ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಖನೌ ಸೂಪರ್‌ಜೈಂಟ್ಸ್‌–ಗುಜರಾತ್ ಟೈಟನ್ಸ್‌ ಪಂದ್ಯ ಇಂದು; ವೇಗಿ ಮಯಂಕ್ ಮೇಲೆ ಕಣ್ಣು

ರಾಹುಲ್ ಪಡೆಗೆ ‘ಹ್ಯಾಟ್ರಿಕ್’ ಜಯದ ಮೇಲೆ ಕಣ್ಣು
Published 6 ಏಪ್ರಿಲ್ 2024, 23:30 IST
Last Updated 6 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಲಖನೌ: ವೇಗದ ಬೌಲಿಂಗ್‌ನ ಯುವತಾರೆ ಮಯಂಕ್ ಯಾದವ್ ಅವರ ಅಮೋಘ ದಾಳಿಯಿಂದಾಗಿ ಸತತ ಎರಡು ಪಂದ್ಯಗಳಲ್ಲಿ ಜಯಿಸಿರುವ ಲಖನೌ ಸೂಪರ್ ಜೈಂಟ್ಸ್‌ ಭಾನುವಾರ ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿಯಲಿದೆ. 

ಕೆ.ಎಲ್. ರಾಹುಲ್ ನಾಯಕತ್ವದ ತಂಡವು ಹ್ಯಾಟ್ರಿಕ್  ಗೆಲುವಿನ ವಿಶ್ವಾಸದಲ್ಲಿದೆ.  ಶರವೇಗದ ಎಸೆತಗಳನ್ನು ಪ್ರಯೋಗಿಸುವ ಮೂಲಕ ಮಯಂಕ್ ಎಲ್ಲರ ಗಮನ ಸೆಳೆದಿದ್ದಾರೆ. 21 ವರ್ಷದ ಮಯಂಕ್ ಪಂಜಾಬ್ ಕಿಂಗ್ಸ್‌ ಎದುರು (27ಕ್ಕೆ3) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು (14ಕ್ಕೆ3) ಮಿಂಚಿದ್ದರು. ಪಂಜಾಬ್ ತಂಡದ ಅನುಭವಿ ಬ್ಯಾಟರ್ ಜಾನಿ ಬೆಸ್ಟೊ ಹಾಗೂ ಆರ್‌ಸಿಬಿಯ ಗ್ಲೆನ್ ಮ್ಯಾಕ್ಸ್‌ವೆಲ್ (151 ಕಿ.ಮೀ)  ವಿಕೆಟ್‌ಗಳನ್ನು ಗಳಿಸಿದ್ದ ಅವರ ಎಸೆತಗಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಭಾರತ ತಂಡದ ಭವಿಷ್ಯದ ವೇಗಿ ಎಂದೂ ಅವರನ್ನು ಬಣ್ಣಿಸಲಾಗುತ್ತಿದೆ.

ಇನ್ನಷ್ಟು ಉನ್ನತ ಸ್ಥಾನಕ್ಕೇರಲು ಅವರಿಗೆ ಎರಡೇ ಪಂದ್ಯಗಳ ಸಾಧನೆ ಮಾತ್ರ ಅವರಿಗೆ ಸಾಕಾಗದು. ಮುಂಬರುವ ಕಠಿಣ ಹಣಾಹಣಿಗಳಲ್ಲಿಯೂ ಅವರು ತಮ್ಮ ಸಾಮರ್ಥ್ಯ ಮೆರೆಯುವುದು ಅನಿವಾರ್ಯವಾಗಲಿದೆ. 

ಲಖನೌ ತಂಡದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್, ಮಧ್ಯಮಕ್ರಮಾಂಕದಲ್ಲಿ ನಿಕೊಲಸ್ ಪೂರನ್, ದೇವದತ್ತ ಪಡಿಕ್ಕಲ್, ಕೃಣಾಲ್ ಪಾಂಡ್ಯ ಮತ್ತು ಆಸ್ಟ್ರೇಲಿಯಾ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್  ಅವರಿರುವ ಬ್ಯಾಟಿಂಗ್ ವಿಭಾಗವು ಬಲಾಢ್ಯವಾಗಿದೆ. ಯಾದವ್‌ ಅವರೊಂದಿಗೆ ಮೊಹಸಿನ್ ಖಾನ್, ಲೆಗ್‌ಸ್ಪಿನ್ನರ್ ರವಿ ಬಿಷ್ಣೊಯಿ ಹಾಗೂ ನವೀನ್ ಉಲ್ ಹಕ್ ಅವರಿರುವ ಬೌಲಿಂಗ್ ವಿಭಾಗವೂ ಸಮರ್ಥವಾಗಿದೆ. ಆದರೆ ರಾಹುಲ್ ತಮ್ಮ ಬ್ಯಾಟಿಂಗ್‌ನಲ್ಲಿ ಲಯಕ್ಕೆ ಮರಳಬೇಕಿದೆ.

ಲಖನೌ ತಂಡವು ಟೂರ್ನಿಯಲ್ಲಿ ಮೂರು ಪಂದ್ಯಗಳನ್ನು ಆಡಿದೆ. ಅದರಲ್ಲಿ ಎರಡರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಹೊಸ ನಾಯಕ ಶುಭಮನ್ ಗಿಲ್  ಟೂರ್ನಿಯಲ್ಲಿ ಇದುವರೆಗೆ ಮಿಶ್ರಫಲ ಪಡೆದಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಎರಡು ಗೆದ್ದಿರುವ ತಂಡವು ಇನ್ನೆರಡರಲ್ಲಿ ಸೋತಿದೆ. 

ಕಳೆದ ಪಂದ್ಯದಲ್ಲಿ 48 ಎಸೆತಗಳಲ್ಲಿ 89 ರನ್‌ಗಳನ್ನು ಹೊಡೆದಿರುವ ಗಿಲ್ ಲಯಕ್ಕೆ ಮರಳಿದರು. ಬಿ. ಸಾಯಿ ಸುದರ್ಶನ್ ಉತ್ತಮವಾಗಿ ಆಡಿದ್ದಾರೆ. ಆದರೆ ವೃದ್ಧಿಮಾನ್ ಸಹಾ ಹಾಗೂ ವಿಜಯಶಂಕರ್ ಲಯಕ್ಕೆ ಮರಳಬೇಕಿದೆ.

ಅನುಭವಿ ಬೌಲರ್ ಮೋಹಿತ್ ಶರ್ಮಾ ಅವರು ಉತ್ತಮವಾಗಿ  ಆಟವಾಡುತ್ತಿರುವುದು ಗುಜರಾತ್ ತಂಡಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಉಮೇಶ್ ಯಾದವ್, ರಶೀದ್ ಖಾನ್ ಮತ್ತು ನೂರ್ ಅಹಮದ್ ಅವರೂ ತಂಡದ ಬೌಲಿಂಗ್ ವಿಭಾಗದ ಪ್ರಮುಖರಾಗಿದ್ದಾರೆ. ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಆಗಿದ್ದ ಲೋಪಗಳನ್ನು ಸುಧಾರಿಸಿಕೊಂಡು ಕಣಕ್ಕಿಳಿಯುವ ಸವಾಲು ಗುಜರಾತ್ ಬೌಲರ್‌ಗಳ ಮುಂದಿದೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT