ಶನಿವಾರ, ಜೂನ್ 25, 2022
25 °C
ಬೆಂಗಳೂರು ತಂಡಕ್ಕೆ ರಾಜಸ್ಥಾನ ಚಾಲೆಂಜ್

ಇಂದು ಎರಡನೇ ಕ್ವಾಲಿಫೈಯರ್: ಫೈನಲ್‌ ಮೇಲೆ ‘ರಾಯಲ್‌’ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್: ರಜತ್ ಪಾಟೀದಾರ್ ಚೆಂದದ ಶತಕದ ಬಲದಿಂದ ಎಲಿಮಿನೇಟರ್‌ ಪಂದ್ಯದಲ್ಲಿ ಜಯಭೇರಿ ಬಾರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚೊಚ್ಚಲ ಪ್ರಶಸ್ತಿ ಗೆಲುವಿಗೆ ಇನ್ನೆರಡೇ ಹೆಜ್ಜೆ ಬಾಕಿ ಇದೆ.

ಮೊಟೇರಾದ ನರೇಂದ್ರ ಮೋದಿ ಕ್ರಿಕೆಟ್ ಅಂಗಳದಲ್ಲಿ ಶುಕ್ರವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್‌ ಆರ್‌ಸಿಬಿಗೆ ಮೊದಲ ಹೆಜ್ಜೆಯಾಗಲಿದೆ. ಇದರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸವಾಲನ್ನು ಎದುರಿಸಬೇಕಿದೆ. ಈ ಪಂದ್ಯದಲ್ಲಿ ಜಯಿಸುವ ತಂಡವು ಫೈನಲ್‌ಗೆ ಪ್ರವೇಶಿಸಿ, ಗುಜರಾತ್ ಟೈಟನ್ಸ್ ಬಳಗವನ್ನು ಎದುರಿಸಲಿದೆ. 

ಆರ್‌ಸಿಬಿಯು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಟೈಟನ್ಸ್ ಮತ್ತು ಎಲಿಮಿನೇಟರ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಇದು ತಂಡದಲ್ಲಿ ಆತ್ಮವಿಶ್ವಾಸ ಇಮ್ಮಡಿಯಾಗುವಂತೆ ಮಾಡಿದೆ. ಪ್ರಮುಖ ಬ್ಯಾಟರ್‌ಗಳಾದ ಫಫ್ ಡುಪ್ಲೆಸಿ ಮತ್ತು ವಿರಾಟ್ ಕೊಹ್ಲಿ ಅವರಿಬ್ಬರ ಲಯ ಅಸ್ಥಿರವಾಗಿದ್ದರೂ, ರಜತ್ ಪಾಟೀದಾರ್, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಶಹಬಾಜ್ ಅಹಮದ್ ಅವರ ಮೇಲೆ ವಿಶ್ವಾಸವಿಡಬಹುದು. ಆದರೆ, ಬೌಲಿಂಗ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಮತ್ತು ವಣಿಂದು ಹಸರಂಗಾ ಬಿಟ್ಟರೆ ಉಳಿದವರಿಂದ ನಿರಂತರವಾಗಿ ಉತ್ತಮ ಆಟ ಕಂಡುಬಂದಿಲ್ಲ. 

ರಾಜಸ್ಥಾನ ತಂಡದಲ್ಲಿ ಮೂರು ಶತಕ ಬಾರಿಸಿರುವ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ನಾಯಕ ಸಂಜು ಸ್ಯಾಮ್ಸನ್ ಮತ್ತು ದೇವದತ್ತ ಪಡಿಕ್ಕಲ್ ಉತ್ತಮ ಲಯದಲ್ಲಿದ್ದಾರೆ. ಅವರನ್ನು ಕಟ್ಟಿಹಾಕುವ ಸವಾಲು ಆರ್‌ಸಿಬಿ ಬೌಲರ್‌ಗಳ ಮುಂದಿದೆ. 

ರಾಜಸ್ಥಾನ ಬೌಲರ್‌ಗಳಾದ ಪ್ರಸಿದ್ಧಕೃಷ್ಣ, ಕುಲದೀದ್ ಯಾದವ್, ಯಜುವೇಂದ್ರ ಚಾಹಲ್, ಅಶ್ವಿನ್  ಮತ್ತು ಬೌಲ್ಟ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಿದರೆ ಆರ್‌ಸಿಬಿ ಬ್ಯಾಟಿಂಗ್ ಪಡೆಯ ಹಾದಿ ಕಠಿಣವಾಗಬಹುದು. ಅದರಲ್ಲೂ ಚಾಹಲ್‌ ತಮ್ಮ ನಿಕಟಪೂರ್ವ ತಂಡದ ಎದುರು ಉತ್ತಮ ಬೌಲಿಂಗ್ ಮಾಡುವ ಛಲದಲ್ಲಿದ್ದಾರೆ. 

ಐಪಿಎಲ್‌ನ ಮೊದಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ತಂಡವು ಈ ಬಾರಿ ಲೀಗ್ ಹಂತದಲ್ಲಿ ಎರಡನೇ ಸ್ಥಾನ ಪಡೆದು, ಮೊದಲ ಕ್ವಾಲಿಫೈಯರ್ ಆಡಿತ್ತು. ಆದರೆ, ಆ ಪಂದ್ಯದಲ್ಲಿ ಟೈಟನ್ಸ್‌ ಎದುರು ಸೋತಿತ್ತು.

*

ಎಲಿಮಿನೇಟರ್‌ ಪಂದ್ಯದ ಒತ್ತಡದ ಸನ್ನಿವೇಶದಲ್ಲಿ ರಜತ್ ಪಾಟೀದಾರ್ ಅಮೋಘವಾಗಿ ಬ್ಯಾಟಿಂಗ್ ಮಾಡಿದರು. ಇಂತಹ ಇನಿಂಗ್ಸ್ ನಾನು ನೋಡಿರಲೇ ಇಲ್ಲ. ಟೂರ್ನಿ ಇತಿಹಾಸದಲ್ಲಿಯೇ ಅದ್ಭುತ ಶತಕ ಇದು.
–ವಿರಾಟ್ ಕೊಹ್ಲಿ, ಆರ್‌ಸಿಬಿ ಬ್ಯಾಟರ್

*

ತಂಡಗಳು
ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಆರ್. ಅಶ್ವಿನ್, ಟ್ರೆಂಟ್ ಬೌಲ್ಟ್, ಶಿಮ್ರಾನ್ ಹೆಟ್ಮೆಯರ್,  ದೇವದತ್ತ ಪಡಿಕ್ಕಲ್, ಪ್ರಸಿದ್ಧಕೃಷ್ಣ, ಯಜುವೇಂದ್ರ ಚಾಹಲ್, ರಿಯಾನ್ ಪರಾಗ್, ಕೆಸಿ. ಕಾರ್ಯಪ್ಪ, ಕುಲದೀಪ್ ಯಾದವ್, ನವದೀಪ್ ಸೈನಿ,  ಒಬೆದ್ ಮೆಕಾಯ್, ಅನುನಯ ಸಿಂಗ್, ಕುಲದೀಪ್ ಸೇನ್, ಕರುಣ್ ನಾಯರ್, ಧ್ರುವ ಜುರೇಲ್, ತೇಜಸ್ ಬರೂಕಾ, ಜೇಮ್ಸ್ ನಿಶಾಮ್, ನೇಥನ್ ಕೌಲ್ಟರ್‌ ನೈಲ್, ರಸಿ ವ್ಯಾನ್ ಡರ್ ಡಸೆನ್, ಡೆರಿಲ್ ಮಿಚೆಲ್, ಕಾರ್ಬಿನ್ ಬಾಷ್. 

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಫ್ ಡುಪ್ಲೆಸಿ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟೀದಾರ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ವಣಿಂದು ಹಸರಂಗಾ, ದಿನೇಶ್ ಕಾರ್ತಿಕ್, ಜೋಷ್ ಹೇಜಲ್‌ವುಡ್, ಶಹಬಾಜ್ ಅಹಮದ್, ಅನುಜ್ ರಾವತ್, ಆಕಾಶದೀಪ್, ಮಹಿಪಾಲ್ ಲೊಮ್ರೊರ್, ಫಿನ್ ಅಲೆನ್, ಶೆರ್ಫೆನ್ ರುದರ್‌ಫೋರ್ಡ್, ಜೇಸನ್ ಬೆಹ್ರನ್‌ಡಾರ್ಫ್‌, ಸುಯಶ್ ಪ್ರಭುದೇಸಾಯಿ, ಚಾಮಾ ಮಿಲಿಂದ್, ಅನೀಶ್ವರ್ ಗೌತಮ್, ಕರ್ಣ ಶರ್ಮಾ, ಡೇವಿಡ್ ವಿಲಿ, ಸಿದ್ಧಾರ್ಥ್ ಕೌಲ್. 

ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು