ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | ಕೋಲ್ಕತ್ತ ನೈಟ್ ರೈಡರ್ಸ್‌–ರಾಯಲ್ ಚಾಲೆಂಜರ್ಸ್‌ ಹಣಾಹಣಿ ಇಂದು

ಮಾರ್ಗನ್ ಬಳಗಕ್ಕೆ ‘ಬೆಂಗಳೂರು’ ಭಯ
Last Updated 20 ಅಕ್ಟೋಬರ್ 2020, 20:07 IST
ಅಕ್ಷರ ಗಾತ್ರ
ADVERTISEMENT
""

ಅಬುಧಾಬಿ (ಪಿಟಿಐ):ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ಅವರನ್ನು ಕಟ್ಟಿಹಾಕಲು ತಮ್ಮ ಬಳಿ ಒಂದು ಅಸ್ತ್ರ ಎಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಏಯಾನ್ ಮಾರ್ಗನ್ ಮನಸ್ಸಿನಲ್ಲಿ ಮಂಡಿಗೆ ಸವಿಯುತ್ತಿರಬಹುದು!

ಈಚೆಗೆ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಸೂಪರ್‌ ಓವರ್‌ನಲ್ಲಿ ಕೋಲ್ಕತ್ತ ಗೆಲುವಿನಲ್ಲಿ ಮಿಂಚಿದ್ದ ಲಾಕಿ ಫರ್ಗ್ಯುಸನ್ ಅವರೇ ಮಾರ್ಗನ್ ವಿಶ್ವಾಸವಿರಿಸಿರುವ ಬೌಲರ್. ಬುಧವಾರ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಫರ್ಗ್ಯುಸನ್ ತಮ್ಮ ಸ್ವಿಂಗ್ ಮತ್ತು ಯಾರ್ಕರ್‌ಗಳ ಜಾದೂ ತೋರಿಸಿದರೆ ಕೋಲ್ಕತ್ತಕ್ಕೆ ಪ್ಲೇ ಆಫ್‌ ತಲುಪಲು ಮತ್ತಷ್ಟು ಬಲ ಸಿಗುತ್ತದೆ.

ಆದರೆ, ಈಗಾಗಲೇ 12 ಪಾಯಿಂಟ್ಸ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿರುವ ವಿರಾಟ್ ಕೊಹ್ಲಿ ಬಳಗವು ಮತ್ತೊಂದು ಜಯದ ಕನಸಿನಲ್ಲಿದೆ. ಬೌಲಿಂಗ್‌ನಲ್ಲಿ ಕ್ರಿಸ್ ಮೊರಿಸ್, ನವದೀಪ್ ಸೈನಿ ಮತ್ತು ಯಜುವೇಂದ್ರ ಚಾಹಲ್ ತಂಡದ ಗೆಲುವಿಗೆ ತಮ್ಮ ಸಾಮರ್ಥ್ಯ ಮೀರಿ ಕಾಣಿಕೆ ಕೊಡುತ್ತಿದ್ದಾರೆ.

ಬ್ಯಾಟಿಂಗ್‌ನಲ್ಲಿ ಕರ್ನಾಟಕದ ದೇವದತ್ತ ಉತ್ತಮ ಆರಂಭ ನೀಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಇನಿಂಗ್ಸ್‌ಗೆ ಒಂದು ದೆಸೆ ತೋರಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಎಬಿ ಡಿವಿಲಿಯರ್ಸ್‌ ಇವರೆಲ್ಲರನ್ನೂ ಮೀರಿಸಿ, ಸೋಲಿನ ಹಾದಿಯಲ್ಲಿ ಸಾಗುವ ತಂಡವನ್ನು ಗೆಲುವಿನ ನಲಿವಿನತ್ತ ಎಳೆದು ತರುವ ಭುಜಬಲ ಪರಾಕ್ರಮಿಯಾಗಿದ್ದಾರೆ.

ಒಂಬತ್ತು ದಿನಗಳ ಹಿಂದೆಯಷ್ಟೇ ಮೊದಲ ಸುತ್ತಿನ ಪಂದ್ಯದಲ್ಲಿ ಇದೇ ಕೆಕೆಆರ್ ವಿರುದ್ಧ ಎಬಿಡಿ ಅಜೇಯ 73 ರನ್‌ಗಳನ್ನು ಗಳಿಸಿದ್ದರು. ಆಗ ಕೋಲ್ಕತ್ತಕ್ಕೆ ದಿನೇಶ್ ಕಾರ್ತಿಕ್ ನಾಯಕರಾಗಿದ್ದರು.

ಮೂರು ದಿನಗಳ ಹಿಂದೆ ರಾಜಸ್ಥಾನ ರಾಯಲ್ಸ್ ಎದುರು ಕೂಡ ಎಬಿಡಿ ಬ್ಯಾಟಿಂಗ್ ಆರ್‌ಸಿಬಿಗೆ ಗೆಲುವಿನ ಕಾಣಿಕೆ ನೀಡಿತ್ತು. ಜೊತೆಗೆ ವಿಕೆಟ್‌ಕೀಪಿಂಗ್‌ನಲ್ಲಿಯೂ ಅವರು ಮಿಂಚುತ್ತಿದ್ದಾರೆ.

ಟೂರ್ನಿಯಲ್ಲಿ 10 ಪಾಯಿಂಟ್ ಗಳಿಸಿರುವ ಕೋಲ್ಕತ್ತದಲ್ಲಿ ಉತ್ತಮ ಬ್ಯಾಟಿಂಗ್ ಪಡೆ ಇದೆ. ದಿನೇಶ್, ಶುಭಮನ್ ಗಿಲ್, ರಾಹುಲ್ ತ್ರಿಪಾಠಿ ಮಿಂಚುತ್ತಿದ್ದಾರೆ. ಬೌಲರ್ ಪ್ಯಾಟ್ ಕಮಿನ್ಸ್‌ ಕೂಡ ರನ್‌ಗಳನ್ನು ಹರಿಸುತ್ತಿದ್ದಾರೆ. ಆದರೆ, ಆ್ಯಂಡ್ರೆ ರಸೆಲ್ ಬ್ಯಾಟ್‌ನಿಂದ್ ಸಿಕ್ಸರ್, ಬೌಂಡರಿಗಳು ಸಿಡಿಯುತ್ತಿಲ್ಲ. ಇದು ಮಾರ್ಗನ್ ಬಳಗದಲ್ಲಿ ಚಿಂತೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT