ಬುಧವಾರ, ಮಾರ್ಚ್ 22, 2023
26 °C

IPL 2022 LSG vs GT: ಶುಭಮನ್ ಅರ್ಧ ಶತಕ, ಲಖನೌಗೆ 145 ರನ್‌ ಗುರಿ

ಪ್ರಜಾವಾಣಿ ವೆಬ್ ಡೆಸ್ಕ್‌  Updated:

ಅಕ್ಷರ ಗಾತ್ರ : | |

ಪಂದ್ಯಕ್ಕೂ ಮುನ್ನ ಅಭ್ಯಾಸದಲ್ಲಿ ಆಟಗಾರರು– ಚಿತ್ರ ಕೃಪೆ: ಐಪಿಎಲ್‌ ಟ್ವಿಟರ್‌ ಖಾತೆ

ಪುಣೆ: ಎಂಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ಐಪಿಎಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು, ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಗುಜರಾತ್‌ ಟೈಟನ್ಸ್‌ ಸಾಧಾರಣ ಮೊತ್ತ ದಾಖಲಿಸಿತು. ಲಖನೌ ಸೂಪರ್ ಜೈಂಟ್ಸ್ ಬೌಲರ್‌ಗಳು 144 ರನ್‌ಗಳಿಗೆ ಕಡಿವಾಣ ಹಾಕಿದರು.

ಆರಂಭದಲ್ಲಿ ವಿಕೆಟ್ ಕುಸಿತದ ಆಘಾತದ ನಡುವೆ ಗುಜರಾತ್‌ ತಂಡಕ್ಕೆ ಕೊನೆಯವರೆಗೂ ಆಸರೆಯಾಗಿ ನಿಂತವರು ಶುಭಮನ್ ಗಿಲ್‌. ಅವರ ಅರ್ಧಶತಕದ ನೆರವಿನಿಂದ ತಂಡವು 140 ರನ್‌ ಗಡಿ ದಾಟಿತು. 49 ಎಸೆತಗಳನ್ನು ಎದುರಿಸಿದ ಅವರು ಏಳು ಫೋರ್‌ ಸಹಿತ ಅಜೇಯ 63 ರನ್‌ ದಾಖಲಿಸಿದರು. ನಿಗದಿತ 20 ಓವರ್‌ಗಳಲ್ಲಿ ತಂಡವು ನಾಲ್ಕು ವಿಕೆಟ್‌ ಕಳೆದುಕೊಂಡು 144 ರನ್‌ ಗಳಿಸಿತು.

ಡೇವಿಡ್‌ ಮಿಲ್ಲರ್‌ (26) ಮತ್ತು ರಾಹುಲ್ ತೆವಾಟಿಯಾ (22) ಆಟವು ತಂಡಕ್ಕೆ ನೆರವಾಯಿತು. ಅಪಾಯಕಾರಿ ಆಗಬಹುದಾಗಿದ್ದ ನಾಯಕ ಹಾರ್ದಿಕ್‌ ಪಾಂಡ್ಯ (11) ಮತ್ತು ಮ್ಯಾಥ್ಯು ವೇಡ್‌ (10) ಅವರನ್ನು ಆವೇಶ್‌ ಖಾನ್‌ ಬಹುಬೇಗ ನಿಯಂತ್ರಿಸಿ ಪೆವಿಲಿಯನ್‌ ಹಾದಿ ತೋರಿಸಿದರು. ಆರಂಭಿಕರಾಗಿ ಕಣಕ್ಕಿಳಿದ ವೃದ್ಧಿಮಾನ್ ಸಹಾ (5), ಮೊಹಸಿನ್ ಖಾನ್‌ ಎಸೆತದಲ್ಲಿ ಕ್ಯಾಚ್‌ ಕೊಟ್ಟು ಹೊರ ನಡೆದರು.

ಆವೇಶ್‌ ಖಾನ್‌ ಎರಡು ವಿಕೆಟ್‌, ಮೊಹಸಿನ್‌ ಮತ್ತು ಜೇಸನ್‌ ಹೋಲ್ಡರ್ ತಲಾ ಒಂದು ವಿಕೆಟ್‌ ಪಡೆದರು.

ಎರಡೂ ತಂಡಗಳು ಈ ಟೂರ್ನಿಯಲ್ಲಿ ಎರಡನೇ ಬಾರಿಗೆ ಎದುರಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಗುಜರಾತ್‌ ಗೆಲುವು ಸಾಧಿಸಿತ್ತು. ಇವತ್ತು ಗೆಲ್ಲುವ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯಲಿರುವ ಮೊದಲ ತಂಡವಾಗಲಿದೆ.

ಗುಜರಾತ್‌ ಮತ್ತು ಲಖನೌ ಎರಡೂ ತಂಡಗಳು ಈ ಕ್ರೀಡಾಂಗಣದಲ್ಲಿ ಆಡಿರುವ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಇಲ್ಲಿ ನಡೆದಿರುವ 11 ಪಂದ್ಯಗಳ ಪೈಕಿ ಮೊದಲು ಬ್ಯಾಟಿಂಗ್‌ ನಡೆಸಿರುವ ತಂಡಗಳು ಒಟ್ಟು 8 ಬಾರಿ ಗೆಲುವು ಸಾಧಿಸಿವೆ. 

ಗುಜರಾತ್‌ ಟೈಟನ್ಸ್‌ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ಸಾಯಿ ಸುದರ್ಶನ್‌ ಬದಲು ಸಾಯಿ ಕಿಶೋರ್‌ ಅವಕಾಶ ಪಡೆದಿದ್ದಾರೆ. ಅವರಿಗೆ ಇದು ಚೊಚ್ಚಲ ಪಂದ್ಯವಾಗಿದೆ. ಸಂಗ್ವಾನ್ ಬದಲು ಯಶ್‌ ದಯಾಳ್‌ ಹಾಗೂ ವೇಡ್‌ ಕಣಕ್ಕಿಳಿಯಲಿದ್ದಾರೆ.  

ಲಖನೌ ತಂಡದಲ್ಲಿ ರವಿ ಬಿಷ್ಣೋಯಿ ಸ್ಥಾನಕ್ಕೆ ಕರಣ್‌ ಶರ್ಮಾ ಅವರನ್ನು ಆಡಿಸಲಾಗುತ್ತಿದೆ. 

ಗುಜರಾತ್ ಟೈಟನ್ಸ್

ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್‌,  ಮ್ಯಾಥ್ಯು ವೇಡ್‌, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್‌, ಅಲ್ಜರಿ ಜೋಸೆಫ್‌, ಆರ್‌.ಸಾಯಿ ಕಿಶೋರ್‌, ಯಶ್ ದಯಾಳ್‌,  ಮೊಹಮ್ಮದ್ ಶಮಿ.

ಲಖನೌ ಸೂಪರ್ ಜೈಂಟ್ಸ್

ಕೆ.ಎಲ್‌.ರಾಹುಲ್‌, ಕೃಣಾಲ್ ಪಾಂಡ್ಯ, ದೀಪಕ್ ಹೂಡಾ, ಜೇಸನ್ ಹೋಲ್ಡರ್, ಕ್ವಿಂಟನ್ ಡಿಕಾಕ್, ಮಾರ್ಕಸ್‌ ಸ್ಟೋಯಿನಿಸ್‌, ಆಯುಷ್ ಬಡೋಣಿ, ಕರಣ್ ಶರ್ಮಾ, ಮೊಹಸಿನ್ ಖಾನ್‌, ಆವೇಶ್‌ ಖಾನ್‌,  ದುಷ್ಮತ್ ಚಮೀರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು