ಬುಧವಾರ, ಜನವರಿ 22, 2020
16 °C

IND vs WI | ಕೊಹ್ಲಿ ಎದುರು ಶರಣಾದ ದಾಖಲೆಗಳು: ‘ವಿರಾಟ’ರೂಪಕ್ಕೆ ಬೆರಗಾದ ವಿವಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅಕ್ಷರಶಃ ಅಬ್ಬರಿಸಿದರು. ಅವರ ಬ್ಯಾಟಿಂಗ್‌ ಬಲದಿಂದ ವಿಂಡೀಸ್‌ ವಿರುದ್ಧ ಭಾರತಕ್ಕೆ ಸತತ 7 ಜಯ ಒಲಿದ ಈ ಪಂದ್ಯದಲ್ಲಿ ಹಲವು ದಾಖಲೆಗಳು ಸೃಷ್ಟಿಯಾದವು.

ಚೇಸಿಂಗ್‌ ಮಾಸ್ಟರ್‌ ಎನಿಸಿರುವ ಕೊಹ್ಲಿ ಬ್ಯಾಟಿಂಗ್‌ಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ. ಹಿರಿಯ ಕ್ರಿಕೆಟಿಗರೂ ಕೊಹ್ಲಿ ಬೆನ್ನು ತಟ್ಟಿದ್ದಾರೆ. ಅಂತೆಯೇ ಎದುರಾಳಿ ತಂಡದ ಮಾಜಿ ಕ್ರಿಕೆಟಿಗ ವಿವಿಯನ್‌ ರಿಚರ್ಡ್ಸನ್‌, ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಅದ್ಭುತ ಎಂದು ಟ್ವಿಟರ್‌ನಲ್ಲಿ ಉದ್ಘರಿಸಿದ್ದಾರೆ.

 

ದಾಖಲೆಗಳು
ಚೇಸಿಂಗ್‌ನಲ್ಲಿ ಭಾರತಕ್ಕೆ ಬೃಹತ್‌ ಗೆಲುವು

ಟಿ20 ಕ್ರಿಕೆಟ್‌ನಲ್ಲಿ ಚೇಸಿಂಗ್‌ ವೇಳೆ ಭಾರತಕ್ಕೆ ಸಿಕ್ಕ ಅತಿದೊಡ್ಡ ಗೆಲುವು ಇದಾಯಿತು. 2009ರಲ್ಲಿ ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿಯೂ 207 ರನ್‌ಗಳನ್ನು ಬೆನ್ನತ್ತಿ ಜಯ ಸಾಧಿಸಿದ್ದು ಇದುವರೆಗಿನ ದಾಖಲೆಯಾಯಿತು.

ಇದನ್ನೂ ಓದಿ: 

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡಲು ಅವಕಾಶ ಪಡೆದಿದ್ದ ವಿಂಡೀಸ್‌ ಪಡೆ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ 207ರನ್‌ ಗಳಿಸಿತ್ತು. ವಿಂಡೀಸ್‌ ಪರ ಶಿಮ್ರೊನ್ ಹೆಟ್ಮೆಯರ್ (56) ಅರ್ಧಶತಕ ಬಾರಿಸಿದರು. ಆರಂಭಿಕ ಎವಿನ್ ಲೂಯಿಸ್ (40) ಹಾಗೂ ಕೀರನ್ ಪೊಲಾರ್ಡ್ (37) ಅವರೂ ಭಾರತದ ಬೌಲರ್‌ಗಳನ್ನು ದಂಡಿಸಿದರು.

ಬೃಹತ್‌ ಮೊತ್ತ ಬೆನ್ನತ್ತಿದ ಭಾರತಕ್ಕೆ ಕೊಹ್ಲಿ ಹಾಗೂ ಕೆ.ಎಲ್‌ ರಾಹುಲ್‌ ಶತಕದ ಜೊತೆಯಾಟ ನೀಡಿದರು. ಹೀಗಾಗಿ ವಿರಾಟ್‌ ಪಡೆ ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ 209ರನ್‌ ಗಳಿಸಿ ಗೆದ್ದು ಬೀಗಿತು.

ಅತಿ ಹೆಚ್ಚು ಅರ್ಧಶತಕಗಳು
ಈ ಪಂದ್ಯಕ್ಕೂ ಮುನ್ನ ತಲಾ 22 ಅರ್ಧಶಕಗಳನ್ನು ಗಳಿಸಿದ್ದ ವಿರಾಟ್‌ ಹಾಗೂ ಉಪನಾಯಕ ರೋಹಿತ್‌ ಶರ್ಮಾ ಜಂಟಿ ಅಗ್ರಸ್ಥಾನದಲ್ಲಿದ್ದರು. ರೋಹಿತ್‌ ಇಲ್ಲಿ ವೈಫಲ್ಯ ಕಂಡರೆ, ವಿರಾಟ್‌ ವಿಂಜೃಂಭಿಸಿದರು. 50 ಎಸೆತಗಳಲ್ಲಿ 94 ರನ್‌ ಗಳಿಸಿದ ಅವರು, ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 23ನೇ ಸಲ ಅರ್ಧಶತಕದ ಗಡಿ ದಾಟಿದರು.

22 ಅರ್ಧಶತಕಗಳೊಂದಿಗೆ  ರೋಹಿತ್‌ ಶರ್ಮಾ ಹಾಗೂ 17 ಅರ್ಧಶತಕ ಬಾರಿಸಿರುವ ನ್ಯೂಜಿಲೆಂಡ್‌ನ ಮಾರ್ಟಿನ್‌ ಗಪ್ಟಿಲ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿಗೆ 12ನೇ ಪಂದ್ಯ ಶ್ರೇಷ್ಠ
ವಿರಾಟ್‌ ಕೊಹ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 12ನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಅಫ್ಘಾನಿಸ್ತಾನ ಕ್ರಿಕೆಟಿಗ ಮೊಹಮದ್‌ ನಬಿ ಅವರೂ ಇಷ್ಟೇ ಸಂಖ್ಯೆಯ ಪ್ರಶಸ್ತಿ ಗಳಿಸಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ(11) ನಂತರ ಸ್ಥಾನದಲ್ಲಿದ್ದಾರೆ.

ವೇಗವಾಗಿ ಸಾವಿರ ರನ್‌ ಗಳಿಸಿದ ಮೂರನೇ ಆಟಗಾರ ರಾಹುಲ್
40 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ ಕನ್ನಡಿಗ ಕೆಎಲ್‌ ರಾಹುಲ್‌ 62 ರನ್‌ ಗಳಿಸಿ ಮಿಂಚಿದರು. ಆರಂಭಿಕ ಆಘಾತ ಅನುಭವಿಸಿದ್ದ ಭಾರತವನ್ನು ನಾಯಕನ ಜೊತೆ ಸೇರಿ ಗೆಲುವಿನತ್ತ ಮುನ್ನಡೆಸಿದ್ದರು. ಭಾರತ ಪರ ಇದುವರೆಗೆ 32 ಟಿ20 ಪಂದ್ಯಗಳನ್ನು ಆಡಿರುವ ಅವರು ತಮ್ಮ 29ನೇ ಇನಿಂಗ್ಸ್‌ನಲ್ಲಿ 1000 ರನ್‌ ಗಡಿ ದಾಟಿದರು. ಆಸ್ಟ್ರೇಲಿಯಾ ಕ್ರಿಕೆಟಿಗ ಆ್ಯರನ್‌ ಫಿಂಚ್‌ ಅವರೂ ಇಷ್ಟೇ(29) ಇನಿಂಗ್ಸ್‌ಗಳಲ್ಲಿ ಸಾವಿರ ರನ್ ಸಾಧನೆ ಮಾಡಿದ್ದರು.

26 ಇನಿಂಗ್ಸ್‌ಗಳಲ್ಲಿ ಸಾವಿರ ರನ್‌ ಪೂರೈಸಿರುವ ಪಾಕಿಸ್ತಾನದ ಬಾಬರ್‌ ಅಜಂ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ 27ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು.

200 ಸಿಕ್ಸರ್‌ ಸಿಡಿಸಿದ ಕೊಹ್ಲಿ
ಈ ಪಂದ್ಯದಲ್ಲಿ 6 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ ವಿರಾಟ್‌ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 205 ಸಿಕ್ಸರ್‌ ಸಿಡಿಸಿದ ಸಾಧನೆ ಮಾಡಿದರು. ಅಂ.ರಾ. ಕ್ರಿಕೆಟ್‌ನಲ್ಲಿ ಹೆಚ್ಚು ಸಿಕ್ಸ್‌ ಸಿಡಿಸಿದ ದಾಖಲೆ ವಿಂಡೀಸ್‌ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಹೆಸರಲ್ಲಿದೆ. ಅವರು 534 ಸಿಕ್ಸರ್‌ ಸಿಡಿಸಿದ್ದಾರೆ. 476 ಸಿಕ್ಸರ್‌ ಬಾರಿಸಿರುವ ಪಾಕಿಸ್ತಾನದ ಶಾಹೀದ್ ಆಫ್ರಿದಿ ಎರಡನೇ ಸ್ಥಾನದಲ್ಲಿದ್ದಾರೆ.

ಭಾರತ ಪರ ಹೆಚ್ಚು ಸಿಕ್ಸ್‌ ಸಿಡಿಸಿರುವುದು ರೋಹಿತ್‌ ಶರ್ಮಾ. ಏಕದಿನ ಪಂದ್ಯಗಳಲ್ಲಿ 232, ಟಿ20ಯಲ್ಲಿ 115 ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ 52 ಸಿಕ್ಸರ್‌ಗಳನ್ನು ಸಿಡಿಸಿರುವ ಅವರ ಖಾತೆಯಲ್ಲಿ ಒಟ್ಟು 399 ಸಿಕ್ಸರ್‌ ಇವೆ. ನಂತರದ ಸ್ಥಾನಗಳಲ್ಲಿ ಮಹೇಂದ್ರ ಸಿಂಗ್‌ ಧೋನಿ (359), ಸಚಿನ್ ತೆಂಡೂಲ್ಕರ್ (264), ಸೌರವ್ ಗಂಗೂಲಿ (247), ವೀರೇಂದ್ರ ಸೆಹ್ವಾಗ್ (243) ಮತ್ತು ಯುವರಾಜ್ ಸಿಂಗ್ (251) ಅವರು ಇದ್ದಾರೆ.

ಇದನ್ನೂ ಓದಿ: 400 ಸಿಕ್ಸರ್ ಸಿಡಿಸಿದವರ ಪಟ್ಟಿ ಸೇರಲು ರೋಹಿತ್ ಶರ್ಮಾಗೆ ಬೇಕು ಇನ್ನೊಂದು ಸಿಕ್ಸ್‌

ರೋಹಿತ್‌ ಹಿಂದಿಕ್ಕಲು ಕೊಹ್ಲಿಗೆ ಬೇಕು ಮೂರು ರನ್‌
ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಹೆಚ್ಚು ರನ್‌ ಗಳಿಕೆಯಲ್ಲಿ ವಿರಾಟ್‌, ರೋಹಿತ್‌ ಸನಿಹಕ್ಕೆ ಬಂದುನಿಂತರು. ರೋಹಿತ್‌ ಅವರನ್ನು ಹಿಂದಿಕ್ಕಲು ಕೋಹ್ಲಿ ಇನ್ನು ಮೂರು ರನ್‌ ಬೇಕಿದೆ.

ರೋಹಿತ್‌ ಇದುವರೆಗೆ 104 ಪಂದ್ಯಗಳ 94 ಇನಿಂಗ್ಸ್‌ಗಳಿಂದ ಒಟ್ಟು 2547 ರನ್‌ ಗಳಿಸಿದ್ದಾರೆ. ಕೊಹ್ಲಿ 73 ಪಂದ್ಯಗಳ 68 ಇನಿಂಗ್ಸ್‌ಗಳಲ್ಲಿ 2544 ರನ್‌ ಬಾರಿಸಿದ್ದಾರೆ.

ಕೊಹ್ಲಿಗೆ 99ನೇ ಅರ್ಧಶತಕ
ಕ್ರಿಕೆಟ್‌ನ ಮೂರು ಮಾದರಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ವಿರಾಟ್‌, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 99ನೇ ಅರ್ಧಶತಕ ಬಾರಿಸಿದರು. ಏಕದಿನ ಕ್ರಿಕೆಟ್‌ನಲ್ಲಿ 54, ಟೆಸ್ಟ್‌ನಲ್ಲಿ 22 ಹಾಗೂ ಟಿ20ಯಲ್ಲಿ 23 ಅರ್ಧಶತಕ ಸಿಡಿಸಿದ್ದಾರೆ.

ಹೆಚ್ಚು ರನ್‌ ಬಿಟ್ಟುಕೊಟ್ಟ ವಿಂಡೀಸ್‌ ವೇಗಿ
ಪಂದ್ಯದಲ್ಲಿ ದುಬಾರಿಯಾದ ಕೆಸ್ರಿಕ್ ವಿಲಿಯಮ್ಸ್‌ ಚುಟುಕು ಕ್ರಿಕೆಟ್‌ನಲ್ಲಿ ವಿಂಡೀಸ್‌ ಪರ ಹೆಚ್ಚು ರನ್‌ ಬಿಟ್ಟುಕೊಟ್ಟ ಬೌಲರ್‌ ಎಂಬ ಅಪಖ್ಯಾತಿಗೊಳಗಾದರು. ಒಟ್ಟು 3.4 ಓವರ್‌ ಎಸೆದ ಅವರು 60 ರನ್‌ ಬಿಟ್ಟುಕೊಟ್ಟರು. 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ನಿಕಿಟಾ ಮಿಲ್ಲರ್‌ 56 ರನ್ ಬಿಟ್ಟುಕೊಟ್ಟಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು