ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ನಿರ್ಧಾರ ಸ್ವಾಗತಿಸಿದ ಕೇನ್ ರಿಚರ್ಡ್ಸನ್

ಟಿ20 ಕ್ರಿಕೆಟ್ ವಿಶ್ವಕಪ್ ಆಯೋಜನೆ ಕುರಿತು ಜುಲೈನಲ್ಲಿ ನಿರ್ಧಾರ
Last Updated 11 ಜೂನ್ 2020, 12:25 IST
ಅಕ್ಷರ ಗಾತ್ರ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಈ ವರ್ಷ ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್ ಆಯೋಜನೆಯ ಕುರಿತು ನಿರ್ಧಾರ ತೆಗೆದುಕೊಳ್ಳಲು ಮುಂದಿನ ತಿಂಗಳಿನವರೆಗೂ ಕಾಯಲಿರುವ ಐಸಿಸಿ ತೀರ್ಮಾನವನ್ನು ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್ಸನ್ ಸ್ವಾಗತಿಸಿದ್ದಾರೆ.

‘ಮುಂಬರುವ ದಿನಗಳಲ್ಲಿ ಏನಾಗುತ್ತದೆ ಎಂದು ಅರಿಯುವುದು ಬಹಳ ಕುತೂಹಲಕಾರಿಯಾಗಿರುತ್ತದೆ. ಮಹತ್ವದ ನಿರ್ಣಯ ಕೈಗೊಳ್ಳುವಾಗ ಲಭ್ಯವಿರುವ ಸಮಾಯಾವಕಾಶವನ್ನು ಹೆಚ್ಚು ಬಳಸಿಕೊಳ್ಳಬೇಕು. ಇಂತಹ ವಿಷಯಗಳಲ್ಲಿ ತರಾತುರಿಯ ತೀರ್ಮಾನದ ಅಗತ್ಯವಿಲ್ಲ’ ಎಂದು ಕೇನ್ ಕ್ರಿಕೆಟ್‌ ಡಾಟ್ ಕಾಮ್‌ ಡಾಟ್ ಎಯು ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

‘ಐಸಿಸಿಯು ಈ ವಿಷಯದಲ್ಲಿ ಉತ್ತಮವಾದ ಹೆಜ್ಜೆ ಇಟ್ಟಿದೆ. ಕೊರೊನಾದ ಪ್ರಸರಣವನ್ನು ತಡೆಗಟ್ಟಿ, ಸೋಂಕು ಇಳಿಮುಖವಾಗುವಂತೆ ಮಾಡುವಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಉತ್ತಮ ಕಾರ್ಯ ಮಾಡಿವೆ. ಅದರಿಂದಾಗಿ ಇನ್ನೂ ಸ್ವಲ್ಪ ಕಾಲ ಕಾಯುವುದರಿಂದ ಸ್ಥಿತಿ ಹೆಚ್ಚು ಸುಧಾರಿಸುವ ಸಾಧ್ಯತೆ ಇದೆ. ಬೇಸಿಗೆಯ ಹೊತ್ತಿಗೆ ಸಂಪೂರ್ಣ ಹತೋಟಿಗೂ ಬರಬಹುದು. ಆಗ ಸೂಕ್ತ ನಿರ್ಧಾರ ಕೈಗೊಳ್ಳಬಹುದು’ ಎಂದು ಕೇನ್ ಅಭಿಪ್ರಾಯಪಟ್ಟಿದ್ದಾರೆ.

‘ಅದಕ್ಕೂ ಮುನ್ನ ಕೆಲವು ದೇಶಿ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಿದರೆ ಸೂಕ್ತವಾಗುತ್ತದೆ. ಅದರಲ್ಲಿ ಆಡುವುದರಿಂದ ನಮಗೂ ಅನುಕೂಲವಾಗುತ್ತದೆ. ಹೊಸ ರೂಢಿಗಳಿಗೆ ಒಗ್ಗಿಕೊಳ್ಳಲು ಅವಕಾಶ ದೊರೆಯುತ್ತದೆ’ ಎಂದು ಸಲಹೆ ನೀಡಿದ್ದಾರೆ.

‘ಮಂಡಳಿಯು ಏನೇ ನಿರ್ಧಾರ ಕೈಗೋಂಡರೂ ಪಾಲಿಸುತ್ತೇವೆ. ನಮ್ಮ ಮುಂದೆ ಬೇರೆ ಆಯ್ಕೆಯೇ ಇಲ್ಲ. ಕೊರೊನಾ ಸಮಸ್ಯೆಯು ಇದೊಂದು ಅನಿರೀಕ್ಷಿತವಾದ ಸಂದರ್ಭವಾಗಿದೆ. ಆದ್ದರಿಂದ ಯಾರೂ ಪೂರ್ವಭಾವಿಯಾಗಿ ಸಿದ್ಧರಾಗಿರುವುದಿಲ್ಲ. ಆದರೂ ಮುಂದಿನದ್ದಕ್ಕೆ ನಾವು ಈಗಲೇ ಸಿದ್ಧರಾಗಿ ಹೆಜ್ಜೆ ಇಡಬೇಕು’ ಎಂದು ಹೇಳಿದರು.

‘ನಮ್ಮ ಕೊನೆಯ ಪಂದ್ಯವಾಡಿ ಒಂದು ಜೀವಮಾನವೇ ಕಳೆದಂತೆ ಭಾಸವಾಗುತ್ತಿದೆ. ಇಷ್ಟು ದೀರ್ಘ ಅವಧಿಯಲ್ಲಿ ಕ್ರಿಕೆಟ್‌ನಿಂದ ದೂರ ಇದ್ದೇವೆ. ಆದರೂ ಕೂಡ ನಮ್ಮ ಆಟಗಾರರು ಉತ್ತಮ ರೀತಿಯಲ್ಲಿ ಫಿಟ್‌ನೆಸ್ ನಿರ್ವಹಿಸಿಕೊಂಡಿದ್ದಾರೆ. ವಿಶ್ವಕಪ್ ಟೂರ್ನಿಯು ನಡೆದರೆ ಆಸ್ಟ್ರೇಲಿಯಾವು ಜಯಿಸುವ ಫೆವರಿಟ್ ತಂಡವಾಗಿದೆ’ ಎಂದು ಹೇಳಿದ್ದಾರೆ.

ಹೋದ ಮಾರ್ಚ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಕೇನ್ ಆಡಿರಲಿಲ್ಲ. ಆ ಸಂದರ್ಭದಲ್ಲಿ ಅವರಲ್ಲಿ ಕೊರೊನಾ ವೈರಸ್‌ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ನಂತರ ಅವರ ವರದಿ ನೆಗೆಟಿವ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT