ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್–2020 | ಹರಾಜು ಮೊತ್ತಕ್ಕೆ ಪ್ಯಾಟ್ ಕಮಿನ್ಸ್ ಯೋಗ್ಯ: ಬ್ರೆಟ್ ಲೀ

Last Updated 27 ಸೆಪ್ಟೆಂಬರ್ 2020, 11:50 IST
ಅಕ್ಷರ ಗಾತ್ರ

ಈ ಬಾರಿಯ ಐಪಿಎಲ್‌ ಟೂರ್ನಿಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಆಟಗಾರ ಪ್ಯಾಟ್‌ ಕಮಿನ್ಸ್ ಅವರನ್ನು ಕೋಲ್ಕತ್ತ ನೈಟ್‌ರೈಡರ್ಸ್‌ ತಂಡ ಬರೋಬ್ಬರಿ ₹ 15.5 ಕೋಟಿ ನೀಡಿ ಖರೀದಿಸಿತ್ತು. ಇದು ಕ್ರಿಕೆಟ್‌ ವಲಯದಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಆದರೆ ಅವರು ಅಷ್ಟು ದುಬಾರಿ ಮೊತ್ತಕ್ಕೆ ಯೋಗ್ಯರಾಗಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್‌ ಲೀ ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿಯ ಟೂರ್ನಿಯಲ್ಲಿ ಕೋಲ್ಕತ್ತಾ, ಮುಂಬೈ ಇಂಡಿಯನ್ಸ್‌ ವಿರುದ್ಧ ಮೊದಲ ಪಂದ್ಯ ಆಡಿತ್ತು. ಈ ಪಂದ್ಯದಲ್ಲಿ 3 ಓವರ್‌ ಬೌಲಿಂಗ್ ಮಾಡಿದ್ದ ಕಮಿನ್ಸ್‌ 49 ರನ್‌ ಬಿಟ್ಟುಕೊಟ್ಟು ದುಬಾರಿಯಾಗಿದ್ದರು. ಹೀಗಾಗಿ ಅವರಿಗೆ ನೀಡಲಾದ ದುಬಾರಿ ಮೊತ್ತದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.

ಆದರೆ, ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ವಿರುದ್ಧ ಪ್ಯಾಟ್‌ ಚೆನ್ನಾಗಿ ಬೌಲಿಂಗ್ ಮಾಡಿದ್ದರು. 4 ಓವರ್‌ ಬೌಲಿಂಗ್‌ ಮಾಡಿದ್ದ ಅವರು 19 ರನ್‌ ನೀಡಿ 1 ವಿಕೆಟ್‌ ಉರುಳಿಸಿದ್ದರು. ಆರಂಭಿಕ ಜಾನಿ ಬೇರ್ಸ್ಟ್ರೋವ್‌ ಅವರ ವಿಕೆಟ್‌ ಅನ್ನು ಬೇಗನೆ ಕಬಳಿಸಿ ರೈಸರ್ಸ್‌ ಪಡೆಗೆ ಆಘಾತ ನೀಡಿದ್ದರು.

ಈ ಪಂದ್ಯದಲ್ಲಿ ರೈಸರ್ಸ್ ನಿಗದಿತ 20 ಓವರ್‌ಗಳಲ್ಲಿ ಕೇವಲ 142 ರನ್‌ ಗಳಿಸಿತ್ತು. ಮೊತ್ತವನ್ನು ಕೆಕೆಆರ್‌ ಇನ್ನೂ 2 ಓವರ್ ಬಾಕಿ ಇರುವಂತೆಯೇ ಗೆದ್ದು ಬೀಗಿತ್ತು.

ಕ್ರೀಡಾವಾಹಿನಿ ಕಾರ್ಯಕ್ರಮವೊಂದರಲ್ಲಿಈ ಬಗ್ಗೆ ಮಾತನಾಡಿರುವ ಲೀ, ‘ಅವರು ತಮಗೆ ನೀಡಲಾದ ಮೊತ್ತದ ದುಪ್ಪಟ್ಟು ಮೌಲ್ಯಯುತ ಆಟಗಾರ. ಅತ್ಯಂತ ವೇಗಿಗಳಂತೆ ಪ್ಯಾಟ್‌ ಕಮಿನ್ಸ್‌ ಆತ್ಮವಿಶ್ವಾಸ ಹೊಂದಿರುವ ಆಟಗಾರ. ಮೊದಲ ಪಂದ್ಯದಲ್ಲಿ ಸ್ವಲ್ಪ ಹೆಚ್ಚು ರನ್‌ ಬಿಟ್ಟುಕೊಟ್ಟರು. ಅವರು ಸರಾಸರಿಯಲ್ಲಿ ಬೌಲಿಂಗ್‌ ಮಾಡಬಲ್ಲ ಮತ್ತು ಅಗತ್ಯವಿದ್ದಾಗ ವಿಕೆಟ್‌ ತೆಗೆಯಬಲ್ಲ ಬೌಲರ್‌ ಎಂಬುದನ್ನು ಸಾಬೀತು ಮಾಡಿದ್ದಾರೆ’ ಎಂದು ಹೇಳಿದ್ದಾರೆ.

‘ಅತ್ಯುತ್ತಮವಾದ ವೇಗದ ಜೊತೆಗೆ ಅವರು ಚೆನ್ನಾಗಿ ಬೌಲಿಂಗ್‌ ಮಾಡಿದರು. ಇದು ಅಚ್ಚರಿ ಮೂಡಿಸುತ್ತದೆ.ಆತ ಶ್ರೇಷ್ಟ ರೀತಿಯಲ್ಲಿ ಆಡಿದ’ ಎಂದು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT