ಮಂಗಳವಾರ, ಮಾರ್ಚ್ 2, 2021
19 °C
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿ: ಎಂಟರ ಘಟ್ಟಕ್ಕೆ ಪಂಜಾಬ್‌ ಪ್ರವೇಶ

ಕರ್ನಾಟಕದ ಕ್ವಾರ್ಟರ್ ಫೈನಲ್ ಆಸೆ ಜೀವಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಸ್ಪಿನ್ ಬಲೆಯಲ್ಲಿ ಸಿಲುಕಿಸಿದ ಕರ್ನಾಟಕ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಜಯ ಗಳಿಸಿ ಕ್ವಾರ್ಟರ್ ಫೈನಲ್ ಹಂತಕ್ಕೇರುವ ಕನಸನ್ನು ಜೀವಂತವಾಗಿ ಉಳಿಸಿಕೊಂಡಿತು. ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕರುಣ್ ನಾಯರ್ ಬಳಗ ಉತ್ತರಪ್ರದೇಶವನ್ನು ಐದು ವಿಕೆಟ್‌ಗಳಿಂದ ಮಣಿಸಿತು.

ಆಲೂರಿನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ತ್ರಿಪುರವನ್ನು ಸೋಲಿಸಿದ ಪಂಜಾಬ್ ಎಂಟರ ಘಟ್ಟ ಪ್ರವೇಶಿಸಿತು. ನಾಯಕ ಮನದೀಪ್ ಸಿಂಗ್ (ಔಟಾಗದೆ 99; 66 ಎಸೆತ, 9 ಬೌಂಡರಿ, 4 ಸಿಕ್ಸರ್‌) ಶತಕದಿಂದ ವಂಚಿತರಾದರು.

ಎಲೀಟ್ ‘ಎ‘ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಕರ್ನಾಟಕ ಎದುರಾಳಿಗಳನ್ನು 132 ರನ್‌ಗಳಿಗೆ ನಿಯಂತ್ರಿಸಿತು. ಎಡಗೈ ಸ್ಪಿನ್ನರ್ ಜೆ.ಸುಚಿತ್ ಮತ್ತು ಲೆಗ್‌ ಸ್ಪಿನ್ನರ್‌ ಪ್ರವೀಣ್ ದುಬೆ ತಲಾ ಮೂರು ವಿಕೆಟ್ ಉರುಳಿಸಿ ಉತ್ತರ ಪ್ರದೇಶದ ಪತನಕ್ಕೆ ಕಾರಣರಾದರು. 

ಸುಲಭ ಗುರಿ ಬೆನ್ನತ್ತಿದ ಆತಿಥೇಯರು 19.3 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿದರು. ಆರಂಭಿಕ ಬ್ಯಾಟ್ಸ್‌ಮನ್ ರೋಹನ್ ಕದಂ ಕೇವಲ ಐದು ರನ್ ಗಳಿಸಿ ಮರಳಿದರು. ನಂತರ ದೇವದತ್ತ ಪಡಿಕ್ಕಲ್ ಮತ್ತು ಕರುಣ್ ನಾಯರ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಮಧ್ಯಮ ಕ್ರಮಾಂಕದ ಅನಿರುದ್ಧ ಜೋಶಿ ಕೂಡ ಉತ್ತಮ ಕಾಣಿಕೆ ನೀಡಿದರು. ಆರನೇ ಕ್ರಮಾಂಕದ ಶ್ರೇಯಸ್ ಗೋಪಾಲ್ (47; 28 ಎ, 5 ಬೌಂ, 1 ಸಿ) ಅಜೇಯ ಆಟವಾಡಿ ಸುಲಭ ಜಯ ತಂದುಕೊಟ್ಟರು. 

ಉತ್ತರ ಪ್ರದೇಶದ ಆರಂಭಿಕ ಜೋಡಿಯಾದ ಅಭಿಷೇಕ್ ಗೋಸ್ವಾಮಿ (47; 32 ಎ, 5 ಬೌಂ, 2 ಸಿ) ಮತ್ತು ಕರ್ಣ ಶರ್ಮ (41; 29 ಎ, 2 ಬೌಂ, 3 ಸಿ) ಮಾತ್ರ ಎರಡಂಕಿ ಮೊತ್ತ ಗಳಿಸಿದರು. 69 ರನ್‌ಗಳ ಜೊತೆಯಾಟ ಆಡಿದ ಇವರಿಬ್ಬರ ವಿಕೆಟ್ ಸುಚಿತ್ ಗಳಿಸಿದರು. ಸುರೇಶ್ ರೈನಾ ಸೇರಿದಂತೆ ಎಂಟು ಬ್ಯಾಟ್ಸ್‌ಮನ್‌ಗಳು ಒಂದಂಕಿ ಮೊತ್ತ ಗಳಿಸಿ ಮರಳಿದರು. 

ಎಲೀಟ್‌ ಮತ್ತು ಪ್ಲೇಟ್ ಗುಂಪುಗಳಲ್ಲಿ ಅಗ್ರ ಸ್ಥಾನ ಗಳಿಸುವ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. ಉಳಿದ ಎರಡು ಸ್ಥಾನಗಳಿಗಾಗಿ ಇತರ ಎಲೀಟ್ ಗುಂಪುಗಳಲ್ಲಿ ಸ್ಪರ್ಧೆ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು: ಉತ್ತರ ಪ್ರದೇಶ: 20 ಓವರ್‌ಗಳಲ್ಲಿ 8ಕ್ಕೆ 132 (ಅಭಿಷೇಕ್ ಗೋಸ್ವಾಮಿ 47, ಕರ್ಣ ಶರ್ಮಾ 41, ಸುರೇಶ್ ರೈನಾ 4; ಜೆ.ಸುಚಿತ್ 21ಕ್ಕೆ3, ಪ್ರವೀಣ್ ದುಬೆ 15ಕ್ಕೆ3, ವಿ.ಕೌಶಿಕ್ 20ಕ್ಕೆ1, ಶ್ರೇಯಸ್ ಗೋಪಾಲ್ 22ಕ್ಕೆ1); ಕರ್ನಾಟಕ: 19.3 ಓವರ್‌ಗಳಲ್ಲಿ 5ಕ್ಕೆ136 (ದೇವದತ್ತ ಪಡಿಕ್ಕಲ್ 34, ಕರುಣ್ ನಾಯರ್ 21, ಅನಿರುದ್ಧ ಜೋಶಿ 21, ಶ್ರೇಯಸ್ ಗೋಪಾಲ್ 47; ಕರ್ಣ ಶರ್ಮಾ 23ಕ್ಕೆ2). ಫಲಿತಾಂಶ: ಕರ್ನಾಟಕಕ್ಕೆ 5 ವಿಕೆಟ್‌ಗಳ ಜಯ.

ಪಂಜಾಬ್‌: 20 ಓವರ್‌ಗಳಲ್ಲಿ 3ಕ್ಕೆ 183 (ಮನದೀಪ್ ಸಿಂಗ್ 99, ಗುರುಕೀರತ್ ಸಿಂಗ್ ಮಾನ್ 63); ತ್ರಿಪುರ: 20 ಓವರ್‌ಗಳಲ್ಲಿ 4ಕ್ಕೆ 161 (ಮಿಲಿಂದ್ ಕುಮಾರ್ 64, ಉದಿಯನ್ ಬೋಸ್ 50, ರಜತ್ ದೇಯ್ 38). ಫಲಿತಾಂಶ: ಪಂಜಾಬ್‌ಗೆ 22 ರನ್‌ಗಳ ಜಯ.

ಜಾರ್ಖಂಡ್‌ಗೆ ‘ಸೂಪರ್’ ಜಯ

ಈಡನ್ ಗಾರ್ಡನ್‌ನಲ್ಲಿ ನಡೆದ ಎಲೀಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಜಾರ್ಖಂಡ್ ತಂಡ ಸೂಪರ್ ಓವರ್‌ನಲ್ಲಿ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿತು. ವಡೋದರದಲ್ಲಿ ಗುಜರಾತ್ ವಿರುದ್ಧ 12 ರನ್‌ಗಳ ಜಯ ಗಳಿಸಿದ ಬರೋಡಾ ತಂಡ ಅಜೇಯ ಓಟದ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ಸಂಕ್ಷಿಪ್ತ ಸ್ಕೋರು: ಹೈದರಾಬಾದ್: 20 ಓವರ್‌ಗಳಲ್ಲಿ 9ಕ್ಕೆ 139 (ಬಿ.ಸಂದೀಪ್ 37, ಹಿಮಾಲಯ ಅಗರವಾಲ್ 26, ರಾಹುಲ್ ಬುದ್ಧಿ 26; ವಿವೇಕಾನಂದ ತಿವಾರಿ 25ಕ್ಕೆ3, ವಿಕಾಸ್ ಸಿಂಗ್ 36ಕ್ಕೆ3); ಜಾರ್ಖಂಡ್‌: 20 ಓವರ್‌ಗಳಲ್ಲಿ 9ಕ್ಕೆ 139 (ಉತ್ಕರ್ಷ್‌ ಸಿಂಗ್ 29, ಅನುಕೂಲ್ ರಾಯ್ 28, ಇಶಾನ್ ಕಿಶನ್ 27; ಅಜಯ್ ದೇವ್ 22ಕ್ಕೆ4). ಫಲಿತಾಂಶ: ಪಂದ್ಯ ಟೈ; ಸೂಪರ್ ಓವರ್‌ನಲ್ಲಿ ಜಾರ್ಖಂಡ್‌ಗೆ ಜಯ.

ಬರೋಡ: 20 ಓವರ್‌ಗಳಲ್ಲಿ 4ಕ್ಕೆ 176 (ವಿಷ್ಣು ಸೋಲಂಕಿ ಔಟಾಗದೆ 59, ಅಭಿಮನ್ಯು ಸಿಂಗ್ ರಜಪೂತ್ 34; ಅಕ್ಷರ್ ಪಟೇಲ್ 13ಕ್ಕೆ2); ಗುಜರಾತ್‌: 20 ಓವರ್‌ಗಳಲ್ಲಿ 9ಕ್ಕೆ 164 (ಧ್ರುವ್ ಪಟೇಲ್ 41, ಅಕ್ಷರ್ ‍ಪಟೇಲ್ 36; ನಿನಾದ ರಾಥ್ವ 4ಕ್ಕೆ3, ಭಾರ್ಗವ್ ಭಟ್ 28ಕ್ಕೆ2). ಫಲಿತಾಂಶ: ಬರೋಡಾಗೆ 12 ರನ್‌ಗಳ ಜಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು