳಿ ಸಂಘಟಿಸಿ ಹೈದರಾಬಾದ್ ಓಟಕ್ಕೆ ಕಡಿವಾಣ ಹಾಕಿದರು. ಪರಿಣಾಮ 19.4 ಓವರ್‌ಗಳಲ್ಲಿ 137 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. 

ವಿಜಯ್ ಶಂಕರ್ (28), ಅಬ್ದುಲ್ ಸಮದ್ (7), ರಶೀದ್ ಖಾನ್ (0), ಭುವನೇಶ್ವರ್ ಕುಮಾರ್ (1), ಮುಜೀಬ್ ಉರ್ ರೆಹಮಾನ್ (1*) ಹಾಗೂ ಖಲೀಲ್ ಅಹಮ್ಮದ್ (1) ರನ್ ಗಳಿಸಿದರು. 

ಮುಂಬೈ ಪರ ರಾಹುಲ್ ಚಾಹರ್ ಹಾಗೂ ಟ್ರೆಂಟ್ ಬೌಲ್ಟ್ ತಲಾ ಮೂರು ಮತ್ತು ಜಸ್‌ಪ್ರೀತ್ ಬೂಮ್ರಾ ಹಾಗೂ ಕೃುಣಾಲ್ ಪಾಂಡ್ಯ ತಲಾ ಒಂದು ವಿಕೆಟನ್ನು ಹಂಚಿಕೊಂಡರು. 

ಪೊಲಾರ್ಡ್ ಮಿಂಚು; ಮುಂಬೈ 150/5
ಈ ಮೊದಲು ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅಲ್ಲದೆ ಧನಾತ್ಮಕ ಚಿಂತನೆಯೊಂದಿಗೆ ಕ್ವಿಂಟನ್ ಡಿ ಕಾಕ್ ಜೊತೆಗೆ ಇನ್ನಿಂಗ್ಸ್ ಬೆಳೆಸಿದರು. ಪರಿಣಾಮ ಪವರ್ ಪ್ಲೇನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 53 ರನ್‌‌ಗಳು ಹರಿದು ಬಂದಿದ್ದವು. 

ಈ ಹಂತದಲ್ಲಿ ದಾಳಿಗಿಳಿದ ವಿಜಯ್ ಶಂಕರ್ ಡಬಲ್ ಆಘಾತ ನೀಡಿದರು. ಮೊದಲು ಸೆಟ್ ಬ್ಯಾಟ್ಸ್‌ಮನ್ ರೋಹಿತ್ (32)  ಬೆನ್ನಲ್ಲೇ ಸೂರ್ಯ ಕುಮಾರ್ ಯಾದವ್ (10) ಅವರನ್ನು ಹೊರದಬ್ಬಿದರು. 25 ಎಸೆತಗಳನ್ನು ಎದುರಿಸಿದ ರೋಹಿತ್ ಇನ್ನಿಂಗ್ಸ್‌ನಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್‌ಗಳು ಸೇರಿದ್ದವು. 

ಮಧ್ಯಮ ಕ್ರಮಾಂಕದಲ್ಲಿ ನಿರಂತರ ಅಂತರಾಳದಲ್ಲಿ ವಿಕೆಟ್ ಕಳೆದುಕೊಂಡಿರುವುದು ಮುಂಬೈ ಹಿನ್ನೆಡೆಗೆ ಕಾರಣವಾಯಿತು. ಸೆಟ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ (40) ಜೊತೆಗೆ ಇಶಾನ್ ಕಿಶನ್ (12) ಅವರನ್ನು ಮುಜೀಬ್ ಉರ್ ರೆಹಮಾನ್ ಪೆವಿಲಿಯನ್‌ಗೆ ಮರಳಿಸಿದರು. 39 ಎಸೆತಗಳನ್ನು ಎದುರಿಸಿದ ಡಿ ಕಾಕ್ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿಗಳು ಸೇರಿದ್ದವು. ಇನ್ನೊಂದೆಡೆ 21 ಎಸೆತಗಳನ್ನು ಎದುರಿಸಿದ ಇಶಾನ್ ಕೇವಲ 12 ರನ್ ಗಳಿಸಿ ನಿರಾಸೆ ಮೂಡಿಸಿದರು. 

ಕೊನೆಯ ಹಂತದಲ್ಲಿ ಕೇವಲ 22 ಎಸೆತಗಳಲ್ಲಿ 35 ರನ್‌ಗಳ ಅಜೇಯ ಇನ್ನಿಂಗ್ಸ್ ಕಟ್ಟಿದ ಕೀರಾನ್ ಪೊಲಾರ್ಡ್ ತಂಡದ ಮೊತ್ತ 150ರ ಗಡಿ ತಲುಪಿಸಲು ನೆರವಾದರು. ಪೊಲಾರ್ಡ್ ಇನ್ನಿಂಗ್ಸ್‌ನಲ್ಲಿ ಒಂದು ಬೌಂಡರಿ ಹಾಗೂ ಮೂರು ಮನಮೋಹಕ ಸಿಕ್ಸರ್‌ಗಳು ಸೇರಿದ್ದವು. ಅಲ್ಲದೆ ಐಪಿಎಲ್‌ನಲ್ಲಿ 200 ಸಿಕ್ಸರ್‌ಗಳ ಮೈಲಿಗಲ್ಲು ತಲುಪಿದರು. 

ಹೈದರಾಬಾದ್ ಪರ ವಿಜಯ್ ಶಂಕರ್ ಹಾಗೂ ಮುಜೀಬ್ ಉರ್ ರೆಹಮಾನ್ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಪೊಲಾರ್ಡ್‌ಗೆ ಅಂತಿಮ ಎರಡು ಎಸೆತಗಳಲ್ಲಿ ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟ ಭುವನೇಶ್ವರ್ ಕುಮಾರ್ ಒಟ್ಟು 45 ರನ್ ತೆತ್ತು ದುಬಾರಿಯೆನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು