ಶನಿವಾರ, ಆಗಸ್ಟ್ 20, 2022
21 °C

NZ vs WI: ವಿಲಿಯಮ್ಸನ್ ಶ್ರೇಷ್ಠ ದ್ವಿಶತಕ; ಕಿವೀಸ್ 519/7 ಡಿ.; ವಿಂಡೀಸ್ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹ್ಯಾಮಿಲ್ಟನ್: ನಾಯಕ ಕೇನ್ ವಿಲಿಯಮ್ಸನ್ ಮೂರನೇ ಹಾಗೂ ಜೀವನ ಶ್ರೇಷ್ಠ ದ್ವಿಶತಕದ (251) ನೆರವಿನಿಂದ ಆತಿಥೇಯ ನ್ಯೂಜಿಲೆಂಡ್ ತಂಡವು ಪ್ರವಾಸಿ ವೆಸ್ಟ್ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆ ಹಾಕಿದೆ.

243/2 ಎಂಬಲ್ಲಿದ್ದ ಎರಡನೇ ದಿನದಾಟ ಮುಂದುವರಿಸಿದ ನ್ಯೂಜಿಲೆಂಡ್ ಕೇನ್ ವಿಲಿಯಮ್ಸನ್ ಅಮೋಘ ಬ್ಯಾಟಿಂಗ್ ನೆರವಿನಿಂದ 145 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 519 ರನ್‌ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತು.

ಬಳಿಕ ಉತ್ತರ ನೀಡಿದ ವಿಂಡೀಸ್, ಎರಡನೇ ದಿನದಾಟದ ಅಂತ್ಯಕ್ಕೆ 26 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದೆ. ಕ್ರೀಸಿನಲ್ಲಿರುವ ಕ್ರೇಗ್ ಬ್ರಾತ್‌ವೇಟ್ (20*) ಹಾಗೂ ಜಾನ್ ಕ್ಯಾಂಪ್‌ಬೆಲ್ (22*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ವಿಲಿಯಮ್ಸನ್ ಜೀವನಶ್ರೇಷ್ಠ ದ್ವಿಶತಕ...
ಮೊದಲ ದಿನದಾಟದಲ್ಲಿ 97 ರನ್ ಗಳಿಸಿ ಅಜೇಯರಾಗುಳಿದ ವಿಲಿಯಮ್ಸನ್, ಮತ್ತದೇ ಅಮೋಘ ಲಯ ಮುಂದುವರಿಸಿದರು. ನಾಯಕನ ವಿಕೆಟ್ ಕಬಳಿಸಲು ವಿಂಡೀಸ್ ಬೌಲರ್‌ಗಳು ಪರದಾಡಬೇಕಾಯಿತು. ವಿಂಡೀಸ್ ವೇಗಿಗಳನ್ನು ಸಮರ್ಥವಾಗಿ ಎದುರಿಸಿದ ವಿಲಿಯಮ್ಸನ್ ತಮ್ಮ ವೃತ್ತಿ ಜೀವನದ ಗರಿಷ್ಠ ಮೊತ್ತ ದಾಖಲಿಸಿದರು.

 

 

 

ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ವಿಲಿಯಮ್ಸನ್ ಬ್ಯಾಟ್‌ನಿಂದ ದಾಖಲಾದ ಮೂರನೇ ದ್ವಿಶತಕ ಸಾಧನೆಯಾಗಿದೆ. ಈ ಹಿಂದೆ 2015ನೇ ಇಸವಿಯಲ್ಲಿ ಶ್ರೀಲಂಕಾ ವಿರುದ್ಧ ಅಜೇಯ 242 ರನ್ ಗಳಿಸಿರುವುದು ಸರ್ವಶ್ರೇಷ್ಠ ಸಾಧನೆಯಾಗಿದೆ. ಕಳೆದ ವರ್ಷ ಇದೇ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧವೂ ಅಜೇಯ ದ್ವಿಶತಕ ಸಾಧನೆ ಮಾಡಿದ್ದರು.

 

ಸರಿ ಸುಮಾರು 10 ವರೆ ತಾಸುಗಳಷ್ಟು ಕ್ರೀಸಿನಲ್ಲಿ ನೆಲೆಯೂರಿ ನಿಂತ ಕೇನ್ ವಿಲಿಯಮ್ಸನ್ 412 ಎಸೆತಗಳಲ್ಲಿ 251 ರನ್ ಗಳಿಸಿದರು. ಇದರಲ್ಲಿ 34 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು. ಇದು ವಿಂಡೀಸ್ ವಿರುದ್ಧ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ನಿಂದ ದಾಖಲಾದ ಎರಡನೇ ಗರಿಷ್ಠ ಮೊತ್ತವಾಗಿದೆ. 1979ನೇ ಇಸವಿಯಲ್ಲಿ ನ್ಯೂಜಿಲೆಂಡ್‌ನ ಗ್ಲೆನ್ ಟರ್ನರ್, ವಿಂಡೀಸ್ ವಿರುದ್ಧ 259 ರನ್ ಗಳಿಸಿರುವುದು ಈ ವರೆಗಿನ ಶ್ರೇಷ್ಠ ಸಾಧನೆಯಾಗಿದೆ.

ಕೇನ್ ವಿಲಿಯಮ್ಸನ್ ದ್ವಿಶತಕಗಳ ಪಟ್ಟಿ:
251: ವೆಸ್ಟ್‌ಇಂಡೀಸ್ ವಿರುದ್ದ, ಹ್ಯಾಮಿಲ್ಟನ್, 2020
242* ಶ್ರೀಲಂಕಾ ವಿರುದ್ಧ, ವೆಲ್ಲಿಂಗ್ಟನ್, 2015
200*, ಬಾಂಗ್ಲಾದೇಶ ವಿರುದ್ಧ, ಹ್ಯಾಮಿಲ್ಟನ್, 2019

 

 

 

ಲೇಥಮ್, ಜೇಮಿಸನ್ ಅರ್ಧಶತಕ...
ನಾಯಕ ವಿಲಿಯಮ್ಸನ್‌ಗೆ ಉತ್ತಮ ಸಾಥ್ ನೀಡಿದ ಆರಂಭಿಕ ಟಾಮ್ ಲೇಥಮ್ ಆಕರ್ಷಕ 86 ರನ್ ಗಳಿಸಿದರು. ಕೆಳ ಕ್ರಮಾಂಕದಲ್ಲಿ ಕೈಲ್ ಜೇಮಿಸನ್ ಟೆಸ್ಟ್ ವೃತ್ತಿ ಜೀವನದ ಮೊದಲ ಅರ್ಧಶತಕ (51*) ಗಳಿಸಿ ಮಿಂಚಿದರು. ವಿಂಡೀಸ್ ಪರ ಕೇಮರ್ ರೋಚ್ ಹಾಗೂ ಶಾನನ್ ಗ್ಯಾಬ್ರಿಯಲ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು.

 

ಸಂಕ್ಷಿಪ್ತ ಸ್ಕೋರ್ ಪಟ್ಟಿ (ಎರಡನೇ ದಿನದಂತ್ಯಕ್ಕೆ)
ನ್ಯೂಜಿಲೆಂಡ್ 519/7 ಡಿ. (ವಿಲಿಯಮ್ಸನ್ 251, ಲೇಥಮ್ 86, ಜೇಮಿಸನ್ 51*)
ವೆಸ್ಟ್‌ಇಂಡೀಸ್ 49/0 (ಬ್ರಾತ್‌ವೇಟ್ 20*, ಕ್ಯಾಂಪ್‌ಬೆಲ್ 22*)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು