ಗುರುವಾರ , ಫೆಬ್ರವರಿ 20, 2020
31 °C

‘ಕಳಂಕ’ ಮೀರಿ ಬೆಳೆದ ಕ್ರಿಕೆಟ್

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಈ ಶತಮಾನದ ಕಾಲಚಕ್ರವು ತನ್ನ ಇಪ್ಪತ್ತು ವರ್ಷಗಳ ಒಂದು ಸುತ್ತು ಹಾಕಿ ಮುಂದುವರಿದಿದೆ. ಈ ಅವಧಿಯಲ್ಲಿ ಭಾರತದ ಕ್ರಿಕೆಟ್ ಪ್ರಪಾತದಿಂದ ಆಗಸದೆಡೆಗೆ ಚಿಮ್ಮಿದ್ದು ರೋಚಕಗಾಥೆಯೇ ಹೌದು.

ಇಪ್ಪತ್ತು ವರ್ಷಗಳ ಹಿಂದೆ ಮ್ಯಾಚ್ ಫಿಕ್ಸಿಂಗ್ ಹಗರಣ ಬಯಲಿಗೆ ಬಂದಾಗ ವಿಶ್ವದ ಇಡೀ ಕ್ರಿಕೆಟ್ ವಲಯವೇ ಬೆಚ್ಚಿ ಬಿದ್ದಿತ್ತು. ಏಕೆಂದರೆ, ಅದರಲ್ಲಿ ಖ್ಯಾತನಾಮ ಕ್ರಿಕಟಿಗರ ಬಣ್ಣ ಬಯಲಾಗಿತ್ತು. ಭಾರತ ತಂಡದ ಯಶಸ್ವಿ ನಾಯಕನೆನಿಸಿಕೊಂಡಿದ್ದ ಮೊಹಮ್ಮದ್ ಅಜರುದ್ದೀನ್, ಅಜಯ್ ಜಡೇಜ, ಮನೋಜ್ ಪ್ರಭಾಕರ್, ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೊನಿಯೆ ಅವರಂತಹ ಘಟಾನುಘಟಿಗಳು ಆರೋಪಿಗಳಾಗಿದ್ದರು. ಮೂರ್ನಾಲ್ಕು ವರ್ಷಗಳ ಕಾಲ ಮೆಲ್ಲಗೆ ಹೊಗೆಯಾಡುತ್ತಿದ್ದ ಫಿಕ್ಸಿಂಗ್ ಜಾಲದ ಬೆಂಕಿ ಧಗಧಗಿಸಿತ್ತು.

‘ಇನ್ನು ಕ್ರಿಕೆಟ್ ಕಥೆ ಮುಗಿಯಿತು. ಈ ಮೋಸದಾಟವನ್ನು ಯಾರು ನೋಡ್ತಾರೆ. ಎಲ್ಲರೂ ಅವರೇ...’ ಎಂಬಿತ್ಯಾದಿ ಟೀಕೆಗಳ ಮಹಾಪೂರವೇ ಹರಿಯಿತು. ಅದರಲ್ಲೂ ಭಾರತದ ಕ್ರಿಕೆಟ್ ಮತ್ತು ಅದರ ಮೇಲೆ ಅವಲಂಬಿತವಾಗಿದ್ದ ದೊಡ್ಡದೊಂದು ಮಾರುಕಟ್ಟೆ ಪ್ರಪಂಚ ತಲೆ ಕೆಡಿಸಿಕೊಂಡಿತು. ಆದರೆ, ಭಾರತದ ಕ್ರಿಕೆಟ್ ಅಭಿಮಾನಿಯ ಕ್ಷಮಾಗುಣವೋ, ಆಟದ ಮೇಲಿನ ಪ್ರೀತಿಯೋ ಗೊತ್ತಿಲ್ಲ. ಈ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಕ್ರಿಕೆಟ್‌ ಬೆಳೆದಷ್ಟು ಅದಕ್ಕೂ ಮುಂದೆ ಬೆಳೆದಿರಲಿಲ್ಲ. ಬಹುಶಃ ಮುಂದೆಯೂ ಬೆಳೆಯಲಿಕ್ಕಿಲ್ಲ.  ಭಾರತವು ವಿಶ್ವ ಕ್ರಿಕೆಟ್‌ನ ’ದೊಡ್ಡಣ್ಣ’ನಾಗಿ ಎತ್ತರಕ್ಕೇರಿದ್ದೂ ಇದೇ ಅವಧಿಯಲ್ಲಿ.

1983ರ ವಿಶ್ವಕಪ್ ವಿಜಯದ ನಂತರದ 17 ವರ್ಷಗಳ ಅಧ್ಯಾಯ ಒಂದು ರೀತಿಯದಾದರೆ, 2000ನೇ ಇಸವಿಯ ನಂತರದ ಅಧ್ಯಾಯ ಮತ್ತೊಂದು ಬಗೆಯದು. ಈ ಎರಡರಲ್ಲೂ 20 ವರ್ಷಗಳದ್ದೇ ಪಾರಮ್ಯ. ಸೌರವ್ ಗಂಗೂಲಿಯಿಂದ ವಿರಾಟ್ ಕೊಹ್ಲಿಯವರೆಗೆ ಭಾರತ ತಂಡದ ನಾಯಕತ್ವ ವಹಿಸಿಕೊಂಡವರೆಲ್ಲರೂ ಈ ಯಶಸ್ಸಿನ ರಥ ಎಳೆದಿದ್ದಾರೆ. ಈ ಅವಧಿಯಲ್ಲಿಯೂ ಎದುರಾದ ಕಳಂಕಗಳು, ಸವಾಲುಗಳು ಸಣ್ಣವೇನಲ್ಲ. ಬಿಸಿಸಿಐನ ಪ್ರಮುಖರೇ ಸುಪ್ರೀಂ ಕೋರ್ಟ್‌ ಕಟಕಟೆಯಲ್ಲಿ ನಿಂತಿದ್ದೂ ಆಯಿತು. ಆದರೂ ದಿನದಿಂದ ದಿನಕ್ಕೆ ಕ್ರಿಕೆಟ್ ಬೆಳೆಯುತ್ತಲೇ ಇದೆ. ಆರ್ಥಿಕವಾಗಿ, ಜನರ ಆಕರ್ಷಣೆಯ ಕೇಂದ್ರಬಿಂದುವಾಗಿ ಬೆಳೆಯುತ್ತಿದೆ. ಕ್ರಿಕೆಟ್‌ನೊಂದಿಗೆ ತಮ್ಮ ಜೀವನ ಮತ್ತು ಜೀವನಶೈಲಿಯನ್ನು ಮಿಳಿತಗೊಳಿಸಿಕೊಳ್ಳುವ ಜನರ ಸಂಖ್ಯೆಯೂ ಹೆಚ್ಚಿದೆ. ಹೊಸ ಕ್ರೀಡಾಂಗಣಗಳು ತಲೆ ಎತ್ತಿವೆ. ದೇಶದ ಉದ್ದಗಲಕ್ಕೂ ಸಾವಿರಾರು ಅಕಾಡೆಮಿಗಳಲ್ಲಿ ಮಕ್ಕಳು, ಯುವಕರು ಕ್ರಿಕೆಟ್ ಕಲಿಯುತ್ತಿದ್ದಾರೆ. ಭಾರತ ತಂಡದ ಹನ್ನೊಂದರ ಯಾದಿಯಲ್ಲಿ ಸ್ಥಾನ ಪಡೆಯುವತ್ತ ಇವರೆಲ್ಲರ ಒಮ್ಮುಖ ಓಟ ನಡೆದಿದೆ. ಎಲ್ಲರೂ ಯಶಸ್ವಿಯಾಗುವುದಿಲ್ಲ ನಿಜ. ಆದರೆ,  ಇವರಿಂದಾಗಿ ಕ್ರಿಕೆಟ್ ಮತ್ತಷ್ಟು ಮಗದಷ್ಟು ಬೆಳೆಯುತ್ತಿದೆ.

ಹಣದ ಹೊಳೆ..

1992ರಲ್ಲಿ ವರ್ಲ್ಡ್‌ ಟೆಲಿವಿಷನ್‌ ₹78.66 ಕೋಟಿ ನೀಡಿ ವಿಶ್ವಕಪ್‌ ಪ್ರಸಾರದ ಹಕ್ಕು ಖರೀದಿಸಿತ್ತು. ಇದಕ್ಕೆ ಸಾಕ್ಷಿ. 1999ರ ವೇಳೆಗೆ ಈ ಮೊತ್ತ ₹161 ಕೋಟಿ ತಲುಪಿತ್ತು. ಇದು ಹೀಗೆಯೇ ಮುಂದುವರಿಯಿತು.

2003ರಲ್ಲಿ ಗ್ಲೋಬಲ್‌ ಕ್ರಿಕೆಟ್‌ ಕಾರ್ಪೊರೇಷನ್‌ (ಜಿಸಿಸಿ) ಸಂಸ್ಥೆಯು ಎರಡು ವಿಶ್ವಕಪ್‌ಗಳ (2003 ಮತ್ತು 2007) ಪ್ರಾಯೋಜಕತ್ವ ಪಡೆದಿತ್ತು. ಆ ಒಪ್ಪಂದದ ಅನ್ವಯ ಐಸಿಸಿ ಖಜಾನೆಗೆ ದಾಖಲಾಗಿದ್ದು  ₹2,530 ಕೋಟಿ. ಇಎಸ್‌ಪಿಎನ್‌ ಸಂಸ್ಥೆಯು ₹16,400 ಕೋಟಿ ನೀಡಿ 2011ರ ವಿಶ್ವಕಪ್‌ ಪ್ರಸಾರದ ಹಕ್ಕು ಖರೀದಿಸಿತ್ತು.

ಆಗ 220 ದೇಶಗಳಲ್ಲಿ ಪಂದ್ಯಗಳನ್ನು ನೇರ ಪ್ರಸಾರ ಮಾಡಿದ್ದು ದಾಖಲೆಯ ಪುಟ ಸೇರಿತ್ತು. ಆ ಟೂರ್ನಿಯ ಪಂದ್ಯಗಳನ್ನು ವಿಶ್ವದಾದ್ಯಂತ ಒಟ್ಟು 220 ಕೋಟಿ ಮಂದಿ ವೀಕ್ಷಿಸಿದ್ದರು. ಹೀಗಾಗಿ 2015ರ ವಿಶ್ವಕಪ್‌ನ ಪ್ರಾಯೋಜಕತ್ವಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಆಗಲೂ ಇಎಸ್‌ಪಿಎನ್‌ ಸಂಸ್ಥೆಯ ಕೈ ಮೇಲಾಗಿತ್ತು.

ಈಗ ಇಂಗ್ಲೆಂಡ್‌ನಲ್ಲಿ ಮತ್ತೆ ವಿಶ್ವಕಪ್ ಕಲರವ ಶುರುವಾಗಿದೆ. ಈ ಬಾರಿ ಮಾಧ್ಯಮ ಹಕ್ಕುಗಳಿಂದಲೇ ಐಸಿಸಿಗೆ  ₹1,200 ಕೋಟಿಯಿಂದ ₹1,500 ಕೋಟಿ ಆದಾಯ ಸಂದಿದೆ.

ಇದನ್ನೂ ಓದಿ: ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಧೋನಿ ಔಟ್: ಮುಗಿಯಿತೇ ಕ್ರಿಕೆಟ್ ಬದುಕು?

‘ದಾದಾ’ ಯುಗ

ಪಂಕಜ್ ರಾಯ್ ನಂತರ ಬಂಗಾಳದಿಂದ ಕ್ರಿಕೆಟ್‌ ಲೋಕಕ್ಕೆ ದೊರಕಿದ ಪ್ರತಿಭೆ ಸೌರವ್ ಗಂಗೂಲಿ. ತಮ್ಮ ಆಕ್ರಮಣಕಾರಿ ಶೈಲಿಯ ನಾಯಕತ್ವ ಮತ್ತು ಆಟದ ಮೂಲಕ ‘ದಾದಾ’ (ಬಂಗಾಳಿಯಲ್ಲಿ  ಅಣ್ಣ ಎಂದರ್ಥ) ಎಂದೇ ಖ್ಯಾತರಾದರವು. ಅವರು ತಂಡದ ನಾಯಕನ ಹೊಣೆ ಹೊತ್ತಾಗ ದೊಡ್ಡ ಸವಾಲು ಇತ್ತು. ಫಿಕ್ಸಿಂಗ್ ಕಳಂಕದ ಮಸಿಯನ್ನು ತೊಳೆದು ಹಾಕಿ, ಜನಪ್ರಿಯತೆ ಹೆಚ್ಚಿಸುವುದಾಗಿತ್ತು. ಆಗ ತಂಡದಲ್ಲಿ ಸಚಿನ್ ತೆಂಡೂಲ್ಕರ್,ಕನ್ನಡಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ವೀರೇಂದ್ರ ಸೆಹ್ವಾಗ್,  ಹರಭಜನ್ ಸಿಂಗ್ ಅವರಿದ್ದದ್ದು ಸೌರವ್‌ಗೆ ಅನುಕೂಲವಾಯಿತು. ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಮಹೇಂದ್ರಸಿಂಗ್ ಧೋನಿ ಅವರಂತಹ ಪ್ರತಿಭೆಗಳ ಶೋಧಕ್ಕೂ ದಾದಾ ಕಾರಣರಾದರು. 2002ರಲ್ಲಿ ಇಂಗ್ಲೆಂಡ್‌ನಲ್ಲಿ ನ್ಯಾಟ್‌ವೆ್ಸ್ಟ್ ಸರಣಿಯ ಫೈನಲ್‌ನಲ್ಲಿ ಯುವಿ ಮತ್ತು ಕೈಫ್ ಆಟವನ್ನು ಯಾರಾದರೂ ಮರೆಯಲು ಸಾಧ್ಯವೇ? ದಾದಾ ತಮ್ಮ ಜರ್ಸಿ ತೆಗೆದು ಗಾಳಿಯಲ್ಲಿ ತಿರುವಿದ್ದು ನೆನಪಿನಂಗಳದಿಂದ ಮರೆಯಾಗುವುದೇ? ತವರಿನಲ್ಲಿ ಹುಲಿ, ವಿದೇಶದಲ್ಲಿ ಇಲಿ ಎಂಬ ಪಟ್ಟವನ್ನು ಭಾರತ ತಂಡವು ಕಳಚಿಕೊಂಡಿದ್ದು ಗಂಗೂಲಿ ಬಳಗದ ಕಾಲದಲ್ಲಿಯೇ. ನ್ಯೂಜಿಲೆಂಡ್, ಪಾಕಿಸ್ತಾನ, ಜಿಂಬಾಬ್ವೆ, ವೆಸ್ಟ್‌ ಇಂಡೀಸ್‌ಗಳಲ್ಲಿ ಜಯಭೇರಿ ಬಾರಿಸಿದ ಗಂಗೂಲಿ ಪಡೆಯು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಕ್ಕೂ ಭೀತಿ ಮೂಡಿಸಿತ್ತು. ಸಚಿನ್ ತೆಂಡೂಲ್ಕರ್‌ ಬ್ಯಾಟಿಂಗ್‌  ಶೇನ್ ವಾರ್ನ್ ಮತ್ತು ಮೆಕ್‌ಗ್ರಾ ಅವರಂತಹ ಬೌಲರ್‌ಗಳ ನಿದ್ದೆಗೆಡಿಸಿತ್ತು. ದ್ರಾವಿಡ್, ಲಕ್ಷ್ಮಣ್ ಅವರ ಕಲಾತ್ಮಕ ಬ್ಯಾಟಿಂಗ್‌ಗೆ ಕ್ರಿಕೆಟ್ ಜಗತ್ತು ತಲೆದೂಗಿತ್ತು. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ ಪಂದ್ಯಗಳತ್ತ ಜನರ ಮನ ಹೊರಳಿತು. ಕೋಲ್ಕತ್ತ ಈಡನ್ ಗಾರ್ಡನ್ ಅಂಗಳದಲ್ಲಿ ರಾಹುಲ್ ಮತ್ತು ಲಕ್ಷ್ಮಣ್ ಅವರ ಐತಿಹಾಸಿಕ ಜೊತೆಯಾಟವು ಟೆಸ್ಟ್‌ ಮಾದರಿಯ ಶ್ರೀಮಂತಿಕೆಯನ್ನು ಹೆಚ್ಚಿಸಿದವು.

ಬಲಿಷ್ಠ ಆರಂಭಿಕ ಜೋಡಿ

ಸುಮಾರು ಒಂದು ದಶಕ ಕಾಡಿದ್ದ ಆರಂಭಿಕ ಬ್ಯಾಟಿಂಗ್ ಜೋಡಿಯ ಸಮಸ್ಯೆಯು ಕೂಡ ಈ ಅವಧಿಯಲ್ಲಿ ಪರಿಹಾರವಾಯಿತು. ಟೆಸ್ಟ್ ಕ್ರಿಕೆಟ್‌ನಲ್ಲಿ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಅವರ ಮೋಡಿಯು ಬಹಳಷ್ಟು ಕಾಲ  ಆವರಿಸಿತು. ನಾಲ್ಕನೇ ಕ್ರಮಾಂಕದಲ್ಲಿ ಸಚಿನ್ ತೆಂಡೂಲ್ಕರ್‌ ಕಣಕ್ಕಿಳಿಯುತ್ತಿದ್ದರು. ಇದು ಬ್ಯಾಟಿಂಗ್ ಕ್ರಮಾಂಕವನ್ನು ಬಲಿಷ್ಠಗೊಳಿಸಿತ್ತು. ಎಲ್ಲ ದೇಶಗಳ ಬೌಲರ್‌ಗಳಿಗೂ ಭಾರತದ ಬ್ಯಾಟಿಂಗ್ ಕಬ್ಬಿಣದ ಕಡಲೆಯಾಗಿತ್ತು. ಸೆಹ್ವಾಗ್, ಗಂಭೀರ್ ನಿವೃತ್ತಿಯ ನಂತರ ಇದೀಗ ರೋಹಿತ್ ಶರ್ಮಾ ಮತ್ತು ಮಯಂಕ್ ಅಗರವಾಲ್ ಅವರ ಜೋಡಿಯು ಯಶಸ್ವಿಯಾಗುತ್ತಿದೆ. ಆದರೆ ನಾಲ್ಕನೇ ಕ್ರಮಾಂಕ ತುಂಬುವವರ ಹುಡುಕಾಟ ಜಾರಿಯಲ್ಲಿದೆ.

ಕನ್ನಡಿಗರ ಕಾಣಿಕೆ

ಭಾರತದ ಕ್ರಿಕೆಟ್‌ ಯಶೋಗಾಥೆಯಲ್ಲಿ ಕನ್ನಡಿಗರ ಕಾಣಿಕೆಯೂ ಗಮನಾರ್ಹ. ಈ ಅವಧಿಯಲ್ಲಿ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಕೂಡ ಭಾರತ ತಂಡವನ್ನು ಕೆಲವು ವರ್ಷಗಳ ಕಾಲ ಮುನ್ನಡೆಸಿದ್ದರು. ಶಿಸ್ಸು ಮತ್ತು ಗೆಲುವಿನ ಮಂತ್ರವನ್ನು ಜಪಿಸುವ ಕಾಲ ಆರಂಭವಾಗಿದ್ದು ಇವರಿಂದಲೇ. ಸ್ವತಃ ತಮ್ಮ ಆಟದ ಮೂಲಕ ಮ್ಯಾಚ್ ವಿನ್ನರ್‌ಗಳಾಗಿದ್ದ ಇವರು ತಂಡದ ಇತರರಿಗೂ ಸ್ಪೂರ್ತಿಯಾಗಿದ್ದರು. ಇದರಿಂದಾಗಿ ಈ ಇಬ್ಬರ ನಾಯಕತ್ವದಲ್ಲಿ ಮತ್ತಷ್ಟು ಉತ್ತಮ ನಾಯಕರು ಬೆಳೆಯುವಂತಾಯಿತು.

ಧೋನಿ ‘ಮಹಿ’ಮೆ

ಗಂಗೂಲಿ, ಕುಂಬ್ಳೆ, ದ್ರಾವಿಡ್ ಹಾಕಿದ್ದ ಅಡಿಪಾಯದ ಮೇಲೆ ಸುಂದರ ಸೌಧ ಕಟ್ಟುವಲ್ಲಿ ಮಹೇಂದ್ರಸಿಂಗ್ ಧೋನಿ ಯಶಸ್ವಿಯಾದರು. ಆಟಗಾರರ ಫಿಟ್‌ನೆಸ್ ಮತ್ತು ಫೀಲ್ಡಿಂಗ್ ವಿಷಯಗಳಲ್ಲಿ ಧೋನಿ ತಂದ ಕಟ್ಟುನಿಟ್ಟಿನ ಕ್ರಮಗಳು ಚರ್ಚೆಗೂ ಗ್ರಾಸವಾದವು. ಕೆಲವು ಹಿರಿಯ ಆಟಗಾರರು ಸ್ಥಾನ ಕಳೆದುಕೊಳ್ಳಬೇಕಾಯಿತು. ಆದರೆ, ಧೋನಿಯ ನಾಯಕತ್ವ ಮತ್ತು ತಣ್ಣನೆಯ ತಾಳ್ಮೆಯ ಸ್ವಭಾವಕ್ಕೆ ಮೇಲುಗೈ ದೊರೆಯಿತು. ಸಣ್ಣ ಪಟ್ಟಣದಿಂದ ಹೊರಹೊಮ್ಮಿದ ಪ್ರತಿಭೆ ವಿಶ್ವದ ಅಗ್ರಮಾನ್ಯ ವಿಕೆಟ್‌ಕೀಪರ್ ಮತ್ತು ನಾಯಕನಾಗಿ ಬೆಳೆದರು.

2007ರಲ್ಲಿ ಮೊದಲ ಟಿ20 ವಿಶ್ವಕಪ್ ಗೆದ್ದ ಮೇಲಂತೂ ಧೋನಿ ಮಾತೇ ವೇದವಾಕ್ಯವಾಗತೊಡಗಿತು. 2008ರಲ್ಲಿ ಐಪಿಎಲ್ ಶುರುವಾದಾಗ ಧೋನಿ ಅಲೆ ಆಗಸದೆತ್ತರಕ್ಕೆ ವ್ಯಾಪಿಸಿತು. ಅವರ ನಾಯಕತ್ವದ ಚೆ್ನ್ನೈ ಸೂಪರ್ ಕಿಂಗ್ಸ್‌ ಗೆ ದೊಡ್ಡ ಅಭಿಮಾನಿ ಬಳಗ ಈಗಲೂ ಇದೆ. 2011ರಲ್ಲಿ  ಏಕದಿನ ವಿಶ್ವಕಪ್ ಗೆದ್ದ ಮೇಲಂತೂ ಧೋನಿ ಯಶಸ್ವಿ ನಾಯಕನ ಅಗ್ರಪಟ್ಟಕ್ಕೆ ಏರಿದರು. 2014ರಲ್ಲಿ ಟೆಸ್ಟ್ ಗೆ ವಿದಾಯ ಹೇಳಿದರು. ಆದರೆ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಮುಂದುವರಿದರು. ವಿರಾಟ್ ಕೊಹ್ಲಿಗೆ ನಾಯಕ ಪಟ್ಟ ಕಟ್ಟಿದರು. ಅವರ ನಾಯಕತ್ವದಲ್ಲಿ ಶಿಖರ್ ಧವನ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಾಹಲ್, ಸುರೇಶ್ ರೈನಾ, ಜೋಗಿಂದರ್ ಶರ್ಮಾ, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ಬೆಳೆದರು.  ಆದರೆ ಧೋನಿಯ ಆಟದ ಸರಿಸಮಕ್ಕೆ ಬೆಳೆಯುವಂತಹ ವಿಕೆಟ್‌ಕೀಪರ್ ಇನ್ನೂ ಸಿದ್ಧವಾಗಿಲ್ಲ.

ವಿರಾಟ್ ಪರ್ವ

ಸಚಿನ್ ತೆಂಡೂಲ್ಕರ್ ನಂತರ ಭಾರತದ ಕ್ರಿಕೆಟ್‌ಗೆ ಹೆಚ್ಚು ಗ್ಲಾಮರ್ ಮತ್ತು ಪ್ರಾಯೋಜಕತ್ವದ ಆದಾಯ ಬರಲು ಕಾರಣರಾದವರು ವಿರಾಟ್ ಕೊಹ್ಲಿ. ಅವರ ಬ್ಯಾಟಿಂಗ್ ಮತ್ತು ಆಕ್ರಮಣಕಾರಿ ಸ=ಶೈಲಿಯ ನಾಯಕತ್ವದಿಂದಾಗಿ ಇದು ಸಾಧ್ಯವಾಗಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ಗಳಲ್ಲಿ ಅವರ ನಾಯಕತ್ವದ ತಂಡವು ಟೆಸ್ಟ್, ಏಕದಿನ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿದೆ. ಅವರ ಬ್ಯಾಟ್‌ನಿಂದ ಹರಿಯುತ್ತಿರುವ ರನ್‌ಗಳ ವೇಗಕ್ಕೆ ಸಚಿನ್ ಮತ್ತಿತರ ಹಳೆಯ ದಾಖಲೆಗಳು ಕೊಚ್ಚಿಹೋಗುತ್ತಿವೆ. ಐಸಿಸಿ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಕೊಹ್ಲಿ ಸದ್ಯದ ಮಟ್ಟಿಗೆ ಭಾರತದ ಕ್ರಿಕೆ್ಟ್‌ನ ಸೂಫರ್ ಸ್ಟಾರ್ ಆಗಿದ್ದಾರೆ. ಆದರೆ ಯಾವುದೇ ಮಾದರಿಯಲ್ಲಿ ವಿಶ್ವಕಪ್ ಜಯಿಸಲು ಅವರಿಗೆ ಸಾಧ್ಯವಾಗಿಲ್ಲ.

ಟೀಮ್ ಇಂಡಿಯಾದ ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್

20 ವರ್ಷಗಳಲ್ಲಿ ಪ್ರಮುಖ ವಿವಾದಗಳು

* ನಾಯಕ ಸೌರವ್ ಗಂಗೂಲಿ ಮತ್ತು ಕೋಚ್ ಗ್ರೇಗ್ ಚಾಪೆಲ್ ನಡುವಣ ಭಿನ್ನಾಭಿಪ್ರಾಯ. ತಂಡದ ಬಹುತೇಕ ಆಟಗಾರರು ಚಾಪೆಲ್ ವಿರುದ್ಧ ನಿಂತಿದ್ದರು.

* 2007ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಹೀನಾಯ ಸೋಲು

* 2008ರಲ್ಲಿ ಐಪಿಎಲ್ ಪಂದ್ಯವೊಂದರ ನಂತರ ಕಿಂಗ್ಸ್‌ ಪಂಜಾಬ್‌ ಇಲೆವನ್ ತಂಡದಲ್ಲಿದ್ದ ಹರಭಜನ್ ಸಿಂಗ್ ಅವರು ಸಹ ಆಟಗಾರ, ಮಧ್ಯಮವೇಗಿ ಎಸ್. ಶ್ರೀಶಾಂತ್‌ ಕಪಾಳಕ್ಕೆ ಹೊಡೆದ್ದಿದ್ದರು. ನಂತರ ಕ್ಷಮೆಯಾಚಿಸಿದ್ದರು.

* 2010ರಲ್ಲಿ ಐಪಿಎಲ್ ಆಡಳಿತ ಮಂಡಳಿ ಮುಖ್ಯಸ್ಥ ಲಲಿತ್ ಮೋದಿ ಮೇಲೆ ಬಿಡ್‌ಪ್ರಕ್ರಿಯೆಯಲ್ಲಿ ಅವ್ಯವಹಾರ, ಟಿವಿ ಹಕ್ಕು ಖರೀದಿಯಲ್ಲಿ ಅವ್ಯವಹಾರ, ಹಣ ದುರುಪಯೋಗ, ಕೊಚ್ಚಿ ಟಸ್ಕರ್ಸ್‌ ತಂಡದ ಪದಾಧಿಕಾರಿಗಳಿಗೆ ಜೀವ ಬೆದರಿಕೆ. ಹಣದ ದುರುಪಯೋಗ ಮತ್ತಿತರ ಆರೋಪಗಳು ದಾಖಲಾದವು.ಇದನ್ನು ಮೋದಿಗೇಟ್ ಹಗರಣ ಎಂದು ಕರೆಯಲಾಗುತ್ತದೆ. ಆಗ ಭಾರತದಿಂದ ಓಡಿ ಹೋಗಿರುವ ಲಲಿತ್ ಮೋದಿ, ಇಂಗ್ಲೆಂಡ್ ಪೋರ್ಚುಗಲ್‌ನಲ್ಲಿ ಇರುವುದಾಗಿ ಮಾಹಿತಿ ಇದೆ.

* 2013ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಬೆಳಕಿಗೆ.  ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಎಸ್. ಶ್ರೀಶಾಂತ್ ಮತ್ತು ಇನ್ನೂ ಮೂವರು ಆಟಗಾರರನ್ನು ಪೊಲೀಸರು ಬಂಧಿಸಿದರು.

* ಸ್ಪಾಟ್ ಫಿಕ್ಷಿಂಗ್‌ನಲ್ಲಿ ಭಾಗಿಯಾದ ಆರೋಪದಲ್ಲಿ ಎನ್. ಶ್ರೀನಿವಾಸನ್ ಒಡೆತನದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜ್ ಕುಂದ್ರಾ–ಶಿಲ್ಪಾ ಶೆಟ್ಟಿ ಮಾಲೀಕತ್ವದ ರಾಜಸ್ಥಾನ ರಾಯಲ್ಸ್‌ ತಂಡಗಳನ್ನು ಎರಡು ವರ್ಷ ನಿಷೇಧಿಸಲಾಯಿತು.

* ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರನ್ನು ಪದಚ್ಯುತಗೊಳಿಸಲಾಯಿತು.

* ಬಿಸಿಸಿಐನಲ್ಲಿ ಸ್ವಜನ ಪಕ್ಷಪಾತ, ಅವ್ಯವಹಾರಗಳನ್ನು ಗಮನಿಸಿದ ಸುಪ್ರೀಂ ಕೋರ್ಟ್‌  ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯನ್ನು ನೇಮಕ ಮಾಡಿತು. ಮಂಡಳಿಯಲ್ಲಿ ಆಡಳಿತ ಸುಧಾರಣೆಗೆ ಶಿಫಾರಸು ಮಾಡಲು ಸೂಚಿಸಿತು.

* ಲೋಧಾ ಸಮಿತಿಯು ಸಲ್ಲಿಸಿದ ಶಿಫಾರಸುಗಳಿಗೆ ಬಿಸಿಸಿಐ ಮತ್ತು ಕೆಲವು ರಾಜ್ಯ ಕ್ರಿಕೆಟ್‌ ಸಂಸ್ಥೆಗಳು  ಆಕ್ಷೇಪ ವ್ಯಕ್ತಪಡಿಸಿದವು. ಹಿತಾಸಕ್ತಿ ಸಂಘರ್ಷ ನಿಯಮ, 70 ವರ್ಷಮೇಲಿನವರ ಸದಸ್ಯತ್ವ ರದ್ದು, ಕೂಲಿಂಗ್ ಆಫ್‌ ಅವಧಿ ನಿಯಮಗಳ ಬಗ್ಗೆ ತಕರಾರು ಎತ್ತಿದವು.

* 2017ರಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಶ್ರೀಕಾಂತ ಶಿರ್ಕೆ ಅವರನ್ನು ಪದಚ್ಯುತಗೊಳಿಸಲಾಯಿತು. ಸುಪ್ರೀಂ ಕೋರ್ಟ್‌ ನೇಮಕ ಮಾಡಿದ ಕ್ರಿಕೆಟ್ ಆಡಳಿತ ಸಮಿತಿಯು ಎರಡೂವರೆ ವರ್ಷ ಕಾರ್ಯನಿರ್ವಹಿಸಿತು. ಹೋದ ಅಕ್ಟೋಬರ್‌ನಲ್ಲಿ ಹೊಸ ನಿಯಮಾವಳಿ ಜಾರಿ ಮಾಡಿದ ನಂತರ. ಚುನಾವಣೆ ನಡೆಯಿತು. ಸೌರವ್ ಗಂಗೂಲಿ ಅಧ್ಯಕ್ಷರಾದರು.

 ಅಪರೂಪದ ದಾಖಲೆಗಳು

* 2002ರಲ್ಲಿ ಇಂಗ್ಲೆಂಡ್‌ನಲ್ಲಿ ನ್ಯಾಟ್‌ವೆಸ್ಟ್‌ ಸರಣಿ ಟ್ರೋಫಿ ಗೆಲುವು

*2003ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿದ್ದು

* ಟೆಸ್ಟ್ ಕ್ರಿಕೆಟ್‌ನಲ್ಲಿ ರಾಹುಲ್ ದ್ರಾವಿಡ್ ಅತಿ ಹೆಚ್ಚು ಎಸೆತಗಳನ್ನು (31258) ಎದುರಿಸಿದ ದಾಖಲೆ. 

* 2007ರಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಬಳಗವು ದಕ್ಷಿಣ ಆಫ್ರಿಕಾದಲ್ಲಿ ಟ್ವೆಂಟಿ–20 ವಿಶ್ವಕಪ್ ಜಯಿಸಿತು.

* ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿ ಆರಂಭ

* 2010ರ ಫೆಬ್ರುವರಿಯಲ್ಲಿ ಸಚಿನ್ ತೆಂಡೂಲ್ಕರ್ ಗ್ವಾಲಿಯರ್‌ನಲ್ಲಿ ದಕ್ಷಿಣ  ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅಜೇಯ ದ್ವಿಶತಕ ದಾಖಲಿಸಿ ವಿಶ್ವದಾಖಲೆ ಬರೆದರು. ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗನಾದರು.

* 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಮಹೇಂದ್ರಸಿಂಗ್ ಧೋನಿ ಬಳಗ

* 2012ರಲ್ಲಿ ವೀರೇಂದ್ರ ಸೆಹ್ವಾಗ್ ಇಂದೋರ್‌ನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿ ಸಚಿನ್ ದಾಖಲೆಯನ್ನು ಮೀರಿದರು.

* ಭಾರತವು  ಆಸ್ಟ್ರೇಲಿಯಾ ಎದುರು ಮೊದಲ ಸಲ 4–0ಯಿಂದ ಟೆಸ್ಟ್ ಸರಣಿ ಜಯಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು