ಸೋಮವಾರ, ಆಗಸ್ಟ್ 15, 2022
27 °C
ಆಟದಮನೆ

PV Web Exclusive: ಮಣ್ಣಲ್ಲಿ ಬಿದ್ದಿದ್ದ ನ್ಯೂಜಿಲೆಂಡ್ ಮುಗಿಲಲ್ಲಿ ಎದ್ದದ್ದು...

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಏಳು ವರ್ಷಗಳ ಹಿಂದೆ ನೆಲಕಚ್ಚಿದ್ದ ನ್ಯೂಜಿಲೆಂಡ್‌ ಟೆಸ್ಟ್‌ ತಂಡ ಬ್ರೆಂಡನ್ ಮೆಕ್ಲಮ್ ಹಾಗೂ ಮೈಕ್ ಹೆಸನ್ ಕೊಟ್ಟ ಶಿಸ್ತಿನ ಚುಚ್ಚುಮದ್ದಿನಿಂದ ವಿಶ್ವ ಶ್ರೇಷ್ಠ ತಂಡಗಳಲ್ಲಿ ಒಂದಾಗಿ ಬೆಳೆದಿದೆ. ಆ ಸ್ಥಿತ್ಯಂತರವೇ ಆಸಕ್ತಿಕರ. ಅದಕ್ಕೆ ಪುಷ್ಟಿ ಕೊಡುವ ಅಂಕಿಸಂಖ್ಯೆಯ ಆಟವನ್ನು ಗಮನಿಸೋಣ...

 ***

2013ರ ಜೂನ್ 2ರಂದು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಮೊದಲ ಟೆಸ್ಟ್‌ ಕ್ರಿಕೆಟ್ ಪಂದ್ಯ ಶುರುವಾಯಿತು. ನ್ಯೂಜಿಲೆಂಡ್‌ಗೆ ದಕ್ಷಿಣ ಆಫ್ರಿಕಾ ಎದುರಾಳಿ. ನ್ಯೂಜಿಲೆಂಡ್‌ನ ರಾಸ್ ಟೇಲರ್ ಮನೋಬಲ ಕ್ಷೀಣಿಸಿದ್ದ ಹೊತ್ತು ಅದು. ಬ್ರೆಂಡನ್ ಮೆಕ್ಲಮ್ ಮೇಲೆ ನಾಯಕತ್ವದ ನೊಗ. ಟಾಸ್ ಗೆದ್ದರಾದರೂ ಅವರಿಗೆ ಬ್ಯಾಟಿಂಗ್ ತೆಗೆದುಕೊಳ್ಳುವುದೋ, ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದೋ ಎಂಬ ಗೊಂದಲವಿತ್ತು. ತಮ್ಮ ಧಾರ್ಷ್ಟ್ಯವನ್ನೇ ನೆಚ್ಚಿಕೊಂಡು ಅವರು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ದಕ್ಷಿಣ ಆಫ್ರಿಕಾ ಬೌಲಿಂಗ್ ಬತ್ತಳಿಕೆಯಲ್ಲಿ ಡೇಲ್ ಸ್ಟೇನ್ ಎಂಬ ಅನುಭವಿ ಬಾಣದ ಜತೆಗೆ ವೆರ್ನನ್ ಫಿಲ್ಯಾಂಡರ್ ಎಂಬ ಸ್ವಿಂಗ್ ಬಾಣವೂ ಇತ್ತು.

ಮಾರ್ಟಿನ್ ಗಪ್ಟಿಲ್ ಜತೆಗೆ ಮೆಕ್ಲಮ್ ಇನಿಂಗ್ಸ್ ಆರಂಭಿಸಲು ಹೋದರು. ಎರಡನೇ ಓವರ್‌ನಲ್ಲೇ ಫಿಲ್ಯಾಂಡರ್ ವೇಗ ವೈವಿಧ್ಯದ ಬಲೆಗೆ ಬಿದ್ದ ಗಪ್ಟಿಲ್ ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ಹೊರಟರು. ತಮ್ಮ ಪಾದಚಲನೆಯಿಂದಲೇ ಬೌಲರ್‌ಗಳ ಚಿತ್ತ ಕದಡುವ ಮೆಕ್ಲಮ್ ಎಂದಿನ ತಮ್ಮ ದಾಳಿಕೋರತನವನ್ನು ಅನ್ವಯಿಸಿ ಮುಂದಡಿ ಇಟ್ಟು ಆಡಲಾರಂಭಿಸಿದರು. ಒಂದು ಬೌಂಡರಿ ಬಂತಾದರೂ, ಅವರ ಈ ಧೋರಣೆಯನ್ನು ಫಿಲ್ಯಾಂಡರ್ ಅಂದಾಜು ಮಾಡಿದರು. ಆರನೇ ಓವರ್‌ನಲ್ಲಿ ಅವರ ‘ಟೀಸಿಂಗ್ ಲೈನ್‌’ ಕರಾಮತ್ತು ಮಾಡಿತು. ಮುನ್ನುಗ್ಗಿದ್ದ ಮೆಕ್ಲಮ್ ಬ್ಯಾಟನ್ನು ವಂಚಿಸಿ ನುಗ್ಗಿದ ಚೆಂಡು ವಿಕೆಟ್ಟನ್ನು ಹಾರಿಸಿತ್ತು. 20 ಓವರ್‌ಗಳಾಗುವಷ್ಟರಲ್ಲಿ ನ್ಯೂಜಿಲೆಂಡ್‌ನ ಹತ್ತೂ ವಿಕೆಟ್‌ಗಳು ಉರುಳಿದವು. ಮೊದಲ ಇನಿಂಗ್ಸ್‌ನ ಸ್ಕೋರ್ ಬರೀ 45. ಫಿಲ್ಯಾಂಡರ್‌ 5, ಸ್ಟೇನ್ 3, ಮಾರ್ನೆ ಮಾರ್ಕೆಲ್ 3 ವಿಕೆಟ್‌ಗಳನ್ನು ಉರುಳಿಸಿ ತಮ್ಮ ನೆಲ ವೇಗಿಗಳಿಗೆ ಯಾಕೆ ಸ್ವರ್ಗ ಎನ್ನುವುದರ ಪ್ರಾತ್ಯಕ್ಷಿಕೆ ನೀಡಿದರು.


ನ್ಯೂಜಿಲೆಂಡ್‌ನ ಜಂಘಾಬಲ ಕೇನ್ ವಿಲಿಯಮ್ಸನ್

ಅದೇ ದಿನ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಟ್ರೆಂಟ್‌ ಬೌಲ್ಟ್, ಡೌಗ್ ಬ್ರೇಸ್‌ವೆಲ್, ಕ್ರಿಸ್‌ ಮಾರ್ಟಿನ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಎರಡನೇ ದಿನದಾಟದವರೆಗೂ ಅವರು ಲಂಗರು ಹಾಕಿ ಆಡುವುದು ಮುಂದುವರಿಯಿತು. ಅಲ್ವಿರೊ ಪೀಟರ್‌ಸನ್ ಶತಕ ಹಾಗೂ ಜಾಕ್‌ ಕಾಲಿಸ್, ಎಬಿ ಡಿವಿಲಿಯರ್ಸ್ ಅರ್ಧ ಶತಕಗಳ ನೆರವಿನಿಂದ 8 ವಿಕೆಟ್‌ ನಷ್ಟಕ್ಕೆ 347 ರನ್‌ ಗಳಿಸಿ ಮೊದಲ ಇನಿಂಗ್ಸ್‌ ಅನ್ನು ದಕ್ಷಿಣ ಅಫ್ರಿಕಾ ಡಿಕ್ಲೇರ್‌ ಮಾಡಿಕೊಂಡಿತು.

ಎರಡನೇ ಇನಿಂಗ್ಸ್‌ನಲ್ಲಿ ಮೆಕ್ಲಮ್ ಅರ್ಧ ಶತಕ ಹೊಡೆದು ಸ್ವಲ್ಪ ಆತ್ಮಸ್ಥೈರ್ಯ ಸಂಪಾದಿಸಿಕೊಂಡರು. ಡೀನ್‌ ಬ್ರೌನಿ ಶತಕ ಗಳಿಸಿದ್ದು ದಕ್ಷಿಣ ಆಫ್ರಿಕಾ ಗೆಲುವನ್ನು ಸ್ವಲ್ಪ ಮುಂದೂಡಿದಂತಾಯಿತಷ್ಟೆ. 275 ರನ್‌ಗಳಿಗೆ ನ್ಯೂಜಿಲೆಂಡ್‌ನ ಎರಡನೇ ಇನಿಂಗ್ಸ್‌ ಕೂಡ ಮುಗಿಯಿತು. ಮೂರೇ ದಿನದಲ್ಲಿ ಟೆಸ್ಟ್‌ ಪಂದ್ಯ ಮುಗಿದ ಮೇಲೆ ಮೆಕ್ಲಮ್ ತಮ್ಮಿಷ್ಟದ ಬಿಯರ್ ಕುಡಿಯುತ್ತಾ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮೌನದಲ್ಲಿ ಕುಳಿತರು. ಸಹ ಆಟಗಾರರಲ್ಲೆಲ್ಲ ಗುಸುಗುಸು. ಹೇಗಿದ್ದ ತಂಡ ಹೇಗಾಗಿ ಹೋಯಿತೆಂಬ ಬೇಸರ.

ಬ್ರೆಂಡನ್ ಮೆಕ್ಲಮ್ ಹಾಗೂ ತರಬೇತುದಾರ ಮೈಕ್ ಹೆಸನ್ ಆ ಹಂತದಿಂದಲೇ ನ್ಯೂಜಿಲೆಂಡ್ ತಂಡದ ಮಾನಸಿಕ ಬಲ ಕ್ಷೀಣಿಸಿರುವುದನ್ನು ಮನಗಂಡರು. ಎರಡನೇ ಟೆಸ್ಟ್‌ನಲ್ಲೂ ದಕ್ಷಿಣ ಆಫ್ರಿಕಾ ಇನಿಂಗ್ಸ್‌ ಗೆಲುವು ದಾಖಲಿಸಿದ್ದು ಗಾಯದ ಮೇಲೆ ಉಪ್ಪು ಸವರಿದಂತಾಯಿತು.

ಹಿರಿಯ ಆಟಗಾರರು ನೋವು, ಗಾಯದ ನೆಪವೊಡ್ಡಿ ಅಭ್ಯಾಸಕ್ಕೆ ಚಕ್ಕರ್ ಹೊಡೆಯುತ್ತಿದ್ದ ಕಾಲಘಟ್ಟವದು. ಜೂನಿಯರ್ ಕ್ರಿಕೆಟರ್‌ಗಳು ಅಂಥವರನ್ನು ನೋಡಿ ಕಕ್ಕಾಬಿಕ್ಕಿಯಾದದ್ದೇ ಅಲ್ಲದೆ, ತಾವೂ ಅಶಿಸ್ತಿನಿಂದ ಇರತೊಡಗಿದ್ದು ತಂಡಕ್ಕೆ ತಲೆಬಿಸಿಯಾಗಿತ್ತು. ಹೊರದೇಶದಲ್ಲಷ್ಟೇ ಅಲ್ಲದೆ ತವರಿನಲ್ಲಿಯೂ ಮೊದಲಿನ ಲಯದಲ್ಲಿ ನ್ಯೂಜಿಲೆಂಡ್ ಆಡದೇಹೋದದ್ದನ್ನು ನೋಡಿದ ಎಷ್ಟೋ ವೀಕ್ಷಕರು ರಗ್ಬಿ ಕಡೆಗೆ ವಾಲಿಕೊಂಡರು. ಗಾಳಿಪಟವನ್ನು ಮೇಲಕ್ಕೆ ಹಾರಿಸಲು ತಕ್ಕ ಸೂತ್ರ ತಮ್ಮ ಕೈಯಲ್ಲಿಲ್ಲ ಎನ್ನುವುದು ಮೆಕ್ಲಮ್‌ಗೆ 2013ರಲ್ಲೇ ಗೊತ್ತಾಯಿತು. ಆಮೇಲೆ ನಿಧನಿಧಾನವಾಗಿ ಶಿಸ್ತಿನ ಚುಚ್ಚುಮದ್ದು ಕೊಟ್ಟರು. ಮುಂದಿನ ಎಂಟರ ಪೈಕಿ ಆರು ಟೆಸ್ಟ್‌ಗಳು ಡ್ರಾ ಆದವು. ವಿಂಡೀಸ್‌ ಎದುರು ಸತತವಾಗಿ ಎರಡು ಪಂದ್ಯಗಳನ್ನು ಗೆದ್ದಮೇಲೆ ಆತ್ಮವಿಶ್ವಾಸ ಮರಳತೊಡಗಿತು.


 ಶಾನ್ ಪೊಲಾಕ್ ಜತೆ ಬ್ರೆಂಡನ್ ಮೆಕ್ಲಮ್ 

2007ರಲ್ಲಿ ಸ್ಟೀಫನ್ ಫ್ಲೆಮಿಂಗ್ ನಾಯಕತ್ವದ ಜವಾಬ್ದಾರಿಯಿಂದ ಹೊರಬಂದಮೇಲೆ ನ್ಯೂಜಿಲೆಂಡ್‌ ಟೆಸ್ಟ್‌ ತಂಡದಲ್ಲಿ ಸಮಸ್ಯೆಗಳು ಶುರುವಾದದ್ದು. 80 ಟೆಸ್ಟ್‌ಗಳಲ್ಲಿ ನಾಯಕರಾಗಿದ್ದ ಅನುಭವಿ ಅವರು. ಮೃದು ಸ್ವಭಾವದ ಡೇನಿಯೆಲ್ ವೆಟ್ಟೋರಿಗೆ ಆ ಹೊಣೆಗಾರಿಕೆ ಹೋಯಿತು. ವೆಟ್ಟೋರಿ ನಾಯಕತ್ವದಲ್ಲಿ ಆಡಿದ 32 ಟೆಸ್ಟ್‌ಗಳಲ್ಲಿ ಆರರಲ್ಲಿ ಮಾತ್ರ ಗೆಲುವು ಸಂದಿತು. 16ರಲ್ಲಿ ಸೋಲು. 2007ರಿಂದ 2013 ನ್ಯೂಜಿಲೆಂಡ್‌ ತನ್ನ ತವರಿನಲ್ಲೂ ದುರ್ಬಲವಾಗಿಬಿಟ್ಟ ಅವಧಿ. ಚೆಂಡು ಎತ್ತರಕ್ಕೆ ಪುಟಿಯುವ, ಸ್ವಿಂಗ್‌ಗೆ ಹೇಳಿಮಾಡಿಸಿದ ಅಲ್ಲಿನ ಪಿಚ್‌ಗಳಲ್ಲಿ ನ್ಯೂಜಿಲೆಂಡ್ ಯಾವತ್ತೂ ಬಲಾಢ್ಯವೇ. ಆದರೆ, ಮಾನಸಿಕವಾಗಿ ಹಾಗೂ ಸಾಂಘಿಕವಾಗಿ ಆಡುವುದರಲ್ಲಿ ಎಡವಿದ್ದರ ಪರಿಣಾಮ ಅಂಥ ಸ್ಥಿತಿಗೆ ತಲುಪಿತು. ತನ್ನ ನೆಲದಲ್ಲಿಯೂ ಆ ಅವಧಿಯಲ್ಲಿ ಎಂಟು ಪಂದ್ಯ ಗೆದ್ದು, ಎಂಟರಲ್ಲಿ ಸೋತಿತ್ತು.

ಈಗ ಅದು ನಂಬರ್‌ ಒನ್‌ ಟೆಸ್ಟ್‌ ತಂಡವಾಗಿ ಬೆಳೆದಿದೆ. ಅದರ ನಾಯಕ ಕೇನ್‌ ವಿಲಿಯಮ್ಸನ್ ನಂಬರ್ ಒನ್ ಟೆಸ್ಟ್‌ ಬ್ಯಾಟ್ಸ್‌ಮನ್ ಎನ್ನುವುದು ಬೋನಸ್. 2014ರಿಂದ ಇಲ್ಲಿಯವರೆಗೆ ತವರಿನಲ್ಲಿ ಆಡಿದ 31 ಟೆಸ್ಟ್‌ ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ನ್ಯೂಜಿಲೆಂಡ್ ಸೋತಿದೆ. 22ರಲ್ಲಿ ಗೆದ್ದಿರುವುದು ಅದೆಷ್ಟು ಸದೃಢ ಎನ್ನುವುದಕ್ಕೆ ಕನ್ನಡಿ ಹಿಡಿಯುತ್ತದೆ. ಪಾಕಿಸ್ತಾನದ ವಿರುದ್ಧ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ ಸಂದರ್ಭದಲ್ಲಿ ಅದು ವಿಶ್ವದ ಅತಿ ಶ್ರೇಷ್ಠ ಟೆಸ್ಟ್‌ ತಂಡ ಎನ್ನುವ ವಿಶೇಷಣವನ್ನು ಅಂಟಿಸಿಕೊಂಡಿತು. ವಿದೇಶಿ ನೆಲದಲ್ಲಿ ಅದು ಇಷ್ಟು ಯಶಸ್ವಿಯಾಗಿಲ್ಲ. 2014ರ ನಂತರ ಹೊರದೇಶಗಳಲ್ಲಿ ಆಡಿರುವ 28 ಟೆಸ್ಟ್‌ಗಳಲ್ಲಿ 10ರಲ್ಲಿ ಗೆದ್ದು 14ರಲ್ಲಿ ಸೋಲುಂಡಿದೆ. ಮೊನ್ನೆ ಮೊನ್ನೆ ಇಂಗ್ಲೆಂಡ್‌ ನೆಲದಲ್ಲಿ ಅದೇ ತಂಡದ ವಿರುದ್ಧ ಟೆಸ್ಟ್‌ ಸರಣಿ ಗೆದ್ದು ಬೀಗಿರುವುದು, ಆತ್ಮಬಲವನ್ನು ಇನ್ನಷ್ಟು ಹೆಚ್ಚುಮಾಡಿದೆ. ಅಷ್ಟೇ ಅಲ್ಲ, ಭಾರತಕ್ಕೆ ತಾನು ಅಲ್ಲಿ ಎಂತಹ ಸವಾಲನ್ನು ಒಡ್ಡಬಲ್ಲದೆನ್ನುವುದನ್ನೂ ಸಾರಿದೆ.


ಟ್ರೆಂಟ್ ಬೌಲ್ಟ್

ಟೆಸ್ಟ್‌ ಕ್ರಿಕೆಟ್‌ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ನ್ಯೂಜಿಲೆಂಡ್‌ನ 14 ಆಟಗಾರರು ಮಾತ್ರ 70ಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಆ ಪೈಕಿ ಐದು ಮಂದಿ ಈಗಿನ ತಂಡದಲ್ಲಿರುವುದು ವಿಶೇಷ. ರಾಸ್‌ ಟೇಲರ್, ಕೇನ್ ವಿಲಿಯಮ್ಸನ್, ಟಿಮ್ ಸೌಥಿ, ಬಿಜೆ ವಾಟ್ಲಿಂಗ್‌ ಹಾಗೂ ಟ್ರೆಂಟ್‌ ಬೌಲ್ಟ್‌ ಆ ಅನುಭವಿಗಳು. 58 ಟೆಸ್ಟ್‌ಗಳನ್ನು ಆಡಿರುವ ಟಾಮ್‌ ಲಾಥಮ್ ಇರುವಿಕೆ ತಂಡಕ್ಕೆ ಬೋನಸ್‌. ದೀರ್ಘಾವಧಿ ಕ್ರಿಕೆಟ್‌ನ ಸ್ಪೆಷಲಿಸ್ಟ್‌ ಬೌಲರ್ ಎಂದೇ ಗಮನ ಸೆಳೆದಿರುವ ನೀಲ್‌ ವ್ಯಾಗ್ನರ್‌ ಕೂಡ 53 ಟೆಸ್ಟ್‌ಗಳನ್ನು ಆಡಿದ್ದಾರೆ.

2014ರ ನಂತರ ನ್ಯೂಜಿಲೆಂಡ್‌ ಕ್ರಿಕೆಟ್‌ ಆಯ್ಕೆಗಾರರು ತಮ್ಮ ತಂಡವನ್ನು ಗಟ್ಟಿಯಾಗಿ ರೂಪಿಸಬೇಕು ಎಂದು ಸಂಕಲ್ಪ ಮಾಡಿದಂತಿದೆ. ಅದಕ್ಕೇ ಆಗಿನಿಂದ ಇಲ್ಲಿಯವರೆಗೆ 59 ಟೆಸ್ಟ್‌ಗಳಿಗೆ ಒಟ್ಟು 35 ಆಟಗಾರರನ್ನು ಮಾತ್ರ ಆಯ್ಕೆ ಮಾಡಿದ್ದಾರೆ. ಹನ್ನೊಂದು ಸ್ಥಿರ ಆಟಗಾರರಲ್ಲದೆ 24 ಮಂದಿಗೆ ಮಾತ್ರ ಆರೇಳು ವರ್ಷಗಳಲ್ಲಿ ಆಡಲು ಅವಕಾಶ ಸಿಕ್ಕಿದೆ ಎಂದರ್ಥ.

ನ್ಯೂಜಿಲೆಂಡ್‌ಗೆ ಹೋಲಿಸಿದರೆ ಭಾರತ ಕೂಡ ಅಂಥದ್ದೇ ಸ್ಥಿರ ತಂಡವನ್ನು ಹೊಂದಿದೆ. 2014ರಿಂದ ಇಲ್ಲಿಯವರೆಗೆ ಭಾರತ 74 ಟೆಸ್ಟ್‌ಗಳಲ್ಲಿ 45 ಆಟಗಾರರನ್ನಷ್ಟೇ ಆಡಿಸಿದೆ.

2007ರಿಂದ 2013ರ ಅವಧಿಯಲ್ಲಿ ನ್ಯೂಜಿಲೆಂಡ್‌ 57 ಟೆಸ್ಟ್‌ಗಳಲ್ಲಿ 49 ಆಟಗಾರರನ್ನು ಆಯ್ಕೆ ಮಾಡಿತ್ತು. ಸ್ಥಿರತೆಯ ಕೊರತೆ ಆಗ ಇತ್ತೆನ್ನುವುದಕ್ಕೆ ಈ ಅಂಕಿಅಂಶ ಪುಷ್ಟಿ ಕೊಡುತ್ತದೆ.

55 ಟೆಸ್ಟ್‌ಗಳಲ್ಲಿ 64.27ರ ಸರಾಸರಿಯಲ್ಲಿ ರನ್‌ ಗಳಿಸಿರುವ ತಣ್ಣಗಿನ ಗಡ್ಡಧಾರಿ ವಿಲಿಯಮ್ಸನ್ ನಾಜೂಕು ಸ್ಕ್ವೇರ್‌ ಕಟ್‌ಗಳ ಕಾಣ್ಕೆ ಈ ಯಶಸ್ಸಿನಲ್ಲಿ ಇದೆ. ಮೂರು ಬೌಲರ್‌ಗಳು 29ಕ್ಕೂ ಕಡಿಮೆ ಸರಾಸರಿ ರನ್‌ ನೀಡಿ ತಲಾ 180ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಿತ್ತು ತಂಡದ ಗೆಲುವಿನೋಟಕ್ಕೆ ನೆರವಾಗಿದ್ದಾರೆ. ಅಷ್ಟೇ ಅಲ್ಲ, ಹೊಸಬರು ಬಂದಾಗ ಆ ತಂಡ ನಡೆಸಿಕೊಂಡಿರುವ ರೀತಿಯೂ ಶ್ಲಾಘನೀಯ. 2014ರ ನಂತರ 16 ವಿವಿಧ ಆಟಗಾರರು ಪಂದ್ಯ ಪುರುಷೋತ್ತಮ ಪ್ರಶಸ್ತಿಗಳನ್ನು ಪಡೆದಿರುವುದೇ ಇದಕ್ಕೆ ಸಾಕ್ಷಿ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ಗೆ ಆಯ್ಕೆ ಮಾಡಿಕೊಂಡ ಕೇಲ್ ಜೇಮಿಸನ್ ಕೆಲವೇ ತಿಂಗಳುಗಳ ಹಿಂದೆ ಪಾಕಿಸ್ತಾನದ ಎದುರು 11 ವಿಕೆಟ್‌ಗಳನ್ನು ಪಡೆದ ಸಾಧನೆಗೆ ಅಡಿಗೆರೆ ಎಳೆಯಬೇಕು. ಪರಿಸ್ಥಿತಿ ನೀಳಕಾಯದ ಈ ಹುಡುಗನಿಗೆ ಅನುಕೂಲಕರವಾಗಿದೆ ಎಂದು ಹೊಸ ಚೆಂಡಿನ ಹೊಳಪು ಮಾಯವಾಗುವ ಮೊದಲೇ ಅದನ್ನು ಜೇಮಿಸನ್‌ಗೆ ಟ್ರೆಂಟ್‌ ಬೌಲ್ಟ್‌ ಕೊಟ್ಟ ಗಳಿಗೆ ಬೆನ್ನುತಟ್ಟುವ ಗುಣಕ್ಕೆ ಹಿಡಿದ ಕನ್ನಡಿ.

ಇಂಗ್ಲೆಂಡ್ ವಿರುದ್ಧ ಇತ್ತೀಚೆಗೆ ನಡೆದ ಸರಣಿಯ ಮೊದಲ ಟೆಸ್ಟ್‌ನಲ್ಲಿ ಪ್ರಥಮ ಇನಿಂಗ್ಸ್‌ನಲ್ಲೇ ದ್ವಿಶತಕ ಹೊಡೆದ ಡೆವನ್‌ ಕಾನ್ವೆ ಪದಾರ್ಪಣೆ ಪಂದ್ಯದ ಆಟ ಹೇಗಿತ್ತೆನ್ನುವುದನ್ನೂ ಭಾರತದವರು ಗಮನಿಸಿದ್ದಾರೆ.

2013ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತರಗೆಲೆಗಳಂತೆ ಉದುರಿದ್ದ ಬ್ಯಾಟ್ಸ್‌ಮನ್‌ಗಳ ಪೈಕಿ 13 ರನ್‌ ಅತಿಹೆಚ್ಚು ಎನಿಸಿತ್ತು. ಅದನ್ನು ಗಳಿಸಿದ್ದವರು ವಿಲಿಯಮ್ಸನ್. 2014ರಿಂದೀಚೆಗೆ ಅವರು 55 ಟೆಸ್ಟ್‌ಗಳಲ್ಲಿ 5,335 ರನ್ ಕಲೆಹಾಕಿದ್ದಾರೆ. ಲಾಥಮ್ 58 ಪಂದ್ಯಗಳಲ್ಲಿ 4,017 ರನ್ ಜಮೆ ಮಾಡಿದ್ದರೆ, ರಾಸ್‌ ಟೇಲರ್ 54 ಪಂದ್ಯಗಳನ್ನು ಆಡಿ 3,372 ಸೇರಿಸಿದ್ದಾರೆ. ಇವರ ಅನುಭವದ ಸೌಧ ಗಟ್ಟಿಯಾಗಲು ಬುನಾದಿ ಹಾಕಿಕೊಟ್ಟ ಮೆಕ್ಲಮ್ 19 ಪಂದ್ಯಗಳಲ್ಲಿ 52.02ರ ಸರಾಸರಿಯಲ್ಲಿ 1,769 ರನ್‌ ಗಳಿಸಿ ಕೊಟ್ಟು ಹೋದರು. ನಿಕೋಲ್ಸ್‌ ಹಾಗೂ ವಾಟ್ಲಿಂಗ್ ಕೂಡ ಬ್ಯಾಟಿಂಗ್ ಬಲವನ್ನು ಹೆಚ್ಚು ಮಾಡುವಂತೆ 40ರ ಅಥವಾ ಅದಕ್ಕೆ ಹತ್ತಿರದ ಸರಾಸರಿಯಲ್ಲಿ ರನ್‌ ಗಳಿಸುತ್ತಿದ್ದಾರೆ.

ಮಣ್ಣಲ್ಲಿ ಬಿದ್ದಿದ್ದ ತಂಡ ಮುಗಿಲಲ್ಲಿ ಎದ್ದಿರುವುದು ಹೀಗೆ ಎನ್ನುವುದಕ್ಕೆ ನ್ಯೂಜಿಲೆಂಡ್ ತಂಡದ ಈ ಸ್ಥಿತ್ಯಂತರ ತಾಜಾ ಉದಾಹರಣೆ. ಭಾರತದ ಆತ್ಮವಿಶ್ವಾಸ ಹಾಗೂ ಅನುಭವ ಒಂದು ಕಡೆ. ಬಂಡೆಯಂತೆ ಗಟ್ಟಿಗೊಂಡಿರುವ ನ್ಯೂಜಿಲೆಂಡ್‌ ಇನ್ನೊಂದು ಕಡೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಪಂದ್ಯಗಳನ್ನು ಅಗಲ ಕಣ್ಣುಗಳಿಂದ ಎದುರು ನೋಡಲು ಇನ್ನೇನು ಬೇಕು ಈಗ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು