ತವರಿನಲ್ಲಿ ನೈಟ್ರೈಡರ್ಸ್ಗೆ ಜಯದ ಸವಿ

ಕೋಲ್ಕತ್ತ: ಏಳು ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಭಾನುವಾರ ರಾತ್ರಿ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಗೆಲುವಿನ ನಗೆ ಸೂಸಿತು.
ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಬಳಗ 34 ರನ್ಗಳಿಂದ ಗೆದ್ದಿತು.
ಆ್ಯಂಡ್ರೆ ರಸೆಲ್ (ಔಟಾಗದೆ 80; 40ಎಸೆತ, 6ಬೌಂಡರಿ, 8ಸಿಕ್ಸರ್), ಆರಂಭಿಕ ಬ್ಯಾಟ್ಸ್ಮನ್ ಶುಭಮನ್ ಗಿಲ್ ಮತ್ತು ಕ್ರಿಸ್ ಲಿನ್ ಅವರು ಗಳಿಸಿದ ಅರ್ಧಶತಕಗಳಿಂದಾಗಿ ಆತಿಥೇಯರು 232 ರನ್ ಗಳಿಸಿದ್ದರು.
ಗುರಿ ಬೆನ್ನತ್ತಿದ ಮುಂಬೈ ಪರ ಹಾರ್ದಿಕ್ ಪಾಂಡ್ಯ (91; 34 ಎ, 9 ಸಿ, 6 ಬೌಂ) ಏಕಾಂಗಿ ಹೋರಾಟ ನಡೆಸಿದರು. ಇತರ ಯಾರಿಗೂ ಎದುರಾಳಿ ತಂಡದ ಬೌಲರ್ಗಳಿಗೆ ದಿಟ್ಟ ಉತ್ತರ ನೀಡಲು ಆಗಲಿಲ್ಲ.
ಟಾಸ್ ಗೆದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಅವರ ನಿರ್ಧಾರ ತಪ್ಪು ಎಂಬುದು ಸಾಬೀತಾಯಿತು.
ವಿಭಿನ್ನ ಯೋಜನೆಯೊಂದಿಗೆ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಬಳಗದ ಮುಂದೆ ಮುಂಬೈ ಬೌಲರ್ಗಳು ಮೂಕರಾದರು. ಯುವ ಬ್ಯಾಟ್ಸ್ಮನ್ ಶುಭಮನ್ ಗಿಲ್ (76; 45ಎ, 4ಸಿ, 6 ಬೌಂ) ಮತ್ತು ಕ್ರಿಸ್ ಲಿನ್ (54; 29ಎ, 2ಸಿ, 8ಬೌಂ) ಮೊದಲ ವಿಕೆಟ್ಗೆ 96 ರನ್ ಗಳಿಸಿದರು. ಕ್ರಿಸ್ ಲಿನ್ ಔಟಾದ ನಂತರ ಕ್ರೀಸ್ಗೆ ಬಂದ ರಸೆಲ್ ಅವರು ಗಿಲ್ ಜೊತೆಗೂಡಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 62 ರನ್ಗಳನ್ನು ಸೇರಿಸಿದರು. ಗಿಲ್ ಔಟಾದ ನಂತರವೂ ವೆಸ್ಟ್ ಇಂಡೀಸ್ನ ದೈತ್ಯ ಬ್ಯಾಟ್ಸ್ಮನ್ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.