ಬುಧವಾರ, ಮೇ 19, 2021
24 °C

ಸಿಂಗಲ್ ನಿರಾಕರಿಸಿದ್ದ ಸಂಜು; ವಿನ್ನಿಂಗ್ ಸಿಕ್ಸರ್‌ನೊಂದಿಗೆ ಉತ್ತರಿಸಿದ ಮೋರಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮೊದಲ ಪಂದ್ಯದ ನಿರ್ಣಾಯಕ ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರು ಕ್ರಿಸ್ ಮೋರಿಸ್ ಅವರಿಗೆ ಸಿಂಗಲ್ ನಿರಾಕರಿಸಿದ್ದರು. ಇದಕ್ಕೀಗ ಎರಡನೇ ಪಂದ್ಯದಲ್ಲಿ ಗೆಲುವಿನ ಸಿಕ್ಸರ್ ಬಾರಿಸುವ ಮೂಲಕ ಮೋರಿಸ್ ತಕ್ಕ ಉತ್ತರವನ್ನೇ ನೀಡಿದ್ದಾರೆ. 

ಅಲ್ಲದೆ ತಾವು ಏಕೆ ಐಪಿಎಲ್ ಇತಿಹಾಸದಲ್ಲೇ ಅತಿ ದುಬಾರ ಆಟಗಾರ ಎಂಬುದನ್ನು ನಿರೂಪಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುರುವಾರ ನಡೆದ ಪಂದ್ಯದ ಒಂದು ಹಂತದಲ್ಲಿ ರಾಜಸ್ಥಾನ್ ಹೀನಾಯವಾಗಿ ಶರಣಾಗಲಿದೆ ಎಂದೇ ಅಂದಾಜಿಸಲಾಗಿತ್ತು. 

148 ರನ್‌ಗಳ ಗುರಿ ಬೆನ್ನತ್ತಿದ ರಾಜಸ್ಥಾನ್, ಡೇವಿಡ್ ಮಿಲ್ಲರ್ (62) ಹೋರಾಟದ ಹೊರತಾಗಿಯೂ 15.5 ಓವರ್‌ಗಳಲ್ಲಿ 104 ರನ್ನಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕಳೆದ ಪಂದ್ಯದ ಶತಕವೀರ ನಾಯಕ ಸಂಜು ಸ್ಯಾಮ್ಸನ್ (4) ಬ್ಯಾಟ್ ಕೂಡಾ ಸಿಡಿಯಲಿಲ್ಲ. 

ಇದನ್ನೂ ಓದಿ: ಐಪಿಎಲ್‌ನ ಅತಿ ದುಬಾರಿ ಆಟಗಾರನಿಗೆ ಸಿಂಗಲ್ ನಿರಾಕರಿಸಿದ ಸಂಜು

ಈ ಹಂತದಲ್ಲಿ ಕ್ರೀಸಿಗಿಳಿದ ದಕ್ಷಿಣ ಆಫ್ರಿಕಾ ಮೂಲದ ಆಲ್‌ರೌಂಡರ್ ಕ್ರಿಸ್ ಮೋರಿಸ್, ಮುರಿಯದ ಎಂಟನೇ ವಿಕೆಟ್‌ಗೆ ಜೈದೇವ್ ಉನಾದ್ಕಟ್ (11*)ಅವರೊಂದಿಗೆ 46 ರನ್‌ಗಳ ಜೊತೆಯಾಟ ನೀಡಿ ತಂಡವು ಎರಡು ವಿಕೆಟ್ ಅಂತರದ ರೋಚಕ ಗೆಲುವಿಗೆ ಕಾರಣರಾದರು. 

ಕೊನೆಯ ಎರಡು ಓವರ್‌ನಲ್ಲಿ ರಾಜಸ್ಥಾನ್ ಗೆಲುವಿಗೆ 27 ಹಾಗೂ ಅಂತಿಮ ಓವರ್‌ನಲ್ಲಿ 12 ರನ್‌ಗಳ ಅವಶ್ಯಕತೆಯಿತ್ತು. ಆದರೆ ಕಗಿಸೋ ರಬಡ ಅವರಂತಹ ವಿಶ್ವದ ನಂ.1 ಬೌಲರ್ ವಿರುದ್ಧ 19ನೇ ಓವರ್‌ನಲ್ಲಿ ಎರಡು ಸಿಕ್ಸರ್ ಬಾರಿಸಿ ತಮ್ಮ ತಾಕತ್ತನ್ನು ಮೆರೆದರು. 

ಅಲ್ಲದೆ ಟಾಮ್ ಕರನ್ ಅಂತಿಮ ಓವರ್‌ನಲ್ಲಿ ಮತ್ತೆರಡು ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 18 ಎಸೆತಗಳನ್ನು ಎದುರಿಸಿದ ಮೋರಿಸ್ ನಾಲ್ಕು ಸಿಕ್ಸರ್‌ಗಳ ನೆರವಿನಿಂದ 36 ರನ್ ಗಳಿಸಿ ಅಜೇಯರಾಗುಳಿದ್ದರು. 

ಏಪ್ರಿಲ್ 12ರಂದು ಸೋಮವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 222 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಕೇವಲ ನಾಲ್ಕು ರನ್ ಅಂತರದಿಂದ ಸೋಲಿಗೆ ಶರಣಾಗಿತ್ತು. 

ಏಕಾಂಗಿ ಹೋರಾಟ ನೀಡಿದ್ದ ಸಂಜು ಸ್ಯಾಮ್ಸನ್ ಅಮೋಘ ಶತಕ ಬಾರಿಸಿದ್ದರೂ ಗೆಲುವು ದಾಖಲಿಸಲಾಗಲಿಲ್ಲ. ಅಂದು ಅಂತಿಮ ಓವರ್‌ನ ಐದನೇ ಎಸೆತದಲ್ಲಿ ನಾನ್ ಸ್ಟ್ರೈಕರ್‌ನಲ್ಲಿದ್ದ ಮೋರಿಸ್ ಅವರಿಗೆ ಸಿಂಗಲ್ ನಿರಾಕರಿಸಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಆಗ ರಾಜಸ್ಥಾನ್ ಗೆಲುವಿಗೆ ಐದು ರನ್ ಬೇಕಾಗಿತ್ತು. ಬಳಿಕ ಕೊನೆಯ ಎಸೆತದಲ್ಲಿ ಬೌಂಡರಿ ಗೆರೆ ಬಳಿ ಕ್ಯಾಚಿತ್ತು ಸಂಜು ನಿರ್ಗಮಿಸಿದ್ದರು. 

ಹಾಗೊಂದು ವೇಳೆ ಸಂಜು ಸಿಂಗಲ್ ಗಳಿಸಿದ್ದರೆ ಅಂತಿಮ ಎಸೆತದಲ್ಲಿ ಮೋರಿಸ್ ಸಿಕ್ಸರ್ ಅಥವಾ ಬೌಂಡರಿ ಬಾರಿಸುವ ಸಾಧ್ಯತೆ ಹೆಚ್ಚಾಗಿತ್ತು ಎಂಬ ವಾದವು ಈಗ ಬಲವಾಗುತ್ತಿದೆ. ಡೆಲ್ಲಿ ವಿರುದ್ಧ ಕ್ರಿಸ್ ಮೋರಿಸ್ ಅವರ ಇನ್ನಿಂಗ್ಸ್ ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು