ಭಾನುವಾರ, ಅಕ್ಟೋಬರ್ 25, 2020
27 °C

ಮರಳು ನಾಡಿನಲಿ ಅರಳುತಿದೆ ಐಪಿಎಲ್: ರೋಹಿತ್– ಧೋನಿ ಮುಖಾಮುಖಿ

ಪಿಟಿಐ Updated:

ಅಕ್ಷರ ಗಾತ್ರ : | |

ಅಬುಧಾಬಿ: ಅನಿಶ್ಚಿತತೆಗಳ ಎಲ್ಲೆಗಳನ್ನು ಮೀರಿ, ಕೊರೊನಾ ಬಿಕ್ಕಟ್ಟಿನೊಂದಿಗೆ ಹೋರಾಟ ಮಾಡುತ್ತ  ಕ್ರಿಕೆಟ್ ರಸದೌತಣ ಉಣಬಡಿಸಲು ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್ ಟೂರ್ನಿಯು ಶನಿವಾರ ಗರಿಗೆದರಲಿದೆ. 

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಇಲ್ಲಿಯ ಅಲ್‌ ಝಯೀದ್ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ಆಡಲಿವೆ. ಇದರೊಂದಿಗೆ 53 ದಿನಗಳ ಐಪಿಎಲ್‌ ಕ್ರಿಕೆಟ್ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಆದರೆ ಈ ಬಾರಿ ಇದು ಜನರಿಲ್ಲದ ಜಾತ್ರೆಯಾಗಲಿದೆ. ಜೀವ ಸುರಕ್ಷತಾ ವಾತಾವರಣದಲ್ಲಿ ನಡೆಯಲಿರುವ ಈ ಐಪಿಎಲ್ ಪಂದ್ಯಗಳಿಗೆ ಕ್ರೀಡಾಂಗಣಗಳಿಂದ ಜನರನ್ನು ನಿರ್ಬಂಧಿಸಲಾಗಿದೆ. ಮಾರ್ಚ್‌–ಏಪ್ರಿಲ್‌ನಲ್ಲಿಯೇ ಟೂರ್ನಿ ನಡೆಯ ಬೇಕಿತ್ತು. ಆದರೆ, ಆಗ ಕೋವಿಡ್–19 ಪ್ರಸರಣದಿಂದಾಗಿ ದೇಶದಲ್ಲಿ ಲಾಕ್‌ಡೌನ್ ವಿಧಿಸಲಾಯಿತು. ಅದರಿಂದಾಗಿ ಟೂರ್ನಿಯನ್ನು ಅನಿರ್ದಿಷ್ಟಾವಧಿಯಾಗಿ ಮುಂದೂಡಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ ಟ್ವೆಂಟಿ–20 ಕ್ರಿಕೆಟ್‌ ವಿಶ್ವಕಪ್ ಮುಂದೂಡಿದ್ದರಿಂದ ಐಪಿಎಲ್‌ ಆಯೋಜನೆಯು ಸಾಧ್ಯವಾಗಿದೆ. 

ದುಬೈ, ಶಾರ್ಜಾ ಮತ್ತು ಅಬುಧಾಬಿ ಕ್ರೀಡಾಂಗ ಣಗಳಲ್ಲಿ  ಆಯೋಜಿಸಲು ಯುಎಇ ಸರ್ಕಾರವೂ ಸಿದ್ಧವಾಯಿತು. ಟೂರ್ನಿಗೆ 15 ದಿನಗಳ ಮುನ್ನವೇ ಆಟಗಾರರನ್ನು ದುಬೈ ಮತ್ತು ಅಬುಧಾಬಿಗೆ ವಿಶೇಷ ವಿಮಾನಗಳಲ್ಲಿ ಕರೆದೊಯ್ದು ಕ್ವಾರಂಟೈನ್ ಮಾಡಲಾಯಿತು. ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಇಬ್ಬರು ಆಟಗಾರರೂ ಸೇರಿ 13 ಜನ ಸೋಂಕಿತರಾದರು. ಗುಣಮುಖರಾಗಿ ಈಗ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಧೋನಿ ನಾಯಕತ್ವದ ತಂಡದಲ್ಲಿ ಈ ಸಲ ಪ್ರಮುಖ ಆಟಗಾರರಾದ ಸುರೇಶ್ ರೈನಾ ಮತ್ತು ಹರಭಜನ್ ಸಿಂಗ್ ಇಲ್ಲ. ಇವರಿಬ್ಬರ ಸ್ಥಾನಕ್ಕೆ  ಯುವ ಆಟಗಾರರಿಗೆ ಅವಕಾಶ ಸಾಧ್ಯತೆ ಹೆಚ್ಚಿದೆ.

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡದಲ್ಲಿ ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ ಇಲ್ಲ. ಯುಎಇಯಲ್ಲಿ ಮುಂಬೈ ತಂಡದ ಈ ಹಿಂದಿನ ದಾಖಲೆಗಳೂ ಚೆನ್ನಾಗಿಲ್ಲ. 2014ರಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳಿದ್ದ ಕಾರಣ ಯುಎಇಯಲ್ಲಿ ಐಪಿಎಲ್‌ನ ಕೆಲವು ಪಂದ್ಯಗಳನ್ನು ನಡೆಸಲಾಗಿತ್ತು. ಆಗ ಮುಂಬೈ ತಂಡವು ಇಲ್ಲಿ ಆಡಿದ್ದ ಐದು ಪಂದ್ಯಗಳಲ್ಲಿಯೂ ಸೋತಿತ್ತು. ಅದೇ ಚೆನ್ನೈ ತಂಡವು ನಾಲ್ಕು ಗೆದ್ದು ಒಂದರಲ್ಲಿ ಪರಾಭವಗೊಂಡಿತ್ತು. ಹೋದ ವರ್ಷದ ಫೈನಲ್‌ನಲ್ಲಿ ಮುಂಬೈ ಎದುರು ಅನುಭವಿಸಿದ ಸೋಲಿನ ಸೇಡು ತೀರಿಸಿಕೊ ಳ್ಳಲು ಧೋನಿ ಪಡೆ ಕಾತರಿಸುತ್ತಿದೆ. ಆದರೆ ತನ್ನ ಜಯದ ಓಟವನ್ನು ಇಲ್ಲಿಂದಲೇ ಆರಂಭಿಸಲು ರೋಹಿತ್ ಪಡೆ ಕೂಡ ಸಿದ್ಧವಾಗಿದೆ. ಇದರಿಂದಾಗಿ ಉಭಯ ತಂಡಗಳ ರೋಚಕ ಹಣಾಹಣಿಯು ಟೂರ್ನಿಗೆ ಮುನ್ನುಡಿಯಾಗುವ ಸಾಧ್ಯತೆ ಇದೆ.

ತಂಡಗಳು
ಮುಂಬೈ ಇಂಡಿಯನ್ಸ್:
ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಆದಿತ್ಯ ತಾರೆ (ವಿಕೆಟ್‌ಕೀಪರ್), ದಿಗ್ವಿಜಯ ದೇಶಮುಖ, ಸೌರಭ್ ತಿವಾರಿ, ಜಸ್‌ಪ್ರೀತ್ ಬೂಮ್ರಾ, ಕೃಣಾಲ್ ಪಾಂಡ್ಯ, ಕೀರನ್ ಪೊಲಾರ್ಡ್, ರಾಹುಲ್ ಚಾಹರ್, ಕ್ರಿಸ್ ಲಿನ್, ಹಾರ್ದಿಕ್ ಪಾಂಡ್ಯ, ಶೆರ್ಫಾನ್ ರುದರ್‌ಫೋರ್ಡ್, ಅನ್ಮೋಲ್‌ಪ್ರೀತ್ ಸಿಂಗ್, ಮೊಹಸಿನ್ ಖಾನ್, ಮಿಚೆಲ್ ಮೆಕ್ಲೆಂಗಾನ್, ಪ್ರಿನ್ಸ್‌ ಬಲವಂತ್ ರಾಯ್, ಅನುಕೂಲ್ ರಾಯ್, ಇಶಾನ್ ಕಿಶನ್, ನೇಥನ್ ಕೌಲ್ಟರ್‌ ನೈಲ್, ಜೇಮ್ಸ್‌ ಪ್ಯಾಟಿನ್ಸನ್.

ಚೆನ್ನೈ ಸೂಪರ್ ಕಿಂಗ್ಸ್‌: ಮಹೇಂದ್ರಸಿಂಗ್ ಧೋನಿ (ನಾಯಕ–ವಿಕೆಟ್‌ಕೀಪರ್), ಶೇನ್ ವಾಟ್ಸನ್, ಡ್ವೇನ್ ಬ್ರಾವೊ, ಫಾಫ್ ಡು ಪ್ಲೆಸಿ, ಕೇದಾರ್ ಜಾಧವ್, ರವೀಂದ್ರ ಜಡೇಜ, ಪಿಯೂಷ್ ಚಾವ್ಲಾ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಕೆ.ಎಂ. ಆಸಿಫ್, ಇಮ್ರಾನ್ ತಾಹೀರ್, ಎನ್. ಜಗದೀಶನ್, ಕರ್ಣ ಶರ್ಮಾ, ಲುಂಗಿ ಗಿಡಿ, ಮಿಚೆಲ್ ಸ್ಯಾಂಟನರ್, ಮೋನು ಕುಮಾರ್, ಋತುರಾಜ್ ಗಾಯಕವಾಡ, ಸ್ಯಾಮ್ ಕರನ್, ಜೋಶ್ ಹ್ಯಾಜಲ್‌ವುಡ್, ರವಿಶ್ರೀನಿವಾಸನ್ ಸಾಯಿ ಕಿಶೋರ್.

ಪಂದ್ಯದ ಆರಂಭ: ಸಂಜೆ 7.30ರಿಂದ

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್

***

ಹಿಂದಿನಂತಲ್ಲ ಈ ಬಾರಿಯ ಟೂರ್ನಿ‌

l ಈ ಬಾರಿ ಬೌಂಡರಿ–ಸಿಕ್ಸರ್ ಸಿಡಿದಾಗ ಅಥವಾ ವಿಕೆಟ್ ಉರುಳಿದಾಗ ಇಲ್ಲವೇ ಕ್ಯಾಚ್ ಪಡೆದಾಗ ಪ್ರೇಕ್ಷಕರ ಸ್ಟ್ಯಾಂಡ್‌ಗಳ ಬಳಿಯಲ್ಲೇ ವೈವಿಧ್ಯಮಯ ಭಂಗಿಯ ನೃತ್ವದ ಮೂಲಕ ರಂಜಿಸುವ ಚಿಯರ್‌ಲೀಡರ್ಸ್ ಇರುವುದಿಲ್ಲ.  

l ಟೂರ್ನಿಗೆ ಆತಿಥ್ಯ ವಹಿಸುವ ಯುಎಇಗೆ ಕಾಲಿಟ್ಟಾಗಿನಿಂದ ಎಲ್ಲ ಎಂಟು ತಂಡಗಳ ಆಟಗಾರರೂ ಬಯೊಸೆಕ್ಯೂರ್ ವ್ಯವಸ್ಥೆಯಲ್ಲಿ ’ಬಂಧಿ’ಯಾಗಿದ್ದು ಟೂರ್ನಿ ಮುಗಿಯುವ ವರೆಗೂ ಕೋವಿಡ್‌–19ಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಲಿದ್ದಾರೆ.

l ವಿಶ್ವದ ಅತಿದೊಡ್ಡ, ’ಶ್ರೀಮಂತ‘ ಟ್ವೆಂಟಿ20 ಲೀಗ್ ಆಗಿರುವ ಈ ಟೂರ್ನಿಗೆ ಪ್ರತಿ ವರ್ಷ ಭರ್ಜರಿ ಉದ್ಘಾಟನಾ ಸಮಾರಂಭದ ಮೆರುಗು ಇರುತ್ತದೆ. ಈ ವರ್ಷ ಉದ್ಘಾಟನಾ ಕಾರ್ಯಕ್ರಮವನ್ನು ಕೈಬಿಡಲಾಗಿದೆ. ಸ್ಪಾಟ್‌ ಫಿಕ್ಸಿಂಗ್ ತಡೆಗೆ ಬಿಸಿಸಿಐನ ಭ್ರಷ್ಟಾಚಾರ ತಡೆ ಘಟಕ ಕಠಿಣ ಕ್ರಮಗಳನ್ನು ಕೈಗೊಂಡಿದೆ. 

l ಬೆಟ್ಟಿಂಗ್‌, ಮ್ಯಾಚ್‌ ಫಿಕ್ಸಿಂಗ್‌ ಮತ್ತು ಸ್ಪಾಟ್ ಫಿಕ್ಸಿಂಗ್‌ನಂಥ ವಂಚನೆ, ಮೋಸದಾಟದ ಮೇಲೆ ಬ್ರಿಟನ್‌ನ ಕಂಪನಿ ’ಸ್ಪೋರ್ಟ್ ರಾಡಾರ್‘ ಕಣ್ಣಿಡಲಿದೆ. ಈ ಕಂಪನಿಯ ವಂಚನೆ ಪತ್ತೆ ಸೇವೆಯ  (ಎಫ್‌ಡಿಎಸ್‌) ನೆರವು ಪಡೆದುಕೊಳ್ಳಲು ಬಿಸಿಸಿಐಗೆ ಮುಂದಾಗಿದೆ.

l ಗಾಯಗೊಂಡ ಆಟಗಾರನ ಬದಲಿಗೆ ಮತ್ತೊಬ್ಬ ಆಟಗಾರನನ್ನು ಕಣಕ್ಕೆ ಇಳಿಸುವ ನಿಯಮದಂತೆ, ಈ ಬಾರಿ ಯಾರಿಗಾದರೂ ಕೊರೊನಾ ಸೋಂಕು ಕಂಡುಬಂದರೆ ಆ ಆಟಗಾರನ ಬದಲಿಗೆ ಮತ್ತೊಬ್ಬ ಆಟಗಾರನಿಗೆ ಅವಕಾಶ ನೀಡಲಾಗುತ್ತದೆ. ಟೂರ್ನಿಯ ಮಧ್ಯದಲ್ಲಿ ಬಯೊ ಬಬಲ್ ನಿಯಮ ಉಲ್ಲಂಘಿಸಿದರೆ ಆ ಆಟಗಾರ ಕೆಲವು ದಿನ ಪ್ರತ್ಯೇಕ ವಾಸದಲ್ಲಿ ಇರಬೇಕು. 

l ಟೂರ್ನಿಯ ಸಂದರ್ಭದಲ್ಲೂ ಆಟಗಾರರು ಕೋವಿಡ್‌–19 ಪರೀಕ್ಷೆಗೆ ಒಳಗಾಗಲಿದ್ದಾರೆ. ಐದು ದಿನಗಳಿಗೆ ಒಮ್ಮೆ ಪರೀಕ್ಷೆ ನಡೆಯಲಿದೆ. 20 ಸಾವಿರದಷ್ಟು ಪರೀಕ್ಷೆಗಳನ್ನು ನಡೆಸಲು ಬಿಸಿಸಿಐ ಮುಂದಾಗಿದ್ದು ಇದಕ್ಕಾಗಿ ₹ 10 ಕೋಟಿಗೂ ಹೆಚ್ಚು ಮೊತ್ತವನ್ನು ವ್ಯಯಿಸುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು