ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌ಗೆ ಅಫ್ಗಾನ್ ಸ್ಪಿನ್ ಸವಾಲು

ಎರಡೂ ಪಂದ್ಯ ಸೋತ ಗುಲ್ಬದಿನ್ ಬಳಗ; ಕೇನ್ ನೇತೃತ್ವದ ತಂಡಕ್ಕೆ ಹ್ಯಾಟ್ರಿಕ್ ಜಯದ ಕನಸು
Last Updated 7 ಜೂನ್ 2019, 19:45 IST
ಅಕ್ಷರ ಗಾತ್ರ

ಟಾಂಟನ್ (ಎಎಫ್‌ಪಿ): ಎರಡೂ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡ ಶನಿವಾರ ಅಫ್ಗಾನಿಸ್ತಾನವನ್ನು ಎದುರಿಸಲಿದೆ. ಸ್ಪಿನ್ನರ್‌ಗಳ ಬಲ ಹೊಂದಿರುವ ಗುಲ್ಬದಿನ್ ನಯೀಬ್ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ನ್ಯೂಜಿಲೆಂಡ್ ನಡುವಿನ ಈ ಹಣಾಹಣಿ ಕುತೂಹಲ ಮೂಡಿಸಿದೆ.

ಬಲಿಷ್ಠ ನ್ಯೂಜಿಲೆಂಡ್‌ ತಂಡವನ್ನು ಮಣಿಸಿ ಮೊದಲ ಜಯ ಸಾಧಿಸಲು ಅಫ್ಗಾನಿಸ್ತಾನ ಸಫಲವಾಗುವುದೇ ಎಂಬುದು ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿರುವ ಪ್ರಶ್ನೆ.

ಶ್ರೀಲಂಕಾವನ್ನು 10 ವಿಕೆಟ್‌ಗಳಿಂದ ಮಣಿಸಿ ಶುಭಾರಂಭ ಮಾಡಿದ್ದ ನ್ಯೂಜಿಲೆಂಡ್‌ಗೆ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ಕಠಿಣ ಸವಾಲು ಒಡ್ಡಿತ್ತು. ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ನ್ಯೂಜಿಲೆಂಡ್ ಎರಡು ವಿಕೆಟ್‌ಗಳಿಂದ ಗೆದ್ದಿತ್ತು. ಓವಲ್ ಅಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಸ್ ಟೇಲರ್ ಸಿಡಿಸಿದ್ದ 82 ರನ್‌ಗಳು ತಂಡಕ್ಕೆ ಆಸರೆಯಾಗಿದ್ದವು.

ಒಮ್ಮೆಯೂ ಪ್ರಶಸ್ತಿ ಗೆಲ್ಲಲಾಗದ ನ್ಯೂಜಿಲೆಂಡ್ ಕಳೆದ ಬಾರಿ ಫೈನಲ್‌ನಲ್ಲಿ ಮುಗ್ಗರಿಸಿತ್ತು. ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎಂದೆನಿಸಿಕೊಂಡಿದೆ. ಆದರೆ ಅಚ್ಚರಿಯ ಫಲಿತಾಂಶ ನೀಡಬಲ್ಲ ಅಫ್ಗಾನಿಸ್ತಾನದ ಸ್ಪಿನ್ ದಾಳಿಗೆ ಎದೆಯೊಡ್ಡಿ ನಿಲ್ಲುವಲ್ಲಿ ಯಶಸ್ವಿಯಾಗುವುದೇ ಎಂಬುದು ಕುತೂಹಲ ಕೆರಳಿಸಿರುವ ಅಂಶ.

‘ಅಫ್ಗಾನಿಸ್ತಾನ ತಂಡ ಉತ್ತಮ ಸ್ಪಿನ್ ಬೌಲರ್‌ಗಳನ್ನು ಹೊಂದಿದೆ. ಇದು ಆತಂಕದ ವಿಷಯ. ತಂಡದ ಗೆಲುವಿನ ಓಟಕ್ಕೆ ಇದು ಧಕ್ಕೆ ತರಲಾರದು ಎಂಬ ವಿಶ್ವಾಸವಿದೆ’ ಎಂದು ರಾಸ್ ಟೇಲರ್ ಹೇಳಿದರು.

ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಟೇಲರ್ ಮತ್ತು ಕೇನ್ ವಿಲಿಯಮ್ಸನ್ 105 ರನ್‌ಗಳ ಜೊತೆಯಾಟ ಆಡಿದ್ದರು. ವೇಗಿ ಮ್ಯಾಟ್ ಹೆನ್ರಿ ಎದುರಾಳಿಗಳ ಬ್ಯಾಟಿಂಗ್ ವಿಭಾಗವನ್ನು ಕಾಡಿದ್ದರು. ಅವರು ಒಟ್ಟು ನಾಲ್ಕು ವಿಕೆಟ್ ಕಬಳಿಸಿದ್ದರು. ಗಂಟೆಗೆ 96 ಕಿಮೀ ವೇಗದಲ್ಲಿ ಚೆಂಡು ಎಸೆಯಬಲ್ಲ ಟ್ರೆಂಟ್ ಬೌಲ್ಟ್ ಮತ್ತು ಲಾಕಿ ಫರ್ಗ್ಯುಸನ್ ತಂಡದ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.

ಎರಡನೇ ವಿಶ್ವಕಪ್ ಟೂರ್ನಿ ಆಡುತ್ತಿರುವ ಅಫ್ಗಾನಿಸ್ತಾನದ ಸ್ಪಿನ್ ವಿಭಾಗದಲ್ಲಿ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅಪಾಯಕಾರಿಯಾಗಿದ್ದಾರೆ. ಮೊಹಮ್ಮದ್ ನಬಿ ಕೂಡ ರಶೀದ್‌ ಖಾನ್‌ಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ.

ಆದರೆ ತಂಡದ ಬ್ಯಾಟಿಂಗ್ ವಿಭಾಗ ದುರ್ಬಲವಾಗಿದೆ. ಮಳೆ ಕಾಡಿದ ಕಳೆದ ಪಂದ್ಯದಲ್ಲಿ ಪರಿಷ್ಕೃತ 187 ರನ್‌ಗಳ ಗುರಿ ಬೆನ್ನತ್ತಿದ ತಂಡ 152 ರನ್‌ಗಳಿಗೆ ಪತನಗೊಂಡಿತ್ತು. ತಂಡದ ಈ ದೌರ್ಬಲ್ಯದ ಲಾಭ ಪಡೆದು ಹ್ಯಾಟ್ರಿಕ್ ಗೆಲುವಿಗೆ ನ್ಯೂಜಿಲೆಂಡ್‌ ಪ್ರಯತ್ನಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT