ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಶಾಂತ್‌ಗೆ ‘ಜೀವ’ದಾನ; ಲೀಗ್‌ಗಳತ್ತ ಚಿತ್ತ ಹರಿಸಿದ ವೇಗದ ಬೌಲರ್

ನ್ಯಾಯಾಲಯದ ತೀರ್ಪಿನಿಂದ ಖುಷಿಗೊಂಡಿರುವ ವೇಗದ ಬೌಲರ್‌
Last Updated 15 ಮಾರ್ಚ್ 2019, 20:06 IST
ಅಕ್ಷರ ಗಾತ್ರ

ನವದೆಹಲಿ: ಏಳು–ಬೀಳುಗಳ ಕೊನೆಯಲ್ಲಿ ಸುಪ್ರೀಂ ಕೋರ್ಟ್‌ನಿಂದ ‘ಜೀವ’ದಾನ ಪಡೆದಿರುವ ವೇಗದ ಬೌಲರ್‌ ಎಸ್‌.ಶ್ರೀಶಾಂತ್ ಜಗತ್ತಿನಲ್ಲಿ ನಡೆಯುವ ವಿವಿಧ ಕ್ರಿಕೆಟ್ ಲೀಗ್‌ಗಳ ಕಡೆಗೆ ಚಿತ್ತ ಹರಿಸಿದ್ದಾರೆ.

2013ರಲ್ಲಿ ನಡೆದಿದೆ ಎನ್ನಲಾಗಿರುವ ಐಪಿಎಲ್‌ ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಶ್ರೀಶಾಂತ್ ಅವರನ್ನು ಬಂಧಿಸಿದ್ದ ಪೊಲೀಸರು ನಂತರ ಬಿಡುಗಡೆ ಮಾಡಿದ್ದರು.

ಇದಾದ ಪ್ರಕರಣ ಅನೇಕ ತಿರುವುಗಳನ್ನು ಕಂಡಿದೆ. ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಅವರ ಮೇಲೆ ವಿವಿಧ ಅಪರಾಧ ಪ್ರಕರಣಗಳಡಿ ಅವರು ನಿರಂತರ ವಿಚಾರಣೆಗೆ ಒಳಗಾಗಿದ್ದಾರೆ.

ಮೇಲೆ ಅವರ ಮೇಲೆ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ಶನಿವಾರ ಈ ತೀರ್ಪನ್ನು ರದ್ದು ಮಾಡಿದ ನ್ಯಾಯಾಲಯ ಬಿಸಿಸಿಐಯನ್ನು ತರಾಟೆಗೂ ತೆಗೆದುಕೊಂಡಿತ್ತು.

36 ವರ್ಷದ ಶ್ರೀಶಾಂತ್ ಇನ್ನೂ ಕ್ರಿಕೆಟ್ ಆಡುವ ಆಸಕ್ತಿ ಹೊಂದಿದ್ದಾರೆ. ನ್ಯಾಯಾಲಯದ ತೀರ್ಪು ಹೊರಬಿದ್ದ ನಂತರ ಮಾತನಾಡಿದ ಅವರು ‘ಜಗತ್ತಿನಲ್ಲಿ ಸಾಕಷ್ಟು ಲೀಗ್‌ಗಳು ನಡೆಯುತ್ತಿದ್ದು ಎಲ್ಲಾದರೂ ಆಡುವ ಅವಕಾಶ ಸಿಗಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

‘ಆಜೀವ ನಿಷೇಧ ತೆರವುಗೊಂಡಿರುವುದು ಸಮಾಧಾನ ತಂದಿದೆ. ನ್ಯಾಯಾಲಯವು ನನ್ನ ಕ್ರೀಡಾ ಜೀವನಕ್ಕೆ ಮರುಜೀವ ನೀಡಿದ್ದು ಅಂಗಣಕ್ಕೆ ಇಳಿಯಲು ಅವಕಾಶ ಒದಗಿಸಿದೆ. ಕ್ರಿಕೆಟ್‌ ನನ್ನ ಉಸಿರಾಗಿದ್ದು ಜೀವನಾಧಾರವೂ ಆಗಿದೆ. ಆದ್ದರಿಂದ ಪಂದ್ಯಗಳನ್ನು ಆಡುವತ್ತ ಗಮನ ನೀಡುತ್ತೇನೆ’ ಎಂದು ಶ್ರೀಶಾಂತ್ ಹೇಳಿದರು.

ಅವರ ಪರ ವಾದಿಸಿದ ವಕೀಲರು ಮಾತನಾಡಿ ‘ಶ್ರೀಶಾಂತ್‌ ಮೇಲಿನ ಆರೋಪ ಸಾಬೀತುಪಡಿಸಲು ಯಾವುದೇ ಆಧಾರಗಳಿರಲಿಲ್ಲ. ರಾಜಸ್ಥಾನ್‌ ರಾಯಲ್ಸ್ ತಂಡದ ಮೇಲೆ ಎರಡು ವರ್ಷಗಳ ನಿಷೇಧ ಮಾತ್ರ ಹೇರಲಾಗಿತ್ತು. ಆದರೆ ಆಟಗಾರನ ಮೇಲೆ ಆಜೀವ ನಿಷೇಧ ಹೇರಿದ್ದು ಸರಿಯಾದ ಕ್ರಮವಲ್ಲ’ ಎಂದು ಅಭಿಪ್ರಾಯಪಟ್ಟರು.

ಪೇಸ್‌ 42ನೇ ವರ್ಷದಲ್ಲಿ ಆಡಲಿಲ್ಲವೇ?
ಟೆನಿಸ್‌ ಆಟಗಾರ ಲಿಯಾಂಡರ್ ಪೇಸ್‌ 42ನೇ ವರ್ಷದಲ್ಲಿ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹೀಗಿರುವಾಗ, 36ನೇ ವಯಸ್ಸಿನಲ್ಲಿ ಅಂಗಣಕ್ಕೆ ಇಳಿಯಲು ನನಗೂ ಯಾವುದೇ ಅಡ್ಡಿಯಿಲ್ಲ ಎಂದು ಶ್ರೀಶಾಂತ್ ಹೇಳಿದರು.

‘ಹೀಗೆಲ್ಲ ಆಗುತ್ತದೆ ಎಂದು ಕನಸಿನಲ್ಲೂ ನೆನೆದಿರಲಿಲ್ಲ. ಆಜೀವ ನಿಷೇಧಕ್ಕೆ ಒಳಗಾದ ನಂತರ ಇಲ್ಲಿಯ ವರೆಗೆ ಕ್ರಿಕೆಟ್ ಅಂಗಣಕ್ಕೆ ಇಳಿಯಲಿಲ್ಲ. ಈಗ ವಯಸ್ಸಾಗಿದೆ ನಿಜ. ಆದರೆ ಅದು ನನ್ನ ಮೇಲೆ ದುಷ್ಪರಿಣಾಮ ಬೀರಲಿಲ್ಲ. ನಾನು ತಪ್ಪಿತಸ್ಥ ಅಲ್ಲ ಎಂದು ಕುಟುಂಬದವರಿಗೆ ವಿಶ್ವಾಸವಿತ್ತು. ನ್ಯಾಯಾಂಗದ ಮೇಲೆಯೂ ಭರವಸೆ ಇತ್ತು’ ಎಂದು ಅವರು ಹೇಳಿದರು.

ಸಿಒಎ ಸಭೆಯಲ್ಲಿ ಚರ್ಚೆ ಸಾಧ್ಯತೆ
ಶ್ರೀಶಾಂತ್ ಪ್ರಕರಣವನ್ನು ಬಿಸಿಸಿಯ ಆಡಳಿತಾಧಿಕಾರಿಗಳ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಮಿತಿಯ ಮುಖ್ಯಸ್ಥ ವಿನೋದ್‌ ರಾಯ್‌ ತಿಳಿಸಿದರು.

ಸಮಿತಿಯ ಸಭೆ ಮಾರ್ಚ್‌ 18ರಂದು ನಡೆಯಲಿದ್ದು ನಿಷೇಧಿತ ಉದ್ದೀಪನ ಮದ್ದು ಸೇವನೆಗೆ ಸಂಬಂಧಿಸಿದ ಚರ್ಚೆಯೂ ನಡೆಯಲಿದೆ. ಹೊಸ ಒಂಬುಡ್ಸ್‌ಮನ್‌ ಡಿ.ಕೆ.ಜೈನ್‌ ಮತ್ತು ಅಮಿಕಸ್ ಕ್ಯೂರಿ ಪಿ.ಎಸ್‌.ನರಸಿಂಹ ಅವರು ಪ್ರಕರಣಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT