ಶುಕ್ರವಾರ, ಜುಲೈ 1, 2022
26 °C

IPL 2022 RCB vs PBKS: ಬೆಂಗಳೂರಿಗೆ ಸೋಲಿನ ರುಚಿ ತೋರಿಸಿದ ಮಯಂಕ್ ಹುಡುಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ನಾಯಕ ಫಫ್ ಡುಪ್ಲೆಸಿ ಅಮೋಘ ಅರ್ಧಶತಕದ (88) ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಸೋಲಿಗೆ ಶರಣಾಗಿದೆ. 

ಈ ಮೂಲಕ ಸೋಲಿನೊಂದಿಗೆ ಅಭಿಯಾನ ಆರಂಭಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ, ನಾಯಕ ಡುಪ್ಲೆಸಿ ಹಾಗೂ ವಿರಾಟ್ ಕೊಹ್ಲಿ ಶತಕದ ಜೊತೆಯಾಟದ ನೆರವಿನಿಂದ 205 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. 

ಬಳಿಕ ಗುರಿ ಬೆನ್ನತ್ತಿದ ಪಂಜಾಬ್ ಇನ್ನೂ ಆರು ಎಸೆತಗಳು ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.  

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್‌ಗೆ ನಾಯಕ ಮಯಂಕ್ ಅಗರವಾಲ್ ಹಾಗೂ ಶಿಖರ್ ಧವನ್ ಬಿರುಸಿನ ಆರಂಭವೊದಗಿಸಿದರು. 

ಆರ್‌ಸಿಬಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ, 7.1 ಓವರ್‌ಗಳಲ್ಲಿ 71 ರನ್ ಪೇರಿಸಿದರು. ಈ ನಡುವೆ ಕನ್ನಡಿಗ ಮಯಂಕ್ ವಿಕೆಟ್ ಪಡೆಯುವಲ್ಲಿ ವಣಿಂದು ಹಸರಂಗಾ ಯಶಸ್ವಿಯಾದರು. 24 ಎಸೆತಗಳನ್ನು ಎದುರಿಸಿದ ಮಯಂಕ್ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 32 ರನ್ ಗಳಿಸಿದರು. 

ಭಾನುಕ ರಾಜಪಕ್ಸ ಸಹ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು. ಈ ನಡುವೆ ಉತ್ತಮವಾಗಿ ಆಡುತ್ತಿದ್ದ ಧವನ್ ವಿಕೆಟ್ ನಷ್ಟವಾಯಿತು. 29 ಎಸೆತಗಳನ್ನು ಎದುರಿಸಿದ ಧವನ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್‌ ನೆರವಿನಿಂದ 43 ರನ್ ಗಳಿಸಿದರು.  

ಇನ್ನಿಂಗ್ಸ್‌ನ 14ನೇ ಓವರ್‌ನಲ್ಲಿ ಭಾನುಕ (43) ಹಾಗೂ ರಾಜ್ ಬಾವ (0) ವಿಕೆಟ್ ಗಳಿಸಿದ ಸಿರಾಜ್, ಪಂದ್ಯದಲ್ಲಿ ಆರ್‌ಸಿಬಿ ತಿರುಗೇಟು ನೀಡಲು ನೆರವಾದರು. 22 ಎಸೆತ ಎದುರಿಸಿದ ಭಾನುಕ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು. 

ಕೊನೆಯ ಹಂತದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ (19), ಶಾರೂಖ್ ಖಾನ್ (24*) ಹಾಗೂ ಒಡಿಯನ್ ಸ್ಮಿತ್ (25*) ಬಿರುಸಿನ ಆಟವಾಡುವ ಮೂಲಕ ಪಂಜಾಬ್ ರೋಚಕ ಗೆಲುವು ದಾಖಲಿಸಲು ನೆರವಾದರು. 

ಡುಪ್ಲೆಸಿ, ಕೊಹ್ಲಿ, ಕಾರ್ತಿಕ್ ವೈಭವ...
ಈ ಮೊದಲು ನಾಯಕ ಫಫ್ ಡುಪ್ಲೆಸಿ (88), ವಿರಾಟ್ ಕೊಹ್ಲಿ (41*) ಹಾಗೂ ದಿನೇಶ್ ಕಾರ್ತಿಕ್ (32*) ಅಮೋಘ ಆಟದ ನೆರವಿನಿಂದ ಆರ್‌ಸಿಬಿ ಎರಡು ವಿಕೆಟ್ ನಷ್ಟಕ್ಕೆ 205 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು

ಟಾಸ್ ಸೋತರೂ ಆರ್‌ಸಿಬಿ ಯೋಜನೆಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ. ನಾಯಕ ಡುಪ್ಲೆಸಿ ಹಾಗೂ ಅನುಜ್ ರಾವತ್ (21) ಉತ್ತಮ ಆರಂಭವೊದಗಿಸಿದರು. ಮೊದಲ ವಿಕೆಟ್‌ಗೆ 50 ರನ್ ಗಳಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು. 

ಡುಪ್ಲೆಸಿ-ಕೊಹ್ಲಿ ಶತಕದ ಜೊತೆಯಾಟ...
ಬಳಿಕ ನಾಯಕ ವಿರಾಟ್ ಕೊಹ್ಲಿ ಜೊತೆ ಸೇರಿದ ಫಫ್ ತಂಡವನ್ನು ಮುನ್ನಡೆಸಿದರು. ನಾಯಕ ಸ್ಥಾನವನ್ನು ತ್ಯಜಿಸಿದ ಕೊಹ್ಲಿ ಒತ್ತಡ ರಹಿತವಾಗಿ ಬ್ಯಾಟ್ ಬೀಸಿದರು. 

ಇನ್ನೊಂದೆಡೆ ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಫಫ್, ಬಳಿಕ ಆಕ್ರಮಣಕಾರಿ ಇನ್ನಿಂಗ್ಸ್ ಕಟ್ಟಿದರು. ಅಲ್ಲದೆ 41 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. 

ಈ ಮೂಲಕ ಐಪಿಎಲ್‌ನಲ್ಲಿ 3,000 ರನ್‌ಗಳ ಮೈಲಿಗಲ್ಲು ತಲುಪಿದರು. ಅಲ್ಲದೆ ಕೊಹ್ಲಿ ಜೊತೆಗೆ ಶತಕದ ಜೊತೆಯಾಟದಲ್ಲಿ (118) ಭಾಗಿಯಾದರು. 

ಪಂಜಾಬ್ ಬೌಲರ್‌ಗಳನ್ನು ಲೀಲಾಜಾಲವಾಗಿ ದಂಡಿಸಿದ ಫಫ್, ಮೈದಾನದ ಎಲ್ಲ ದಿಕ್ಕಿಗೂ ಚೆಂಡನ್ನು ಅಟ್ಟಿದರು. ಆದರೆ ಕೊನೆಯ ಹಂತದಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಕೇವಲ 12 ರನ್ ಅಂತರದಿಂದ ಶತಕ ಮಿಸ್ ಮಾಡಿಕೊಂಡರು. 

57 ಎಸೆತಗಳನ್ನು ಎದುರಿಸಿದ ಫಫ್ ಮೂರು ಬೌಂಡರಿ ಹಾಗೂ ಏಳು ಸಿಕ್ಸರ್ ನೆರವಿನಿಂದ 88 ರನ್ ಗಳಿಸಿದರು. 

ಕೊನೆಯ ಹಂತದಲ್ಲಿ ಕೇವಲ 14 ಎಸೆತಗಳಲ್ಲಿ ತಲಾ ಮೂರು ಸಿಕ್ಸರ್ ಹಾಗೂ ಬೌಂಡರಿಗಳಿಂದ ಅಜೇಯ 32 ರನ್ ಗಳಿಸಿದ ಕಾರ್ತಿಕ್ ಆರ್‌ಸಿಬಿ 205 ಮೊತ್ತ ಪೇರಿಸಲು ನೆರವಾದರು. 

ಇನ್ನೊಂದೆಡೆ ಕೊಹ್ಲಿ 29 ಎಸೆತಗಳಲ್ಲಿ 41 ರನ್ ಗಳಿಸಿ (1 ಬೌಂಡರಿ, 2 ಸಿಕ್ಸರ್) ಔಟಾಗದೆ ಉಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು