ಭಾನುವಾರ, ಮೇ 16, 2021
22 °C

IPL 2021; ಶಹಬಾಜ್‌ ಒಂದೇ ಓವರ್‌ನಲ್ಲಿ 3 ವಿಕೆಟ್; ಆರ್‌ಸಿಬಿಗೆ ಸತತ 2ನೇ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಶಹಬಾಜ್ ಅಹ್ಮದ್ (7ಕ್ಕೆ 3 ವಿಕೆಟ್) ಮ್ಯಾಜಿಕ್ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. 

ಇದರೊಂದಿಗೆ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಬಾರಿಸಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲೂ ಆರ್‌ಸಿಬಿ ವಿಜಯ ದಾಖಲಿಸಿತ್ತು. 

ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಗ್ಲೆನ್ ಮ್ಯಾಕ್ಸ್‌ವೆಲ್ (59) ಸಮಯೋಚಿತ ಅರ್ಧಶತಕ ಬಾರಿಸುವ ಮೂಲಕ ನೆರವಾದರೆ ಬಳಿಕ ಶಹಬಾಜ್ ಅಹ್ಮದ್ ಮಾರಕ ದಾಳಿ ಸಂಘಟಿಸುವ ಮೂಲಕ ಬೆಂಗಳೂರು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಇದರೊಂದಿಗೆ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ (54) ಹೋರಾಟವು ವ್ಯರ್ಥವೆನಿಸಿದೆ. 

ಇದೇ ಮೈದಾನದಲ್ಲಿ ಕಳೆದ ದಿನವಷ್ಟೇ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 152 ರನ್‌ಗಳನ್ನು ಕಾಪಾಡಿತ್ತು. ಈಗ ಮಗದೊಂದು ಲೋ ಸ್ಕೋರಿಂಗ್ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ದಾಖಲಿಸಿದೆ. 

ಆರ್‌ಸಿಬಿ ಹೊಸ ಅಸ್ತ್ರ - ಶಹಬಾಜ್ ಮಿಂಚು...
ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಹೈದರಾಬಾದ್‌ ತಂಡಕ್ಕೆ ಆರಂಭದಲ್ಲೇ ಮೊಹಮ್ಮದ್ ಸಿರಾಜ್ ಆಘಾತ ನೀಡಿದರು. 1 ರನ್ ಗಳಿಸಿದ ವೃದ್ಧಿಮಾನ್ ಸಹಾ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಜೊತೆಗೂಡಿದ ನಾಯಕ ಡೇವಿಡ್ ವಾರ್ನರ್ ಹಾಗೂ ಮನೀಶ್ ಪಾಂಡೆ, ಆರ್‌ಸಿಬಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. 

ಮನೀಷ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ವಾರ್ನರ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಅಲ್ಲದೆ ಆಕರ್ಷಕ ಅರ್ಧಶತಕದಲ್ಲಿ ಭಾಗಿಯಾಗುವ ಮೂಲಕ ತಂಡವನ್ನು ಮುನ್ನಡೆಸಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ವಾರ್ನರ್ 31 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು.

ಈ ಹಂತದಲ್ಲಿ ದಾಳಿಗಿಳಿದ ಕೈಲ್ ಜೇಮಿಸನ್, ಅಪಾಯಕಾರಿ ವಾರ್ನರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. 37 ಎಸೆತಗಳನ್ನು ಎದುರಿಸಿದ ವಾರ್ನರ್ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು. ಆಗಲೇ ಮನೀಷ್ ಜೊತೆಗೆ 83 ರನ್‌ಗಳ ಜೊತೆಯಾಟವನ್ನು ಕಟ್ಟಿದ್ದರು.

ಅಂತಿಮ 30 ಎಸೆತಗಳಲ್ಲಿ ಹೈದರಾಬಾದ್‌ ಗೆಲುವಿಗೆ 42 ರನ್‌ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಪಂದ್ಯದ 17ನೇ ಓವರ್‌ನಲ್ಲಿ ದಾಳಿಗಿಳಿದ ಶಹಬಾಜ್ ಅಹ್ಮದ್, ಪಂದ್ಯದಲ್ಲಿ ಆರ್‌ಸಿಬಿ ಪುಟಿದೇಳಲು ನೆರವಾದರು. ಸೆಟ್ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ (38) ಸೇರಿದಂತೆ ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಕಬಳಿಸಿದ ಶಹಬಾಜ್ ಮಿಂಚಿನ ದಾಳಿ ಸಂಘಟಿಸಿದರು.  

ಇಲ್ಲಿಂದ ಬಳಿಕ ದಿಢೀರ್ ಕುಸಿತ ಕಂಡ ಹೈದರಾಬಾದ್ ಚೇತರಿಸಿಕೊಳ್ಳಲಿಲ್ಲ. ಅಲ್ಲದೆ ಅಂತಿಮವಾಗಿ ಒಂಬತ್ತು ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಅಂತಿಮ ಆರು ವಿಕೆಟ್‌ಗಳನ್ನು ಕೇವಲ 27 ರನ್ ಅಂತರದಲ್ಲಿ ಕಳೆದುಕೊಂಡಿತ್ತು. ಜಾನಿ ಬೆಸ್ಟೊ (12), ಅಬ್ದುಲ್ ಸಮದ್ (0), ವಿಜಯ್ ಶಂಕರ್ (3), ಜೇಸನ್ ಹೋಲ್ಡರ್ (4), ರಶೀದ್ ಖಾನ್ (17), ಭುವನೇಶ್ವರ್ ಕುಮಾರ್ (2*)ಹಾಗೂ ಶಹಬಾಜ್ ನದೀಂ (0) ನಿರಾಸೆ ಮೂಡಿಸಿದರು. 
  
ಆರ್‌ಸಿಬಿ ಪರ ಕೇವಲ ಏಳು ರನ್ ತೆತ್ತ ಶಹಬಾಜ್ ಮೂರು ವಿಕೆಟ್ ಕಿತ್ತು ಮಿಂಚಿದರು. ಇವರಿಗೆ ತಕ್ಕ ಸಾಥ್ ನೀಡಿದ ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು.

ಒಟ್ಟಿನಲ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರೂ ಬೌಲಿಂಗ್‌ನಲ್ಲಿ ಮಿಂಚಿದ ಶಹಬಾಜ್, ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಇಲ್ಲಿ ನಾಯಕ ಕೊಹ್ಲಿ ಕೈಗೊಂಡ ನಿರ್ಧಾರವು ಮೆಚ್ಚುಗೆಗೆ ಪಾತ್ರವಾಗಿದೆ. 

ಮ್ಯಾಕ್ಸೆವೆಲ್ ಸಮಯೋಚಿತ ಫಿಫ್ಟಿ, ಆರ್‌ಸಿಬಿ 149/8
ಈ ಮೊದಲು ಗ್ಲೆನ್ ಮ್ಯಾಕ್ಸ್‌ವೆಲ್ ಸಮಯೋಚಿತ ಅರ್ಧಶತಕದ (59) ಹೊರತಾಗಿಯೂ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ಕೋವಿಡ್ ಸೋಂಕಿನಿಂದ ಚೇತರಿಕೆ ಹೊಂದಿದ ಬಳಿಕ ತಂಡವನ್ನು ಸೇರಿರುವ ದೇವದತ್ ಪಡಿಕ್ಕಲ್ ಅವರೊಂದಿಗೆ ನಾಯಕ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದರು. ಆದರೆ ಆರ್‌ಸಿಬಿ ನಿರೀಕ್ಷೆಯಂತೆಯೇ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ.  ಪಡಿಕ್ಕಲ್ (11) ಬೆನ್ನಲ್ಲೇ ಶಹಬಾಜ್ ಅಹ್ಮದ್ (14) ನಿರ್ಗಮಿಸಿದರು.  

ಆರ್‌ಸಿಬಿ ಪವರ್ ಪ್ಲೇನಲ್ಲಿ 47 ಹಾಗೂ 10 ಓವರ್‌ಗಳ ವೇಳೆಗೆ ಎರಡು ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿ ಹಿನ್ನೆಡೆ ಅನುಭವಿಸಿತ್ತು. ಈ ಹಂತದಲ್ಲಿ ಶಹಬಾಜ್ ನದೀಂ ಎಸೆದ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ನಾಯಕ ಕೊಹ್ಲಿ 22 ರನ್ ಸೊರೆಗೈಯುವ ಮೂಲಕ ರನ್ ಗತಿಗೆ ಆವೇಗ ತುಂಬಿದರು. 

ಆದರೆ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ಸಹ ವಿಕೆಟ್ ಒಪ್ಪಿಸುವುದರೊಂದಿಗೆ ಆರ್‌ಸಿಬಿ ಮಗದೊಮ್ಮೆ ಆಘಾತ ಎದುರಿಸಿತು. 29 ಎಸೆತಗಳನ್ನು ಎದುರಿಸಿದ ಕೊಹ್ಲಿ ನಾಲ್ಕು ಬೌಂಡರಿಗಳಿಂದ 33 ರನ್ ಗಳಿಸಿದರು. 

ಕಳೆದ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಕಟ್ಟಿದ ಎಬಿ ಡಿ ವಿಲಿಯರ್ಸ್ (1) ಅವರನ್ನು ರಶೀದ್ ಖಾನ್ ಹೊರದಬ್ಬಿದರು. ವಾಷಿಂಗ್ಟನ್ ಸುಂದರ್ (8) ಹಾಗೂ ಡ್ಯಾನಿಯನ್ ಕ್ರಿಸ್ಟಿಯನ್ (1) ಹೀಗೆ ಬಂದು ಹಾಗೇ ಹೋದರು. ಅಲ್ಲದೆ 109 ರನ್ನಿಗೆ ಆರು ವಿಕೆಟ್ ಕಳೆದುಕೊಂಡಿತ್ತು. 

ಕೊನೆಯ ಹಂತದಲ್ಲಿ ಅರ್ಧಶತಕ ಸಾಧನೆ ಮಾಡಿದ ಮ್ಯಾಕ್ಸ್‌ವೆಲ್ ತಂಡದ ಮೊತ್ತವನ್ನು 150ರ ಸನಿಹಕ್ಕೆ ತಲುಪಿಸಲು ನೆರವಾದರು. ಅಲ್ಲದೆ 2016ನೇ ಇಸವಿಯ ಬಳಿಕ ಐಪಿಎಲ್‌ನಲ್ಲಿ ಫಿಫ್ಟಿ ಸಾಧನೆ ಮಾಡಿದರು. 

ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಔಟ್ ಆದ ಮ್ಯಾಕ್ಸ್‌ವೆಲ್ 41 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 59 ರನ್ ಗಳಿಸಿದರು. ಇನ್ನುಳಿದಂತೆ ಕೈಲ್ ಜೇಮಿಸನ್ 12 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. 

ಹೈದಾರಾಬಾದ್ ಪರ ಜೇಸನ್ ಹೋಲ್ಡರ್ ಮೂರು, ರಶೀದ್ ಖಾನ್ ಎರಡು ವಿಕೆಟ್ ಪಡೆದು ಮಿಂಚಿದರು. ಈ ಪೈಕಿ ರಶೀದ್ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 18 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು