ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ 8ನೇ ಶತಕ, RCBಗೆ 'ಹ್ಯಾಟ್ರಿಕ್' ಸೋಲು; ಕೊನೆ ಎಸೆತದಲ್ಲಿ ಬಟ್ಲರ್ ಶತಕ

Published 7 ಏಪ್ರಿಲ್ 2024, 2:44 IST
Last Updated 7 ಏಪ್ರಿಲ್ 2024, 2:44 IST
ಅಕ್ಷರ ಗಾತ್ರ

ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಮೂರನೇ ಸೇರಿದಂತೆ ಟೂರ್ನಿಯಲ್ಲಿ ನಾಲ್ಕನೇ ಸೋಲಿಗೆ ಗುರಿಯಾಗಿದೆ. ಶನಿವಾರ ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆಯ ಎಂಟನೇ ಶತಕದ ಹೊರತಾಗಿಯೂ ಆರು ವಿಕೆಟ್ ಅಂತರದ ಸೋಲಿಗೆ ಶರಣಾಯಿತು. ಮತ್ತೊಂದೆಡೆ ಕೊನೆಯ ಎಸೆತದಲ್ಲಿ ಸಿಕ್ಸರ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್, ಐಪಿಎಲ್‌ನಲ್ಲಿ 6ನೇ ಶತಕ ಸಾಧನೆ ಮಾಡಿದರು.

ಈ ಪಂದ್ಯದ ಮುಖ್ಯಾಂಶಗಳ ಕುರಿತು ಸಮಗ್ರ ವರದಿ ಇಲ್ಲಿದೆ.

ಕೊಹ್ಲಿ-ಬಟ್ಲರ್ ಶತಕ ಸಾಧನೆ...

ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪೈಕಿ ವಿರಾಟ್ ಕೊಹ್ಲಿ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ. ಇದು ಐಪಿಎಲ್‌ನಲ್ಲಿ ಕೊಹ್ಲಿ ದಾಖಲಿಸಿದ ಎಂಟನೇ ಶತಕವಾಗಿದೆ. 'ರನ್ ಮೆಷಿನ್' ಖ್ಯಾತಿಯ ವಿರಾಟ್ ಕೊಹ್ಲಿ, 72 ಎಸೆತಗಳಲ್ಲಿ ಅಜೇಯ 113 ರನ್ (12 ಬೌಂಡರಿ, 4 ಸಿಕ್ಸರ್) ಗಳಿಸಿದರು.

ಇದೇ ಪಂದ್ಯದಲ್ಲಿ ರಾಜಸ್ಥಾನದ ಜೋಸ್ ಬಟ್ಲರ್ ಸಹ ಅಜೇಯ ಶತಕ ಸಾಧನೆ ಮಾಡಿದರು. ಆ ಮೂಲಕ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪೈಕಿ ವೆಸ್ಟ್‌ಇಂಡೀಸ್‌ನ ದಿಗ್ಗಜ ಕ್ರಿಸ್ ಗೇಲ್ ದಾಖಲೆಯನ್ನು (6 ಶತಕ) ಸರಿಗಟ್ಟಿದರು. ಅಲ್ಲದೆ ಕೊಹ್ಲಿ ನಂತರದ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಬಟ್ಲರ್ 58 ಎಸೆತಗಳಲ್ಲಿ ಅಜೇಯ 100 ರನ್ (9 ಬೌಂಡರಿ, 4 ಸಿಕ್ಸರ್) ಗಳಿಸಿದರು.

ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ:

ವಿರಾಟ್ ಕೊಹ್ಲಿ: 8

ಕ್ರಿಸ್ ಗೇಲ್: 6

ಜೋಸ್ ಬಟ್ಲರ್: 6

ಕೆ.ಎಲ್. ರಾಹುಲ್: 4

ಡೇವಿಡ್ ವಾರ್ನರ್: 4

ಶೇನ್ ವಾಟ್ಸನ್: 4

ಆ ಮೂಲಕ ಒಂದೇ ಪಂದ್ಯದಲ್ಲಿ ಎರಡು ಶತಕಗಳು ದಾಖಲಾದವು. ಐಪಿಎಲ್‌ನಲ್ಲಿ ಐದನೇ ಬಾರಿ ಇಂತಹ ನಿದರ್ಶನ ಕಂಡುಬಂದಿದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

(ಪಿಟಿಐ ಚಿತ್ರ)

ಕಿಂಗ್ ಕೊಹ್ಲಿ ಐಪಿಎಲ್‌ನಲ್ಲಿ 7,500 ರನ್ ಸಾಧನೆ:

ಐಪಿಎಲ್‌ನಲ್ಲಿ 7,500 ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಖ್ಯಾತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಐಪಿಎಲ್‌ನಲ್ಲಿ ಈವರೆಗೆ ಬೇರೆ ಯಾವ ಬ್ಯಾಟರ್ 7,000 ರನ್ ಗಡಿಯನ್ನು ತಲುಪಿಲ್ಲ ಎಂಬುದು ಗಮನಾರ್ಹ.

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಸರದಾರರು:

ವಿರಾಟ್ ಕೊಹ್ಲಿ: 7,579

ಶಿಖರ್ ಧವನ್: 6,755

ಡೇವಿಡ್ ವಾರ್ನರ್: 6,545

ರೋಹಿತ್ ಶರ್ಮಾ: 6,280

ಸುರೇಶ್ ರೈನಾ: 5,528

ಅತಿ ಹೆಚ್ಚು ಕ್ಯಾಚ್ (ಫೀಲ್ಡರ್):

ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ (ಫೀಲ್ಡರ್) ದಾಖಲೆಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. ರಿಯಾನ್ ಪರಾಗ್ ಅವರ ಕ್ಯಾಚ್ ಪಡೆದ ಕೊಹ್ಲಿ ಐಪಿಎಲ್‌ನಲ್ಲಿ ಒಟ್ಟು 110 ಕ್ಯಾಚ್‌ಗಳ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಸುರೇಶ್ ರೈನಾ (109 ಕ್ಯಾಚ್) ಅವರ ದಾಖಲೆಯನ್ನು ಮುರಿದಿದ್ದಾರೆ.

ವಿರಾಟ್ ಕೊಹ್ಲಿ: 110

ಸುರೇಶ್ ರೈನಾ: 109

ಕೀರಾನ್ ಪೊಲಾರ್ಡ್: 103

ರೋಹಿತ್ ಶರ್ಮಾ: 99

ಶಿಖರ್ ಧವನ್: 98

ರವೀಂದ್ರ ಜಡೇಜ: 98

ಶತಕ ಗಳಿಸಿದರೂ ಸೋಲು:

ವಿರಾಟ್ ಕೊಹ್ಲಿ ದಾಖಲೆಯ ಶತಕ ಗಳಿಸಿಯೂ ಆರ್‌ಸಿಬಿಗೆ ಸೋಲು ಎದುರಾಗಿದೆ. ಮೂರನೇ ಬಾರಿ ಇಂತಹ ನಿದರ್ಶನ ಕಂಡುಬಂದಿದೆ. ಆ ಮೂಲಕ ಶತಕ ಗಳಿಸಿಯೂ ಅತಿ ಹೆಚ್ಚು ಸಲ ಸೋಲು ಎದುರಿಸಿದ ಆಟಗಾರ ಎಂಬ ಅಪಖ್ಯಾತಿಗೆ ಕೊಹ್ಲಿ ಒಳಗಾಗಿದ್ದಾರೆ.

ವಿರಾಟ್ ಕೊಹ್ಲಿ 'ಆರೆಂಜ್ ಕ್ಯಾಪ್'

ಈ ಶತಕದೊಂದಿಗೆ ಈವರೆಗೆ ಆಡಿರುವ ಐದು ಪಂದ್ಯಗಳಲ್ಲಿ 316 ರನ್ ಗಳಿಸಿರುವ ವಿರಾಟ್ ಕೊಹ್ಲಿ 'ಆರೆಂಜ್ ಕ್ಯಾಪ್' ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ರನ್ ಬೇಟೆಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನದ ರಿಯಾನ್ ಪರಾಗ್ ನಾಲ್ಕು ಪಂದ್ಯಗಳಲ್ಲಿ 185 ರನ್ ಗಳಿಸಿದ್ದಾರೆ. ಇನ್ನು ಅತಿ ಹೆಚ್ಚು ವಿಕೆಟ್ (ಪರ್ಪಲ್ ಕ್ಯಾಪ್) ಗಳಿಸಿದ ಪಟ್ಟಿಯಲ್ಲಿ ರಾಜಸ್ಥಾನದ ಯಜುವೇಂದ್ರ ಚಾಹಲ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಅವರು ನಾಲ್ಕು ಪಂದ್ಯಗಳಲ್ಲಿ ಎಂಟು ವಿಕೆಟ್ ಗಳಿಸಿದ್ದಾರೆ.

ಜೋಸ್ ಬಟ್ಲರ್

ಜೋಸ್ ಬಟ್ಲರ್

(ಪಿಟಿಐ ಚಿತ್ರ)

100ನೇ ಐಪಿಎಲ್ ಪಂದ್ಯದಲ್ಲಿ ಶತಕ ಸಾಧನೆ:

ರಾಜಸ್ಥಾನದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ 100ನೇ ಐಪಿಎಲ್ ಪಂದ್ಯದಲ್ಲಿ ಶತಕ ಸಾಧನೆ ಮಾಡಿದ್ದಾರೆ. ಆ ಮೂಲಕ ಕೆ.ಎಲ್. ರಾಹುಲ್ ದಾಖಲೆಯನ್ನು ಸರಿಗಟ್ಟಿದ್ದಾರೆ. 2022ರಲ್ಲಿ ತಮ್ಮ 100ನೇ ಪಂದ್ಯದಲ್ಲಿ ರಾಹುಲ್ ಶತಕ ಗಳಿಸಿದ್ದರು. ಒಟ್ಟಾರೆಯಾಗಿ ರಾಹುಲ್ ಬಳಿಕ ತಮ್ಮ 100ನೇ ಐಪಿಎಲ್ ಪಂದ್ಯದಲ್ಲಿ ಶತಕ ಗಳಿಸಿದ ಎರಡನೇ ಆಟಗಾರ ಎನಿಸಿದ್ದಾರೆ.

ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ:

ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಆಟಗಾರ ಎಂಬ ಹೆಗ್ಗಳಿಕೆಗೆ ಜೋಸ್ ಬಟ್ಲರ್ ಪಾತ್ರರಾಗಿದ್ದಾರೆ. ಇದು ಐಪಿಎಲ್‌ನಲ್ಲಿ ರಾಜಸ್ಥಾನ ಪರ ಬಟ್ಲರ್ ಪಡೆದ 11ನೇ ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿದೆ. ಇದರೊಂದಿಗೆ ಅಜಿಂಕ್ಯ ರಹಾನೆ (10) ಅವರ ಹೆಸರಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ರಾಜಸ್ಥಾನ ಪರ ಅತಿ ಹೆಚ್ಚು ರನ್:

ರಾಜಸ್ಥಾನ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲೂ ಅಜಿಂಕ್ಯ ರಹಾನೆ ಅವರನ್ನು ಬಟ್ಲರ್ ಹಿಂದಿಕ್ಕಿದ್ದಾರೆ. ಅಲ್ಲದೆ ನಾಯಕ ಸಂಜು ಸ್ಯಾಮ್ಸನ್ ನಂತರ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಸಂಜು ಸ್ಯಾಮ್ಸನ್: 3,389

ಜೋಸ್ ಬಟ್ಲರ್: 2,831

ಅಜಿಂಕ್ಯ ರಹಾನೆ: 2,810

ಶೇನ್ ವಾಟ್ಸನ್: 2,372

ರಾಹುಲ್ ದ್ರಾವಿಡ್: 1,276

ಆರ್‌ಸಿಬಿಗೆ ಸೋಲು

ಆರ್‌ಸಿಬಿಗೆ ಸೋಲು

(ಪಿಟಿಐ ಚಿತ್ರ)

ಆರ್‌ಸಿಬಿಗೆ 'ಹ್ಯಾಟ್ರಿಕ್' ಸೋಲು

ಐಪಿಎಲ್‌ನಲ್ಲಿ ಚೊಚ್ಚಲ ಟ್ರೋಫಿಯ ಹುಡುಕಾಟದಲ್ಲಿರುವ ಆರ್‌ಸಿಬಿಯ ಕಳಪೆ ಪ್ರದರ್ಶನ ಈ ಬಾರಿಯೂ ಮುಂದುವರಿದಿದೆ. ಸತತ ಮೂರನೇ ಸೇರಿದಂತೆ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕನೇ ಸೋಲಿಗೆ ಗುರಿಯಾಗಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಮತ್ತೊಂದೆಡೆ ಸತತ ನಾಲ್ಕನೇ ಗೆಲುವು ದಾಖಲಿಸಿರುವ ರಾಜಸ್ಥಾನ ರಾಯಲ್ಸ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಆರ್‌ಸಿಬಿ ಫಲಿತಾಂಶ:

ಮೊದಲ ಪಂದ್ಯ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೆಟ್ ಸೋಲು

2ನೇ ಪಂದ್ಯ: ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್ ಜಯ

3ನೇ ಪಂದ್ಯ: ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್ ಸೋಲು

4ನೇ ಪಂದ್ಯ: ಲಖನೌ ಸೂಪರ್ ಜೈಂಟ್ಸ್ ವಿರುದ್ಧ 28 ರನ್ ಸೋಲು

5ನೇ ಪಂದ್ಯ: ರಾಜಸ್ಥಾನ ರಾಯಲ್ಸ್ ವಿರುದ್ಧ 6 ವಿಕೆಟ್ ಸೋಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT