ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸಂಜು–ರಿಷಭ್ ನಾಯಕತ್ವದ ಆಟಕ್ಕೆ ಐಪಿಎಲ್ ವೇದಿಕೆ

Last Updated 10 ಏಪ್ರಿಲ್ 2021, 8:57 IST
ಅಕ್ಷರ ಗಾತ್ರ

ಬೆಂಗಳೂರು: ದೆಹಲಿ ಹುಡುಗ ರಿಷಭ್ ಪಂತ್ ಮತ್ತು ಕೇರಳದ ಕಣ್ಮಣಿ ಸಂಜು ಸ್ಯಾಮ್ಸನ್ ಅವರ ಮೇಲೆ ಈಗ ಇಡೀ ಕ್ರಿಕೆಟ್ ಜಗತ್ತಿನ ಕುತೂಹಲದ ಕಣ್ಣುಗಳು ನೆಟ್ಟಿವೆ.

ಏಕೆಂದರೆ, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಈ ಇಬ್ಬರೂ ಯುವ ವಿಕೆಟ್‌ಕೀಪರ್‌ಗಳು ನಾಯಕರಾಗಿ ‘ಪದಾರ್ಪಣೆ‘ ಮಾಡುತ್ತಿದ್ದಾರೆ. ರಿಷಭ್ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸಂಜು ರಾಜಸ್ಥಾನ ರಾಯಲ್ಸ್‌ ತಂಡಗಳ ನಾಯಕತ್ವ ವಹಿಸಲಿದ್ದಾರೆ.

ಮಹೇಂದ್ರಸಿಂಗ್ ಧೋನಿಯ ನಂತರ ಭಾರತ ತಂಡದ ವಿಕೆಟ್‌ಕೀಪಿಂಗ್ ಹೊಣೆ ನಿಭಾಯಿಸಲು ಸಾಲುಗಟ್ಟಿದ್ದವರಲ್ಲಿ ಇವರಿಬ್ಬರೂ ಪ್ರಮುಖರು.

ಆದರೆ 23 ವರ್ಷದ ರಿಷಭ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈಗ ತಮ್ಮ ಬ್ಯಾಟಿಂಗ್ ಮೂಲಕ ಮಿಂಚಿದ್ದಾರೆ. ಅಲ್ಲದೇ ಮ್ಯಾಚ್ ವಿನ್ನರ್ ಆಗುವ ಮೂಲಕ ಉಳಿದವರೆಲ್ಲರನ್ನೂ ಹಿಂದಿಕ್ಕಿದ್ದಾರೆ. ಭಾರತ ತಂಡದ ವಿಕೆಟ್‌ಕೀಪರ್ ಸ್ಥಾನಕ್ಕೆ ಮೊದಲ ಆಯ್ಕೆಯಾಗಿ ಗುರುತಿಸಿಕೊಂಡಿದ್ದಾರೆ.

‘ಭವಿಷ್ಯದಲ್ಲಿ ಭಾರತ ತಂಡಕ್ಕೆ ನಾಯಕರಾಗುವ ಸಾಮರ್ಥ್ಯವೂ ದೆಹಲಿಯ ಕ್ರಿಕೆಟಿಗ ರಿಷಭ್‌ಗೆ ಇದೆ‘ ಎಂದು ಈಗಾಗಲೇ ಕೆಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗ ತಮ್ಮ ನಾಯಕತ್ವ ಗುಣಗಳನ್ನು ಪರೀಕ್ಷೆಗೊಡ್ಡುವ ಕಾಲ ರಿಷಭ್‌ಗೆ ಬಂದಿದೆ. ಶ್ರೇಯಸ್ ಅಯ್ಯರ್ ಗಾಯಗೊಂಡ ಕಾರಣ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕತ್ವದ ಹೊಣೆ ರಿಷಭ್ ಹೆಗಲಿಗೇರಿದೆ. ತಂಡದಲ್ಲಿರುವ ಅನುಭವಿ ಅಟಗಾರರಾದ ಶಿಖರ್ ಧವನ್, ಅಜಿಂಕ್ಯ ರಹಾನೆ, ಆರ್. ಅಶ್ವಿನ್ ಮತ್ತು ಅಮಿತ್ ಮಿಶ್ರಾ ಅವರನ್ನು ಬಿಟ್ಟು ಫ್ರ್ಯಾಂಚೈಸಿಯು ಯುವ ರಿಷಭ್‌ ಮೇಲೆ ಭರವಸೆ ಇಟ್ಟಿದೆ.

ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರಿಗಂತೂ ರಿಷಭ್ ಬ್ಯಾಟಿಂಗ್, ವಿಕೆಟ್‌ಕೀಪಿಂಗ್ ಮೇಲೆ ಮೊದಲಿನಿಂದಲೂ ಅಪಾರ ಪ್ರೀತಿ. ಈಗ ನಾಯಕನಾಗಿಯೂ ಪಂತ್ ಯಶಸ್ವಿಯಾಗುತ್ತಾರೆಂಬ ವಿಶ್ವಾಸ ಅವರದ್ದು. ರಣಜಿ ಟೂರ್ನಿಯಲ್ಲಿ ದೆಹಲಿ ತಂಡವನ್ನು 21ರ ಹರೆಯದಲ್ಲಿಯೇ ಮುನ್ನಡೆಸಿದ ಅನುಭವ ಪಂತ್‌ಗೆ ಇದೆ.

ಹೋದ ವರ್ಷ ಡೆಲ್ಲಿ ತಂಡವು ಫೈನಲ್‌ನಲ್ಲಿ ಎಡವಿತ್ತು. ತಂಡವು ಸಮತೋಲನವಾಗಿದೆ. ಪರಿಣಾಮಕಾರಿ ಬೌಲರ್ ಕಗಿಸೊ ರಬಾಡ, ಎನ್ರಿಚ್ ನಾಕಿಯಾ ಮತ್ತು ಅನುಭವಿ ಬ್ಯಾಟ್ಸ್‌ಮನ್‌ಗಳಿದ್ದಾರೆ. ಈ ಸಲ ಆಸ್ಟ್ರೇಲಿಯಾದ ರನ್‌ ಯಂತ್ರ ಸ್ಟೀವನ್ ಸ್ಮಿತ್ ಕೂಡ ಸೇರಿಕೊಂಡಿದ್ದಾರೆ.

ಆದರೆ ಇವರೆಲ್ಲರ ವಿಶ್ವಾಸ ಗೆದ್ದು, ಸಂಘಟಿತ ಹೋರಾಟದೊಂದಿಗೆ ತಂಡವನ್ನು ಪ್ರಶಸ್ತಿ ವಿಜಯದತ್ತ ಕೊಂಡೊಯ್ಯುವ ಹೊಣೆ ಪಂತ್ ಮೇಲೆ ಇದೆ. ಕೊರೊನಾ ಕಾಲಘಟ್ಟದಲ್ಲಿ ಬಯೋ ಬಬಲ್ ಒತ್ತಡವನ್ನು ನಿಭಾಯಿಸಿಕೊಂಡು ತಂಡವನ್ನು ಮುನ್ನಡೆಸುವುದು ಕಷ್ಟ ಎಂದು ಈಚೆಗೆ ವಿರಾಟ್‌ ಕೊಹ್ಲಿಯೇ ಹೇಳಿದ್ದರು.

ಐಪಿಎಲ್‌ನಲ್ಲಿ 68 ಪಂದ್ಯಗಳನ್ನು ಅಡಿರುವ ಪಂತ್ ಮತ್ತು 107 ಪಂದ್ಯಗಳನ್ನು ಆಡಿರುವ ಸಂಜು ಸ್ಯಾಮ್ಸನ್ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆನ್ನುವುದೂ ಈಗ ಕುತೂಹಲ ಮೂಡಿಸಿದೆ.

26 ವರ್ಷದ ಸಂಜು ಸ್ಯಾಮ್ಸನ್‌ ಖಾತೆಯಲ್ಲಿ ಎರಡೂವರೆ ಸಾವಿರಕ್ಕೂ ರನ್‌ಗಳು ಇವೆ. ಅದರಲ್ಲಿ ಅಬ್ಬರದ ಎರಡೂ ಶತಕಗಳೂ ಸೇರಿವೆ. ಪ್ರಥಮ ದರ್ಜೆ ಪಂದ್ಯಗಳಲ್ಲಿಯೂ ತಿರುವನಂತಪುರದ ಸಂಜು ದಾಖಲೆಗಳು ಹತ್ತಾರು ಇವೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ರಿಷಭ್ ಮತ್ತು ವೃದ್ಧಿಮಾನ್ ಸಹಾ ಅವರಿಗೆ ಸಿಕ್ಕಷ್ಟು ಅವಕಾಶಗಳು ಸಿಗಲಿಲ್ಲವೆನ್ನುವುದು ಸುಳ್ಳೇನಲ್ಲ. 55 ಪ್ರಥಮದರ್ಜೆ, 95 ಲಿಸ್ಟ್ ‘ಎ‘ ಮತ್ತು ಎಲ್ಲ ಹಂತದ 171 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ.

ಈಗ ಕಳೆದುಹೋದದ್ದನ್ನು ಬದಿಗಿಟ್ಟು ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸದಲ್ಲಿ ಸಂಜು ಇದ್ದಾರೆ.

‘ನನಗೆ ನಾಯಕತ್ವದ ಹೊಣೆ ಲಭಿಸಿರುವುದು ಸಂತಸವಾಗಿದೆ. ಮಹೇಂದ್ರಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿಯವರು ನನಗೆ ಅಭಿನಂದಿಸಿ ಶುಭ ಕೋರಿದ್ದಾರೆ. ಅವರಿಬ್ಬರ ಒಡನಾಟದಲ್ಲಿ ಕಲಿತದ್ದು ಅಪಾರ. ಅದು ಈಗ ನನ್ನ ಭವಿಷ್ಯವನ್ನು ರೂಪಿಸಲಿದೆ‘ ಎಂದು ಶಾಂತಚಿತ್ತದ ಸಂಜು ಹೇಳುತ್ತಾರೆ.

2008ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ನಂತರ ಹಲವು ವೈಫಲ್ಯಗಳನ್ನು ಕಂಡಿದೆ. 2013ರ ಸ್ಪಾಟ್ ಫಿಕ್ಡಿಂಗ್ ಹಗರಣದಲ್ಲಿ ಎರಡು ವರ್ಷಗಳ ನಿಷೇಧವನ್ನೂ ಅನುಭವಿಸಿತ್ತು. ನಂತರ ಮತ್ತೆ ಕಣಕ್ಕಿಳಿದ ತಂಡಕ್ಕೆ ಸಮರ್ಥ ನಾಯಕತ್ವ ಲಭಿಸಿಲ್ಲ. ಅಜಿಂಕ್ಯ ರಹಾನೆ, ಸ್ಟೀವ್ ಸ್ಮಿತ್ ಅವರು ಒಂದಿಷ್ಟು ಭರವಸೆ ಮೂಡಿಸಿದ್ದರು. ಈಗ ಅವರಿಬ್ಬರೂ ಈ ತಂಡದಲ್ಲಿ ಇಲ್ಲ.

ಇಂಗ್ಲೆಂಡ್‌ನ ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್‌, ಜೋಸ್ ಬಟ್ಲರ್, ಆಲ್‌ರೌಂಡರ್ ಕ್ರಿಸ್ ಮೊರಿಸ್ ಮತ್ತು ಕನ್ನಡಿಗ ಶ್ರೇಯಸ್ ಗೋಪಾಲ್ ಅವರ ಬಲ ತಂಡಕ್ಕಿದೆ. ಈ ಪ್ರತಿಭೆಗಳನ್ನು ಸಂಜು ಹೇಗೆ ದುಡಿಸಿಕೊಳ್ಳುತ್ತಾರೆ ಎಂಬುದರ ಮೇಲೆ ತಂಡದ ಯಶಸ್ಸು ತೀರ್ಮಾನವಾಗಲಿದೆ.

ಈ ಇಬ್ಬರೂ ಯುವನಾಯಕರು ರಾಹುಲ್ ದ್ರಾವಿಡ್ ಅವರ ‘ಕ್ರಿಕೆಟ್‌ ಶಾಲೆ‘ಯ ವಿದ್ಯಾರ್ಥಿಗಳೇ. ಬ್ಯಾಟಿಂಗ್, ವಿಕೆಟ್‌ಕೀಪಿಂಗ್ ಮತ್ತು ನಡವಳಿಕೆಯಲ್ಲಿ ದ್ರಾವಿಡ್ ಪಾಠವನ್ನು ಇಲ್ಲಿಯವರೆಗೆ ಅಚ್ಚುಕಟ್ಟಾಗಿ ತೋರಿಸುತ್ತ ಬೆಳೆದಿರುವ ಇವರು ನಾಯಕತ್ವದಲ್ಲಿಯೂ ಛಾಪು ಮೂಡಿಸಲು ಸಿದ್ಧರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT