ಐಸಿಸಿ ಮುಖ್ಯಸ್ಥ ಹುದ್ದೆಗೆ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ನವರು ಬೇಡ: ಪಾಕ್

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ಗೆ (ಐಸಿಸಿ) ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದವರು ಮುಖ್ಯಸ್ಥರಾಗಬಾರದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಎಹಸಾನ್ ಮಣಿ ಹೇಳಿದ್ದಾರೆ. ಈ ದೇಶದವರನ್ನು ಹೊರತುಪಡಿಸಿ ಬೇರೆ ಯಾರೇ ಆದರೂ ಅದೂ ಕ್ರಿಕೆಟ್ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಹಾಗೂ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗಳು (ಇಸಿಬಿ), ಐಸಿಸಿಯಲ್ಲಿ ಒಂದು ರೀತಿಯ ’ರಾಜಕೀಯ‘ವನ್ನು ಪರಿಚಯಿಸಿವೆ‘ ಎಂದು ಮಣಿ ಹೇಳಿದ್ದಾರೆ.
ಭಾರತದ ಶಶಾಂಕ್ ಮನೋಹರ್ ಅವರು ನಿರ್ಗಮಿಸಿದ ನಂತರ ಐಸಿಸಿ ಮುಖ್ಯಸ್ಥ ಹುದ್ದೆಯು ಜುಲೈನಿಂದ ಖಾಲಿ ಇದೆ. ನೂತನ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆಯು ಮೂರನೇ ಎರಡರಷ್ಟು ಬಹುಮತ ಅಥವಾ ಸರಳ ಬಹುಮತದ ಆಧಾರದ ಮೇಲೆ ನಡೆಯಬೇಕೆ ಎಂಬುದರ ಬಗ್ಗೆ ಐಸಿಸಿ ಮಂಡಳಿ ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಿದೆ. ಸದ್ಯ ಇಮ್ರಾನ್ ಖ್ವಾಜಾ ಅವರು ಹಂಗಾಮಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿರುವುದು ದುರದೃಷ್ಟಕರ. ತಮ್ಮ ಹುದ್ದೆಗಳನ್ನು ರಕ್ಷಿಸಿಕೊಳ್ಳಲು ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಭಾರತದ ಮಂಡಳಿಯವರು 2014ರಲ್ಲಿ ರಾಜಕೀಯವೊಂದನ್ನು ಪರಿಚಯಿಸಿದ್ದಾರೆ. ಈಗ ಅದನ್ನು ತೆಗೆದುಹಾಕಲು ಅವರು ಪರದಾಟ ನಡೆಸಿದ್ದಾರೆ. ಯಾಕೆಂದರೆ ಆ ರಾಜಕೀಯ ಬಹಳಷ್ಟು ದಿನ ಅವರಿಗೆ ಹೊಂದುವುದಿಲ್ಲ‘ ಎಂದು ಎಹಸಾನ್ ಮಣಿ ಹೇಳಿಕೆಯನ್ನು ಫೋಬ್ಸ್ ನಿಯತಕಾಲಿಕೆ ಉಲ್ಲೇಖಿಸಿದೆ.
‘ಈ ಬಿಗ್ 3 ರಾಷ್ಟ್ರಗಳಿಂದ (ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್) ಹೊರತುಪಡಿಸಿದ ಬೇರೆ ಯಾರಾದರೂ ಮುಖ್ಯಸ್ಥ ಹುದ್ದೆಗೆ ಏರಿದರೆ ಅದು ಒಳ್ಳೆಯದು‘ ಎಂದು ಅವರು ಹೇಳಿದ್ದಾರೆ.
ಮಣಿ ಅವರು 2003–2006ರ ಅವಧಿಯಲ್ಲಿ ಐಸಿಸಿಯ ಮುಖ್ಯಸ್ಥರಾಗಿದ್ದರು. ಈಗ ನನಗೆ ಆ ಹುದ್ದೆಯ ಮೇಲೆ ಯಾವುದೇ ಆಸಕ್ತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.