ಬುಧವಾರ, ಆಗಸ್ಟ್ 4, 2021
22 °C
ಐಪಿಎಲ್‌ಗೆ ಚೀನಾ ಕಂಪೆನಿ ಪ್ರಾಯೋಜಕತ್ವ ಮರುಪರಿಶೀಲನೆ

ಪ್ರಾಯೋಜಕತ್ವ ಒಪ್ಪಂದದ ನಿಯಮಗಳು ಬಿಸಿಸಿಐ ಪರ ಇದ್ದರೆ ಮುರಿಯುವುದು ಸುಲಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 'ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾಯೋಜಕತ್ವದ ಒಪ್ಪಂದದ ವಿವರಗಳನ್ನು ಮರುಪರಿಶೀಲಿಸುವುದಾಗಿ ಈಗಾಗಲೇ ಹೇಳಿದ್ದೇವೆ. ಒಂದೊಮ್ಮೆ  ಒಪ್ಪಂದದಿಂದ ನಿರ್ಗಮನ ಷರತ್ತುಗಳು ವಿವೊಗೆ ಹೆಚ್ಚು ಪರವಾಗಿದ್ದರೆ, ನಾವು ಏಕೆ ₹ 440 ಕೋಟಿ ಆದಾಯ ಬರುವ ಒಪ್ಪಂದವನ್ನು ರದ್ದು ಮಾಡಬೇಕು? ಆದರೆ ನಿಯಮಗಳು ನಮ್ಮ ಪರವಾಗಿದ್ದರೆ ಆಗ ಒಪ್ಪಂದ ಮುರಿಯಬಹುದು' ಎಂದು ಐಪಿಎಲ್ ಆಡಳಿತ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ.

ಹೋದ ತಿಂಗಳು ಗಡಿಭಾಗದ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದಿತ್ತು. ಅದರಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು.  ಅದರ ಹಿನ್ನೆಲೆಯಲ್ಲಿ ಚೀನಾದ ಉತ್ಪನ್ನಗಳನ್ನು ಭಾರತದಲ್ಲಿ ನಿಷೇಧಿಸಬೇಕು ಎಂಬ ಕೂಗು ಎದ್ದಿದೆ. ಈಚೆಗಷ್ಟೇ ಕೇಂದ್ರ ಸರ್ಕಾರವು ಚೀನಾದ ಮೊಬೈಲ್‌ ಆ್ಯಪ್‌ಗಳನ್ನು ನಿಷೇಧಿಸಿದೆ.

’ಟಿ20 ವಿಶ್ವಕಪ್, ಏಷ್ಯಾಕಪ್ ಕ್ರಿಕೆಟ್ ಟೂರ್ನಿಗಳ ಆಯೋಜನೆಯ ಅನಿಶ್ಚಿತತೆ ಇನ್ನೂ ಮುಂದುವರಿದಿದೆ. ಅದರಿಂದಾಗಿ ಐಪಿಎಲ್‌ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಾಯೋಜಕತ್ವ ರದ್ದು ಮಾಡುವ ಅಥವಾ ಮುಂದುವರಿಸುವ ಕುರಿತು ನಾವು ಈವರೆಗೂ ಯಾವುದೇ  ನಿರ್ಧಾರವನ್ನು ಪ್ರಕಟಿಸಿಲ್ಲ.  ಈ ವಿಷಯ ಚರ್ಚೆಯಾಗುವುದು ಅವಶ್ಯಕ. ಆದರೆ ಈ ಹೊತ್ತಿನಲ್ಲಿ ಸಭೆ ನಡೆಸುವುದು ಕೂಡ ಸಾಧ್ಯವಾಗುತ್ತಿಲ್ಲ‘ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

’ನಾನು ಐಪಿಎಲ್ ಮುಖ್ಯಸ್ಥ (ಬ್ರಿಜೇಶ್ ಪಟೇಲ್) ಮತ್ತು ಸಿಇಒ (ರಾಹುಲ್ ಜೊಹ್ರಿ) ಅವರಿಗೆ ಕರೆ ಮಾಡಿದ್ದೆ. ಅದರ ನಂತರ ಟ್ವೀಟ್ ಕೂಡ ನೋಡಿದ್ದೆ. ಆದರೆ ಆಮೇಲೆ ಯಾವುದೇ ಸಭೆಯ ಮಾಹಿತಿ ಬಂದಿಲ್ಲ. ಬಹುಶಃ ಟಿ20 ವಿಶ್ವಕಪ್ ಮುಂದೂಡಿದರೆ ಐಪಿಎಲ್ ಕುರಿತ ಮಹತ್ವದ ಸಭೆ ನಡೆಸುವ ವಿಚಾರದಲ್ಲಿ ಅವರಿದ್ದಾರೆ‘ ಎಂದು ಹಿರಿಯ ಸದಸ್ಯರು ತಿಳಿಸಿದ್ದಾರೆ.‌

’ಈ ಸಲ ಐಪಿಎಲ್ ನಡೆಸುವುದು ಖಚಿತವಾದರೆ ಅದಕ್ಕೆ ಮುಂಬೈ ಉತ್ತಮ ತಾಣ. ಏಕೆಂದರೆ ಇಲ್ಲಿ ಕೊರೊನಾ ವೈರಸ್ ಪ್ರಸರಣ ನಿಯಂತ್ರಣದಲ್ಲಿದೆ. ಅಲ್ಲದೇ ಉನ್ನತ ದರ್ಜೆಯ, ಹೊನಲು ಬೆಳಕಿನ ವ್ಯವಸ್ಥೆ ಇರುವ ನಾಲ್ಕು ಕ್ರೀಡಾಂಗಣಗಳು ನಗರದಲ್ಲಿವೆ. ತಂಡಗಳು, ಪ್ರಸಾರ ಸಂಸ್ಥೆಯ ಸಿಬ್ಬಂದಿ ಮತ್ತು ಸರಂಜಾಮುಗಳ ಸಾಗಾಟಕ್ಕೆ ಉತ್ತಮ ಸಾರಿಗೆ ವ್ಯವಸ್ಥೆಯೂ ಲಭ್ಯವಾಗುತ್ತದೆ. ಜೀವ ರಕ್ಷಾ ವಾತಾವರಣವನ್ನು ನಿರ್ವಹಿಸುವುದು ಸುಲಭ. ವಸತಿ ಸೌಲಭ್ಯದ ಅನುಕೂಲವೂ ಇದೆ‘ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು