ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಹೊಸ ಮೈಲುಗಲ್ಲಿನ ಮೇಲೆ ಎಬಿಡಿ

Last Updated 28 ಏಪ್ರಿಲ್ 2021, 9:50 IST
ಅಕ್ಷರ ಗಾತ್ರ

ಆಟದ ಮನೆ

ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದ ಟೆಸ್ಟ್‌ ನಾಯಕತ್ವದಿಂದ ಎಬಿ ಡಿವಿಲಿಯರ್ಸ್‌ ಕೆಳಗಿಳಿದಾಗ ನೋವು–ಗಾಯ ಅವರನ್ನು ಬಾಧಿಸಿದ್ದವು. ಈಗ 37ರ ಪ್ರಾಯದಲ್ಲೂ ಅವರ ಬ್ಯಾಟಿಂಗ್ ಫಾರ್ಮ್ ನೋಡಿ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಸಹಜವಾಗಿಯೇ ನಗುತ್ತಿದ್ದಾರೆ. 5000 ಐಪಿಎಲ್ ರನ್‌ಗಳ ಗಡಿ ದಾಟಿದ ಸಂದರ್ಭದಲ್ಲಿ ಅವರ ಆಟದ ಸೊಗಸುಗಾರಿಕೆಯ ಮೆಲುಕು.

ವೇಗದ ಬೌಲರ್ ಕಗಿಸೊ ರಬಾಡಗೆ ಕ್ರಿಕೆಟ್ ಉತ್ಸಾಹಿಯೊಬ್ಬರು ಪ್ರಶ್ನೆ ಹಾಕಿದರು: ‘ನಿಮ್ಮದೇ ದೇಶದ ಸಹೋದ್ಯೋಗಿ ಎಬಿ ಡಿವಿಲಿಯರ್ಸ್‌ಗೆ ಬೌಲ್ ಮಾಡೋದು ಕಷ್ಟವೇ? ಅವರನ್ನು ಗೆಲ್ಲೋಕೆ ಸಾಧ್ಯವೇ ಇಲ್ಲವೇ?’ ಹೀಗೆ ಕೇಳುವುದಕ್ಕೂ ಮೊದಲು ರಬಾಡಾಗೆ ದೇಸಿ ಕ್ರಿಕೆಟ್ ಟೂರ್ನಿಯಲ್ಲಿ ಎಬಿಡಿ ಹೊಡೆದಿದ್ದ ಎರಡು ಸಿಕ್ಸರ್‌ಗಳ ವಿಡಿಯೊ ಕೂಡ ತೋರಿಸಿದ್ದರು.

‘ಅವರು ಅನುಭವಿ ಕ್ರಿಕೆಟ್ ಕ್ಯಾಂಪೇನರ್. ಅಸಂಖ್ಯ ವೈವಿಧ್ಯ ಹೊಡೆತಗಳನ್ನು ವರ್ಷಗಟ್ಟಲೆ ಅಭ್ಯಾಸ ಮಾಡಿ ಸಂಪಾದಿಸಿದ್ದಾರೆ. 360 ಡಿಗ್ರಿ ಸ್ಕೋರ್ ಮಾಡಬಲ್ಲರು. ನೀವೀಗ ನನ್ನ ಎಸೆತಗಳಲ್ಲಿ ಅವರು ಹೊಡೆದ ಎರಡು ಸಿಕ್ಸರ್‌ಗಳನ್ನು ತೋರಿಸಿದಿರಲ್ಲ; ಅದರಲ್ಲಿ ಮೊದಲನೆಯದ್ದು ಜೀನಿಯಸ್ ಎನ್ನುವಂಥದು. ಆದರೆ, ಎರಡನೆಯದು ಟಾಪ್ ಎಡ್ಜ್ ಆಗಿತ್ತು. ಇಂತಹ ದೊಡ್ಡವರ ಸವಾಲನ್ನು ನೋಡುತ್ತಲೇ ನಾವೂ ಕಲಿಯುತ್ತಿರುತ್ತೇವೆ...’ ಹಸನ್ಮುಖಿ ರಬಾಡ ತುಂಟತನದ ಲೇಪವನ್ನೂ ಹಚ್ಚಿ ಎಬಿಡಿ ಗುಣಗಾನವನ್ನೇ ಮಾಡಿಬಿಟ್ಟರು. ತಾನೂ ಕಡಿಮೆಯೇನಿಲ್ಲ ಎನ್ನುವ ಆತ್ಮವಿಶ್ವಾಸದ ದನಿಯೂ ಅವರ ಮಾತಿನಲ್ಲಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಂಗಳವಾರ (ಏಪ್ರಿಲ್ 27) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 5 ಸಾವಿರ ರನ್‌ಗಳ ಗಡಿಯನ್ನು ದಾಟಿದ ಸಾಧನೆಯನ್ನು ಎಬಿಡಿ ಮಾಡಿದರು. ಇಂತಹುದೊಂದು ಮೈಲಿಗಲ್ಲು ದಾಟಿದ ಎರಡನೇ ವಿದೇಶಿ ಆಟಗಾರ ಎನಿಸಿಕೊಂಡರು. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಈ ಗಡಿಯನ್ನು ದಾಟಿರುವ ಇನ್ನೊಬ್ಬ ವಿದೇಶಿ ಆಟಗಾರ.

2008ರಿಂದಲೂ ದಕ್ಷಿಣ ಆಫ್ರಿಕಾದ ಪ್ರತಿಭಾವಂತ ಕ್ರಿಕೆಟಿಗ ಎಬಿಡಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ನ ಸವ್ಯಸಾಚಿ. ಮೊದಲು ದೆಹಲಿ ತಂಡದ ಪರವಾಗಿ ಆಯ್ಕೆಯಾಗಿದ್ದ ಅವರು, 2011ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಕಣ್ಮಣಿಯಾಗಿ ಉಳಿದಿದ್ದಾರೆ. ಈ ಸಲದ ಐಪಿಎಲ್ ಋತುವಿನಲ್ಲಿ ಅವರ ಲಯವನ್ನು ನೋಡಿ ಕಳೆದ ವಾರ ಕೆಲವು ಕ್ರಿಕೆಟ್‌ ಪ್ರೇಮಿಗಳು, ‘ಬೆಂಗಳೂರಿನ ರಸ್ತೆಯೊಂದಕ್ಕೆ ಎಬಿ ಡಿವಿಲಿಯರ್ಸ್ ಹೆಸರಿಡಬೇಕು’ ಎಂದು ಪ್ರೀತಿಪೂರ್ವಕವಾಗಿ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದರು. ನಗರದ ಬಡಾವಣೆಯೊಂದರ ಬೋರ್ಡ್‌ ಮೇಲೆ ಅವರ ಹೆಸರನ್ನು ಡಿಜಿಟಲ್ ರೂಪದಲ್ಲಿ ಬರೆದು, ಅದಕ್ಕೊಂದು ತಮಾಷೆಯ ಮೆರುಗನ್ನೂ ನೀಡಿದ್ದರು. ಅವರಿಗೆ ಬೆಂಗಳೂರು ತಂಡದ ದೊಡ್ಡ ಅಭಿಮಾನಿ ಬಳಗವಿದೆ ಎನ್ನುವುದಕ್ಕೆ ಇದೇ ಸಾಕ್ಷಿ.

ಎಬಿಡಿ ಭಾರತದ ಚುಟುಕು ಕ್ರಿಕೆಟ್ ಜಾತ್ರೆಯಲ್ಲಿ ಮೆರೆಯದೇ ಇದ್ದ ಋತುಗಳು ಎರಡು ಮಾತ್ರ. 2008ರಲ್ಲಿ ಬರೀ 95 ರನ್ ಹೊಡೆದಿದ್ದರು. 2010ರಲ್ಲಿ 111 ರನ್ ಮಾತ್ರ ಅವರ ಬ್ಯಾಟ್‌ನಿಂದ ಬಂದಿದ್ದವು. ಆಗ ಅವರು ಎದುರಿಸಿದ ಎಸೆತಗಳೂ ಕಡಿಮೆಯೇ. ಇನ್ನುಳಿದ 12 ಐಪಿಎಲ್‌ಗಳಲ್ಲಿ ಅವರ ರನ್‌ ಗಳಿಕೆಯ ಸರಾಸರಿ ಕಡಿಮೆ ಎಂದರೂ ಋತುವೊಂದರಲ್ಲಿ 27 ಇದೆ (2017ರಲ್ಲಿ). ನಾಲ್ಕು ಐಪಿಎಲ್‌ಗಳಲ್ಲಿ 400ಕ್ಕೂ ಹೆಚ್ಚು ರನ್‌ಗಳನ್ನು ಅವರು ಗಳಿಸಿದ್ದಾರೆ. ಒಮ್ಮೆ 500ಕ್ಕೂ ಹೆಚ್ಚು ಹಾಗೂ ಇನ್ನೊಮ್ಮೆ 600ಕ್ಕೂ ಹೆಚ್ಚು ರನ್‌ಗಳು ಹರಿದುಬಂದಿವೆ.

ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಬತ್ತಳಿಕೆಯಲ್ಲಿನ ಬ್ರಹ್ಮಾಸ್ತ್ರ ಎಬಿಡಿ ಎನ್ನುವುದಕ್ಕೆ ಹಲವು ಇನಿಂಗ್ಸ್‌ಗಳು ಪುಷ್ಟಿ ನೀಡಿವೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ ಕೂಡ ಆಗಿರುವ ಕೊಹ್ಲಿ 6 ಸಾವಿರ ವೈಯಕ್ತಿಕ ರನ್‌ಗಳ ಗಡಿಯನ್ನು ಎಂದೋ ದಾಟಿದ್ದಾರಾದರೂ ಅವರಿಗೆ ದಕ್ಷಿಣ ಆಫ್ರಿಕಾ ಆಟಗಾರನ ಮೇಲೆ ನಂಬುಗೆ. ಎಬಿಡಿ ಹಾಗೂ ವಿರಾಟ್ ಐದು ಸಲ 100ಕ್ಕೂ ಹೆಚ್ಚು ಹಾಗೂ ಎರಡು ಸಲ 200ಕ್ಕೂ ಹೆಚ್ಚು ರನ್‌ಗಳ ಜತೆಯಾಟದಲ್ಲಿ ಐಪಿಎಲ್‌ ಪಂದ್ಯಗಳಲ್ಲಿ ಕೋರೈಸಿದ್ದಾರೆ. ವಿಶ್ವದ ಇನ್ಯಾವುದೇ ಜೋಡಿ ಕೂಡ ಎರಡು ಸಲ 200 ರನ್‌ಗಳ ಜತೆಯಾಟದಲ್ಲಿ ಈ ಟೂರ್ನಿಯಲ್ಲಿ ತೊಡಗಿಯೇ ಇಲ್ಲ.

ಎಬಿಡಿ ಹಾಗೂ ವಿರಾಟ್
ಎಬಿಡಿ ಹಾಗೂ ವಿರಾಟ್

ಕಳೆದ ವರ್ಷ ನಡೆದ ಐಪಿಎಲ್‌ನಲ್ಲಿ 45.40 ಸರಾಸರಿಯಲ್ಲಿ ಎಬಿಡಿ 454 ರನ್‌ಗಳನ್ನು ಆರ್‌ಸಿಬಿ ಪರ ಗಳಿಸಿದ್ದರು. ಈ ವರ್ಷ ಅದಾಗಲೇ ಆರು ಪಂದ್ಯಗಳಲ್ಲಿ 204 ರನ್‌ಗಳನ್ನು ಸೇರಿಸಿದ್ದಾರೆ. ಬರೀ 117 ಎಸೆತಗಳನ್ನು ಎದುರಿಸಿ ಇಷ್ಟು ಮೊತ್ತ ಕಲೆಹಾಕಿದ್ದಾರೆನ್ನುವುದಕ್ಕೆ ಅಡಿಗೆರೆ ಎಳೆಯಬೇಕು. ಇದುವರೆಗೆ ಐಪಿಎಲ್ ಪಂದ್ಯಗಳಲ್ಲಿ ಎಬಿಡಿ 245 ಸಿಕ್ಸರ್‌ಗಳು, 406 ಬೌಂಡರಿಗಳನ್ನು ಗಳಿಸಿದ್ದಾರೆ. ಈ ಋತುವಿನಲ್ಲಿ 10 ಸಿಕ್ಸರ್‌ಗಳು, 16 ಬೌಂಡರಿಗಳು ಅವರ ಬ್ಯಾಟ್‌ನಿಂದ ಹೊಮ್ಮಿವೆ. ಈ ಋತುವಿನ 174.35ರ ಸ್ಟ್ರೈಕ್‌ರೇಟ್‌ಗೆ ಅಡಿಗೆರೆ ಎಳೆಯಬೇಕು.

ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್‌ ಬಾಲ್ಯದಲ್ಲಿ ರಗ್ಬಿ ಆಟದ ಮೋಹಕ್ಕೆ ಬಿದ್ದವರು. ಆಗಿನಿಂದಲೇ ಫಿಟ್‌ನೆಸ್‌ ಕಾಯ್ದುಕೊಳ್ಳುವುದನ್ನು ಸಹಜ ಅಭ್ಯಾಸ ಮಾಡಿಕೊಂಡರು. ಈಗ ಅವರಿಗೆ 37ರ ಪ್ರಾಯ. ನಾಲ್ಕೈದು ತಿಂಗಳು ಸ್ಪರ್ಧಾತ್ಮಕ ಕ್ರಿಕೆಟ್ ಆಡದೆ ಕಣಕ್ಕಿಳಿದು, ಅಂತಿಮ ಓವರ್‌ನಲ್ಲಿ ಸ್ಟಾಯ್‌ನಿಸ್ ತರಹದ ಬೌಲರ್‌ಗೆ ಸಿಕ್ಸರ್‌ ಮೇಲೆ ಸಿಕ್ಸರ್ ಹೊಡೆಯುವುದು ಸುಲಭವಲ್ಲ. ಮಂಗಳವಾರ (ಏಪ್ರಿಲ್ 27) ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಎಬಿಡಿ ಆಡಲು ಕಣಕ್ಕಿಳಿದಾಗ ಆರ್‌ಸಿಬಿ 60 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. 9ನೇ ಓವರ್‌ನ ನಡುಘಟ್ಟ. ಆಮೇಲೆ ಆಡಲು ತಂಡಕ್ಕೆ ಉಳಿದಿದ್ದುದು 69 ಎಸೆತಗಳಷ್ಟೆ. ಆ ಪೈಕಿ 42 ಎಸೆತಗಳನ್ನು ಎಬಿಡಿ ಆಡಿ, 75 ರನ್ ಕಲೆಹಾಕಿ ಔಟಾಗದೆ ಉಳಿದರು. ಸ್ಟಾಯಿನಿಸ್ ಮಾಡಿದ ಕೊನೆಯ ಓವರ್‌ನಲ್ಲಿ 23 ರನ್‌ಗಳು ಹರಿದುಬಂದದ್ದು ಎಬಿಡಿ ಸವ್ಯಸಾಚಿ ಆಟಕ್ಕೆ ಇನ್ನೊಂದು ಉದಾಹರಣೆ.

ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್‌
ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್‌

ಮೈದಾನದಲ್ಲಿ ಪಾದರಸದಂತೆ ಓಡಾಡುವ ಅವರನ್ನು ಫೀಲ್ಡಿಂಗ್ ಕಾರಣಕ್ಕಾಗಿಯೇ ‘ಸೂಪರ್‌ಮ್ಯಾನ್’ ಎಂದೂ ಕರೆಯುತ್ತಾರೆ. ವಯಸ್ಸು ಮೂವತ್ತೈದು ದಾಟಿದ ಮೇಲೂ ತಮಗೆ ಸಂದಿರುವ ಎಲ್ಲ ಬಿರುದುಗಳಿಗೂ ಅರ್ಥವಿದೆ ಎನ್ನುವಂತೆ ಅವರು ಸಾರುತ್ತಿರುವುದನ್ನು ಕಂಡು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಮತ್ತೆ ತನ್ನ ಪರವಾಗಿ ಈ ಆಟಗಾರ ಚುಟುಕು ಕ್ರಿಕೆಟ್ ಆಡಬೇಕು ಎಂದು ಬಯಸುತ್ತಿರುವುದು ಕೂಡ ಅರ್ಥಪೂರ್ಣ.

ಎಬಿಡಿ ಮೂಲೆ ಮೂಲೆಗೂ ಚೆಂಡು ಹೊಡೆಯುತ್ತಿರುವುದನ್ನು ಅವರ ಪತ್ನಿ ಡೇವಿಯೆಲ್ ಮೊನ್ನೆ ಮೊನ್ನೆ ಮುಖವನ್ನು ಮೊರದಗಲ ಮಾಡಿಕೊಂಡು ಕಣ್ತುಂಬಿಕೊಂಡರು. ಜತೆಗೆ ಅವರಿಬ್ಬರು ಪುತ್ರರತ್ನರೂ ಇದ್ದರು. ಅವರತ್ತ ಬ್ಯಾಟ್‌ ತೋರಿ, ತಮ್ಮ ಸಂಭ್ರಮವನ್ನು ‘ಮಿಸ್ಟರ್ 360 ಡಿಗ್ರಿ’ ಹಂಚಿಕೊಂಡಿದ್ದು ಕ್ರಿಕೆಟ್‌ನ ರಸಾನುಭವ.

ಎಬಿಡಿ ಆಟ ಇನ್ನೂ ಬಾಕಿ ಇದೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT