ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive- ದೀಪಕ್ ಚಾಹರ್ ಬಾಲ್ಯದ ಕನಸು ನನಸಾದಾಗ..

Last Updated 21 ಜುಲೈ 2021, 14:51 IST
ಅಕ್ಷರ ಗಾತ್ರ

ಆಟದ ಮನೆ

***

ದೀಪಕ್ ಚಾಹರ್‌ಗೆ ಚಿಕ್ಕಂದಿನಲ್ಲೇ ಎಷ್ಟನೇ ಕ್ರಮಾಂಕದಲ್ಲಿಯೇ ಆಗಲಿ, ಬ್ಯಾಟಿಂಗ್ ಮಾಡಿ ಭಾರತಕ್ಕೆ ಪಂದ್ಯ ಗೆಲ್ಲಿಸಿಕೊಡಬೇಕು ಎಂಬ ಕನಸಿತ್ತು. ಅದು ಜುಲೈ 20ರಂದು ನನಸಾಯಿತು. ಶ್ರೀಲಂಕಾ ಎದುರು ಅವರು ಅವುಡುಗಚ್ಚಿ ಆಡಿ, ವಿಜಯವನ್ನು ಎಳೆದುಕೊಂಡು ಬಂದ ಬಗೆಯಲ್ಲಿ ಅವರ ವರ್ಷಗಳ ಬೆವರಿನ ಕಥೆಗಳೂ ಅಡಗಿವೆ.

***

ರಾಜಸ್ಥಾನ ಕ್ರಿಕೆಟ್‌ ಅಸೋಸಿಯೇಷನ್ ಅಕಾಡೆಮಿಯ ನಿರ್ದೇಶಕರಾಗಿದ್ದ ಗ್ರೆಗ್ ಚಾಪೆಲ್ 2008ರಲ್ಲಿ ಒಬ್ಬ ಬೌಲರ್‌ನ ಪ್ರದರ್ಶನ ಕಂಡು, ‘ಇವನು ಅಪ್ರಯೋಜಕ’ ಎಂದು ನಿರಾಕರಿಸಿದ್ದರು. ಹದಿನಾರರ ಹರೆಯದ ಆ ಹುಡುಗ ಕಂಗಾಲಾಗಲಿಲ್ಲ. ಮತ್ತೆ ಬೌಲಿಂಗ್ ಕರಾಮತ್ತನ್ನು ಮೊನಚು ಮಾಡಿಕೊಂಡ. ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ಪರವಾಗಿ ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್‌ನಲ್ಲಿ ಆಡಲು ಎರಡು ವರ್ಷದ ಅವಧಿಯಲ್ಲಿ ಅವಕಾಶ ಸಿಕ್ಕಿದ್ದು ಐದು ಪಂದ್ಯಗಳಲ್ಲಿಯಷ್ಟೆ. ಆಗ ಅವರ ಕೌಶಲವನ್ನು ಸೂಕ್ಷ್ಮವಾಗಿ ಗಮನಿಸಿದ್ದ ಮಹೇಂದ್ರ ಸಿಂಗ್ ಧೋನಿ ಸೀದಾ ಚೆನ್ನೈ ಸೂಪರ್‌ಕಿಂಗ್ಸ್‌ ತಂಡಕ್ಕೆ ಎಳೆದುಕೊಂಡರು.

2018ರಲ್ಲಿ ಹುಡುಗನ ಬದುಕಿನ ದೆಸೆ ಬದಲಾಯಿತು. ಆ ವರ್ಷ 12 ಪಂದ್ಯಗಳಲ್ಲಿ ಹತ್ತು ವಿಕೆಟ್‌ ಕಿತ್ತ ಪ್ರತಿಭಾವಂತ, 2019ರ ಐಪಿಎಲ್‌ ಋತುವಿನಲ್ಲಿ 17 ಪಂದ್ಯಗಳಲ್ಲಿ 22 ವಿಕೆಟ್‌ಗಳನ್ನು ಪಡೆದು ಬೀಗಿದ್ದನ್ನು ಕಂಡೆವು. ಹೊಸ ಚೆಂಡಿನಲ್ಲಿ ಈ ಯುವಕನಿಂದ ಮೂರು ಓವರ್‌ಗಳನ್ನು ಒಂದೇ ಸ್ಪೆಲ್‌ನಲ್ಲಿ ಮಾಡಿಸುವುದು ಧೋನಿ ತಂತ್ರವಾಯಿತು. ಅದು ಫಲ ಕೊಟ್ಟಿದ್ದಕ್ಕೆ ಪ್ರತಿ ಓವರ್‌ಗೆ ಏಳು ಚಿಲ್ಲರೆ ರನ್‌ಗಳನ್ನಷ್ಟೆ ಈ ಬೌಲರ್‌ ನೀಡುತ್ತಿದ್ದುದು ಉದಾಹರಣೆ.

ಧೋನಿ ಕೆಲವು ಪ್ರತಿಭೆಗಳನ್ನು ಹೇಗೆಲ್ಲ ಎದ್ದುಕಾಣುವಂತೆ ತೇಲಿಬಿಟ್ಟರು ಎನ್ನುವುದಕ್ಕೆ ದೀಪಕ್ ಮಗದೊಂದು ಉದಾಹರಣೆ. ಅವರು ಜುಲೈ 20ರಂದು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಎಂಟನೇ ಬ್ಯಾಟ್ಸ್‌ಮನ್‌ ಆಗಿ ಆಡಲು ಇಳಿದಾಗ ಭಾರತ ಗೆಲ್ಲುವುದು ಬಲು ಕಷ್ಟ ಎನ್ನುವ ಸ್ಥಿತಿ ಇತ್ತು. 160 ರನ್‌ಗಳಾಗುವಷ್ಟರಲ್ಲಿ ಆರು ವಿಕೆಟ್‌ ಕಳೆದುಕೊಂಡು, ಎದುರಲ್ಲಿ ಇನ್ನೂ ನೂರು ಚಿಲ್ಲರೆ ರನ್‌ಗಳನ್ನು ಇಟ್ಟುಕೊಂಡಿರುವಾಗ ಹೀಗೆಯೇ ತಾನೆ ಅನ್ನಿಸುವುದು? ಅವರು ಎರಡು ರನ್‌ ಗಳಿಸಲು 18 ಎಸೆತಗಳನ್ನು ಎದುರಿಸಿದಾಗ, ‘ಕಷ್ಟ ಕಷ್ಟ’ ಎಂದು ಮನಸೊಳಗೇ ಅಂದುಕೊಂಡವರಿಗೂ ಲೆಕ್ಕವಿಲ್ಲ.

ಆದರೆ, ದೀಪಕ್ ಗೆಲುವಿನ ದೀಪ ಹಚ್ಚಿಯೇ ಮೈದಾನದಿಂದ ಹೊರ ನಡೆದದ್ದು. 193ಕ್ಕೆ ಕೃಣಾಲ್ ಪಾಂಡ್ಯ ರೂಪದಲ್ಲಿ ಏಳನೇ ವಿಕೆಟ್‌ ಬಿದ್ದಾಗಲೂ ಅವರು ವಿಚಲಿತರಾಗಲಿಲ್ಲ. ಅದುವರೆಗೆ ಚಿಪ್ಪಿನೊಳಗೆ ಇರುವಂತೆ ಆಡುತ್ತಿದ್ದ ಅವರು, ಭುವನೇಶ್ವರ ಕುಮಾರ್ ಜತೆಯಾಟದಲ್ಲಿ ತಾವೇ ನುರಿತ ಬ್ಯಾಟ್ಸ್‌ಮನ್ ಎನ್ನುವ ರೀತಿ ಆಡತೊಡಗಿದರು. ಒಂದು ಸಿಕ್ಸರ್ ಹೊಡೆದ ಮೇಲಂತೂ ಅವರ ಆತ್ಮವಿಶ್ವಾಸ ಹೆಚ್ಚಾಯಿತು. 45 ಎಸೆತಗಳಲ್ಲಿ 23 ರನ್ ಸೇರಿಸಿದಾಗ ಕುದುರಿಕೊಂಡ ಅವರ ಆಟ ಕೊನೆಯಲ್ಲಿ 82 ಎಸೆತಗಳಲ್ಲಿ ಔಟಾಗದೆ 69 ಎಂಬ ವೈಯಕ್ತಿಕ ಸ್ಕೋರ್ ದಕ್ಕಿಸಿಕೊಟ್ಟಿತು.

2018ರಲ್ಲಿ ಧೋನಿ ಬೆನ್ನುತಟ್ಟಿ ಆರನೇ ಕ್ರಮಾಂಕದಲ್ಲಿ ಆಡಲು ಐಪಿಎಲ್‌ನಲ್ಲಿ ಒಮ್ಮೆ ಬಡ್ತಿ ನೀಡಿದ್ದರು. ಕಿಂಗ್ಸ್‌ ಇಲೆವೆನ್ ಪಂಜಾಬ್ ವಿರುದ್ಧದ ಆ ಪಂದ್ಯದಲ್ಲಿ 20 ಎಸೆತಗಳಲ್ಲಿ 39 ರನ್‌ಗಳನ್ನು ದೀಪಕ್ ಚಾಹರ್ ಗಳಿಸಿದ್ದನ್ನು ಮಂಗಳವಾರದ ಅವರ ಆಟ ನೆನಪಿಸಿತು.

ಎಂಟು ಓವರ್‌ಗಳಲ್ಲಿ 56 ರನ್‌ ಗೆಲುವಿಗೆ ಬೇಕಾಗಿದ್ದ ಹಂತದಲ್ಲಿ ಅವರು ಅವುಡುಗಚ್ಚಿ ನಿಂತರು. 48ನೇ ಓವರ್‌ ಬೌಲ್‌ ಮಾಡಲು ಶ್ರೀಲಂಕಾದ ವನಿಂದು ಹಸರಂಗ ಬಂದಾಗ ಅವರ ಲೆಗ್‌ ಸ್ಪಿನ್‌ ಬಲೆಗೆ ಬೀಳಲೇಬಾರದು ಎಂದು ನಾಲ್ಕೂ ಎಸೆತಗಳನ್ನು ರಕ್ಷಣಾತ್ಮಕವಾಗಿ ಆಡಿದರು. ರನ್ ಗಳಿಸಲು ಹೋಗಲೇ ಇಲ್ಲ. 16 ಎಸೆತಗಳಲ್ಲಿ 15 ರನ್‌ ಬೇಕಿರುವಾಗ ಇಂತಹ ಧೋರಣೆ ತೋರುವುದು ಅಪಾಯಕಾರಿಯೆ. ಆದರೆ, ಆ ಓವರ್‌ನಲ್ಲಿ ವಿಕೆಟ್ ಉಳಿಸಿಕೊಂಡರೆ ಮುಂದೆ ರನ್‌ ಗಳಿಸಬಹುದು ಎನ್ನುವ ಅವರ ಲೆಕ್ಕಾಚಾರ ಸತ್ಫಲ ಕೊಟ್ಟಿತು.

ಇಷ್ಟು ಭಾರದ ಒತ್ತಡದ ನೊಗವನ್ನು ಹೊತ್ತು ಎಂಟನೇ ಕ್ರಮಾಂಕದ ಬ್ಯಾಟ್ಸ್‌ಮನ್ ಈ ರೀತಿ ಆಡುವುದು ವಿರಳಾತಿ ವಿರಳ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಾಗಲಿ, ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಾಗಲೀ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಾಗಲಿ ಇದು ದೀಪಕ್ ಚಾಹರ್ ಅವರ ಅತಿ ಹೆಚ್ಚು ಸ್ಕೋರ್‌ ಎನ್ನುವುದಕ್ಕೆ ಅಡಿಗೆರೆ ಎಳೆಯಬೇಕು.

2010ರ ನವೆಂಬರ್‌ನಲ್ಲಿ ರಣಜಿ ಟ್ರೋಫಿ ಪ್ಲೇಟ್‌ ಲೀಗ್‌ನಲ್ಲಿ ಹೈದರಾಬಾದ್‌ ತಂಡದ ವಿರುದ್ಧ ಬರೀ 10 ರನ್‌ ನೀಡಿ 8 ವಿಕೆಟ್‌ ಪಡೆದು ದೀಪಕ್ ಚಾಹರ್ ತಮ್ಮ ಪ್ರತಿಭೆಯನ್ನು ಸಾರಿದ್ದರು. ಗ್ರೆಗ್‌ ಚಾಪೆಲ್ ಎರಡು ವರ್ಷಗಳ ಹಿಂದೆ ನಿರಾಕರಿಸಿದ್ದನ್ನು ಮರೆಸುವಂಥ, ಅದರಿಂದ ಮೂಡಿದ್ದ ಕಿಚ್ಚನ್ನು ಹೊರಹಾಕಿದಂತಹ ಪ್ರದರ್ಶನ ಅದು.

ದೇಸಿ ಕ್ರಿಕೆಟ್‌ನಲ್ಲಿ ಹೈದರಾಬಾದ್ ತಮ್ಮ ಅತಿ ಹೆಚ್ಚು ಸ್ಕೋರ್ ಗಳಿಸಲು ಕಾರಣವಾಗಿದ್ದಂತಹುದೂ ಹೌದು. ಪ್ರಥಮ ದರ್ಜೆ ಕ್ರಿಕೆಟ್‌ನ ಪದಾರ್ಪಣೆ ಪಂದ್ಯದಲ್ಲಿ ಎರಡನೇ ಶ್ರೇಷ್ಠ ಸಾಧನೆ ಎಂದು ಅದು ಪರಿಗಣಿತವಾಗಿತ್ತು. ಗೋವಾ ವಿರುದ್ಧದ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲೂ ನಾಲ್ಕು ವಿಕೆಟ್ ಪಡೆದು ಅವರು ತಮ್ಮ ಮೊನಚು ತೋರಿದ್ದರು. ಚುಟುಕು ಕ್ರಿಕೆಟ್‌ನಲ್ಲೂ ಅದಾಗಲೇ ಒಂದು ಅರ್ಧಶತಕ ಗಳಿಸಿರುವ ಅವರಿಗೆ ಬಾಲ್ಯದಿಂದಲೂ ಒಳಗೊಳಗೇ ಬ್ಯಾಟಿಂಗ್ ಒಲವು ಇತ್ತು. ಏಳು, ಎಂಟು ಅಥವಾ ಒಂಬತ್ತನೇ ಕ್ರಮಾಂಕದಲ್ಲಿ ಆಡಲು ಇಳಿದರೂ ಭಾರತಕ್ಕೆ ಗೆಲುವನ್ನು ದಕ್ಕಿಸಿಕೊಡಬೇಕು ಎಂದು ಕನಸು ಕಾಣುತ್ತಿದ್ದರು. ಅದು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನನಸಾಯಿತು.

ರಣಜಿಗೆ ಪದಾರ್ಪಣೆ ಮಾಡಿದ ಋತುವಿನಲ್ಲೇ ಪ್ಲೇಟ್‌ ಹಂತದಲ್ಲಿ ಆರು ಪಂದ್ಯಗಳಿಂದ 30 ವಿಕೆಟ್‌ಗಳನ್ನು ಪಡೆದು ಅವರು ತಮ್ಮತನವನ್ನು ಸಾಬೀತುಪಡಿಸಿದ್ದರು. ಎಲೈಟ್‌ ಹಂತದಲ್ಲಿ 8 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಖಾತೆಗೆ ಹಾಕಿಕೊಂಡು ನಾಯಕ ಹೃಷಿಕೇಶ್ ಕಾನಿಟ್ಕರ್‌ ತಮ್ಮ ಮೇಲೆ ಇಟ್ಟಿದ್ದ ವಿಶ್ವಾಸವನ್ನು ರುಜುವಾತುಪಡಿಸಿದರು.

ಹೃಷಿಕೇಶ್ ಕಾನಿಟ್ಕರ್ ಯಾವುದೇ ರಾಜಕೀಯ ಹಿನ್ನೆಲೆಯಾಗಲೀ, ಕ್ರಿಕೆಟಿಗರ ಸಂಪರ್ಕವಾಗಲೀ ಇಲ್ಲದೆ ಸ್ವಯಂ ಪ್ರತಿಭೆಯಿಂದ ಭಾರತದ ಪರವಾಗಿ ಆಡುವಷ್ಟರ ಮಟ್ಟಕ್ಕೆ ಬೆಳೆದಿದ್ದವರು. ಅವರು ಕಷ್ಟಕಾಲದಲ್ಲೂ ದೀಪಕ್ ಚಾಹರ್‌ ಬೆನ್ನುತಟ್ಟುತ್ತಾ ಬಂದಿದ್ದಾರೆ. ಅವರ ಮಾನವೀಯ ಬೆಂಬಲವನ್ನು ಪದೇ ಪದೇ ಈ ಯುವಕ ಸ್ಮರಿಸುತ್ತಾರೆ.

2017–18ರ ಸಾಲಿನಲ್ಲಿ ಸೈಯದ್ ಮುಷ್ತಾಕ್ ಟ್ರೋಫಿಗಾಗಿ ಆಡಿದ 9 ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು 9.94ರ ಸರಾಸರಿಯಲ್ಲಿ ಅವರು ಪಡೆದಿದ್ದರು. ಸೂಪರ್‌ಲೀಗ್ ಹಂತದ ಪಂದ್ಯದಲ್ಲಿ ಕರ್ನಾಟಕದ ತಾರಾ ಬ್ಯಾಟ್ಸ್‌ಮನ್‌ಗಳಿದ್ದ ತಂಡಕ್ಕೇ ಪೆಟ್ಟು ಕೊಟ್ಟಿದ್ದರು. ಬರೀ 15 ರನ್‌ ನೀಡಿ 5 ವಿಕೆಟ್‌ಗಳನ್ನು ಆಗ ಪಡೆದು, ಸ್ವಿಂಗ್‌ ಬೌಲಿಂಗ್ ಕರಾಮತ್ತನ್ನು ತೋರಿದ್ದರು. ಅಷ್ಟೇ ಅಲ್ಲ, ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ನಲ್ಲಿ ಜಾರ್ಖಂಡ್‌ ಎದುರು ನಡೆದ ಪಂದ್ಯದಲ್ಲಿ 22 ರನ್‌ ಗಳಿಸಿ ಔಟಾಗದೆ ವಿಜಯ ದಕ್ಕಿಸಿಕೊಟ್ಟಿದ್ದರು. ಅದೇ ವರ್ಷ ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯ ಆಡುವ ಅವಕಾಶ ಪಡೆದು, ಇಂಗ್ಲೆಂಡ್‌ನ ಜೇಸನ್ ರಾಯ್ ಅವರ ವಿಕೆಟ್ ಪಡೆದು ಶುಭಾರಂಭ ಮಾಡಿದ್ದರು.

ಎರಡೂ ದಿಕ್ಕುಗಳಿಗೆ ಸ್ವಿಂಗ್ ಮಾಡಬಲ್ಲ ದೀಪಕ್ ಚಾಹರ್‌ ಅವರಿಗೆ ತಂದೆ ಲೋಕೇಂದರ್ ಸಿಂಗ್ ಚಾಹರ್ ಅವರ ಅಕಾಡೆಮಿಯೇ ಆಡುಂಬೊಲ. ಮಗ ಸ್ಟ್ರೈಕ್ ಬೌಲರ್ ಆಗಿಯೇ ಬೆಳೆಯಲಿ ಎಂದು ಅವರು ಲೆಕ್ಕವಿಲ್ಲದಷ್ಟು ಹೊಸ ಚೆಂಡುಗಳನ್ನು ತಂದು ಕೊಟ್ಟಿದ್ದಾರೆ. ಹಣ ಖರ್ಚಾಗುತ್ತದೆ ಎಂದು ಅವರು ಯಾವತ್ತೂ ಚಿಂತಿಸಲಿಲ್ಲ. ಇನ್ನೊಬ್ಬ ಮಗ ರಾಹುಲ್ ಚಾಹರ್ ಸ್ಪಿನ್‌ ಮೊನಚನ್ನು ತೋರುತ್ತಾ ಐಪಿಎಲ್‌ನಲ್ಲಿ ಪ್ರಮುಖ ಆಟಗಾರನಾಗಿ ಹೊಮ್ಮುತ್ತಿದ್ದಾರೆ.

ಭಾರತದ ಯುವ ಬೌಲರ್‌ಗಳು ಅಗತ್ಯ ಸಂದರ್ಭಗಳಲ್ಲಿ ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ತೋರುತ್ತಿರುವುದು ಆಶಾದಾಯಕ ಬೆಳವಣಿಗೆ. ಇದೇ ವರ್ಷ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ ಸರಣಿಗಳಲ್ಲಿ ಯುವಪಡೆ ಹೇಗೆ ಆಡಿತ್ತು ಎನ್ನುವ ಮಾದರಿ ನಮ್ಮೆದುರಲ್ಲಿ ಇದೆ. ಸಾಲು ಸಾಲಾಗಿ ನಿಂತಿರುವ ಪ್ರತಿಭಾವಂತ ಬೌಲರ್‌ಗಳಲ್ಲಿ ದೀಪಕ್ ಚಾಹರ್ ಹೆಸರಿಗೆ ಈಗ ಹೊಸ ಅರ್ಥವಂತೂ ಸಿಕ್ಕಿದೆ.

‘ಅಭ್ಯಾಸ ಮಾಡುವಾಗಲೇ ಬಗೆ ಬಗೆಯ ಪರಿಸ್ಥಿತಿಯನ್ನು ಕಲ್ಪಿಸಿಕೊಂಡು ದೀಪಕ್ ವರ್ತಿಸುವುದನ್ನು ನಾನು ಗಮನಿಸಿದ್ದೇನೆ. ಮುಂದೆ ಒಳ್ಳೆಯ ಆಲ್‌ರೌಂಡರ್ ಆಗುವ ಲಕ್ಷಣಗಳು ಅವನಲ್ಲಿ ಇವೆ’ ಎಂಬರ್ಥದ ಮಾತು ಭುವನೇಶ್ವರ್ ಕುಮಾರ್ ಬಾಯಿಯಿಂದ ಹೊರಟಿತು. ಇದೇ ಭುವನೇಶ್ವರ್ ಹಾಗೂ ಪ್ರವೀಣ್ ಕುಮಾರ್ ತರಹ ಚೆಂಡನ್ನು ಸ್ವಿಂಗ್ ಮಾಡಬೇಕು ಎಂದು ದಶಕದ ಹಿಂದೆ ದೀಪಕ್ ಕನಸು ಕಂಡಿದ್ದು. ಶ್ರೀಲಂಕಾ ವಿರುದ್ಧ ಎರಡು ವಿಕೆಟ್‌ಗಳನ್ನೂ ಪಡೆದು, ಬ್ಯಾಟಿಂಗ್‌ ಮೂಲಕ ಜಯವನ್ನು ಹಿಡಿದೆಳೆದು ತಂದ ಅವರ ಆಟವನ್ನು ಮುಂದೆಯೂ ಕಣ್ಣಗಲಿಸಿ ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT