ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಕೃಣಾಲ್ ಕಣ್ಣೀರಿನ ಫ್ಲ್ಯಾಷ್‌ಬ್ಯಾಕ್

ಆಟದಮನೆ
Last Updated 24 ಮಾರ್ಚ್ 2021, 9:13 IST
ಅಕ್ಷರ ಗಾತ್ರ

ತಮ್ಮ ಹಾರ್ದಿಕ್ ಪಾಂಡ್ಯ 2015ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ 10 ಲಕ್ಷ ರೂಪಾಯಿಗೆ ಹರಾಜಾದಾಗ ಅವರ ಕುಟುಂಬದವರೆಲ್ಲರೂ ಖುಷಿ ಪಟ್ಟಿದ್ದರು. ಗಲ್ಲಿ ಕ್ರಿಕೆಟ್ ಆಡಿ ಹಣ ಸಂಪಾದಿಸಿದ್ದ ಅವರ ಅಣ್ಣ ಕೃಣಾಲ್, ಮಂಗಳವಾರ ಚೊಚ್ಚಲ ಏಕದಿನ ಪಂದ್ಯ ಆಡುವ ಮೊದಲು ಸಹೋದರನಿಂದಲೇ ಟೋಪಿ ತೊಡಿಸಿಕೊಂಡು ನಕ್ಕರು. ವೇಗದ ಅರ್ಧಶತಕ ಗಳಿಸಿ ಆಮೇಲೆ ಅತ್ತರು. ಅಳು–ನಗುವಿನ ಈ ಭಾವುಕ ಅಡಿಗೆರೆ ಕ್ರಿಕೆಟ್‌ ಅನ್ನು ಇನ್ನಷ್ಟು ಚೆಂದಗಾಣಿಸಿದೆ.

ಇಂಗ್ಲೆಂಡ್ ವಿರುದ್ಧ ಪುಣೆಯಲ್ಲಿ ಮಂಗಳವಾರ (ಮಾರ್ಚ್ 23) ನಡೆದ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಕೆಲವು ಅನುಮೋದಿಸಲೇಬೇಕಾದ ಭಾವುಕ ಕ್ಷಣಗಳಿದ್ದವು. ಒಂದು– 98 ರನ್‌ ಹೊಡೆದಿದ್ದಾಗ ಶಿಖರ್ ಧವನ್ ಡ್ರೈವ್ ಮಾಡಲು ಹೋಗಿ ಕ್ಯಾಚಿತ್ತು ನಿರ್ಗಮಿಸಿದ್ದು. ಶತಕಕ್ಕೆ ಎರಡೇ ರನ್ ಬಾಕಿ ಇರುವಾಗ ಔಟಾದರೆ ಬಹುತೇಕರು ಬ್ಯಾಟನ್ನು ನೆಲಕ್ಕೆ ಬಡಿಯುವುದೋ, ವಿಪರೀತ ಬೇಸರದಿಂದ ಮುಖ ಕಿವುಚುವುದೋ ಮಾಡುತ್ತಾರೆ. ಶಿಖರ್ ‘ಛೆ’ ಎನ್ನುವಂತಹ ಸಣ್ಣ ಭಾವ ಹೊಮ್ಮಿಸಿ ಎಂದಿನ ಲಯದಲ್ಲೇ ಪೆವಿಲಿಯನ್‌ನತ್ತ ನಡೆದುಹೋದರು. 2004ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಮೂರು ಶತಕ ಗಳಿಸಿದ್ದೇ ಅಲ್ಲದೆ 500 ಚಿಲ್ಲರೆ ರನ್ ಗುಡ್ಡೆ ಹಾಕಿದ್ದ ಅವರಿಗೆ ಭಾರತದ ರಾಷ್ಟ್ರೀಯ ತಂಡಕ್ಕೆ ಆಡುವ ಅವಕಾಶ ಸಿಕ್ಕಿದ್ದು 2010ರಲ್ಲಿ. ಆರೇಳು ವರ್ಷ ತಪಸ್ಸನ್ನೇ ಮಾಡಿದ ಅವರಿಗೆ ಎರಡು ರನ್‌ಗಳಿಂದ ಶತಕ ಕೈತಪ್ಪಿದ್ದು ಯಾವ ಲೆಕ್ಕ, ಅಲ್ಲವೇ? ಎರಡು– ಕರ್ನಾಟಕದ ಹುಡುಗ ಪ್ರಸಿದ್ಧ ಕೃಷ್ಣ ಚೊಚ್ಚಲ ಏಕದಿನ ಪಂದ್ಯದಲ್ಲೇ ನಾಲ್ಕು ವಿಕೆಟ್‌ಗಳನ್ನು ಪಡೆದು ಸಂಭ್ರಮಿಸಿದ್ದು. ಅವರು ಒಂದೊಂದು ವಿಕೆಟ್ ಪಡೆದಾಗಲೂ ನಾಯಕ ವಿರಾಟ್ ಕೊಹ್ಲಿ ಅಣ್ಣನೊಬ್ಬ ತಮ್ಮನನ್ನು ಹುರಿದುಂಬಿಸುವಂತೆ ನೆತ್ತಿ ಮೇಲೆ ಕೈಯಾಡಿಸುತ್ತಿದ್ದರು. ಮೂರು– ಕೃಣಾಲ್ ಪಾಂಡ್ಯ ಮೊದಲ ಏಕದಿನ ಪಂದ್ಯದಲ್ಲೇ ಅತಿ ವೇಗದ ಅರ್ಧಶತಕ ಗಳಿಸಿ, ತಮ್ಮನಿಂದ ಬಿಸಿಯಪ್ಪುಗೆ ಪಡೆದದ್ದು. ತಂದೆಯ ನೆನಪಲ್ಲಿ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದು.

ಮೂರನೇ ಭಾವುಕ ಕ್ಷಣಕ್ಕೆ ದೊಡ್ಡ ಅರ್ಥವಿದೆ. ಯಾಕೆಂದರೆ, ಅಣ್ಣ–ತಮ್ಮ ಇಬ್ಬರನ್ನೂ ನಮ್ಮ ದೇಶದಲ್ಲಿ ಕ್ರಿಕೆಟಿಗರನ್ನಾಗಿಸುವುದು ಸುಲಭವಲ್ಲ. ಹಾರ್ದಿಕ್ ಪಾಂಡ್ಯ ಹಾಗೂ ಕೃಣಾಲ್ ಪಾಂಡ್ಯ ಅವರ ಅಪ್ಪ ಏನೆಲ್ಲ ಅನುಭವಿಸಿದ್ದಾರೆನ್ನುವುದು ಅವರಿಗಷ್ಟೇ ಚೆನ್ನಾಗಿ ಗೊತ್ತು. ಯೂಸುಫ್ ಪಠಾಣ್–ಇರ್ಫಾನ್ ಪಠಾಣ್ ಒಂದೇ ಕಿಟ್‌ ಅನ್ನು ಹಂಚಿಕೊಂಡು ಕ್ರಿಕೆಟ್ ಅಭ್ಯಾಸ ಮಾಡಿದ ಕಥೆಯನ್ನೂ ನಾವು ಕೇಳಿದ್ದೇವೆ, ಓದಿದ್ದೇವೆ. ಕೃಣಾಲ್–ಹಾರ್ದಿಕ್ ಕಥೆಯೂ ಹಾಗೆಯೇ.

ಕೃಣಾಲ್
ಕೃಣಾಲ್

2017ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್‌ನ ಹತ್ತನೇ ಆವೃತ್ತಿಯ ಫೈನಲ್‌ನಲ್ಲಿ ಪಂದ್ಯ ಪುರುಷೋತ್ತಮ ಗೌರವ ಪಡೆದ ಕೃಣಾಲ್ ಪಾಂಡ್ಯ ಅವರ ನೀಳವದನ ಆಗಿನಿಂದಲೂ ಕಾಡುತ್ತಿದೆ. ಆ ವರ್ಷ ಮೇ 1ರ ಸಂಜೆ ಅವರು ನೋವಿನಿಂದ ನರಳಿದ್ದರು. ಅದನ್ನು ಕಂಡ ಮುಂಬೈ ಇಂಡಿಯನ್ಸ್ ತಂಡದವರು ‘ಇನ್ನು ಈ ಕ್ರಿಕೆಟಿಗ ಮನೆಗೆ ಹೋಗಬೇಕಷ್ಟೆ’ ಎಂದುಕೊಂಡಿದ್ದರು.

ಆ ದಿನ ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೃಣಾಲ್ ಚೆಂಡಿನ ಮೇಲೆ ಬಿದ್ದಿದ್ದರು. ಅವರ ಪೃಷ್ಠದ ಭಾಗದಲ್ಲಿ ವಿಪರೀತ ನೋವು. ಶ್ರೀಲಂಕಾದಲ್ಲಿ ಎಲಿಯಂತ ವೈಟ್ ಎಂಬ ಅಪರೂಪದ ಚಿಕಿತ್ಸಕ ಇದ್ದಾರೆ. ಲಸಿತ್ ಮಾಲಿಂಗ ಹಾಗೂ ಸಚಿನ್ ತೆಂಡೂಲ್ಕರ್ ಪೃಷ್ಠದ ನೋವಿನಿಂದ ಒದ್ದಾಡಿದ್ದಾಗಲೂ ಗುಣಪಡಿಸಿದ್ದವರು ಅವರೇ. ಮುಂಬೈ ಇಂಡಿಯನ್ಸ್ ತಂಡದವರು ಅವರಿಗೆ ಫೋನಾಯಿಸಿ, ಬೇಗ ಹೊರಟು ಬರುವಂತೆ ಆಗ ಕೋರಿದರು. ತಕ್ಷಣಕ್ಕೆ ವೀಸಾ ಸಿಗಲಿಲ್ಲ. ಮರುದಿನ ತಂಡದ ಫಿಸಿಯೊ ಅವರನ್ನು ಜೊತೆಮಾಡಿ, ಚಾರ್ಟರ್ಡ್ ವಿಮಾನದಲ್ಲಿ ಕೃಣಾಲ್ ಅವರನ್ನೇ ಕೊಲಂಬೊಗೆ ಕಳುಹಿಸಿಕೊಡಲು ಮುಂಬೈ ಇಂಡಿಯನ್ಸ್‌ ತಂಡದ ವ್ಯವಸ್ಥಾಪಕ ಸಮಿತಿ ನಿರ್ಧರಿಸಿತು. ಅದೃಷ್ಟವಶಾತ್ ಮರುದಿನ ಎಲಿಯಂತ ಅವರಿಗೆ ವೀಸಾ ಸಿಕ್ಕಿತು. ಭಾರತ ತಲುಪಿದ ಅವರು ಕೃಣಾಲ್‌ಗೆ ಚಿಕಿತ್ಸೆ ನೀಡಿದರು. ಫೈನಲ್‌ನಲ್ಲಿ ಕೃಣಾಲ್ ಆಡಿದ ರೀತಿ ಅಭಿಮಾನಿಗಳ ಕಣ್ಣಿಗೆ ಕಟ್ಟಿತ್ತು.

ಅದಕ್ಕೂ ಎರಡು ವರ್ಷಗಳ ಹಿಂದೆ ಮುಂಬೈನ ವಾಂಖೆಡೆ ಕ್ರೀಡಾಂಗಣದ ಸ್ಟ್ಯಾಂಡ್‌ನಲ್ಲಿ ಕೃಣಾಲ್ ತಮ್ಮ ಸಹೋದರ ಹಾರ್ದಿಕ್ ಪಾಂಡ್ಯ ಆಡುವುದನ್ನು ನೋಡುತ್ತಾ ಕುಳಿತಿದ್ದರು. ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಲ್ಲಿ ತೋರಿದ ಸ್ಥಿರ ಪ್ರದರ್ಶನದಿಂದ (8 ಪಂದ್ಯಗಳಲ್ಲಿ 45.75ರ ಸರಾಸರಿಯಲ್ಲಿ 366 ರನ್ ಹಾಗೂ ಪ್ರತಿ ಓವರ್‌ಗೆ ಸರಾಸರಿ 4.82 ರನ್ ನೀಡಿ 11 ವಿಕೆಟ್) ಮರುವರ್ಷವೇ ಅವರು ಐಪಿಎಲ್ ಕ್ರಿಕೆಟ್ ಆಡಲು ಆಯ್ಕೆಯಾದದ್ದು. ರಣಜಿ ತಂಡಕ್ಕೆ ಆಯ್ಕೆಯಾದದ್ದೂ ಅದೇ ವರ್ಷ.

2016ರ ಐಪಿಎಲ್‌ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್‌ ಎದುರಿನ ಪಂದ್ಯವೊಂದರ ಒಂದೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ವಿಕೆಟ್ ಪಡೆದು ನಿಧಾನಗತಿಯ ಎಡಗೈ ಬೌಲರ್ ಕೂಡ ಆಗಿರುವ ಕೃಣಾಲ್ ಗಮನ ಸೆಳೆದಿದ್ದರು. ಅದೇ ಋತುವಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಸಂದಿತ್ತು (ವಿಶಾಖಪಟ್ಟಣದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ 37 ಎಸೆತಗಳನ್ನು ಆಡಿ 86 ರನ್ ಗಳಿಸಿದ್ದರು. ಕ್ವಿಂಟನ್ ಡಿ ಕಾಕ್ ಹಾಗೂ ಜಹೀರ್ ಖಾನ್ ವಿಕೆಟ್‌ಗಳನ್ನೂ ಪಡೆದಿದ್ದರು). ಆದರೂ ಎಲ್ಲರೂ ಅವರನ್ನು ಹಾರ್ದಿಕ್ ಪಾಂಡ್ಯನ ಅಣ್ಣ ಎಂದೇ ಸದಾ ಗುರುತಿಸುತ್ತಿದ್ದುದು.

‘ಕೃಣಾಲ್ ಬುದ್ಧಿವಂತ ಆಲ್‌ರೌಂಡರ್’ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಹೇಳಲು ಅಂಕಿಅಂಶಗಳ ಬಲವೂ ಇದೆ. 2017ರ ಐಪಿಎಲ್‌ನಲ್ಲಿ ಜಯದೇವ್ ಉನದ್ಕತ್ ಬೌಲಿಂಗ್‌ನಲ್ಲಿ ರನ್ ಗಳಿಸಲು ಫೈನಲ್‌ನಲ್ಲಿ ಎಲ್ಲರೂ ಪರದಾಡಿದ್ದಾಗ ವಿವೇಚನೆಯಿಂದ ಆಡಿ ಇನಿಂಗ್ಸ್ ಕಟ್ಟಿದ್ದವರು ಕೃಣಾಲ್. ಉನದ್ಕತ್ ಎಸೆತದಲ್ಲಿ ಒಂದು ಸಿಕ್ಸರ್ ಕೂಡ ಹೊಡೆದಿದ್ದರು.

ಅಹಮದಾಬಾದ್‌ನ ಕೃಣಾಲ್ ಎಸೆತಗಳನ್ನು ಹಾಕುವುದರಲ್ಲಿನ ಗತಿ ಬದಲಾವಣೆಯಿಂದ ತಮ್ಮ ಬೌಲಿಂಗ್‌ನಲ್ಲಿ ವೈವಿಧ್ಯ ಉಳಿಸಿಕೊಂಡವರು. ಬ್ಯಾಟಿಂಗ್‌ನಲ್ಲಿ ಸಂಯಮ ಮುಖ್ಯ ಎಂಬ ಅರಿವನ್ನು ಕಾಪಾಡಿಕೊಂಡು ಬಂದದ್ದು ಫಲ ಕೊಟ್ಟಿದೆ.

‘ತರಬೇತುದಾರ ಜಿತೇಂದರ್ ಸಿಂಗ್ ಕೊಟ್ಟ ಸಲಹೆಗಳೇ ನನಗೆ ವರದಾನವಾಗಿದ್ದವು’ ಎಂದು ಕೃಣಾಲ್ 2017ರ ಐಪಿಎಲ್‌ ನಂತರ ಹೇಳಿದ್ದಾಗ, ‘ಈ ಹುಡುಗನಿಗೆ ಒಳ್ಳೆಯ ಭವಿಷ್ಯವಿದೆ’ ಎಂದು ರೋಹಿತ್ ಶರ್ಮ ಹೇಳಿದ್ದರು. ಅಂದಿನ ಭಾಷ್ಯ ಈಗ ನಿಜವಾಗಿದೆ.

ಪಾಂಡ್ಯ ಸಹೋದರರ ಜತೆ ಕೊಹ್ಲಿ
ಪಾಂಡ್ಯ ಸಹೋದರರ ಜತೆ ಕೊಹ್ಲಿ

ಕೃಣಾಲ್ ಅಷ್ಟೇ ಅಲ್ಲ, ಅವರ ತಮ್ಮ ಹಾರ್ದಿಕ್ ಕೂಡ ಎಡರುಗಳನ್ನು ದಾಟಿಯೇ ಭಾರತ ಕ್ರಿಕೆಟ್ ತಂಡದ ಪರವಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕ ದಾಖಲಿಸಿ, ನೆಲೆಯೂರಿದ್ದು. ಅವರೂ ಚೆನ್ನೈ ಸೂಪರ್‌ಕಿಂಗ್ಸ್‌ ತಂಡದ ವಿರುದ್ಧ ಕೋಲ್ಕತ್ತ ನೈಟ್‌ ರೈಡರ್ಸ್ ಪರವಾಗಿ ಆಡಿದ ಪಂದ್ಯವೊಂದನ್ನು ಮರೆಯಲಾಗದು. 8 ಎಸೆತಗಳಲ್ಲಿ 21 ರನ್‌ಗಳನ್ನು ಆ ಪಂದ್ಯದಲ್ಲಿ ಅವರು ಗಳಿಸಿದ್ದರು. ಅದು ದೊಡ್ಡ ಸಾಧನೆಯೇನೂ ಅಲ್ಲ ಎಂದುಕೊಳ್ಳುತ್ತೇವೆ. ವಿಷಯ ಅದಲ್ಲ, ಪಾಲ್ ಚಾಪ್‌ಮನ್ ಎಂಬ ಕ್ರೀಡಾವೈದ್ಯರ ಸಲಹೆಯ ಮೇರೆಗೆ ಎಂಟು ನೋವುನೀಗುವ ಗುಳಿಗೆಗಳನ್ನು ನುಂಗಿದ ಮೇಲೆ ಅವರು ಆ ಪಂದ್ಯದಲ್ಲಿ ಆಡಲು ಅವರಿಗೆ ಸಾಧ್ಯವಾದದ್ದು. ಕುತ್ತಿಗೆ ನೋವನ್ನು ಮರೆತು ಆಡಲು ಆಗ ‘ಪೇನ್‌ಕಿಲ್ಲರ್‌’ ನುಂಗುವುದು ಅನಿವಾರ್ಯವಾಗಿತ್ತು. ಆ ಇನಿಂಗ್ಸ್‌ ಮೂಲಕ ಅವರು ಗಮನ ಸೆಳೆಯದೇ ಹೋಗಿದ್ದರೆ ಈಗ ಅವರು ಗಳಿಸಿರುವಂಥ ವರ್ಚಸ್ಸು ಸಂಪಾದಿಸಲು ಎಷ್ಟು ಕಾಲ ಬೇಕಾಗುತ್ತಿತ್ತೋ?

ಅಣ್ಣ–ತಮ್ಮಂದಿರಿಬ್ಬರಿಗೂ ಕ್ರಿಕೆಟ್ ಹುಚ್ಚು. ಅವರಪ್ಪ ಹನ್ಸಲ್ ಅವರು ಸೂರತ್‌ನಲ್ಲಿ ಕಾರು ಕೊಳ್ಳುವವರಿಗೆ ಹಣಕಾಸು ಒದಗಿಸುವ ಸಣ್ಣ ವ್ಯಾಪಾರ ನಡೆಸುತ್ತಿದ್ದರು. ಮಕ್ಕಳ ಕ್ರಿಕೆಟ್ ಬಯಕೆಗೆ ನೀರೆರೆಯಲೆಂದೇ ವಡೋದರಕ್ಕೆ ಮನೆ ಬದಲಾಯಿಸಿದರು. ಕಿರಣ್ ಮೋರೆ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು. ಅಭ್ಯಾಸ ಮಾಡುತ್ತಿದ್ದ ಹುಡುಗರಿಗೆ ಮೈದಾನದಲ್ಲಿ ಪೌಷ್ಟಿಕ ಆಹಾರವೇನೂ ಸಿಗುತ್ತಿರಲಿಲ್ಲ. ಐದು ರೂಪಾಯಿಯ 'ಮ್ಯಾಗಿ' ಪೊಟ್ಟಣ ತಂದು, ಮೈದಾನಕ್ಕೆ ನೀರು ಬಿಡುವವನಿಂದ ನೀರು ಪಡೆದು, ಅದನ್ನು ಕಾಯಿಸುತ್ತಿದ್ದರು. ಅದಕ್ಕೆ 'ಮ್ಯಾಗಿ' ಹಾಕಿ ತಿನ್ನುವುದು ಇಬ್ಬರಿಗೂ ಅಭ್ಯಾಸವಾಗಿತ್ತು. ಮುಂದೆ ‘ಮ್ಯಾಗಿ ಅಪಾಯಕಾರಿ’ ಎಂಬ ಸುದ್ದಿ ಪ್ರಕಟವಾದಾಗ, ಇಬ್ಬರೂ ಸಹೋದರರು ಓದಿ ಮುಸಿಮುಸಿ ನಕ್ಕಿದ್ದರು. ಮ್ಯಾಗಿಯಲ್ಲೇ ಅವರು ಕಳೆದಿದ್ದ ದಿನಗಳಿಗೆ ಲೆಕ್ಕವಿರಲಿಲ್ಲ.

ಮಧ್ಯಮವರ್ಗದ ಕುಟುಂಬದ, ಭುಜದವರೆಗೆ ಬೆಳೆದ ಮಕ್ಕಳಿಗೆ ಅಪ್ಪ-ಅಮ್ಮನ ಕುರಿತು ಏನೆಲ್ಲ ಕಾಳಜಿ ಇರುತ್ತದೋ ಅದು ಹಾರ್ದಿಕ್, ಕೃಣಾಲ್ ಇಬ್ಬರಿಗೂ ಇತ್ತು. ಅಣ್ಣನ ಜೊತೆ ಹಳ್ಳಿ ಹಳ್ಳಿಗಳಲ್ಲಿ ಕ್ರಿಕೆಟ್ ಆಡಲು ಹಾರ್ದಿಕ್ ಹೋಗುತ್ತಿದ್ದರು. ಇಬ್ಬರೂ ಚೆನ್ನಾಗಿ ಆಡುತ್ತಾರೆಂದು ಟೆನಿಸ್ ಬಾಲ್ ಪಂದ್ಯಾವಳಿಗಳಿಗೆ ಯಾರು ಯಾರೋ ಕರೆದೊಯ್ಯುತ್ತಿದ್ದರು. ಅಣ್ಣನಿಗೆ 500, ತಮ್ಮನಿಗೆ 400 ರೂಪಾಯಿ ಸಂಭಾವನೆ ಫಿಕ್ಸ್. ಒಂದು ವಾರದ ಖರ್ಚು ಹುಟ್ಟುತ್ತದೆಂದು ಇಬ್ಬರೂ ಹೋಗಿ ಅಲ್ಲೆಲ್ಲ ಆಡಿ ಬರುತ್ತಿದ್ದರು. ಹೆಸರಿಲ್ಲದ ಅದೆಷ್ಟು ಟೂರ್ನಿಗಳಲ್ಲಿ ಅವರು ಗೆಲುವು ದಕ್ಕಿಸಿಕೊಟ್ಟರೋ?

ಐಪಿಎಲ್ ಗೆ ನಡೆದ ಹರಾಜಿನಲ್ಲಿ 2015ರಲ್ಲಿ ಹಾರ್ದಿಕ್ 10 ಲಕ್ಷ ರೂಪಾಯಿಗೆ ಆಯ್ಕೆಯಾದಾಗ ಅವರ ತಂದೆ ಸುಖಿಸಿದ್ದರು. ಮಂಗಳವಾರ ಕೃಣಾಲ್ ಅದೇ ತಂದೆಯನ್ನು ಸ್ಮರಿಸಿಯೇ ಕಣ್ಣಲ್ಲಿ ನೀರು ತುಂಬಿಕೊಂಡಿದ್ದು. ಇಂಥ ಇಬ್ಬರೂ ಮಕ್ಕಳನ್ನು ದೇಶಕ್ಕೆ ಕೊಟ್ಟ ಆ ತಂದೆ ಎಲ್ಲರನ್ನೂ ಅಗಲಿದ್ದಾರೆ. ಕ್ರಿಕೆಟ್‌ನ ಉಸಿರಾಟ ತೀವ್ರವಾಗುವುದೇ ಇಂತಹ ಭಾವುಕ ಕಥೆಗಳಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT