ಗುರುವಾರ , ಫೆಬ್ರವರಿ 27, 2020
19 °C

21 ವರ್ಷಗಳ ಬಳಿಕ ದಾಖಲೆ ಬರೆದ ರಾಹುಲ್: ಧೋನಿಗೂ ಸಾಧ್ಯವಾಗಿರಲಿಲ್ಲ ಈ ಸಾಧನೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೌಂಟ್ ಮಾಂಗನೂಯಿ: ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್‌. ರಾಹುಲ್‌ ಭರ್ಜರಿ ಶತಕ ಸಿಡಿಸಿದರು. ಭಾರತದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ವೊಬ್ಬರು ಏಷ್ಯಾದಿಂದ ಹೊರಗೆ ಆಡಿದ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಬರೋಬ್ಬರಿ 21 ವರ್ಷ ಕಳೆದಿತ್ತು.

ಇತ್ತಿಚೆಗೆ ವಿಕೆಟ್‌ ಕೀಪಿಂಗ್‌ ಗ್ಲೌಸ್‌ ಧರಿಸಿ ಕಣಕ್ಕಿಳಿಯುತ್ತಿರುವ ರಾಹುಲ್, ಬ್ಯಾಟಿಂಗ್‌ ಹಾಗೂ ವಿಕೆಟ್‌ ಕೀಪಿಂಗ್‌ ಎರಡರಲ್ಲೂ ಮಿಂಚುತ್ತಾ, ಮಾಜಿ ನಾಯಕ ಎಂ.ಎಸ್‌. ಧೋನಿ ಅವರ ಸ್ಥಾನ ತುಂಬಬಲ್ಲ ಸಮರ್ಥ ಎನಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ 113 ಎಸೆತಗಳನ್ನು ಎದುರಿಸಿದ ರಾಹುಲ್, 9 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 112 ರನ್‌ ಗಳಿಸಿದರು. ಇದು ಅವರು ವಿದೇಶದಲ್ಲಿ ಆಡಿದ ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ ಮೊದಲ ಶತಕವೂ ಹೌದು.

ಇಂಗ್ಲೆಂಡ್‌ನಲ್ಲಿ ನಡೆದಿದ್ದ 1999ರ ವಿಶ್ವಕಪ್‌ ಟೂರ್ನಿ ವೇಳೆ ಶ್ರೀಲಂಕಾ ವಿರುದ್ಧ ಟಾಂಟನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಕನ್ನಡಿಗ ರಾಹುಲ್‌ ದ್ರಾವಿಡ್‌ (145) ಶತಕ ಬಾರಿಸಿದ್ದರು. ಆ ಬಳಿಕ ವಿದೇಶದಲ್ಲಿ ಆಡಿದ ಪಂದ್ಯಗಳಲ್ಲಿ ಶತಕ ಗಳಿಸಲು ಯಾವೊಬ್ಬ ಭಾರತೀಯ ವಿಕೆಟ್‌ ಕೀಪರ್‌ಗೂ ಸಾಧ್ಯವಾಗಿರಲಿಲ್ಲ. ವಿಶ್ವಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿರುವ ಧೋನಿ, ವಿದೇಶದ ಪಿಚ್‌ಗಳಲ್ಲಿ ಬರೋಬ್ಬರಿ 220 ಪಂದ್ಯಗಳನ್ನು (181 ಇನಿಂಗ್ಸ್‌) ಆಡಿದ ಅನುಭವ ಹೊಂದಿದ್ದಾರೆ. ಆದಾಗ್ಯೂ, ಏಷ್ಯಾದಿಂದ ಹೊರಗೆ ಒಂದೇ ಒಂದು ಶತಕ ಗಳಿಸಲು ಅವರಿಗೆ ಸಾಧ್ಯವಾಗಿರಲಿಲ್ಲ.

ಕಿವೀಸ್‌ ಉತ್ತಮ ಬ್ಯಾಟಿಂಗ್‌
ಭಾರತ ನೀಡಿರುವ 297 ರನ್‌ಗಳ ಗುರಿ ಬೆನ್ನತ್ತಿರುವ ಕಿವೀಸ್‌, ಸದ್ಯ 35 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 199 ರನ್‌ ಕಲೆಹಾಕಿದೆ. ಇನಿಂಗ್ಸ್‌ ಆರಂಭಿಸಿದ ಮಾರ್ಟಿನ್‌ ಗಪ್ಟಿಲ್‌ ಹಾಗೂ ಹೆನ್ರಿ ನಿಕೋಲಸ್ ಜೋಡಿ ಮೊದಲ ವಿಕೆಟ್‌ಗೆ 106 ರನ್‌ ಸೇರಿಸಿದರು.

ಕೇವಲ 46 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 66 ರನ್‌ ಗಳಿಸಿ ಬಿರುಸಿನ ಬ್ಯಾಟಿಂಗ್‌ ಮಾಡುತ್ತಿದ್ದ ಗಪ್ಟಿಲ್‌ 16.3ನೇ ಓವರ್‌ನಲ್ಲಿ ಚಾಹಲ್‌ಗೆ ವಿಕೆಟ್‌ ಒಪ್ಪಿಸಿದರು.

ಬಳಿಕ ಬಂದ ನಾಯಕ ಕೇನ್‌ ವಿಲಿಯಮ್ಸನ್‌ 22 ರನ್‌ ಮತ್ತು ಕಳೆದೆರಡು ಪಂದ್ಯಗಳ ಹೀರೊ ರಾಸ್‌ ಟೇಲರ್‌ 12 ರನ್‌ ಗಳಿಸಿ ಔಟಾದರು. ತಾಳ್ಮೆಯ ಆಟವಾಡಿದ ಹೆನ್ರಿ (103 ಎಸೆತಗಳಲ್ಲಿ 80 ರನ್‌) ಶಾರ್ದೂಲ್‌ ಠಾಕೂರ್‌ಗೆ ವಿಕೆಟ್‌ ಒಪ್ಪಿಸಿದರು.

ಕಿವೀಸ್‌ ಗೆಲ್ಲಲು, ಉಳಿದಿರುವ 90 ಎಸೆತಗಳಲ್ಲಿ 98 ರನ್‌ ಗಳಿಸಬೇಕಿದೆ. ಕ್ಲೀನ್‌ ಸ್ವೀಪ್‌ ತಪ್ಪಿಸಿಕೊಳ್ಳಲು ಕೊಹ್ಲಿ ಪಡೆಗೆ ಇನ್ನೂ ಆರು ವಿಕೆಟ್‌ ಬೇಕಾಗಿದೆ. ಸದ್ಯ ಟಾಮ್‌ ಲಾಥಮ್‌ (4) ಮತ್ತು ಜಿಮ್ಮಿ ನೀಶಮ್‌ (8) ಕ್ರೀಸ್‌ನಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು