ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL–2020: ಮುಂಬೈ ವಿರುದ್ಧ ಅಮೋಘ ಜಯ; ಪ್ಲೇ ಆಫ್ ಸ್ಪರ್ಧೆಯಲ್ಲಿ ಉಳಿದ ರಾಯಲ್ಸ್

Last Updated 25 ಅಕ್ಟೋಬರ್ 2020, 18:32 IST
ಅಕ್ಷರ ಗಾತ್ರ

ಅಬುಧಾಬಿ: ಮುಂಬೈ ಇಂಡಿಯನ್ಸ್ ನೀಡಿದ 196 ರನ್‌ಗಳ ಸವಾಲಿನ ಗುರಿ ಎದುರು ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಬೆನ್‌ ಸ್ಟೋಕ್ಸ್‌ ಮತ್ತು ಸಂಜು ಸ್ಯಾಮ್ಸನ್‌ ತಮ್ಮ ತಂಡಕ್ಕೆ 8 ವಿಕೆಟ್‌ ಅಂತರದ ಗೆಲುವು ತಂದುಕೊಟ್ಟರು.ಈ ಗೆಲುವಿನೊಂದಿಗೆ ರಾಯಲ್ಸ್‌ ಟೂರ್ನಿಯಲ್ಲಿ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿತು.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಇಶಾನ್ ಕಿಶನ್‌ (37), ಸೂರ್ಯಕುಮಾರ್ ಯಾದವ್‌ (40), ಸೌರಭ್‌ ತಿವಾರಿ (37) ಮತ್ತು ಹಾರ್ದಿಕ್‌ ಪಾಂಡ್ಯ (ಅಜೇಯ 60) ಅವರ ಬಿರುಸಿನ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 195 ರನ್ ಗಳಿಸಿತ್ತು.

ಈ ಗುರಿ ಬೆನ್ನತ್ತಿದ ರಾಯಲ್ಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ರಾಬಿನ್‌ ಉತ್ತಪ್ಪ (13) ಎರಡನೇ ಓವರ್‌ನಲ್ಲೇ ಪೆವಿಲಿಯನ್‌ ಸೇರಿಕೊಂಡರು. ನಂತರ ಕ್ರೀಸ್‌ಗೆ ಬಂದ ನಾಯಕ ಸ್ಟೀವ್‌ ಸ್ಮಿತ್‌ ಕೇವಲ 11 ರನ್‌ ಗಳಿಸಿ ಔಟಾದರು. ಹೀಗಾಗಿ ಮುಂಬೈ ಪಡೆ ದೊಡ್ಡ ಅಂತರದ ಗೆಲುವಿನ ಲೆಕ್ಕಾಚಾರದಲ್ಲಿತ್ತು.ಆದರೆ ಸ್ಟೋಕ್ಸ್‌ ಮತ್ತುಸ್ಯಾಮ್ಸನ್ ಮುಂಬೈ ಯೋಜನೆಯನ್ನು ಉಲ್ಟಾ ಮಾಡಿದರು.

ಸ್ಟೋಕ್ಸ್‌–ಸ್ಯಾಮ್ಸನ್‌ ಜೊತೆಯಾಟ
44 ರನ್‌ಗಳಿಗೆ 2 ವಿಕೆಟ್ ಪತನವಾಗಿದ್ದಾಗ ಜೊತೆಯಾದ ಈ ಇಬ್ಬರು ಮುಂಬೈ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಮೂರನೇ ವಿಕೆಟ್‌ ಜೊತೆಯಾಟದಲ್ಲಿ ಈ ಜೋಡಿ ಅಜೇಯ 152 ರನ್‌ ಕಲೆಹಾಕಿತು.

ಕೇವಲ 60 ಎಸೆತಗಳನ್ನು ಎದುರಿಸಿದ ಸ್ಟೋಕ್ಸ್‌ 14 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 107 ರನ್‌ ಗಳಿಸಿಕೊಂಡರು.ಇದು ಐಪಿಎಲ್‌ನಲ್ಲಿ ಸ್ಟೋಕ್ಸ್‌ ಗಳಿಸಿದ ಎರಡನೇ ನೂರುಮತ್ತು ಈ ಟೂರ್ನಿಯಲ್ಲಿ ದಾಖಲಾದ ಐದನೇ ಶತಕ.

ಅವರಿಗೆ ಉತ್ತಮ ಬೆಂಬಲ ನೀಡಿದ ಸ್ಯಾಮ್ಸನ್‌ 31 ಎಸೆತಗಳಲ್ಲಿ 3 ಸಿಕ್ಸರ್‌ ಮತ್ತು 4 ಬೌಂಡರಿ ಸಹಿತ 54 ರನ್‌ ಬಾರಿಸಿದರು. ಹೀಗಾಗಿ ರಾಯಲ್ಸ್‌ ತಂಡ ಇನ್ನೂ 10 ಎಸೆತಗಳು ಬಾಕಿ ಇರುವಂತೆಯೇ 196 ರನ್‌ ಗಳಿಸಿ ಜಯದ ನಗೆ ಬೀರಿತು.

ರಾಯಲ್ಸ್‌ ತಂಡಕ್ಕೆ ಇದು ಟೂರ್ನಿಯಲ್ಲಿ 5ನೇ ಗೆಲುವು. ಇದರೊಂದಿಗೆ ಈ ತಂಡ ಪ್ಲೇ ಆಫ್‌ ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದು, ಮುಂದಿನ ಪಂದ್ಯಗಳಲ್ಲಿ ಕಿಂಗ್ಸ್‌ ಇಲವೆನ್‌ ಪಂಜಾಬ್‌ (ಅ.30) ಮತ್ತು ಕೋಲ್ಕತ್ತ ನೈಟ್‌ರೈಡರ್ಸ್‌ (ನ.1) ವಿರುದ್ಧ ಸೆಣಸಾಟ ನಡೆಸಲಿದೆ.

ಈ ಪಂದ್ಯದಲ್ಲಿ ಸೋತರೂ ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಉಳಿದಿದೆ. ಇಂಡಿಯನ್ಸ್‌ ಪಡೆ ಆಡಿರುವ 11 ಪಂದ್ಯಗಳಲ್ಲಿ 7 ಗೆಲುವು ಸಾಧಿಸಿ 14 ಅಂಕಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT