ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಗೆಲುವಿನ ರನ್ ಬಾರಿಸಿ ಕೊಹ್ಲಿಯಂತೆ ಸಂಭ್ರಮಿಸಿದ ಬದೋನಿ - ವಿಡಿಯೊ ನೋಡಿ

Last Updated 8 ಏಪ್ರಿಲ್ 2022, 13:37 IST
ಅಕ್ಷರ ಗಾತ್ರ

ಮುಂಬೈ: ಈ ಬಾರಿಯ ಐಪಿಎಲ್‌ನಲ್ಲಿ ಉದಯೋನ್ಮುಕ ಆಟಗಾರ ಎನಿಸಿರುವ ಲಖನೌ ಸೂಪರ್‌ ಜೈಂಟ್ಸ್‌ ತಂಡದ ಯುವ ಬ್ಯಾಟರ್‌ ಆಯುಷ್ ಬದೋನಿ ಆಟದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಬದೋನಿ ಲಖನೌ ಪರ ಗೆಲುವಿನ ರನ್‌ ಬಾರಿಸಿದ್ದರು. ಅದಾದ ಬಳಿಕ ಅವರು ಸಂಭ್ರಮಿಸಿದ ರೀತಿಯ ಬಗ್ಗೆ ಟ್ವಿಟರ್‌ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಇಲ್ಲಿನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ತಂಡ ನಿಗದಿತ 20 ಓವರ್‌ಗಳಲ್ಲಿ149 ರನ್ ಗಳಿಸಿತ್ತು.

ಗುರಿ ಬೆನ್ನತ್ತಿದ ಲಖನೌ ಇನಿಂಗ್ಸ್‌ಗೆ ಆರಂಭಿಕ ಬ್ಯಾಟರ್‌ ಕ್ವಿಂಟನ್‌ ಡಿ ಕಾಕ್‌ ಅರ್ಧಶತಕಸಿಡಿಸಿ ಬಲ ತುಂಬಿದ್ದರು. ತಂಡವನ್ನು ಸುಲಭ ಜಯದತ್ತ ಮುನ್ನಡೆಸಿದ್ದ ಡಿ ಕಾಕ್‌, 80 ರನ್‌ ಗಳಿಸಿದ್ದಾಗ 16ನೇ ಓವರ್‌ನ ಕೊನೇ ಎಸೆತದಲ್ಲಿ ಔಟಾದರು.ಹೀಗಾಗಿ ನಾಲ್ಕು ಓವರ್‌ಗಳಲ್ಲಿ 28 ರನ್‌ ಗಳಿಸಬೇಕಾಯಿತು.

ಈ ಹಂತದಲ್ಲಿಸಮಯೋಚಿತ ಆಟವಾಡಿದದೀಪಕ್‌ ಹೂಡಾ ಮತ್ತು ಅಕ್ಷರ್‌ ಪಟೇಲ್‌ 18 ಎಸೆತಗಳಲ್ಲಿ 23 ರನ್ ಕಲೆಹಾಕಿದರು.ಆದರೆ, ಅಂತಿಮ ಓವರ್‌ ಮೊದಲ ಎಸೆತದಲ್ಲಿ ಹೂಡಾ ಔಟಾಗಿದ್ದರಿಂದ ಐದು ಎಸೆತಗಳಲ್ಲಿ ಐದು ರನ್‌ ಬೇಕಾಯಿತು.

ಈ ವೇಳೆ ಕ್ರೀಸ್‌ಗಿಳಿದ ಆಯೂಷ್ ಬದೋನಿ ತಾವೆದುರಿಸಿದ ಎರಡು ಮತ್ತು ಮೂರನೇ ಎಸೆತಗಳಲ್ಲಿ ಕ್ರಮವಾಗಿ ಬೌಂಡರಿ, ಸಿಕ್ಸರ್‌ ಸಿಡಿಸಿ 10 ರನ್ ದೋಚಿದರು. ಹೀಗಾಗಿ ಲಖನೌ ಪಡೆ 19.4 ಓವರ್‌ಗಳಲ್ಲಿ 155 ರನ್ ಗಳಿಸಿತು.

ಒತ್ತಡವನ್ನು ಮೆಟ್ಟಿ ನಿಂತು ಪಂದ್ಯ ಗೆಲ್ಲಿಸಿದ ಬದೋನಿ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಂತೆ ಸಂಭ್ರಮಿಸಿದರು.

ಈ ಹಿಂದೆ ಭಾರತ ತಂಡಕ್ಕೆ ಪಂದ್ಯವೊಂದನ್ನು ಗೆದ್ದು ಕೊಟ್ಟಿದ್ದ ವೇಳೆ ವಿರಾಟ್‌ ಕೊಹ್ಲಿ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ವೀರಾವೇಷದಿಂದ ಸಂಭ್ರಮಿಸಿದ್ದರು. ಇದೀಗ 22 ವರ್ಷದ ಬದೋನಿ ಕೂಡ ಅದೇರೀತಿ ಸಂತಸ ವ್ಯಕ್ತಪಡಿಸಿದ್ದು, ನೆಟ್ಟಿಗರು ಮೆಚ್ಚುಗೆಯ ಮಳೆಗರೆದಿದ್ದಾರೆ.

ಕೊಹ್ಲಿ ಮತ್ತು ಬದೋನಿ ಅವರ ಸಂಭ್ರಮದ ದೃಶ್ಯಗಳನ್ನೊಳಗೊಂಡ ವಿಡಿಯೊಗಳು ಟ್ವಿಟರ್‌ನಲ್ಲಿ ಹರಿದಾಡುತ್ತಿವೆ. 'ಯುವ ಪೀಳಿಗೆಯ ಮೇಲೆ ವಿರಾಟ್‌ ಕೊಹ್ಲಿ ಪ್ರಭಾವ','ಸ್ಫೂರ್ತಿಯ ಸೆಲೆ ವಿರಾಟ್', 'ಕೊಹ್ಲಿಯಂತೆ ಸಂಭ್ರಮಿಸಿದ ಬದೋನಿ', 'ಪ್ರಯತ್ನ ಚೆನ್ನಾಗಿದೆ. ಆದರೆ, ಕೊಹ್ಲಿಯಷ್ಟು ಆಕ್ರಮಣಶೀಲತೆ ಮತ್ತು ಹುರುಪು ಇಲ್ಲ' ಎಂಬಿತ್ಯಾದಿ ಅಭಿಪ್ರಾಯಗಳು ವ್ಯಕ್ತವಾಗಿವೆ.

ಈ ಗೆಲುವಿನೊಂದಿಗೆ ಲಖನೌ ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಜಯ ಸಾಧಿಸಿ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಮ್ಯಾಚ್‌ವಿನ್ನರ್‌ ಬದೋನಿಗೆ ₹ 20 ಲಕ್ಷ
ಇದೇ ಮೊದಲ ಬಾರಿಗೆ ಐಪಿಎಲ್‌ ಆಡುತ್ತಿರುವ ಬದೋನಿ, ಗುಜರಾತ್ ಟೈಟನ್ಸ್‌ (ಮಾ.28ರಂದು) ವಿರುದ್ಧ ಮೊದಲ ಪಂದ್ಯದಲ್ಲೇ ಅರ್ಧಶತಕ (54) ಸಿಡಿಸಿದ್ದರು. ನಂತರ ಚೆನ್ನೈ ವಿರುದ್ಧದ ಪಂದ್ಯದಲ್ಲಿಯೂ ಕೇವಲ 9 ಎಸೆತಗಳಲ್ಲಿ 19 ರನ್ ಬಾರಿಸಿ ಗೆಲುವು ತಂದುಕೊಟ್ಟಿದ್ದರು. ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧವೂ 12 ಎಸೆತಗಳಲ್ಲಿ 19 ರನ್ ಸಿಡಿಸಿ ಮಿಂಚಿದ್ದರು.

ಹೀಗಾಗಿ ಬದೋನಿ ಲಖನೌ ಪಾಲಿಗೆ ಮ್ಯಾಚ್‌ ವಿನ್ನರ್‌ ಎನಿಸಿದ್ದಾರೆ. ಆದರೆ, 2022ರ ಹರಾಜು ಪ್ರಕ್ರಿಯೆ ವೇಳೆ ಅವರಿಗೆ ₹ 20 ಲಕ್ಷ ಮೂಲ ಬೆಲೆ ನಿಗದಿಯಾಗಿತ್ತು. ಲಖನೌ ತಂಡ ಅಷ್ಟೇ ಮೊತ್ತಕ್ಕೆ ಅವರನ್ನು ಖರೀದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT