ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 LSG vs CSK: ಚೆನ್ನೈಗೆ ಸತತ 2ನೇ ಸೋಲು; ರಾಹುಲ್ ಪಡೆಗೆ ಮೊದಲ ಜಯ

Last Updated 31 ಮಾರ್ಚ್ 2022, 18:08 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಆರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಈ ಮೂಲಕ ಇದೇ ಮೊದಲ ಬಾರಿಗೆ ಪದಾರ್ಪಣೆ ಮಾಡಿರುವ ಲಖನೌ, ಐಪಿಎಲ್‌ನಲ್ಲಿ ಮೊದಲ ಗೆಲುವು ದಾಖಲಿಸಿತು. ಅತ್ತ ಚೆನ್ನೈ, ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೀಸನ್ ಆರಂಭದ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.

ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ 210 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಲಖನೌ ಇನ್ನೂ ಮೂರು ಎಸೆತಗಳು ಬಾಕಿ ಉಳಿದಿರುವಂತೆಯೇ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಹೈ ಸ್ಕೋರಿಂಗ್ ಪಂದ್ಯದಲ್ಲಿ ಲಖನೌಗೆ ನಾಯಕ ಕೆ.ಎಲ್. ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್ ಬಿರುಸಿನ ಆರಂಭವೊದಗಿಸಿದರು. ಚೆನ್ನೈ ಪವರ್ ಪ್ಲೇನಲ್ಲಿ 73 ರನ್ ಪೇರಿಸಿದರೆ ಲಖನೌ 55 ರನ್ ಒಟ್ಟುಗೂಡಿಸಿತು.

ಇಲ್ಲಿಂದ ಬಳಿಕವೂ ರಾಹುಲ್ ಹಾಗೂ ಡಿ ಕಾಕ್ ಆಕ್ರಮಣಕಾರಿ ಆಟವನ್ನು ಮುಂದುವರಿಸಿದರು. ಡಿ ಕಾಕ್ ಕೇವಲ 34 ಎಸೆತಗಳಲ್ಲಿ ಫಿಫ್ಟಿ ಗಳಿಸಿದರು.

ಅಂತಿಮ 10 ಓವರ್‌ಗಳಲ್ಲಿ ಗೆಲುವಿಗೆ 113 ರನ್ ಬೇಕಾಗಿತ್ತು. ಈ ಹಂತದಲ್ಲಿ 40 ರನ್ ಗಳಿಸಿದ ರಾಹುಲ್ ವಿಕೆಟ್ ನಷ್ಟವಾಯಿತು. ಮೊದಲ ವಿಕೆಟ್‌ಗೆ ಡಿ ಕಾಕ್ ಜೊತೆಗೆ 62 ಎಸೆತಗಳಲ್ಲಿ 99 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಮನೀಶ್ ಪಾಂಡೆ (5) ಮಗದೊಮ್ಮೆ ವೈಫಲ್ಯ ಅನುಭವಿಸಿದರು. ಈ ನಡುವೆ ಉತ್ತಮವಾಗಿ ಆಡುತ್ತಿರುವ ಡಿ ಕಾಕ್ ವಿಕೆಟ್ ನಷ್ಟವಾಯಿತು. 45 ಎಸೆತಗಳನ್ನು ಎದುರಿಸಿದ ಡಿ ಕಾಕ್ ಒಂಬತ್ತು ಬೌಂಡರಿಗಳಿಂದ 61 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ಎವಿನ್ ಲೂಯಿಸ್ (55*), ದೀಪಕ್ ಹೂಡಾ (13), ಆಯುಷ್ ಬಡೋನಿ (19) ಬಿರುಸಿನ ಆಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಪೈಕಿ ಲೂಯಿಸ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು.

ಉತ್ತಪ್ಪ, ದುಬೆ ಸ್ಫೋಟಕ ಆಟ...
ಈ ಮೊದಲು ರಾಬಿನ್ ಉತ್ತಪ್ಪ (50) ಹಾಗೂ ಶಿವಂ ದುಬೆ (49) ಸ್ಫೋಟಕ ಆಟದ ನೆರವಿನಿಂದ ಚೆನ್ನೈ ತಂಡವು ಏಳು ವಿಕೆಟ್ ನಷ್ಟಕ್ಕೆ 210 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಚೆನ್ನೈಗೆ ಆರಂಭದಲ್ಲೇ ಋತುರಾಜ್ ಗಾಯಕವಾಡ್ (1) ವಿಕೆಟ್ ನಷ್ಟವಾಯಿತು. ವಿಕೆಟ್‌ನ ಇನ್ನೊಂದು ತುದಿಯಿಂದ ರಾಬಿನ್ ಉತ್ತಪ್ಪ ಆಕ್ರಮಣಕಾರಿ ಆಟವಾಡುವ ಮೂಲಕ ಗಮನ ಸೆಳೆದರು.

ಲಖನೌ ಬೌಲರ್‌ಗಳನ್ನು ದಂಡಿಸಿದ ಉತ್ತಪ್ಪ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಅವರಿಗೆ ಮೊಯಿನ್ ಅಲಿ (35) ಉತ್ತಮ ಸಾಥ್ ನೀಡಿದರು. ಅಲ್ಲದೆ ಎರಡನೇ ವಿಕೆಟ್‌ಗೆ 56 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

27 ಎಸೆತಗಳನ್ನು ಎದುರಿಸಿದ ಉತ್ತಪ್ಪ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.

ಬಳಿಕ ಶಿವಂ ದುಬೆ ಬಿರುಸಿನ ಆಟವನ್ನು ಪ್ರದರ್ಶಿಸಿದರು. ಅವರಿಗೆ ಅಂಬಟಿ ರಾಯುಡು (27) ಉತ್ತಮ ಬೆಂಬಲ ನೀಡಿದರು.

ಆದರೆ ಕೇವಲ ಒಂದು ರನ್ ಅಂತರದಲ್ಲಿ ದುಬೆ ಅರ್ಧಶತಕ ವಂಚಿತರಾದರು. 30 ಎಸೆತಗಳನ್ನು ಎದುರಿಸಿದ ದುಬೆ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರು.

ಅಂತಿಮ ಹಂತದಲ್ಲಿ ನಾಯಕ ರವೀಂದ್ರ ಜಡೇಜ (17) ಹಾಗೂ ಮಹೇಂದ್ರ ಸಿಂಗ್ ಧೋನಿ (16*) ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 210 ರನ್ ಪೇರಿಸಿತು. ಕೇವಲ ಆರು ಎಸೆತಗಳನ್ನು ಎದುರಿಸಿದ ಧೋನಿ, ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು.

ಪಂಜಾಬ್ ಪರ ಎರಡು ವಿಕೆಟ್ ಪಡೆದ ರವಿ ಬಿಷ್ಣೋಯಿ ಪ್ರಭಾವಿ ಎನಿಸಿಕೊಂಡರು. ಇತರೆಲ್ಲ ಬೌಲರ್‌ಗಳು ವೈಫಲ್ಯ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT