ಭಾನುವಾರ, ಮೇ 9, 2021
25 °C
ಮುರಿಯದ 3ನೇ ವಿಕೆಟ್‌ಗೆ ದ್ವಿಶತಕದ ಜೊತೆಯಾಟ; ಶೆಲ್ಡನ್ ಔಟಾಗದೆ 99, ಸುಚಿತ್‌ಗೆ 2 ವಿಕೆಟ್

ರಣಜಿ ಕ್ರಿಕೆಟ್: ಚೇತೇಶ್ವರ್ ಪೂಜಾರ ಶತಕಗಳ 'ಅರ್ಧಶತಕ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್‌ಕೋಟ್: ಮಧ್ಯಮವೇಗಿಗಳಾದ ಅಭಿಮನ್ಯು ಮಿಥುನ್ ಮತ್ತು ಕೌಶಿಕ್ ವಾಸುಕಿ ಅವರಿಗೆ ವಿಶ್ರಾಂತಿ ನೀಡಿ ಕಣಕ್ಕಿಳಿದ ಕರ್ನಾಟಕ ತಂಡವು ಶನಿವಾರ ಇಡೀ ದಿನ ಪರಿತಪಿಸಬೇಕಾಯಿತು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 50ನೇ ಶತಕ ಬಾರಿಸಿದ ಚೇತೇಶ್ವರ್ ಪೂಜಾರ (ಬ್ಯಾಟಿಂಗ್ 162; 238ಎಸೆತ, 17ಬೌಂಡರಿ, 1ಸಿಕ್ಸರ್) ಮತ್ತು ಶೆಲ್ಡನ್ ಜಾಕ್ಸನ್ (ಬ್ಯಾಟಿಂಗ್ 99; 191ಎ, 4ಬೌಂ, 2ಸಿ) ಅವರ ಜೊತೆಯಾಟವನ್ನು ಮುರಿಯಲು ಶ್ರೇಯಸ್ ಗೋಪಾಲ್‌ ಬಳಗಕ್ಕೆ ಇಡೀ ದಿನ ಸಾಧ್ಯವಾಗಲಿಲ್ಲ. ಇದರ ಫಲವಾಗಿ ಸೌರಾಷ್ಟ್ರ ತಂಡವು ‘ಬಿ’ ಗುಂಪಿನ ರಣಜಿ ಪಂದ್ಯದ ಮೊದಲ ದಿನ 90 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 296 ರನ್ ಗಳಿಸಿ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿತು.

ಕರುಣ್ ನಾಯರ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿರುವ ಶ್ರೇಯಸ್ ಸೇರಿದಂತೆ ಆರು ಬೌಲರ್‌ಗಳನ್ನೂ ಸೌರಾಷ್ಟ್ರದ ಜೋಡಿ ಕಾಡಿತು. ಬೆಳಿಗ್ಗೆ  ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸೌರಾಷ್ಟ್ರಕ್ಕೆ ‘ಮೈಸೂರು ಹುಡುಗ’ ಜೆ. ಸುಚಿತ್ ಆರಂಭದಲ್ಲಿಯೇ ಆಘಾತ ನೀಡಿದರು. ಇನಿಂಗ್ಸ್‌ನ 17ನೇ ಓವರ್‌ನಲ್ಲಿ ಸ್ನೆಲ್ ಪಟೇಲ್ (16; 53ಎಸೆತ, 2ಬೌಂಡರಿ) ಮತ್ತು  21ನೇ ಓವರ್‌ನಲ್ಲಿ ಹರ್ವಿಕ್ ದೇಸಾಯಿ (13; 59ಎ, 2ಬೌಂ) ಅವರ ವಿಕೆಟ್‌ಗಳನ್ನು ಗಳಿಸಿದರು. ಆದರೆ ಇದರ ನಂತರ ಸಂಭ್ರಮಿಸುವ ಅವಕಾಶ ಶ್ರೇಯಸ್ ಬಳಗಕ್ಕೆ ಸಿಗಲಿಲ್ಲ. ‘ಟೆಸ್ಟ್ ಪರಿಣತ’ ಪೂಜಾರ ಅವರ ಆಟದ ಸೊಗಡು ಮಾಧವರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ತುಂಬಿತು. ಮುರಿಯದ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 263 ರನ್‌ಗಳು ಹರಿದುಬಂದವು.

ಸ್ಪಿನ್ನರ್‌ಗಳಿಗೆ ಸ್ವೀಪ್, ಮಧ್ಯಮವೇಗಿಗಳಿಗೆ ಆಕರ್ಷಕ ಡ್ರೈವ್‌ಗಳ ಮೂಲಕ ಉತ್ತರ ಕೊಟ್ಟ ಪೂಜಾರ ಖಾತೆಗೆ ರನ್‌ಗಳು ಹರಿದುಬಂದವು. ‘ಸೌರಾಷ್ಟ್ರದ ಗೋಡೆ’ ಪೂಜಾರಗೆ ಇದು 198ನೇ ಪಂದ್ಯ. ಊಟದ ವಿರಾಮದ ಹೊತ್ತಿಗೆ 158 ಎಸೆತಗಳಲ್ಲಿ ಶತಕ ಪೂರೈಸಿದರು. ಇದರೊಂದಿಗೆ ಪಾಲಿ ಉಮ್ರಿಗರ್ (49 ಶತಕಗಳು) ಅವರ ದಾಖಲೆಯನ್ನು ಮುರಿದರು. ಇದೇ ತಿಂಗಳು ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಪೂಜಾರ ಆಡಲಿದ್ದಾರೆ. ಅದಕ್ಕಾಗಿ ಇಲ್ಲಿಯೇ ಅವರು ಅಭ್ಯಾಸ ಮಾಡುವ ರೀತಿಯಲ್ಲಿ ಆಡಿದರು. ಅವರ ಜೊತೆಗೂಡಿದ ಅನುಭವಿ ಆಟಗಾರ ಶೆಲ್ಡನ್ ಕೂಡ ಶತಕದ ಹೊಸ್ತಿಲಲ್ಲಿದ್ದಾರೆ. ಅವರು 98 ರನ್‌ ಗಳಿಸಿದ್ದ ಸಂದರ್ಭದಲ್ಲಿ ಬಿ.ಆರ್. ಶರತ್ ಕ್ಯಾಚ್ ಕೈಚೆಲ್ಲಿದರು. ಇದರಿಂದಾಗಿ ಶೆಲ್ಡನ್ ಶತಕದ ಆಸೆ ಜೀವಂತವಾಗಿದೆ.  

ಮಧ್ಯಮವೇಗಿ ರೋನಿತ್ ಮೋರೆ, ಯುವ ಬೌಲರ್ ಪ್ರತೀಕ್ ಜೈನ್, ಪದಾರ್ಪಣೆ ಪಂದ್ಯ ಆಡಿದ ಪ್ರವೀಣ ದುಬೆ ಅವರು ವಿಕೆಟ್ ಗಳಿಸಲಿಲ್ಲ. ಎಡಗೈ ಮಧ್ಯಮವೇಗಿ ಜೈನ್ ಹೆಚ್ಚು ರನ್‌ ಕೊಡಲಿಲ್ಲ. ಆದರೆ, ವಿಕೆಟ್ ಗಳಿಸಲಿಲ್ಲ. ದಾಳಿಯಲ್ಲಿ  ಅನುಭವದ ಕೊರತೆ ಎದ್ದುಕಂಡಿತು. ಸಪಾಟು ಪಿಚ್‌ನಲ್ಲಿ ದಿನಗಳೆದಂತೆ ಬ್ಯಾಟಿಂಗ್ ಸುಲಭವಾಗುವುದಿಲ್ಲ. ಆದರೆ ಸ್ಪಿನ್ನರ್‌ಗಳಿಗೆ ಅನುಕೂಲವಾಗುವ ಸಾಧ್ಯತೆ ಹೆಚ್ಚಿದೆ. ಸೌರಾಷ್ಟ್ರವು ದೊಡ್ಡ ಮೊತ್ತ ಕಲೆಹಾಕಿದರೆ ಕರ್ನಾಟಕ ತಂಡಕ್ಕೆ ಕಠಿಣ ಸವಾಲು ಎದುರಾಗುವುದು ಖಚಿತ.

ಮಿತ್ ವರ್ಮಾ ಸುಂದರ ಶತಕ
ಪುದುಚೇರಿ: ‘ಬೆಂಗಳೂರು ಹುಡುಗ’ ಅಮಿತ್ ವರ್ಮಾ (ಬ್ಯಾಟಿಂಗ್ 113) ಅವರ ಶತಕದ ಬಲದಿಂದ ಇಲ್ಲಿ ಶನಿವಾರ ಆರಂಭವಾದ ಗೋವಾ ತಂಡವು ಪುದುಚೇರಿ ತಂಡದ ಎದುರಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತ 
ಗಳಿಸಿದೆ.

ದಿನದಾಟದ ಅಂತ್ಯಕ್ಕೆ ಗೋವಾ ತಂಡವು 83 ಓವರ್‌ಗಳಲ್ಲಿ 7ಕ್ಕೆ 252  ರನ್‌ ಗಳಿಸಿತು. ಪುದುಚೇರಿ ತಂಡದಲ್ಲಿರುವ ಕನ್ನಡಿಗ ಆರ್. ವಿನಯಕುಮಾರ್ (65ಕ್ಕೆ2) ಉತ್ತಮ ಬೌಲಿಂಗ್ ಮಾಡಿದರು.


ಅಮಿತ್ ವರ್ಮಾ

ಸಂಕ್ಷಿಪ್ತ ಸ್ಕೋರು
ಪುದುಚೇರಿ ಸಿಎ ಮೈದಾನ: ಗೋವಾ: 83 ಓವರ್‌ಗಳಲ್ಲಿ 7ಕ್ಕೆ252 (ಸ್ಮಿತ್ ಪಟೇಲ್ 35, ಅಮಿತ್ ವರ್ಮಾ ಬ್ಯಾಟಿಂಗ್ 113, ಲಕ್ಷ್ಯ ಗರ್ಗ್ 29, ಆರ್. ವಿನಯಕುಮಾರ್ 65ಕ್ಕೆ2, ಆಶಿತ್ ರಾಜೀವ್ 35ಕ್ಕೆ2) –ಪುದುಚೇರಿ ಎದುರು

ರೋಹ್ಟಕ್: ಹರಿಯಾಣ: 31 ಓವರ್‌ಗಳಲ್ಲಿ 90 (ಶುಭಂ ರೋಹಿಲ್ಲಾ 20, ಸೂರ್ಯಕಾಂತ್ ಪ್ರಧಾನ್ 36ಕ್ಕೆ6, ರಾಜೇಶ್ ಮೊಹಾಂತಿ 30ಕ್ಕೆ2), ಒಡಿಶಾ: 53 ಓವರ್‌ಗಳಲ್ಲಿ 5ಕ್ಕೆ141 (ಬಿಪ್ಲವ್ ಸಾಮಂತ್ರೆ ಬ್ಯಾಟಿಂಗ್ 45, ರಾಜೇಶ್ ಧೂಪರ್ 24, ಸುಜಿತ್ ಲೆಂಕಾ ಬ್ಯಾಟಿಂಗ್ 21, ಹರ್ಷಲ್ ಪಟೇಲ್ 37ಕ್ಕೆ2)

ತಿರುವನಂತಪುರ: ಕೇರಳ: 75.2 ಓವರ್‌ಗಳಲ್ಲಿ 227 (ರಾಬಿನ್ ಉತ್ತಪ್ಪ 48, ಸಲ್ಮಾನ್ ನೈಜರ್ ಔಟಾಗದೆ 91, ಅಕ್ಷಯ್ ಚಂದ್ರನ್ 28, ಸಿದ್ಧಾರ್ಥ್ ಕೌಲ್ 47ಕ್ಕೆ3, ಬಲ್ತೇಜ್ ಸಿಂಗ್ 33ಕ್ಕೆ3, ವಿನಯ್ ಚೌಧರಿ 37ಕ್ಕೆ3) ಪಂಜಾಬ್: 12 ಓವರ್‌ಗಳಲ್ಲಿ 2ಕ್ಕೆ46 (ಗುರುಕೀರತ್ ಸಿಂಗ್ ಮಾನ್ ಬ್ಯಾಟಿಂಗ್ 16, ಮಯಂಕ್ ಮಾರ್ಕಂಡೆ ಬ್ಯಾಟಿಂಗ್ 12, ಎಂ.ಡಿ. ನಿಧೀಶ್ 15ಕ್ಕೆ2).

 ಚೆನ್ನೈ: ಮುಂಬೈ: 89.4 ಓವರ್‌ಗಳಲ್ಲಿ 6ಕ್ಕೆ284 (ಜೈ ಗೋಕುಲ್ ಬಿಷ್ಠ 41, ಭುಪೇನ್ ಲಾಲ್ವಾನಿ 21, ಹಾರ್ದಿಕ್ ಟಾಮೊರೆ 21, ಸರ್ಫರಾಜ್ ಖಾನ್ 36, ಶಮ್ಸ್ ಮಲಾನಿ 87, ಆದಿತ್ಯ ತಾರೆ ಬ್ಯಾಟಿಂಗ್ 69, ಆರ್. ಅಶ್ವಿನ್ 58ಕ್ಕೆ3, ರವಿಶ್ರೀನಿವಾಸನ್ ಸಾಯಿಕಿಶೋರ್ 77ಕ್ಕೆ3) –ತಮಿಳುನಾಡು ಎದುರು.

ದಿಮಾಪುರ್: ನಾಗಾಲ್ಯಾಂಡ್: 90 ಓವರ್‌ಗಳಲ್ಲಿ 5ಕ್ಕೆ356 (ತೆಮಜೆಂತೋಷಿ ಜಮೀರ್ 25, ಶ್ರೀಕಾಂತ್ ಮುಂಢೆ 166, ರಾಂಗ್ಸೆನ್ ಜೋನಾಥನ್ 49, ಹೊಕೈಟೊ ಝಿಮೊಮಿ 76, ಟೆಚಿ ನೇರಿ 91ಕ್ಕೆ2)– ಅರುಣಾಚಲ ಪ್ರದೇಶ ಎದುರು

ಪಾಲಂ, ದೆಹಲಿ: ಜಮ್ಮು–ಕಾಶ್ಮೀರ: 88 ಓವರ್‌ಗಳಲ್ಲಿ 7ಕ್ಕೆ338 (ಶುಭಂ ಖಜುರಿಯಾ 55, ಹೆನನ್ ಮಲಿಕ್ 22, ಪರ್ವೇಜ್ ರಸೂಲ್ ಬ್ಯಾಟಿಂಗ್ 171, ಅಕೀಬ್ ನಬಿ 30, ಅಬಿದ್ ಮುಷ್ತಾಕ್ ಬ್ಯಾಟಿಂಗ್ 27, ‍ಪೂನಂ ಪೂನಿಯಾ 99ಕ್ಕೆ3, ಸಚ್ಚಿದಾನಂದ ಪಾಂಡೆ 74ಕ್ಕೆ2, ದಿವೇಶ್ ಪಠಾಣಿಯಾ 95ಕ್ಕೆ2) –ಸರ್ವಿಸಸ್ ಎದುರು

ಕಾನ್ಪುರ: ಉತ್ತರಪ್ರದೇಶ: 88 ಓವರ್‌ಗಳಲ್ಲಿ 5ಕ್ಕೆ295 (ಐಮಸ್ ಶೌಕತ್ 48, ಅಕ್ಷದೀಪ್ ನಾಥ್ 24, ಮೊಹಮ್ಮದ್ ಸೈಫ್ 99, ರಿಂಕು ಸಿಂಗ್ 62, ಉಪೇಂದ್ರ ಯಾದವ್ ಬ್ಯಾಟಿಂಗ್ 38, ಅನುರೀತ್ ಸಿಂಗ್ 48ಕ್ಕೆ2) –ಬರೋಡಾ ಎದುರು

ಜೈಪುರ: ಗುಜರಾತ್:  90 ಓವರ್‌ಗಳಲ್ಲಿ 4ಕ್ಕೆ258 (ಪ್ರಿಯಾಂಕ್ ಪಾಂಚಾಲ್ 48, ಸಮಿತ್ ಗೋಯಲ್ 93, ಭಾರ್ಗವ್ ಮೆರೈ 54, ತನ್ವೀರ್ ಉಲ್ ಹಕ್ 48ಕ್ಕೆ2, ಋತುರಾಜ್ ಸಿಂಗ್ 64ಕ್ಕೆ2) –ರಾಜಸ್ಥಾನ ಎದುರು.

ನಾಗಪುರ: ಬಂಗಾಳ: 56 ಓವರ್‌ಗಳಲ್ಲಿ 170 (ಮನೋಜ್ ತಿವಾರಿ 48, ಋತ್ವಿಕ್ ಚೌಧರಿ 27, ಅಕ್ಷಯ್ ವಖ್ರೆ 56ಕ್ಕೆ5, ಆದಿತ್ಯ ಸರವಟೆ 53ಕ್ಕೆ4), ವಿದರ್ಭ: 32 ಓವರ್‌ಗಳಲ್ಲಿ 3ಕ್ಕೆ89 (ಫೈಜ್ ಫಜಲ್ 51).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು