ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ನೀರ್ಗುಳ್ಳೆ ಆಯಿತೆ ಐಪಿಎಲ್ ಬಯೋಬಬಲ್?

Last Updated 5 ಮೇ 2021, 6:49 IST
ಅಕ್ಷರ ಗಾತ್ರ

ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಬಯೋಬಬಲ್ ಎಂಬ ವ್ಯವಸ್ಥೆಯು ನೀರ್ಗುಳ್ಳೆಯಂತೆ ಒಡೆದುಹೋಗಿದೆ. ಎರಡಕ್ಕಿಂತ ಹೆಚ್ಚು ತಂಡಗಳು ಭಾಗವಹಿಸುವ ಮತ್ತು ಬೇರೆ ಬೇರೆ ತಾಣಗಳಲ್ಲಿ ಪಂದ್ಯಗಳನ್ನು ಜೀವ ಸುರಕ್ಷಾ ವಾತಾವರಣದಲ್ಲಿ ನಡೆಸುವ ಸವಾಲಿನಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಅರ್ಧಜಯ ಲಭಿಸಿದೆ ಎನ್ನಬಹುದು. ಆದರೆ ಇನ್ನರ್ಧ ಸೋಲಿನ ಬಗ್ಗೆ ವಿಶ್ಲೇಷಣೆ ಅಗತ್ಯ.‌

ಏಕೆಂದರೆ ಐಪಿಎಲ್‌ ಈಗ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ. ಆದರೆ ಬಯೋಬಬಲ್ ವ್ಯವಸ್ಥೆಯಲ್ಲಿ ಭಾರತವು ವಿಫಲವಾಗಿದೆ ಎಂಬ ಸಂದೇಶ ಈಗ ಕ್ರಿಕೆಟ್‌ ಜಗತ್ತಿಗೆ ಹೋಗಿರುವುದು ಕೂಡ ಅಷ್ಟೇ ಸತ್ಯ. ಏಪ್ರಿಲ್ ಆರಂಭದಲ್ಲಿಯೇ ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಳವಾಗುತ್ತಿದ್ದವು. ಎರಡನೇ ಅಲೆಯು ತಾರಕಕ್ಕೇರುವ ಬಗ್ಗೆ ಎಚ್ಚರಿಕೆಯ ಮಾತುಗಳೂ ಕೇಳಿಬಂದಿದ್ದವು. ಆದರೂ ಬಿಸಿಸಿಐ ಏಪ್ರಿಲ್ 9ರಿಂದ 52 ದಿನಗಳ ಸುದೀರ್ಘ ಟೂರ್ನಿ ಆಯೋಜಿಸಲು ಮುಂದಾಗಿದ್ದನ್ನು ಹುಂಬ ಧೈರ್ಯವೆನ್ನಬೇಕೆ ಅಥವಾ ಸಾಹಸವೆನ್ನಬೇಕೆ?

ಪಂಜಾಬ್ ಕಿಂಗ್ಸ್‌ ನ ಕೆ.ಎಲ್. ರಾಹುಲ್ ಬಳಗ
ಪಂಜಾಬ್ ಕಿಂಗ್ಸ್‌ ನ ಕೆ.ಎಲ್. ರಾಹುಲ್ ಬಳಗ

ಆದರೆ, ಬಿಸಿಸಿಐನ ಈ ನಡೆಯಿಂದಾಗಿ ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ಈ ಬಾರಿಯೂ ತಟಸ್ಥ ತಾಣದಲ್ಲಿ ಐಪಿಎಲ್ ನಡೆಸಿದ್ದರೆ ಒಳ್ಳೆಯದಿತ್ತೇನೋ ಎಂದು ಮಂಡಳಿ ಈಗ ಅಂದುಕೊಳ್ಳುತ್ತಲೂ ಇರಬಹುದು. ಆದರೆ ಈ ಬಯೋಬಬಲ್‌ ವೈಫಲ್ಯಕ್ಕೆ ಕಾರಣಗಳೇನು ಎಂಬುದನ್ನು ಬಿಸಿಸಿಐ ಇನ್ನಷ್ಟೇ ಬಹಿರಂಗಪಡಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ಆಯೋಜನೆಗೊಳ್ಳುವ ಟೂರ್ನಿಗಳಲ್ಲಿ ಲೋಪಗಳನ್ನು ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ.

ಬಯೋಬಬಲ್‌ ಅಂದರೆ ಏನು? ಹೇಗಿತ್ತು?

ಈ ಬಯೋಬಬಲ್‌ಗೆ ಬಹಳ ದೊಡ್ಡ ಇತಿಹಾಸವೇನೂ ಇಲ್ಲ. ಹೋದ ವರ್ಷ ಜೂನ್‌–ಜುಲೈನಿಂದ ಕ್ರಿಕೆಟ್‌ ಅಂಗಳಕ್ಕೆ ಕಾಲಿಟ್ಟಿರುವ ವ್ಯವಸ್ಥೆ ಇದು. ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಸಂಸ್ಥೆ ಮೊದಲ ಬಾರಿಗೆ ಈ ವ್ಯವಸ್ಥೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕ್ರಿಕೆಟ್ ಸರಣಿಯನ್ನು ಯಶಸ್ವಿಯಾಗಿ ಮಾಡಿತು. ನಂತರ ಐರ್ಲೆಂಡ್, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನಗಳಿಗೂ ಆತಿಥ್ಯ ವಹಿಸಿತು. ಆದರೆ ಅವೆಲ್ಲವೂ ದ್ವಿಪಕ್ಷೀಯ ಸರಣಿಗಳಾಗಿದ್ದವು. ಹೋದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ನಡೆಸಬೇಕಿತ್ತು. ಆದರೆ 16 ರಾಷ್ಟ್ರಗಳ ತಂಡಗಳಿಗೆ ಬಯೋಬಬಲ್ ವ್ಯವಸ್ಥೆಯಲ್ಲಿ ಅತಿಥ್ಯ ವಹಿಸುವ ಸವಾಲು ಕಠಿಣ ಎಂಬುದನ್ನು ಮನಗಂಡು ಟೂರ್ನಿಯನ್ನು ಮುಂದೂಡಿತು. ಆ ಸಮಯಾವಕಾಶದ ಲಾಭ ಪಡೆದ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಯುನೈಟೆಡ್ ಅರಬ್‌ ಎಮಿರೇಟ್ಸ್‌ (ಯುಎಇ)ನಲ್ಲಿ ಆಯೋಜಿಸಿತು. ಅಲ್ಲಿಯ ಕ್ರಿಕೆಟ್ ಸಂಸ್ಥೆ ಮತ್ತು ಸ್ಥಳೀಯ ಸರ್ಕಾರಗಳು ಬಯೋಬಬಲ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದವು. ಅಲ್ಲದೇ ಆರೇಳು ತಿಂಗಳು ಕ್ರಿಕೆಟ್ ಅಂಗಳಕ್ಕೆ ಕಾಲಿಡದೇ ಮನೆಯಲ್ಲಿಯೇ ಸಮಯ ಕಳೆದಿದ್ದ ಆಟಗಾರರೂ ಹೊಸ ವ್ಯವಸ್ಥೆಗೆ ಹೊಂದಿಕೊಂಡು ಆಡುವ ಆಸಕ್ತಿ ತೋರಿದ್ದು ಕೂಡ ಯಶಸ್ಸಿಗೆ ಕಾರಣವಾಗಿತ್ತು.

ಅಲ್ಲಿಂದ ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿತ್ತು. ಅಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದು ಸ್ವದೇಶಕ್ಕೆ ಮರಳಿತ್ತು. ಆ ಸರಣಿಯಲ್ಲಿ ಹಲವರು ಗಾಯಗೊಂಡರು. ಆದರೂ ಒಂದೇ ಒಂದು ಕೋವಿಡ್ ಪ್ರಕರಣವೂ ವರದಿಯಾಗಲಿಲ್ಲ. ನಂತರ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳಲ್ಲಿಯೂ ಭಾರತದ ಆಟಗಾರರು ಆಡಿದ್ದರು. ಸರಣಿಯ ನಂತರ ಚುಟುಕು ವಿರಾಮ ಪಡೆದು ಮನೆಗಳಿಗೆ ತೆರಳಿದ್ದರು. ನಂತರ ಮರಳಿ ತಮ್ಮ ಐಪಿಎಲ್ ಫ್ರ್ಯಾಂಚೈಸ್‌ಗಳನ್ನು ಸೇರಿದ್ದರು.

ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್

ಬಯೋಬಬಲ್ ನಿಯಮದ ಪ್ರಕಾರ; ಆರಂಭದಲ್ಲಿ ಒಂದು ವಾರದ ಕಡ್ಡಾಯ ಕ್ವಾರಂಟೈನ್ ಪಾಲಿಸಿದ್ದರು. ಎರಡು ದಿನಕ್ಕೊಮ್ಮೆ ಆಟಗಾರರ ಆರ್‌ಟಿಪಿಸಿಆರ್ ಟೆಸ್ಟ್ ನಡೆಯುತ್ತಿತ್ತು. ಟೂರ್ನಿ ಆರಂಭವಾದ ಮೇಲೂ ಕಡ್ಡಾಯ ಟೆಸ್ಟ್ ನಡೆಯುತ್ತಲೇ ಇದ್ದವು. ಆಟಗಾರರು ಅಭ್ಯಾಸ ಮಾಡುವ ಕ್ರೀಡಾಂಗಣ, ಪಂದ್ಯ ನಡೆಯುವ ಸ್ಥಳ, ಹೋಟೆಲ್‌, ಪ್ರಯಾಣ ಮಾಡುವ ವಿಮಾನ, ಬಸ್‌ಗಳೆಲ್ಲವನ್ನೂ ಪ್ರತ್ಯೇಕವಾಗಿಯೇ ಇರಿಸಲಾಗಿತ್ತು. ಕ್ರೀಡಾಂಗಣಗಳಿಗೆ ಪ್ರೇಕ್ಷಕರ ಪ್ರವೇಶವನ್ನೂ ನಿರ್ಬಂಧಿಸಲಾಗಿತ್ತು. ಆದರೂ ವೈರಸ್‌ ನುಗ್ಗಿದ್ದು ಹೇಗೆ?

ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆಟಗಾರ ಸ್ಕ್ಯಾನಿಂಗ್‌ಗೆ ಆಸ್ಪತ್ರೆಗೆ ಹೋಗಿ ಮರಳಿದ್ದಾಗ ವೈರಸ್‌ ಸೋಂಕಿಗೆ ಒಳಗಾಗಿದ್ದು ಪತ್ತೆಯಾಗಿಲ್ಲವೆನ್ನಲಾಗಿದೆ. ಪಂದ್ಯದ ಹಿಂದಿನ ದಿನ ನಡೆದ ಪರೀಕ್ಷೆಯಲ್ಲಿ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್‌ಗೆ ಸೋಂಕಿರುವುದು ಪತ್ತೆಯಾಯಿತು. ಅದೇ ಹೊತ್ತಿಗೆ ಚೆನ್ನೈ ತಂಡದ ನೆರವು ಸಿಬ್ಬಂದಿಯಲ್ಲಿಯೂ ಸೋಂಕು ಪತ್ತೆಯಾಗಿತ್ತು. ಬಯೋಬಬಲ್‌ನಲ್ಲಿ ಒಮ್ಮೆ ಒಂದು ವೈರಸ್‌ ಪ್ರವೇಶಿಸಿದರೆ ಬೇಗನೆ ಹರಡುವುದೂ ಸುಲಭ ಎಂಬುದು ಇದರಿಂದ ಖಚಿತವಾಯಿತು. ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಸನ್‌ರೈಸರ್ಸ್‌ ತಂಡಗಳಿಗೂ ಇದು ವ್ಯಾಪಿಸಿತು. ಇದರಿಂದಾಗಿ ಟೂರ್ನಿಯನ್ನು ಮುಂದೂಡಲೇಬೇಕಾಯಿತು.

ವ್ಯವಸ್ಥೆ ಮೆಚ್ಚಿದ್ದ ಐಸಿಸಿ

ಒಂದು ವಾರದ ಹಿಂದಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್ ವೇಳಾಪಟ್ಟಿಯ ರಚನೆಯ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಮೆಚ್ಚುಗೆಯ ಮಾತುಗಳನ್ನಾಡಿತ್ತು. ಇಲ್ಲಿ ಪಾಲಿಸಲಾಗಿದ್ದ ‘ಕ್ಲಸ್ಟರ್ ಕಾರ್ವಾನ್‘ ಮಾದರಿಯನ್ನು ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಳವಡಿಸುವ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿತ್ತು.

ಕೀರನ್ ಪೊಲಾರ್ಡ್
ಕೀರನ್ ಪೊಲಾರ್ಡ್

ಕೋವಿಡ್ ಸೃಷ್ಟಿಸಿರುವ ಬಿಕ್ಕಟ್ಟಿನ ನಡುವೆಯೇ ನಡೆಯುತ್ತಿರುವ ಐಪಿಎಲ್‌ನ ವೇಳಾಪಟ್ಟಿಯನ್ನು ವಿಭಿನ್ನವಾಗಿ ರಚಿಸಲಾಗಿದೆ. ಮುಂಬೈ, ಚೆನ್ನೈ, ಬೆಂಗಳೂರು, ದೆಹಲಿ, ಅಹಮದಾಬಾದ್ ಮತ್ತು ಕೋಲ್ಕತ್ತ ನಗರಗಳಲ್ಲಿ ಪಂದ್ಯಗಳ ಆಯೋಜನೆಗೆ ಸಿದ್ಧತೆ ಮಾಡಲಾಗಿದೆ. ಮೊದಲ ಹಂತದಲ್ಲಿ ಚೆನ್ನೈ, ನವದೆಹಲಿ, ಅಹಮದಾಬಾದ್ ಮತ್ತು ಮುಂಬೈನಲ್ಲಿ ಪಂದ್ಯಗಳು ನಡೆದಿದ್ದವು. ಅದರಲ್ಲಿ ಮೊದಲಿಗೆ ಚೆನ್ನೈ ಮತ್ತು ಮುಂಬೈನಲ್ಲಿ ಕೆಲವು ಪಂದ್ಯಗಳು ಮತ್ತು ನಂತರ ದೆಹಲಿ , ಅಹಮದಾಬಾದ್‌ನಲ್ಲಿ ಕೆಲವು ಪಂದ್ಯಗಳನ್ನು ನಡೆಸಲಾಗಿತ್ತು.

ಇದರಿಂದಾಗಿ ಆಟಗಾರರ ಪ್ರಯಾಣ, ವಸತಿ, ಅಭ್ಯಾಸ ಮತ್ತು ಪಂದ್ಯಗಳ ಆಯೋಜನೆಯನ್ನು ಬಯೋಬಬಲ್‌ನಲ್ಲಿ ಯಶಸ್ವಿಯಾಗಿ ನಡೆಸಲು ಸಾಧ್ಯವಾಗುತ್ತಿದೆ ಎಂದು ಐಸಿಸಿಯ ಅಧಿಕಾರಿ ಮಸ್ಕರ್ ಅಭಿಪ್ರಾಯಪಟ್ಟಿದ್ದರು.

ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳ ಆಯೋಜನೆಗಾಗಿ ಒಂಬತ್ತು ನಗರಗಳನ್ನು ಬಿಸಿಸಿಐ ಗುರುತಿಸಲಾಗಿತ್ತು. ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ ಅಹಮದಾಬಾದ್, ಹೈದರಾಬಾದ್, ಬೆಂಗಳೂರು, ಲಖನೌ ಮತ್ತು ಧರ್ಮಶಾಲಾ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸಲು ಉದ್ದೇಶಿಸಲಾಗಿತ್ತು.

ದೇವದತ್ತ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ
ದೇವದತ್ತ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ

‘ಐಪಿಎಲ್‌ಗಾಗಿ ಆರು ತಾಣಗಳನ್ನು ಗುರುತಿಸಲಾಗಿದೆ. ಆದರೆ ಎರಡೇ ಊರುಗಳಲ್ಲಿ ಪ್ರಥಮ ಹಂತದ ಪಂದ್ಯಗಳು ನಡೆಯುತ್ತಿವೆ. ಈ ಪದ್ಧತಿಯು ಬಹುತೇಕ ಯಶಸ್ವಿಯಾಗಿರುವುದು ಉತ್ತಮ ಸಂಗತಿ. ಇದು ಟಿ20 ವಿಶ್ವಕಪ್ ವೇಳಾಪಟ್ಟಿ ಮತ್ತು ಪಂದ್ಯಗಳ ಆಯೋಜನೆಗೆ ದಿಕ್ಸೂಚಿಯಾಗಲಿದೆ‘ ಎಂದು ಮಸ್ಕರ್ ಹೇಳಿದ್ದರು.

‘ಬಯೋಬಬಲ್‌ನಲ್ಲಿ ದ್ವಿಪಕ್ಷೀಯ ಸರಣಿ ಆಯೋಜಿಸುವುದು ಸುಲಭ. ಆದರೆ, ಬಹಳಷ್ಟು ತಂಡಗಳು ಆಡುವ ಟೂರ್ನಿಯನ್ನು ಜೀವ ಸುರಕ್ಷಾ ವಲಯದಲ್ಲಿ ಆಯೋಜಿಸುವುದು ಕಠಿಣ ಸವಾಲಿನ ಕೆಲಸ‘ ಎಂದು ಮಸ್ಕರ್ ಹೇಳಿದರು.

ದೀರ್ಘಕಾಲದವರೆಗೆ ಬಯೋಬಬಲ್‌ನಲ್ಲಿ ಇರುವುದು ಕೂಡ ಆಟಗಾರರಿಗೆ ಒತ್ತಡದಾಯಕ ಕಾರ್ಯ. ನಿರಂತರವಾಗಿ ನಿಯಮಗಳನ್ನು ಪಾಲಿಸುವುದು ಕೂಡ ಕಷ್ಟಸಾಧ್ಯ. ಆದ್ದರಿಂದ ಬಹುತಂಡಗಳ ಟೂರ್ನಿಯ ಆಯೋಜನೆಗೆ ಪ್ರತ್ಯೇಕವಾದ ವ್ಯವಸ್ಥೆ ಮತ್ತು ನಿಯಮಗಳನ್ನು ರೂಪಿಸುವ ಅಗತ್ಯವೂ ಈಗ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಐಸಿಸಿ ತಾಂತ್ರಿಕ ಸಮಿತಿ ಕಾರ್ಯಪ್ರವೃತ್ತವಾಗಬಹುದೇ?

ಇದೆಲ್ಲದರ ಹೊರತಾಗಿ 24 ದಿನಗಳವರೆಗೆ ನಡೆದ ಟೂರ್ನಿಯಲ್ಲಿ ಆಟಗಾರರು ಕ್ರಿಕೆಟ್ ‌ಪ್ರೇಮಿಗಳಿಗೆ ರಸದೌತಣ ನೀಡಿದ್ದಂತೂ ನಿಜ. ಎಬಿ ಡಿವಿಲಿಯರ್ಸ್‌, ಅಂಬಟಿ ರಾಯುಡು, ಹರ್ಷಲ್ ಪಟೇಲ್, ದೇವದತ್ತ ಪಡಿಕ್ಕಲ್, ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್, ಜೆ. ಸುಚಿತ್, ಫಫ್ ಡುಪ್ಲೆಸಿ, ಕೀರನ್ ಪೊಲಾರ್ಡ್ ಮತ್ತಿತರ ಆಟದ ಸೊಬಗು ಮನತುಂಬಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT