ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ ಹರಾಜು: ಎಂಟು ಮಂದಿ ವಿದೇಶಿ ಆಟಗಾರರಿಗೆ ಗರಿಷ್ಠ ಮೂಲಬೆಲೆ

Last Updated 12 ಫೆಬ್ರುವರಿ 2021, 3:41 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನ ದರ ಪಟ್ಟಿಯಲ್ಲಿ ಎಂಟು ಮಂದಿ ವಿದೇಶಿ ಹಾಗೂ ಇಬ್ಬರು ಭಾರತೀಯ ಆಟಗಾರರಿಗೆ ₹2 ಕೋಟಿ ಮೂಲಬೆಲೆ ನಿಗದಿಪಡಿಸಲಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಇಂಗ್ಲೆಂಡ್‌ನ ಮೊಯೀನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಪ್ಲಂಕೆಟ್, ಜೇಸನ್ ರಾಯ್, ಮಾರ್ಕ್ ವೂಡ್, ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರು ಗರಿಷ್ಠ ಮೂಲ ದರ ನಿಗದಿಯಾಗಿರುವ ಆಟಗಾರರ ಪಟ್ಟಿಯಲ್ಲಿದ್ದಾರೆ. ಭಾರತದಿಂದ ಖ್ಯಾತ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಕೇದಾರ ಜಾಧವ್ ಇದ್ದಾರೆ.

ಇದೇ 18ರಂದು ಚೆನ್ನೈಯಲ್ಲಿ ಹರಾಜು ನಡೆಯಲಿದ್ದು, 164 ಭಾರತೀಯ ಆಟಗಾರರು, 125 ವಿದೇಶಿ ಆಟಗಾರರು ಸೇರಿದಂತೆ 292 ಮಂದಿಯನ್ನು ಹರಾಜಿಗಿಡಲಾಗುತ್ತಿದೆ.

ಒಟ್ಟು 1,114 ಆಟಗಾರರು ನೋಂದಣಿ ಮಾಡಿಕೊಂಡಿದ್ದರು. 8 ತಂಡಗಳು ಸಂಭಾವ್ಯ ಆಟಗಾರರ ಪಟ್ಟಿಯನ್ನು ನೀಡಿದ ಬಳಿಕ ಆಟಗಾರರ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ.

ಐಪಿಎಲ್ ವಾರ್ಷಿಕ ಟೂರ್ನಿಯು ಈ ವರ್ಷ ಏಪ್ರಿಲ್–ಮೇ ತಿಂಗಳಲ್ಲಿ ನಡೆಯಲಿದೆ.

ರಾಜಸ್ಥಾನ್ ರಾಯಲ್ಸ್ ಎಂಟು ಮಂದಿ ಸಂಭಾವ್ಯ ಆಟಗಾರರ ಪಟ್ಟಿ ಕಳೆದ ತಿಂಗಳು ಅಂತಿಮಗೊಳಿಸಿದ್ದು, ಕಳೆದ ಬಾರಿ ನಾಯಕತ್ವ ವಹಿಸಿದ್ದ ಸ್ಮಿತ್ ಅವರನ್ನು ಕೈಬಿಟ್ಟಿದೆ. ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಜೋಫ್ರಾ ಆರ್ಚರ್ ಅವರನ್ನು ತಂಡವು ಉಳಿಸಿಕೊಂಡಿದೆ.

ಮ್ಯಾಕ್ಸ್‌ವೆಲ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್‌ ಕೈಬಿಟ್ಟಿದೆ. ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 11 ಆಟಗಾರರನ್ನು ಕೊಂಡುಕೊಳ್ಳಬಹುದಾಗಿದೆ. ಈ ಪೈಕಿ ಮೂವರು ವಿದೇಶಿ ಆಟಗಾರರನ್ನು ಖರೀದಿಸಬಹುದಾಗಿದೆ.

ಪಟ್ಟಿಯಲ್ಲಿ ಅತಿ ಹಿರಿಯ ಆಟಗಾರರಾಗಿ ಇಂಗ್ಲೆಂಡ್‌ನಿಂದ 42 ವರ್ಷ ವಯಸ್ಸಿನ ನಯನ್ ದೋಶಿ (ದಿಲೀಪ್ ದೋಶಿ) ಹಾಗೂ ಅತಿ ಕಿರಿಯರಾಗಿ, ಆಫ್ಗಾನಿಸ್ತಾನದ ಸ್ಪಿನ್ನರ್ 16 ವರ್ಷ ವಯಸ್ಸಿನ ನೂರ್ ಅಹ್ಮದ್ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT