ಮಂಗಳವಾರ, ನವೆಂಬರ್ 30, 2021
21 °C

ಐಪಿಎಲ್‌ | ಮುಸ್ತಫಿಜುರ್‌ಗೆ ಎನ್‌ಒಸಿ ನೀಡಲು ಬಿಸಿಬಿ ನಕಾರ: ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಢಾಕಾ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಫ್ರ್ಯಾಂಚೈಸ್‌ಗಳು ಸಂಪರ್ಕಿಸಿದ ಕಾರಣಕ್ಕೆ ವೇಗಿ ಮುಸ್ತಫಿಜುರ್‌ ರೆಹಮಾನ್‌ ಅವರಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಲು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ನಿರಾಕರಿಸಿದ ವರದಿಯಾಗಿದೆ. ಬಾಂಗ್ಲಾ ತಂಡ ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸ ಕೈಗೊಳ್ಳಬೇಕಿದೆ. ಹೀಗಾಗಿ ಮುಸ್ತಫಿಜುರ್‌ ಅವರಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಬಾರಿಯ ಐಪಿಎಲ್‌ ಟೂರ್ನಿಯು ಸೆಪ್ಟೆಂಬರ್‌ 19ರಿಂದ ಯುಎಇಯಲ್ಲಿ ನಡೆಯಲಿದೆ. ಮುಂಬೈ ಇಂಡಿಯನ್ಸ್‌ ಹಾಗೂ ಕೋಲ್ಕತ್ತ ನೈಟ್‌ ರೈಡರ್ಸ್ (ಕೆಕೆಆರ್‌)‌ ತಂಡಗಳಲ್ಲಿದ್ದ ಇಬ್ಬರು ವೇಗದ ಬೌಲರ್‌ಗಳು ಟೂರ್ನಿಯಿಂದ ಹಿಂದೆ ಸರಿದ ಕಾರಣಕ್ಕೆ ಈ ಫ್ರ್ಯಾಂಚೈಸ್‌ಗಳು ಮುಸ್ತಫಿಜುರ್‌ ಅವರನ್ನು ಸಂಪರ್ಕಿಸಿದ್ದವು‘ ಎಂದು ಕ್ರಿಕೆಟ್‌ ವೆಬ್‌ಸೈಟ್‌ವೊಂದು ವರದಿ ಮಾಡಿದೆ.

ಟೂರ್ನಿಯಿಂದ ಹಿಂದೆ ಸರಿದಿದ್ದ ಲಸಿತ್‌ ಮಾಲಿಂಗ ಬದಲಿಗೆ ಮುಂಬೈ ತಂಡವು ಜೇಮ್ಸ್‌ ಪ್ಯಾಟಿನ್ಸನ್‌ ಅವರನ್ನು ಸೇರಿಸಿಕೊಂಡಿದೆ. ಕೆಕೆಆರ್ ತಂಡವು ಹ್ಯಾರಿ ಗರ್ನಿ ಅವರ ಬದಲಿಗೆ ಬೌಲರ್‌ವೊಬ್ಬನ ಹುಡುಕಾಟದಲ್ಲಿದೆ.

ಬಾಂಗ್ಲಾ ತಂಡದ ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್‌ ಪಂದ್ಯಗಳ ಸರಣಿ ಅಕ್ಟೋಬರ್‌ 24ರಿಂದ ಆರಂಭವಾಗಲಿದೆ. ಅದೇ ಅವಧಿಯಲ್ಲಿ ಐಪಿಎಲ್‌ ಕೂಡ ನಡೆಯುತ್ತಿರುತ್ತದೆ.

‘ಮುಸ್ತಫಿಜುರ್‌ ಅವರಿಗೆ ಐಪಿಎಲ್‌ನಿಂದ ಕರೆ ಬಂದಿರುವುದು ನಿಜ. ಆದರೆ ಶ್ರೀಲಂಕಾ ಪ್ರವಾಸದ ಕಾರಣ ಅವರಿಗೆ ನಿರಾಕ್ಷೇಪಣಾ ಪತ್ರವನ್ನು ನಾವು ನೀಡುತ್ತಿಲ್ಲ‘ ಎಂದು ಬಿಸಿಬಿ ಕ್ರಿಕೆಟ್‌ ಚಟುವಟಿಕೆಗಳ ಮುಖ್ಯಸ್ಥ ಅಕ್ರಂ ಖಾನ್‌ ಹೇಳಿದ್ದಾಗಿ ವೆಬ್‌ಸೈಟ್‌ ವರದಿ ಮಾಡಿದೆ.

24 ವರ್ಷದ ಮುಸ್ತಫಿಜುರ್‌ 2019ರ ವಿಶ್ವಕಪ್‌ ಟೂರ್ನಿಯಲ್ಲಿ ಬಾಂಗ್ಲಾ ತಂಡದ ಪರ 20 ವಿಕೆಟ್‌ ಗಳಿಸಿದ್ದರು. ಆ ಬಳಿಕ ಅವರು ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳಲ್ಲಿ ಮಾತ್ರ ಆಡಿದ್ದಾರೆ. 

2018ರಲ್ಲಿ ಕೊನೆಯ ಬಾರಿ ಅವರು ಐಪಿಎಲ್‌ನಲ್ಲಿ ಆಡಿದ್ದರು. ಆ ಋತುವಿನಲ್ಲಿ ಮುಂಬೈ ತಂಡದ ಪರ ಕಣಕ್ಕಿಳಿದ್ದಿದ್ದ ಮುಸ್ತಫಿಜುರ್‌ ಏಳು ಪಂದ್ಯಗಳಿಂದ ಏಳು ವಿಕೆಟ್‌ ಗಳಿಸಿದ್ದರು. ಆ ಋತುವಿನಲ್ಲಿ ಅವರು ಗಾಯಗೊಂಡ ಮರಳಿದ ಕಾರಣ ಬಿಸಿಬಿ ಅಧ್ಯಕ್ಷ ನಜ್ಮುಲ್‌ ಹಸನ್, ಅವರಿಗೆ ಯಾವುದೇ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಎನ್‌ಒಸಿ ನೀಡುವುದಿಲ್ಲ ಎಂದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು