ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಕೊಹ್ಲಿ–ರಾಹುಲ್ ಬಳಗಗಳ ಹಣಾಹಣಿ; ಅರಬ್‌ ಅಂಗಳದಲ್ಲಿ ಕರ್ನಾಟಕ ವೈಭವ

Last Updated 23 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ದುಬೈ: ಇಲ್ಲಿಯ ಐಸಿಸಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಕರ್ನಾಟಕ ರಣಜಿ ಕ್ರಿಕೆಟ್ ತಂಡದ ಅರ್ಧಪಾಲು ಆಟಗಾರರು ಸೇರಲಿದ್ದಾರೆ.

ಈ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್‌ ತಂಡ ಬೆಂಗಳೂರಿನದ್ದು. ಎದುರಾಳಿ ಕಿಂಗ್ಸ್‌ ಇಲೆವನ್ ಪಂಜಾಬ್‌ ತಂಡದ ನಾಯಕ ಕೆ.ಎಲ್. ರಾಹುಲ್, ಆಟಗಾರರಾದ ಮಯಂಕ್ ಅಗರವಾಲ್, ಕೃಷ್ಣಪ್ಪ ಗೌತಮ್, ಜೆ. ಸುಚಿತ್ ಮತ್ತು ಕರುಣ್ ನಾಯರ್ ಕರ್ನಾಟಕದವರು. ತಂಡದ ಮುಖ್ಯ ಕೋಚ್ ಕೂಡ ಇಲ್ಲಿಯ ಅನಿಲ್ ಕುಂಬ್ಳೆ. ಅದರಿಂದಾಗಿ ಕರ್ನಾಟಕದ ಕ್ರಿಕೆಟ್‌ಪ್ರಿಯರಿಗೆ ಭರ್ಜರಿ ಮೃಷ್ಟಾನ್ನ ಭೋಜನದ ಸವಿ ಖಾತ್ರಿ.

ಇಲ್ಲಿ ಇನ್ನೊಂದು ಸ್ವಾರಸ್ಯವೆನೆಂದರೆ; ಈಚೆಗೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿಯು ಅಮೋಘ ಜಯ ಸಾಧಿಸಲು ಮಹತ್ವದ ಕಾಣಿಕೆ ನೀಡಿದ್ದ ಯುವ ಆಟಗಾರ ದೇವದತ್ತ ಪಡಿಕ್ಕಲ್ ಕೂಡ ಕನ್ನಡನಾಡಿನವರು. ಎರಡು ವರ್ಷಗಳ ಹಿಂದೆ ರಣಜಿ ಪಂದ್ಯದಲ್ಲಿ ಆಡಿದ ಕರ್ನಾಟಕ ತಂಡದಲ್ಲಿ ಮಯಂಕ್ ಅಗರವಾಲ್ ಇರಲಿಲ್ಲ. ಅವರು ಭಾರತ ಟೆಸ್ಟ್ ತಂಡದಲ್ಲಿ ಆಡಲು ತೆರಳಿದ್ದರು. ಅವರ ಜಾಗಕ್ಕೆ ಆಯ್ಕೆಯಾಗಿದ್ದು ಇದೇ ದೇವದತ್ತ.

ಕರ್ನಾಟಕದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ ಇಲ್ಲದ ಸಂದರ್ಭದಲ್ಲಿ ಸ್ಥಾನ ಪಡೆದು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ್ದ ದೇವದತ್ತ ಹೋದ ದೇಶಿ ಋತುವಿನಲ್ಲಿ ರನ್‌ಗಳ ಹೊಳೆಯನ್ನೇ ಹರಿಸಿದ್ದರು. ಇದೀಗ ಅವರು ತವರು ತಂಡದ ಸಹ ಆಟಗಾರರನ್ನು ಎದುರಿಸಲು ಸಿದ್ಧರಾಗಿದ್ದಾರೆ.

ತಮ್ಮ ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಬಾರಿಸಿರುವ ಎಡಗೈ ಬ್ಯಾಟ್ಸ್‌ಮನ್ ಪಡಿಕ್ಕಲ್ ಅದೇ ಲಯವನ್ನು ಮುಂದುವರಿಸುವ ಛಲದಲ್ಲಿದ್ದಾರೆ. ಫಿಂಚ್, ಎಬಿ ಡಿವಿಲಿಯರ್ಸ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ನಾಯಕ ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಹೆಚ್ಚು ರನ್ ಗಳಿಸಿರಲಿಲ್ಲ. ಬೌಲಿಂಗ್‌ನಲ್ಲಿ ಕೊಹ್ಲಿ ಬಳಗವು ಉತ್ತಮವಾಗಿದೆ. ಪಂಜಾಬ್ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ವಿಭಿನ್ನ ತಂತ್ರದೊಂದಿಗೆ ಕಣಕ್ಕಿಳಿಯುವ ಸವಾಲು ಅವರ ಮುಂದಿದೆ.

ಏಕೆಂದರೆ ಕಿಂಗ್ಸ್‌ ತಂಡವು ಪೆಟ್ಟು ತಿಂದ ಹುಲಿಯಂತಾಗಿದೆ. ಪಂಜಾಬ್ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಸೂಪರ್‌ ಓವರ್‌ನಲ್ಲಿ ಸೋಲನುಭವಿಸಿತ್ತು. ಅದರಲ್ಲಿ ಮಯಂಕ್ ಅಗರವಾಲ್ ಅಬ್ಬರದ ಆಟ ಗಮನಸೆಳೆದಿತ್ತು. ನಿಗದಿಯ ಓವರ್‌ಗಳ ಪಂದ್ಯವು ಟೈ ಆಗಿತ್ತು.

ಪಂಜಾಬ್ ತಂಡದ ಬ್ಯಾಟ್ಸ್‌ಮನ್ ಶಾರ್ಟ್‌ ರನ್ ಮಾಡಿರುವುದಾಗಿ ಅಂಪೈರ್ ನೀಡಿದ ತಪ್ಪು ತೀರ್ಪು ಕೂಡ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದರಿಂದಾಗಿಯೇ ಕಿಂಗ್ಸ್‌ ಸೋತಿತು ಎಂದು ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಿಂದಾಗಿ ಈ ಪಂದ್ಯದಲ್ಲಿ ಪುಟಿದೇಳುವ ತವಕದಲ್ಲಿ ರಾಹುಲ್ ಬಳಗವಿದೆ. ಈ ಪಂದ್ಯದಲ್ಲಿ ಕ್ರಿಸ್‌ಗೇಲ್‌ಗೆ ಅವಕಾಶ ನೀಡಿ, ನಿಕೊಲಸ್ ಪೂರನ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

ವಿರಾಟ್‌ ಕೊಹ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT