ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್‌ ಕಿಂಗ್ಸ್‌ ಕಟ್ಟಿಹಾಕುವುದೇ ಮುಂಬೈ

ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ಉಭಯ ತಂಡಗಳ ಹಣಾಹಣಿ: ಮಹೇಂದ್ರ ಸಿಂಗ್‌ ಧೋನಿ, ತಾಹಿರ್‌ ಮೇಲೆ ಕಣ್ಣು
Last Updated 2 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಅತ್ಯಂತ ಯಶಸ್ವಿ ತಂಡಗಳೆನಿಸಿರುವ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌, ಈ ಬಾರಿಯ ಲೀಗ್‌ನಲ್ಲಿ ಮೊದಲ ಸಲ ಮುಖಾಮುಖಿಯಾಗುತ್ತಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ಗೆಲುವಿನ ತೋರಣ ಕಟ್ಟಲು ಸಜ್ಜಾಗಿವೆ.

ಬಲಿಷ್ಠ ತಂಡಗಳ ನಡುವಣ ಈ ಹಣಾಹಣಿ ಬುಧವಾರ ನಿಗದಿಯಾಗಿದೆ. ಮುಂಬೈ ಮತ್ತು ಸೂಪರ್‌ ಕಿಂಗ್ಸ್‌ ತಲಾ ಮೂರು ಸಲ ಐಪಿಎಲ್‌ ಕಿರೀಟ ಮುಡಿಗೇರಿಸಿಕೊಂಡಿವೆ.

ಈ ಬಾರಿಯ ಲೀಗ್‌ನಲ್ಲಿ ಚೆನ್ನೈ ‘ಸೀನಿಯರ್‌’ ಕಿಂಗ್ಸ್‌ ಅಪೂರ್ವ ಆಟ ಆಡಿ ಗಮನ ಸೆಳೆದಿದೆ. ‘ಕ್ಯಾಪ್ಟನ್‌ ಕೂಲ್‌’ ಮಹೇಂದ್ರ ಸಿಂಗ್‌ ಧೋನಿ ಸಾರಥ್ಯದ ತಂಡ ಆಡಿರುವ ಮೂರೂ ಪಂದ್ಯಗಳಲ್ಲಿ ಗೆದ್ದು ‘ಹ್ಯಾಟ್ರಿಕ್‌’ ಸಾಧನೆ ಮಾಡಿದೆ. ಇದರೊಂದಿಗೆ ಆರು ಪಾಯಿಂಟ್ಸ್‌ ಕಲೆಹಾಕಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ವಿರಾಜಮಾನವಾಗಿದೆ.

ರೋಹಿತ್‌ ಶರ್ಮಾ ಮುಂದಾಳತ್ವದ ಮುಂಬೈ ಇಂಡಿಯನ್ಸ್‌ ಕಥೆ ಇದಕ್ಕಿಂತ ಭಿನ್ನ. ಈ ತಂಡ ಮೂರು ಪಂದ್ಯಗಳ ಪೈಕಿ ಗೆದ್ದಿರುವುದು ಒಂದರಲ್ಲಿ ಮಾತ್ರ. ಎರಡು ಪಾಯಿಂಟ್ಸ್‌ ಗಳಿಸಿರುವ ಆತಿಥೇಯರು ಪಟ್ಟಿಯಲ್ಲಿ ‘ಮಹಿ’ ಪಡೆಗಿಂತಲೂ ಐದು ಸ್ಥಾನ ಕೆಳಗಿದ್ದಾರೆ.

ಉಭಯ ತಂಡಗಳ ನಡುವಣ ಇದುವರೆಗಿನ ಮುಖಾಮುಖಿ ಫಲಿತಾಂಶದ ಮೇಲೆ ಬೆಳಕು ಚೆಲ್ಲಿದರೆ ಮುಂಬೈ ಪ್ರಾಬಲ್ಯ ಎದ್ದು ಕಾಣುತ್ತದೆ. ಹಿಂದಿನ ಐದು ಪಂದ್ಯಗಳ ಪೈಕಿ ಮುಂಬೈ ನಾಲ್ಕರಲ್ಲಿ ಗೆದ್ದಿದೆ. ಚೆನ್ನೈಗೆ ಜಯ ಒಲಿದಿರುವುದು ಒಂದರಲ್ಲಿ ಮಾತ್ರ.

ಹಿಂದಿನ ಈ ಸೋಲುಗಳಿಗೆ ಸೇಡು ತೀರಿಸಿಕೊಳ್ಳಲು ಧೋನಿ ಪಡೆಗೆ ಈಗ ಉತ್ತಮ ಅವಕಾಶ ಸಿಕ್ಕಿದೆ. ‘ಹಿರಿಯರ’ ತಂಡ ಎಂಬ ಹಣೆಪಟ್ಟಿ ಹೊಂದಿರುವ ಚೆನ್ನೈ, ಸಂಘಟಿತ ಹೋರಾಟದ ಮೇಲೆ ನಂಬಿಕೆ ಇಟ್ಟಿದ್ದು, ರೋಹಿತ್ ಬಳಗವನ್ನು ಅದರದ್ದೇ ನೆಲದಲ್ಲಿ ಮಣಿಸಲು ಸನ್ನದ್ಧವಾಗಿದೆ.

ಚೆನ್ನೈ ತಂಡ ಬ್ಯಾಟಿಂಗ್‌ನಲ್ಲಿ ಇನ್ನೂ ಪರಿಣಾಮಕಾರಿ ಸಾಮರ್ಥ್ಯ ತೋರಬೇಕಿದೆ. ಇನಿಂಗ್ಸ್‌ ಆರಂಭಿಸುವ ಅಂಬಟಿ ರಾಯುಡು ಮತ್ತು ಆಸ್ಟ್ರೇಲಿಯಾದ ಅನುಭವಿ ಆಲ್‌ರೌಂಡರ್‌ ಶೇನ್‌ ವಾಟ್ಸನ್‌ ಸ್ಫೋಟಕ ಆಟ ಆಡಲು ವಿಫಲರಾಗುತ್ತಿದ್ದಾರೆ. ಹೀಗಾಗಿ ಉತ್ತಮ ಆರಂಭ ಸಿಗುತ್ತಿಲ್ಲ. ಸುರೇಶ್‌ ರೈನಾ ಮತ್ತು ಕೇದಾರ್‌ ಜಾಧವ್‌ ಸ್ಥಿರ ಸಾಮರ್ಥ್ಯ ತೋರದಿರುವುದು ನಾಯಕ ‘ಮಹಿ’ ಚಿಂತೆಗೆ ಕಾರಣವಾಗಿದೆ.

ಧೋನಿ ಮತ್ತು ಡ್ವೇನ್‌ ಬ್ರಾವೊ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬುತ್ತಿದ್ದಾರೆ. ತಂಡ ಸಂಕಷ್ಟದಲ್ಲಿದ್ದಾಗಲೆಲ್ಲಾ ಛಲದಿಂದ ಹೋರಾಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಉತ್ತಮ ಲಯದಲ್ಲಿರುವ ಇವರು ಮುಂಬೈ ಬೌಲರ್‌ಗಳ ಮೇಲೂ ಸವಾರಿ ಮಾಡಲು ಸನ್ನದ್ಧರಾಗಿದ್ದಾರೆ.

ಇಮ್ರಾನ್‌ ತಾಹಿರ್‌, ರವೀಂದ್ರ ಜಡೇಜ ಮತ್ತು ಹರಭಜನ್‌ ಸಿಂಗ್‌ ಅವರ ಸ್ಪಿನ್‌ ಬಲವೂ ಧೋನಿ ಪಡೆಗಿದೆ. ಇವರನ್ನು ರೋಹಿತ್‌ ಪಡೆಯ ಬ್ಯಾಟ್ಸ್‌ಮನ್‌ಗಳು ಹೇಗೆ ಎದುರಿಸುತ್ತಾರೆ ಎಂಬುದು ಸದ್ಯದ ಕುತೂಹಲ.

ಮುಂಬೈ ತಂಡದಲ್ಲಿ ರೋಹಿತ್‌, ಕ್ವಿಂಟನ್‌ ಡಿ ಕಾಕ್‌, ಹಾರ್ದಿಕ್‌ ಪಾಂಡ್ಯ, ಕೀರನ್‌ ಪೊಲಾರ್ಡ್‌ ಮತ್ತು ಯುವರಾಜ್‌ ಸಿಂಗ್‌ ಅವರಂತಹ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿದ್ದಾರೆ. ತವರಿನ ಅಂಗಳದಲ್ಲಿ ರನ್‌ ಮಳೆ ಸುರಿಸುವ ಸಾಮರ್ಥ್ಯ ಇವರಿಗಿದೆ. ಈ ಪಂದ್ಯದಲ್ಲಿ ಮುಂಬೈ ಕೆಲ ಬದಲಾವಣೆಗೆ ಕೈ ಹಾಕುವ ಸಾಧ್ಯತೆ ಇದ್ದು, ಬೆನ್‌ ಕಟಿಂಗ್ ಮತ್ತು ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ಗೆ ಅವಕಾಶ ಸಿಗುವ ನಿರೀಕ್ಷೆ ಇದೆ.

ವೇಗದ ಬೌಲರ್‌ ಲಸಿತ್‌ ಮಾಲಿಂಗ ಬದಲು ಅಲಜಾರಿ ಜೋಸೆಫ್‌ ಕಣಕ್ಕಿಳಿಯಬಹುದು.

ಜಸ್‌ಪ್ರೀತ್‌ ಬೂಮ್ರಾ ಮತ್ತು ಮಿಷೆಲ್‌ ಮೆಕ್‌ಲೆನಾಗನ್‌ ವೇಗದ ಬೌಲಿಂಗ್‌ ವಿಭಾಗದ ಸಾರಥ್ಯ ವಹಿಸಲಿದ್ದು, ಮಯಂಕ್‌ ಮಾರ್ಕಂಡೆ ಮತ್ತು ಅನುಕೂಲ್‌ ರಾಯ್‌ ತಮ್ಮ ಬತ್ತಳಿಕೆಯಲ್ಲಿರುವ ಸ್ಪಿನ್‌ ಅಸ್ತ್ರಗಳನ್ನು ಪ್ರಯೋಗಿಸಿ ಚೆನ್ನೈ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಕಡಿವಾಣ ಹಾಕಲು ತಯಾರಾಗಿದ್ದಾರೆ.

**

ಮುಖಾಮುಖಿ ಫಲಿತಾಂಶ

ಪಂದ್ಯ: 26

ಮುಂಬೈ ಗೆಲುವು: 14

ಚೆನ್ನೈ ಜಯ: 12

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT