ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL | ಸಿಎಸ್‌ಕೆ ಗೆಲುವಿನ ಗುಟ್ಟು: ಕಟ್ಟಾಗಿ ಹೊಣೆ ನಿಭಾಯಿಸಿದವರೇ ಗೆಲುವಿನ ರೂವಾರಿಗಳು

ಚೆನ್ನೈ ಸೂಪರ್ ಕಿಂಗ್ಸ್‌ ಮಹೇಂದ್ರಸಿಂಗ್ ಧೋನಿ ಬಳಗಕ್ಕೆ ಐದನೇ ಕಿರೀಟ
Published 30 ಮೇ 2023, 15:18 IST
Last Updated 30 ಮೇ 2023, 15:18 IST
ಅಕ್ಷರ ಗಾತ್ರ

ಅಹಮದಾಬಾದ್: ಚುಟುಕು ಕ್ರಿಕೆಟ್ ಮಾದರಿಯು ಯುವ ಆಟಗಾರರಿಗಾಗಿಯೇ  ಇದೆ ಎಂಬ ಭಾವನೆ ಇದೆ. ಆದರೆ ಅನುಭವಿಗಳೂ ಈ ಮಾದರಿಯಲ್ಲಿ ಯಶಸ್ವಿಯಾಗಬಲ್ಲರು ಎಂಬುದನ್ನು ಚೆನ್ನೈ ಸೂಪರ್ ಕಿಂಗ್ಸ್‌ ಮತ್ತೊಮ್ಮೆ ಸಾಬೀತು ಮಾಡಿದೆ.

ಅನುಭವ ಅಮೂಲ್ಯವಾದದ್ದು ಮತ್ತು ಯುವಶಕ್ತಿ ಬೆಲೆಬಾಳುವಂತದ್ದು ಎಂಬ ಸೂತ್ರದೊಂದಿಗೆ ಆಡಿದ ಚೆನ್ನೈ ತಂಡವು ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್ ಟೂರ್ನಿಯಲ್ಲಿ ಟ್ರೋಫಿಗೆ ಮುತ್ತಿಕ್ಕಿದೆ. ಎರಡು ವರ್ಷಗಳ ಹಿಂದೆ ’ಡ್ಯಾಡೀಸ್ ಆರ್ಮಿ‘ ಎಂದು ಬಹಳ ಜನರಿಂದ ವ್ಯಂಗ್ಯಕ್ಕೊಳಗಾಗಿತ್ತು. ಆ ವರ್ಷವೂ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಚಾಂಪಿಯನ್ ಆಗಿತ್ತು. ಆಗ ತಂಡದಲ್ಲಿ ಫಫ್ ಡುಪ್ಲೆಸಿ, ರಾಬಿನ್ ಉತ್ತಪ್ಪ, ಮೋಯಿನ್ ಅಲಿ, ಡ್ವೇನ್ ಬ್ರಾವೊ, ರವೀಂದ್ರ ಜಡೇಜ ಅವರೆಲ್ಲರೂ ಅನುಭವಿಗಳಾಗಿದ್ದರು. ಈ ವರ್ಷ ಚೆನ್ನೈ ತಂಡವನ್ನು ಭವಿಷ್ಯವನ್ನು ರೂಪಿಸುವ ಪ್ರಯತ್ನ ಢಾಳಾಗಿ ಕಂಡುಬಂದಿದೆ. 

ಅದಕ್ಕಾಗಿ ತಂಡದ ಎಲ್ಲ ಆಟಗಾರರಿಗೂ ಅವರವರ ಹೊಣೆಯನ್ನು ಸ್ಪಷ್ಟಪಡಿಸಲಾಗಿತ್ತು. ಬ್ಯಾಟರ್‌ಗಳಾದ ಡೆವೊನ್ ಕಾನ್ವೆ, ಋತುರಾಜ್ ಗಾಯಕವಾಡ್, ಅಜಿಂಕ್ಯ ರಹಾನೆ ಮತ್ತು ಶಿವಂ ದುಬೆ, ಬೌಲಿಂಗ್‌ನಲ್ಲಿ ತುಷಾರ್ ದೇಶಪಾಂಡೆ, ಮಥೀಷ ಪಥಿರಾಣ, ಮಹೀಷ ತೀಕ್ಷಣ ಅವರು ತಮ್ಮ ಹೊಣೆಯನ್ನು ಬಹುಪಾಲು ಅಚ್ಚುಕಟ್ಟಾಗಿ ನಿಭಾಯಿಸಿದರು. ಬಹುಕಾಲದ ನಾಯಕ ಧೋನಿ ಮತ್ತು ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಮಾರ್ಗದರ್ಶನವು ಈ ಬಳಗವು ತಮ್ಮ ಹೊಣೆಯಿಂದ ವಿಚಲಿತರಾಗದಂತೆ ನೋಡಿಕೊಂಡಿತು.

ಆರಂಭಿಕ ಜೋಡಿ ಕಾನ್ವೆ ಮತ್ತು ಗಾಯಕವಾಡ್ ಉತ್ತಮ ಅಡಿಪಾಯ ಹಾಕುವಲ್ಲಿ ಯಶಸ್ವಿಯಾದರು. ಒಬ್ಬರು ವಿಫಲರಾದರೆ ಇನ್ನೊಬ್ಬರು ದೀರ್ಘ ಇನಿಂಗ್ಸ್‌ ಆಡಿ ತಂಡಕ್ಕೆ ಆಸರೆಯಾದರು.  ಇಬ್ಬರ ನಡುವೆ ಉತ್ತಮ ಹೊಂದಾಣಿಕೆ ಇತ್ತು. ಒಬ್ಬರು ಆಕ್ರಮಣಕಾರಿಯಾಗಿ ಆಡಿದರೆ, ಮತ್ತೊಬ್ಬರು ರಕ್ಷಣಾತ್ಮಕವಾಗಿ ಆಡಿ ಗಟ್ಟಿ ಹೆಜ್ಜೆಯೂರುತ್ತಿದ್ದರು. ಒಟ್ಟಿನಲ್ಲಿ ಉತ್ತಮ ಅಡಿಪಾಯ ಹಾಕಿದ್ದು ತಂಡಕ್ಕೆ ಉತ್ತಮ ಮೊತ್ತ ಗಳಿಸಲು ಮತ್ತು ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಲು ಸಹಕಾರಿಯಾದವು. ಇಬ್ಬರೂ ತಲಾ 16 ಪಂದ್ಯಗಳನ್ನು ಆಡಿದರು. ಕಾನ್ವೆ 672 ಹಾಗೂ ಋತುರಾಜ್ 590 ರನ್‌ಗಳನ್ನು ಗಳಿಸಿದರು.

ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಅಜಿಂಕ್ಯ ರಹಾನೆ ಇಲ್ಲಿ ಮತ್ತೆ ಮಿಂಚಿದರು. ತಮಗೆ ಲಭಿಸಿದ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ರಹಾನೆ ತಮ್ಮಲ್ಲಿನ್ನೂ ಆಟ ಬಾಕಿಯಿದೆ ಎಂಬುದನ್ನು ಸಾಬೀತುಮಾಡಿದರು. ಎರಡು ಅರ್ಧಶತಕ ಗಳಿಸಿದ ಅವರು ಒಟ್ಟು 14 ಪಂದ್ಯಗಳಲ್ಲಿ 326 ರನ್‌ಗಳನ್ನೂ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾದರು.  ಇನ್ನೊಬ್ಬ ಮುಂಬೈಕರ್ ಶಿವಂ ದುಬೆ ತಮ್ಮ ಸ್ಪೋಟಕ ಶೈಲಿಯ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ದುಬೆ ಮೂರು ಅರ್ಧಶತಕ ಗಳಿಸಿದರು. ಒಟ್ಟು 16 ಪಂದ್ಯಗಳಲ್ಲಿ 418 ರನ್‌ ಪೇರಿಸಿದರು. ಎಡಗೈ ಬ್ಯಾಟರ್ ಫೈನಲ್‌ ಪಂದ್ಯದಲ್ಲಿಯೂ ತಂಡದ ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದರು.

ಬೌಲಿಂಗ್ ವಿಭಾಗದಲ್ಲಿ ಚೆನ್ನೈ ತಂಡಕ್ಕೆ ಅನುಭವಿ ಆಟಗಾರರ ಕೊರತೆ ಎದ್ದುಕಂಡಿತ್ತು. ಆರಂಭಿಕ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದರೂ ನಂತರ ಬೌಲರ್‌ಗಳು ಲಯಕ್ಕೆ ಮರಳಿದರು. ಒಂದು ಹಂತದಲ್ಲಿ ’ಬೌಲರ್‌ಗಳು ಇದೇ ರೀತಿ ರನ್‌ಗಳನ್ನು ಕೊಡುತ್ತಿದ್ದರೆ ಮತ್ತು ವೈಡ್‌ಗಳನ್ನು ಎಸೆಯುತ್ತಿದ್ದರೆ ಮುಂದಿನ ಬಾರಿ ಬೇರೆ ತಂಡ, ನಾಯಕನನ್ನು ನೋಡಬೇಕಾಗಬಹುದು‘ ಎಂದು ಧೋನಿ ಎಚ್ಚರಿಕೆ ನೀಡಿದ್ದರು. ಇದರಿಂದ ಎಚ್ಚೆತ್ತ ಬೌಲರ್‌ಗಳು  ಶಿಸ್ತಿನ ಬೌಲಿಂಗ್ ಮಾಡಿದರು. ಅದರಲ್ಲಿ ತುಷಾರ್ ದೇಶಪಾಂಡೆ 21 ವಿಕೆಟ್ ಪಡೆದು ಯಶಸ್ವಿ ಎನಿಸಿದರು.  ಶ್ರೀಲಂಕೆಯ ಮಥೀಷ ಪಥಿರಾಣ 19 ವಿಕೆಟ್ ಹಾಗೂ ಸ್ಪಿನ್ನತ್ ಮಹೀಷ ತೀಕ್ಷಣ 11 ವಿಕೆಟ್‌ ಗಳನ್ನು ಗಳಿಸಿದರು.  ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜ ಕೆಲವು ಉಪಯುಕ್ತ ಸ್ಪೆಲ್‌ಗಳನ್ನು ಬೌಲ್ ಮಾಡಿ ತಂಡವನ್ನು ವಿಜಯದತ್ತ ಮುನ್ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT