ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: RCB vs CSK ಉದ್ಘಾಟನಾ ಪಂದ್ಯ; ಧೋನಿ-ಕೊಹ್ಲಿ ಮೇಲೆ ಎಲ್ಲರ ಕಣ್ಣು

Published 21 ಮಾರ್ಚ್ 2024, 10:31 IST
Last Updated 21 ಮಾರ್ಚ್ 2024, 10:31 IST
ಅಕ್ಷರ ಗಾತ್ರ

ಚೆನ್ನೈ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಲ್) 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಮೆಂಟ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.

ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಮಾರ್ಚ್ 22, ಶುಕ್ರವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿವೆ.

ಐಪಿಎಲ್ 17ನೇ ಆವೃತ್ತಿಗೆ ಕಾಲಿಟ್ಟಿರುವಂತೆಯೇ ಆರ್‌ಸಿಬಿ, ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಈ ಹಿಂದೆ ಮೂರು ಬಾರಿ ಫೈನಲ್ ಪ್ರವೇಶಿಸಿದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈಗಷ್ಟೇ ಅಂತ್ಯಗೊಂಡ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದಿರುವುದು ಪುರುಷರ ತಂಡಕ್ಕೆ ಹೊಸ ಹುರುಪು ನೀಡಿದೆ.

ಧೋನಿ ಆಟ ನೋಡುವ ಕಾತರದಲ್ಲಿ ಅಭಿಮಾನಿಗಳು...

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಮಹೇಂದ್ರ ಸಿಂಗ್ ಧೋನಿ, ಐಪಿಎಲ್‌ನಲ್ಲಿ ಮಾತ್ರ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಇದರಿಂದಾಗಿ ಧೋನಿ ಆಟವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಿಎಸ್‌ಕೆ ಅಷ್ಟೇ ಅಲ್ಲದೆ ದೇಶದಾದ್ಯಂತ ಅಭಿಮಾನಿಗಳು ಮಹಿ ಆಟವನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಬಾರಿಯ ಟೂರ್ನಿಯ ಬಳಿಕ ಧೋನಿ ಐಪಿಎಲ್‌ಗೂ ವಿದಾಯ ಘೋಷಿಸುವರೇ ಎಂಬುದು ಕುತೂಹಲವೆನಿಸಿದೆ.

ಧೋನಿ vs ಕೊಹ್ಲಿ

ಈ ಬಾರಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಧೋನಿ ಹಾಗೂ ವಿರಾಟ್ ಕೊಹ್ಲಿ ನಡುವೆ ಪೈಪೋಟಿ ಏರ್ಪಟ್ಟಿದೆ. ಆಕ್ರಮಣಶೀಲ ಸ್ವಭಾವದ ಕೊಹ್ಲಿ ಹಾಗೂ 'ಕೂಲ್' ಧೋನಿ ನಡುವೆ ಗೆಲುವು ಯಾರದ್ದಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮೈದಾನದ ಹೊರಗೆ ಧೋನಿ ಹಾಗೂ ಕೊಹ್ಲಿ ಉತ್ತಮ ಬಾಂಧವ್ಯ ಕಾಪಾಡಿಕೊಂಡಿದ್ದಾರೆ. ಅವರಿಬ್ಬರ ನಡುವಣ ಗೆಳೆತನವು ಅಭಿಮಾನಿಗಳಿಗೆ ರಸದೌತಣವನ್ನು ನೀಡಲಿದೆ.

ಕೊಹ್ಲಿಗೆ ವಿಶ್ವಕಪ್ ಗುರಿ...

ಐಪಿಎಲ್ ಮುಗಿದ ಬೆನ್ನಲ್ಲೇ ಐಸಿಸಿ ಟ್ವೆಂಟಿ-20 ವಿಶ್ವಕಪ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಪಾಲಿಗೆ ಐಪಿಎಲ್ ಅತ್ಯಂತ ನಿರ್ಣಾಯಕವೆನಿಸಿದೆ. ರನ್ ಹೊಳೆಯನ್ನೇ ಹರಿಸಿ ಉತ್ತಮ ಬ್ಯಾಟಿಂಗ್ ಲಯ ಕಂಡುಕೊಳ್ಳುವುದು ಕೊಹ್ಲಿ ಪಾಲಿಗೆ ಮಹತ್ವದೆನಿಸಿದೆ.

ಆರ್‌ಸಿಬಿ vs ಸಿಎಸ್‌ಕೆ

ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಣ ಪಂದ್ಯವನ್ನು'ದಕ್ಷಿಣ ಡರ್ಬಿ' ಎಂದೇ ವಿಶ್ಲೇಷಿಸಲಾಗುತ್ತದೆ. ಆದ್ದರಿಂದಲೇ ಈ ಪಂದ್ಯ ಅತ್ಯಂತ ಕುತೂಹಲ ಕೆರಳಿಸಿದೆ. ಒಟ್ಟಿನಲ್ಲಿ ಇತ್ತಂಡಗಳ ನಡುವೆ ರೋಚಕ ಹಣಾಹಣಿ ನಡೆಯುವ ಸಾಧ್ಯತೆಯಿದೆ.

ನಾಯಕ ಸ್ಥಾನ ತ್ಯಜಿಸಿದ ಧೋನಿ...

ಏತನ್ಮಧ್ಯೆ, ಐಪಿಎಲ್ ಆರಂಭಕ್ಕೂ ಹಿಂದಿನ ದಿನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಸ್ಥಾನವನ್ನು ಮಹೇಂದ್ರ ಸಿಂಗ್ ಧೋನಿ ತ್ಯಜಿಸಿದ್ದಾರೆ. ಅಲ್ಲದೆ ಸಿಎಸ್‌ಕೆ ತಂಡದ ನೂತನ ಕ್ಯಾಪ್ಟನ್ ಆಗಿ ಯುವ ಭರವಸೆಯ ಆಟಗಾರ ಋತುರಾಜ್ ಗಾಯಕವಾಡ್ ಅವರನ್ನು ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT