ಮಂಗಳವಾರ, ಆಗಸ್ಟ್ 16, 2022
20 °C

ಪ್ರಸಿದ್ಧ ಕೃಷ್ಣಗೆ ಒಲಿದ ಅದೃಷ್ಟ; ಮನೀಶ್ ಪಾಂಡೆಗೆ ಮುಚ್ಚಿದ ಬಾಗಿಲು?

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಬಲಗೈ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ಈ ನಡುವೆ ದುರದೃಷ್ಟವಶಾತ್ ಎಂಬಂತೆ ಮನೀಶ್ ಪಾಂಡೆ ಅವರನ್ನು ತಂಡದಿಂದ ಕೈಬಿಡಲಾಗಿದೆ. ಈ ಮೊದಲು ಟಿ20 ಸರಣಿಯಲ್ಲೂ ಮನೀಶ್‌ಗೆ ಅವಕಾಶ ನಿರಾಕರಿಸಲಾಗಿತ್ತು. ಮನೀಶ್‌ ಅವರನ್ನು ತಂಡದಿಂದ ಏಕೆ ಕೈಬಿಡಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಆಯ್ಕೆ ಸಮಿತಿಯಿಂದ ಇನ್ನಷ್ಟೇ ಸ್ಪಷ್ಟನೆ ಬರಬೇಕಿದೆ.

ಗಾಯದಿಂದಾಗಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಿಂದ ಹೊರಗುಳಿದಿರುವ ಪಾಂಡೆ, ವಿಜಯ್ ಹಜಾರೆ ಟ್ರೋಫಿಯಲ್ಲಿ ಎರಡು ಪಂದ್ಯದಲ್ಲಷ್ಟೇ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.

ಮಧ್ಯಮ ಕ್ರಮಾಂಕದಲ್ಲಿ ತಮಗೆ ಸಿಕ್ಕ ಅವಕಾಶಗಳಲ್ಲಿ ಪ್ರಭಾವಿ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಅದ್ಭುತ ಕೌಶಲ್ಯ ಮೆರೆಯುವಲ್ಲಿ ಮನೀಶ್ ಯಶಸ್ವಿಯಾಗಿದ್ದರು.

31 ವರ್ಷದ ಮನೀಶ್ ಇದುವರೆಗೆ 26 ಏಕದಿನ ಪಂದ್ಯಗಳಲ್ಲಿ 35.14ರ ಸರಾಸರಿಯಲ್ಲಿ ಒಟ್ಟು 492 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಬಾರಿಸಿದ ಸ್ಮರಣೀಯ ಶತಕವೂ ಸೇರಿದೆ. ಹಾಗೆಯೇ ಏಕದಿನದಲ್ಲಿ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ: 

ಇನ್ನು 39 ಟಿ20 ಅಂತರ ರಾಷ್ಟ್ರೀಯ ಪಂದ್ಯಗಳಲ್ಲಿ 44.31ರ ಸರಾಸರಿಯಲ್ಲಿ 709 ರನ್ ಗಳಿಸಿದ್ದಾರೆ. ಏಕದಿನ ಹಾಗೂ ಟಿ20ನಲ್ಲಿ ಅನುಕ್ರಮವಾಗಿ 91.96 ಹಾಗೂ 126.15ರ ಸ್ಟ್ರೈಕ್ ರೇಟ್ ಕಾಪಾಡಿಕೊಂಡಿದ್ದಾರೆ.

ಅತ್ತ 25ರ ಹರೆಯದ ಪ್ರಸಿದ್ಧ ಕೃಷ್ಣ 48 ಲಿಸ್ಟ್ 'ಎ' ಪಂದ್ಯಗಳಲ್ಲಿ 81 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ 33 ರನ್ ತೆತ್ತು ಆರು ವಿಕೆಟ್ ಪಡೆದಿರುವುದು ಸರ್ವಶ್ರೇಷ್ಠ ಸಾಧನೆಯಾಗಿದೆ. ಇನ್ನು 40 ಟಿ20 ಪಂದ್ಯಗಳಲ್ಲಿ 33 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಪ್ರಸಿದ್ಧ ಕೃಷ್ಣ, 24 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇತ್ತೀಚೆಗೆ ಅಂತ್ಯಗೊಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಪ್ರಭಾವಿ ಎನಿಸಿಕೊಂಡಿರುವ ಪ್ರಸಿದ್ಧ ಕೃಷ್ಣ, ಆಡಿರುವ ಏಳು ಪಂದ್ಯಗಳಲ್ಲಿ 22.21ರ ಸರಾಸರಿಯಲ್ಲಿ ಒಟ್ಟು 14 ವಿಕೆಟ್‌ಗಳನ್ನು ಪಡೆದಿದ್ದರು. ಈ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನ ಗಿಟ್ಟಿಸಿದ್ದರು.

ವಿಜಯ್ ಹಜಾರೆ ಟ್ರೋಫಿಯಲ್ಲಿ ಸೆಮಿಫೈನಲ್‌ನಲ್ಲಿ ಮುಂಬೈ ವಿರುದ್ಧ ಮುಗ್ಗರಿಸಿದ ಕರ್ನಾಟಕದ ಪ್ರಶಸ್ತಿ ಕನಸು ಭಗ್ನಗೊಂಡಿತ್ತು.

ಕಳೆದ ವರ್ಷವೇ ಟ್ವೆಂಟಿ-20 ವಿಶ್ವಕಪ್‌ಗೆ ಪ್ರಸಿದ್ಧ ಕೃಷ್ಣ ಆಯ್ಕೆ ಉಲ್ಲೇಖ ಮಾಡಿರುವ ನಾಯಕ ವಿರಾಟ್ ಕೊಹ್ಲಿ, 'ಎಕ್ಸ್-ಫಾಕ್ಟರ್' ಆಗುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಬಳಿಕ ಆಸ್ಟ್ರೇಲಿಯಾದಲ್ಲಿ ನಡೆಯಬೇಕಾಗಿದ್ದ ಟಿ20 ವಿಶ್ವಕಪ್ ಮುಂದೂಡಲಾಗಿತ್ತಾದರೂ ಈ ಬಾರಿ ಭಾರತದಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್‌ಗೆ ಪ್ರಸಿದ್ಧ ಕೃಷ್ಣ ಅವಕಾಶ ಗಿಟ್ಟಿಸುವರೇ ಎಂಬುದನ್ನು ಕಾದು ನೋಡಬೇಕಿದೆ.

 

 

 

ಕಳೆದ ಆಸ್ಟ್ರೇಲಿಯಾ ಸರಣಿಯಲ್ಲಿ ತಂಡದಲ್ಲಿದ್ದ ಕೆಲವು ಆಟಗಾರರನ್ನು ಕೈಬಿಡಲಾಗಿದೆ. ಇವರಲ್ಲಿ ಕೆಲವರಿಗೆ ವಿಶ್ರಾಂತಿ ಸೂಚಿಸಲಾಗಿದ್ದು, ಆಯ್ಕೆಗೆ ಪರಿಗಣಿಸಲಾಗಿಲ್ಲ. ಈ ಪಟ್ಟಿಯಲ್ಲಿರುವ ಕರ್ನಾಟಕದ ಮಯಂಕ್ ಅಗರವಾಲ್ ಅವರನ್ನು ಕಡೆಗಣಿಸಲಾಗಿದೆ.

 

ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಮನೀಷ್ ಪಾಂಡೆ ಜೊತೆಗೆ ಕೇರಳದ ಸಂಜು ಸ್ಯಾಮ್ಸನ್ ಮತ್ತು ನವದೀಪ್ ಸೈನಿ ಅವರನ್ನು ಕೈಬಿಡಲಾಗಿದೆ.

ಇದನ್ನೂ ಓದಿ: 

ಇನ್ನೊಂದೆಡೆ ರಿಷಭ್ ಪಂತ್, ಕೃಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಸಿರಾಜ್ ಏಕದಿನ ಬಳಗದಲ್ಲೂ ಕಾಣಿಸಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಇಂತಿದೆ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಯಜುವೇಂದ್ರ ಚಾಹಲ್, ಕುಲ್‌ದೀಪ್ ಯಾದವ್, ಕೃಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ತಂಗರಸು ನಟರಾಜನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ಮತ್ತು ಶಾರ್ದೂಲ್ ಠಾಕೂರ್.

ಏಕದಿನ ಸರಣಿ ವೇಳಾಪಟ್ಟಿ ಇಂತಿದೆ:
ಮೊದಲ ಏಕದಿನ: ಮಾರ್ಚ್ 23, ಮಂಗಳವಾರ
ದ್ವಿತೀಯ ಏಕದಿನ: ಮಾರ್ಚ್ 26, ಶುಕ್ರವಾರ
ಅಂತಿಮ ಏಕದಿನ: ಮಾರ್ಚ್ 28, ಭಾನುವಾರ

* ಎಲ್ಲ ಪಂದ್ಯಗಳು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು