ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RR vs MI: ಜೈಸ್ವಾಲ್ ಶತಕ, ಸಂದೀಪ್‌ಗೆ 5 ವಿಕೆಟ್, ಚಾಹಲ್‌ 200 ವಿಕೆಟ್ ಸಾಧನೆ

Published 23 ಏಪ್ರಿಲ್ 2024, 2:44 IST
Last Updated 23 ಏಪ್ರಿಲ್ 2024, 2:44 IST
ಅಕ್ಷರ ಗಾತ್ರ

ಜೈಪುರ: ಸಂದೀಪ್ ಶರ್ಮಾ ಐದು ವಿಕೆಟ್ ಸಾಧನೆ (18ಕ್ಕೆ 5) ಹಾಗೂ ಯಶಸ್ವಿ ಜೈಸ್ವಾಲ್ ಅಮೋಘ ಶತಕದ (104*) ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ಸೋಮವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 180 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ, ಇನ್ನೂ ಎಂಟು ಎಸೆತಗಳು ಬಾಕಿ ಉಳಿದಿರುವಂತೆಯೇ 18.4 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಐಪಿಎಲ್‌ನಲ್ಲಿ ಜೈಸ್ವಾಲ್ 2ನೇ ಶತಕ ಸಾಧನೆ...

ಎಡಗೈ ಸ್ಫೋಟಕ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಐಪಿಎಲ್‌ನಲ್ಲಿ ಎರಡನೇ ಶತಕದ ಸಾಧನೆ ಮಾಡಿದ್ದಾರೆ. ಈ ಎರಡೂ ಶತಕಗಳು ಮುಂಬೈ ಇಂಡಿಯನ್ಸ್ ವಿರುದ್ಧವೇ ದಾಖಲಾಗಿವೆ ಎಂಬುದು ಗಮನಾರ್ಹ. 60 ಎಸೆತಗಳಲ್ಲಿ ಅಜೇಯ 104 ರನ್ ಗಳಿಸಿದ ಜೈಸ್ವಾಲ್ ಇನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಹಾಗೂ ಏಳು ಸಿಕ್ಸರ್‌ಗಳು ಸೇರಿದ್ದವು. ನಾಯಕ ಸಂಜು ಸ್ಯಾಮ್ಸನ್ ಜೊತೆ ಮುರಿಯದ ಎರಡನೇ ವಿಕೆಟ್‌ಗೆ 109 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಸಂಜು ಸ್ಯಾಮ್ಸನ್ (38*) ಹಾಗೂ ಜೋಸ್ ಬಟ್ಲರ್ (35) ಉಪಯುಕ್ತ ಕಾಣಿಕೆ ನೀಡಿದರು.

ಯಜುವೇಂದ್ರ ಚಾಹಲ್ ಐಪಿಎಲ್‌ನಲ್ಲಿ 200 ವಿಕೆಟ್ ಗಳಿಸಿದ ಮೊದಲ ಬೌಲರ್...

ಐಪಿಎಲ್ ಇತಿಹಾಸದಲ್ಲೇ 200 ವಿಕೆಟ್ ಗಳಿಸಿದ ಮೊದಲ ಬೌಲರ್ ಎಂಬ ಖ್ಯಾತಿಗೆ ಯಜುವೇಂದ್ರ ಚಾಹಲ್ ಭಾಜನರಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ನಬಿ ವಿಕೆಟ್ ಪಡೆದ ಚಾಹಲ್, ಮೈಲಿಗಲ್ಲು ತಲುಪಿದರು. ತಮ್ಮ 153ನೇ ಪಂದ್ಯದಲ್ಲಿ ಚಾಹಲ್ ಈ ಸಾಧನೆ ಮಾಡಿದರು.

ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಟಾಪ್ 5 ಬೌಲರ್‌:

ಯಜುವೇಂದ್ರ ಚಾಹಲ್: 200

ಡ್ವೇನ್ ಬ್ರಾವೊ: 183

ಪಿಯೂಷ್ ಚಾವ್ಲಾ: 182

ಭುವನೇಶ್ವರ ಕುಮಾರ್: 174

ಅಮಿತ್ ಮಿಶ್ರಾ: 173

ಸಂದೀಪ್ ಶರ್ಮಾ ಚೊಚ್ಚಲ ಐದು ವಿಕೆಟ್ ಸಾಧನೆ...

30 ವರ್ಷದ ಮಧ್ಯಮ ವೇಗಿ ಸಂದೀಪ್ ಶರ್ಮಾ, ಮೊದಲ ಸಲ ಐಪಿಎಲ್‌ನಲ್ಲಿ 5 ವಿಕೆಟ್‌ ಗೊಂಚಲು ಪಡೆದು ಮಿಂಚಿದರು. ಕೇವಲ 18 ರನ್ ತೆತ್ತ ಸಂದೀಪ್ ಐದು ವಿಕೆಟ್‌ ಪಡೆದು ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಎರಡು ವರ್ಷಗಳ ಹಿಂದೆ 'ಅನ್‌ಸೋಲ್ಡ್' ಆಗಿದ್ದ ಸಂದೀಪ್ ಅವರನ್ನು ಬದಲಿ ಆಟಗಾರನ ರೂಪದಲ್ಲಿ ರಾಜಸ್ಥಾನ ತಂಡಕ್ಕೆ ಸೇರಿಸಿಕೊಂಡಿತ್ತು. ಅಲ್ಲಿಂದ ಬಳಿಕ ರಾಜಸ್ಥಾನದ ಪ್ರಮುಖ ಬೌಲರ್ ಆಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿದ್ದಾರೆ.

7ನೇ ಗೆಲುವು ದಾಖಲಿಸಿದ ರಾಜಸ್ಥಾನ...

ಟೂರ್ನಿಯಲ್ಲಿ ಇದುವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ಏಳನೇ ಗೆಲುವು ದಾಖಲಿಸಿರುವ ರಾಜಸ್ಥಾನ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಈ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮಾತ್ರ ಸೋಲನುಭವಿಸಿದೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಅಷ್ಟೇ ಪಂದ್ಯಗಳಲ್ಲಿ ಮೂರು ಗೆಲುವು, ಐದು ಸೋಲಿನೊಂದಿಗೆ ಆರು ಅಂಕ ಮಾತ್ರ ಗಳಿಸಿದ್ದು, ಏಳನೇ ಸ್ಥಾನದಲ್ಲಿದೆ. ಅಲ್ಲದೆ ಪ್ಲೇ-ಆಫ್ ಹಾದಿ ಕಠಿಣವೆನಿಸಿದೆ.

ಮುಂಬೈ ಬ್ಯಾಟರ್‌ಗಳ ವೈಫಲ್ಯ...

ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಒಂಬತ್ತು ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಮುಂಬೈ ಪರ ತಿಲಕ್ ವರ್ಮಾ (65) ಹಾಗೂ ನೇಹಲ್‌ ವಢೇರಾ (49) ಮಿಂಚಿದರು. ಆದರೆ ರೋಹಿತ್ ಶರ್ಮಾ (6), ಇಶಾನ್ ಕಿಶಾನ್ (0), ಸೂರ್ಯಕುಮಾರ್ ಯಾದವ್ (10), ಹಾರ್ದಿಕ್ ಪಾಂಡ್ಯ (10) ಹಾಗೂ ಟಿಮ್ ಡೇವಿಡ್ (3) ವೈಫಲ್ಯವನ್ನು ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT