ಗುರುವಾರ , ಫೆಬ್ರವರಿ 27, 2020
19 °C

ಟೆಸ್ಟ್ ತಂಡಕ್ಕೆ ಮರಳಿದ ಪೃಥ್ವಿ ಶಾ; ರೋಹಿತ್ ಶರ್ಮಾ ಬದಲು ಮಯಂಕ್‌ಗೆ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಉಪನಾಯಕ ರೋಹಿತ್ ಶರ್ಮಾ ಗಾಯದ ಸಮಸ್ಯೆಗೆ ಒಳಗಾಗಿದ್ದು, ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ. ರೋಹಿತ್ ಬದಲು ಟೆಸ್ಟ್ ಸರಣಿಯಲ್ಲಿ ಪೃಥ್ವಿ ಶಾ ಮತ್ತು ಏಕದಿನ ಪಂದ್ಯಗಳಲ್ಲಿ ಮಯಂಕ್‌ ಅಗರವಾಲ್‌ಗೆ ಅವಕಾಶ ನೀಡಲಾಗಿದೆ.

ಕಳೆದ ವರ್ಷ ಅಮೋಘ ಪ್ರದರ್ಶನದೊಂದಿಗೆ ಟೆಸ್ಟ್‌ ಕ್ರಿಕೆಟ್‌ಗೆ ವಾಪಸ್‌ ಆಗಿದ್ದ ರೋಹಿತ್‌ ಶರ್ಮಾ, ಆರಂಭಿಕನಾಗಿ ವಿದೇಶದಲ್ಲಿ ಆಡಲಿರುವ ಮೊದಲ ಸರಣಿ ಇದಾಗಲಿತ್ತು. ಆದರೆ ಗಾಯದ ಸಮಸ್ಯೆಯಿಂದ ಅವರು ಪಂದ್ಯದಿಂದ ಹೊರಗುಳಿಯಲಿದ್ದಾರೆ.

ನ್ಯೂಜಿಲೆಂಡ್‌ ತಂಡದ ವಿರುದ್ಧ ಮೂರು ಪಂದ್ಯಗಳ ಏಕದಿನ ಮತ್ತು ಐದು ಪಂದ್ಯಗಳ ಟೆಸ್ಟ್‌ ಸರಣಿ ಬುಧವಾರದಿಂದ ಆರಂಭವಾಗಲಿದೆ.

ಭಾನುವಾರ ಮುಕ್ತಾಯವಾದ ಟಿ20 ಸರಣಿಯ ಕೊನೆಯ ಪಂದ್ಯದಿಂದ ನಾಯಕ ವಿರಾಟ್‌ ಕೊಹ್ಲಿ ಹೊರಗುಳಿದಿದ್ದರು. ಹೀಗಾಗಿ ತಂಡ ಮುನ್ನಡೆಸುವ ಜವಾಬ್ದಾರಿ ಹೊತ್ತ ರೋಹಿತ್‌, ಬ್ಯಾಟಿಂಗ್‌ ವೇಳೆ ಸ್ನಾಯು ಸೆಳೆತಕ್ಕೊಳಗಾಗಿದ್ದರು. ನಿವೃತ್ತಿ ಪಡೆದು ಮೈದಾನದಿಂದ ಹೊರನಡೆದಿದ್ದ ಅವರು, ಬಳಿಕ ಮೈದಾನಕ್ಕಿಳಿದಿರಲಿಲ್ಲ. ರೋಹಿತ್ ಬದಲು ಕನ್ನಡಿಗ ಕೆ.ಎಲ್‌.ರಾಹುಲ್‌ ತಂಡ ಮುನ್ನಡೆಸಿದ್ದರು.

ಆ ಪಂದ್ಯವನ್ನು ಕೇವಲ 7 ರನ್‌ ಗಳಿಂದ ಗೆದ್ದುಕೊಂಡ ಭಾರತ, ನ್ಯೂಜಿಲೆಂಡ್‌ನಲ್ಲಿ ಸರಣಿ ಗೆದ್ದ ಸಾಧನೆ ಮಾಡಿತು. ಮಾತ್ರವಲ್ಲದೆ ಚುಟುಕು ಕ್ರಿಕೆಟ್‌ನಲ್ಲಿ 5 ಪಂದ್ಯಗಳ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದ ಮೊದಲ ತಂಡ ಎಂಬ ದಾಖಲೆಯನ್ನೂ ಬರೆಯಿತು.

ಭಾರತ ತಂಡ:  ವಿರಾಟ್ ಕೊಹ್ಲಿ (ನಾಯಕ), ಮಯಂಕ್ ಅಗ್ರವಾಲ್, ಪೃಥ್ವಿ ಶಾ, ಶುಭಂ ಗಿಲ್, ಚೇತೇಶ್ವರ ಪೂಜಾರ,  ಅಜಿಂಕ್ಯ ರೆಹಾನೆ (ಉಪ ನಾಯಕ) , ಹನುಮ ವಿಹಾರಿ, ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ರಿಷಬ್ ಪಂತ್  (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜ,  ಜಸ್‌ಪ್ರೀತ್ ಬೂಮ್ರಾ, ಉಮೇಶ್ ಯಾದವ್,  ಮೊಹಮ್ಮದ್ ಶಮಿ, ನವ್‌ದೀಪ್ ಸೈನಿ,  ಇಶಾಂತ್ ಶರ್ಮಾ (ಆಡಲು ಫಿಟ್ ಆಗಿದ್ದರೆ ಮಾತ್ರ).
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು