ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸಿಕ್ಸರ್‌ವೀರರು...

Last Updated 5 ಮಾರ್ಚ್ 2021, 11:27 IST
ಅಕ್ಷರ ಗಾತ್ರ

1980ರ ದಶಕದ ಮಧ್ಯದಲ್ಲಿ ದೂರದರ್ಶನದಲ್ಲಿ ಸಿದ್ಧಾರ್ಥ ಬಸು ಅವರ ಜನಪ್ರಿಯ ‘ಕ್ವಿಜ್‌ ಟೈಮ್‌’ ಕಾರ್ಯಕ್ರಮದಲ್ಲಿ ಈ ಪ್ರಶ್ನೆ ಕೇಳಲಾಗಿತ್ತು. ಗ್ಯಾರಿ ಸೋಬರ್ಸ್‌ ಅವರು ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯವೊಂದರಲ್ಲಿ ಓವರ್‌ನ ಎಲ್ಲಾ ಆರೂ ಎಸೆತಗಳಲ್ಲಿ ಸಿಕ್ಸರ್‌ ಬಾರಿಸಿದ್ದರು. ಸಿಕ್ಸರ್‌ಗಳನ್ನು ಹೊಡೆಸಿಕೊಂಡಿದ್ದ ಆ ಬೌಲರ್‌ ಯಾರು?

1968ರಲ್ಲಿ ಇಂಗ್ಲಿಷ್‌ ಕೌಂಟಿ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ನ ಆಟಗಾರ ಪ್ರಸಿದ್ಧ ಆಲ್‌ರೌಂಡರ್‌ ಸೋಬರ್ಸ್‌, ಗ್ಲಾಮರ್ಗನ್‌ ವಿರುದ್ಧ ನಾಟಿಂಗ್‌ಹ್ಯಾಮ್‌ಷೈರ್‌ ಪರ ಸ್ವಾನ್‌ಸೀಯಲ್ಲಿ ಓವರ್‌ ಒಂದರ ಎಲ್ಲ ಎಸೆತಗಳನ್ನು ಸಿಕ್ಸರ್‌ಗಟ್ಟಿದ ಸಾಧನೆಯನ್ನು ವಿಶ್ವದಲ್ಲೇ ಮೊದಲ ಬಾರಿ ದಾಖಲಿಸಿದ್ದರು. ಆ ನತದೃಷ್ಟ ಬೌಲರ್‌, ಎಡಗೈ ಮಧ್ಯಮ ವೇಗಿ ಮಾಲ್ಕಂ ನ್ಯಾಶ್‌ ಆಗಿದ್ದರು. ಎರಡು ವರ್ಷಗಳ ಹಿಂದೆ (2019 ಜುಲೈ) ನ್ಯಾಶ್ ಮೃತಪಟ್ಟಿದ್ದರು. ಇಂಗ್ಲೆಂಡ್‌ನ ಪ್ರಸಿದ್ಧ ಹರಾಜು ಸಂಸ್ಥೆ ಸೊದೆಬಿ, ಆ ಸಿಕ್ಸರ್‌ ಬಾರಿಸಿದ್ದ ಚೆಂಡನ್ನು 2006ರಲ್ಲಿ ಹರಾಜಿಗೆ ಹಾಕಿತ್ತು. ಆದರೆ ಚೆಂಡಿನ ನೈಜತೆಯು ಚರ್ಚೆಗೆ ಕಾರಣವಾಯಿತು. 26,400 ಪೌಂಡ್‌ಗಳಿಗೆ ಮಾರಾಟವಾಗಿದ್ದ ಆ ಸಿಕ್ಸರ್‌ಗಳ ಚೆಂಡು ‘ಡ್ಯೂಕ್‌‘ ಬಾಲ್‌ ಆಗಿತ್ತು. ಆದರೆ ತಾವು ಆ ಪಂದ್ಯದಲ್ಲಿ ಬೌಲಿಂಗ್‌ ಮಾಡಿದ್ದು ಸರಿಜ್‌ (surridge) ಚೆಂಡಿನಿಂದ ಎಂದಿದ್ದರಂತೆ ನ್ಯಾಶ್‌.

ಅಂದಿನಿಂದ ಗುರುವಾರದವರೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೂರು ಸಲ ಸೇರಿ ಒಟ್ಟು ಎಂಟು ಬಾರಿ ಒಂದೇ ಓವರ್‌ನ ಅರ್ಹ ಆರೂ ಎಸೆತಗಳನ್ನು ಸಿಕ್ಸರ್‌ಗಟ್ಟಿದ ಸಾಧನೆಯಾಗಿದೆ.

1985ರ ಜನವರಿಯಲ್ಲಿ ರಣಜಿ ಟ್ರೋಫಿ ಪಂದ್ಯವೊಂದರಲ್ಲಿ ಮುಂಬೈನ ಆಟಗಾರ, ಈಗಿನ ಭಾರತ ತಂಡದ ಕೋಚ್‌ ರವಿಶಾಸ್ತ್ರಿ, ಬರೋಡದ ಎಡಗೈ ಸ್ಪಿನ್ನರ್‌ ತಿಲಕ್‌ ರಾಜ್‌ ಬೌಲಿಂಗ್‌ನಲ್ಲಿ ಹೀಗೆಯೇ ಓವರ್‌ ಒಂದರ ಆರೂ ಎಸೆತಗಳನ್ನು ಸಿಕ್ಸರ್‌ಗಟ್ಟಿದ್ದರು.

ಭಾರತ ತಂಡದ ಕೋಚ್‌ ರವಿಶಾಸ್ತ್ರಿ
ಭಾರತ ತಂಡದ ಕೋಚ್‌ ರವಿಶಾಸ್ತ್ರಿ

ವಿಪರ್ಯಾಸವೆಂದರೆ ರವಿ ಶಾಸ್ತ್ರಿ ಬರೇ 10 ದಿನಗಳ ಹಿಂದೆ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯವೊಂದರಲ್ಲಿ ತೀರಾ ನಿಧಾನಗತಿಯ ಬ್ಯಾಟಿಂಗ್‌ನಿಂದ ಮೂದಲಿಕೆಗೆ ಒಳಗಾಗಿದ್ದರು! ಕೋಲ್ಕತ್ತದಲ್ಲಿ ಅತ್ಯಂತ ನಿಧಾನಗತಿಯ ಶತಕ ಬಾರಿಸಿದಾಗ, ಪ್ರೇಕ್ಷಕರು ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಶತಕಕ್ಕೆ 350ಕ್ಕೂ ಹೆಚ್ಚು ಎಸೆತಗಳನ್ನು ಅವರು ‘ತಿಂದು ಹಾಕಿದ್ದರು’.

ಆದರೆ ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ಓವರ್‌ನ ಎಲ್ಲ ಆರೂ ಎಸೆತಗಳನ್ನು ಆಟಗಾರನೊಬ್ಬ ಸಿಕ್ಸರ್‌ ಆಗಿ ಅಟ್ಟಿದ ಸಾಧನೆ ದಾಖಲಾಗಲು 2007ರವರೆಗೆ ಕಾಯಬೇಕಾಯಿತು. ಆ ವರ್ಷ ಒಂದಲ್ಲ, ಎರಡು ಬಾರಿ ಇಂಥ ಸಾಧನೆ ದಾಖಲಾಯಿತು. ವೆಸ್ಟ್‌ ಇಂಡೀಸ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕದ ಆರಂಭ ಆಟಗಾರ ಹರ್ಷೆಲ್‌ ಗಿಬ್ಸ್‌ ಅವರು ನೆದರ್ಲೆಂಡ್ಸ್‌ನ ಲೆಗ್‌ ಸ್ಪಿನ್ನರ್‌ ಡಾನ್‌ ವಾನ್‌ ಬಂಗೆ ಅವರ ಒಂದೇ ಓವರ್‌ನ ಎಲ್ಲ ಆರೂ ಎಸೆತಗಳನ್ನು ಸಿಕ್ಸರ್‌ಗಟ್ಟಿ ಶೌರ್ಯ ಮೆರೆದಿದ್ದರು.

ಯುವರಾಜ್‌ ಸಿಂಗ್
ಯುವರಾಜ್‌ ಸಿಂಗ್

2007ರಲ್ಲೇ ಚೊಚ್ಚಲ ಟಿ–20 ವಿಶ್ವಕಪ್‌ನಲ್ಲಿ ಯುವರಾಜ್‌ ಸಿಂಗ್‌ , ಇಂಗ್ಲೆಂಡ್‌ ವಿರುದ್ಧ ದಕ್ಷಿಣ ಆಫ್ರಿಕದ ಕಿಂಗ್ಸ್‌ಮೀಡ್‌ನಲ್ಲಿ ಸ್ಟುವರ್ಟ್‌ ಬ್ರಾಡ್‌ ಅವರ ಒಂದೇ ಓವರ್‌ ಆರೂ ಎಸೆತಗಳನ್ನು ಬೌಂಡರಿಯಾಚೆಗೆ ಕಳುಹಿಸಿ ಪರಾಕ್ರಮ ತೋರಿದ್ದರು.

ಈಗಿನದು ಅಜಾನುಬಾಹು ಕೀರನ್‌ ಪೊಲಾರ್ಡ್‌ ಸರದಿ. ಐಪಿಎಲ್‌ ನೋಡಿದವರಿಗೆಲ್ಲಾ ಅವರು ರಟ್ಟೆಯರಳಿಸುವ ಪರಿ ಚಿರಪರಿಚಿತವೇ. ಬುಧವಾರ ಆ್ಯಂಟೀಗಾದ ಸೇಂಟ್‌ ಜಾನ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟಿ–20 ಪಂದ್ಯದ ತಮ್ಮ ಎರಡನೇ ಓವರ್‌ನಲ್ಲಿ ಹ್ಯಾಟ್ರಿಕ್‌ ಸಾಧನೆಯೊಡನೆ ಕನಸಿನ ಆರಂಭದ ಸಂಭ್ರಮದಲ್ಲಿದ್ದ ಆಫ್‌ ಸ್ಪಿನ್ನರ್‌ ಅಖಿಲ ಧನಂಜಯ ಅವರಿಗೆ ದೈತ್ಯ ಪೊಲಾರ್ಡ್‌ ಅವರಿಂದಾಗಿ ಮೂರನೇ ಓವರ್‌ ದುಃಸ್ವಪ್ನವಾಗಿ ಪರಿಣಮಿಸಿತು. ಆರೂ ಎಸೆತ ಸಿಕ್ಸರ್‌ಗೆ.

ಕ್ರಿಕೆಟ್‌, ಅದರಲ್ಲೂ ವಿಶೇಷವಾಗಿ ಸೀಮಿತ ಓವರುಗಳ ಪಂದ್ಯಗಳು ಬ್ಯಾಟ್ಸ್‌ಮನ್ನರ ಪಕ್ಷಪಾತಿ ಎಂಬ ಮಾತುಗಳು ಬಹಳ ಹಳೆಯದು. ಬೌಲರ್‌ಗಳಿಗೆ ಇಲ್ಲಿ ನಿಯಮಗಳ ಕಟ್ಟಳೆ ಹೆಚ್ಚು. ಓವರ್‌ಗೆ ಇಂತಿಷ್ಟೇ ಬೌನ್ಸರ್‌ಗೆ ಅವಕಾಶ. ಬೌಲರ್‌ ಕ್ರಿಸ್‌ ದಾಟಿದರೆ ಎದುರಾಳಿ ಆಟಗಾರನಿಗೆ ‘ಫ್ರೀ ಹಿಟ್‌’ನಂಥ ಬೋನಸ್‌. ಎಷ್ಟೇ ಚೆನ್ನಾಗಿ ಬೌಲಿಂಗ್‌ ಮಾಡಿದರೂ ಬೌಲರ್‌ಗೆ ಇಂತಿಷ್ಟೇ ಓವರ್‌ ಅವಕಾಶ.

ಅದು 1997ರ ಮಾರ್ಚ್‌. ಪಾಕಿಸ್ತಾನ ವಿರುದ್ಧ ಇಂಡಿಪೆಂಡೆನ್ಸ್‌ ಕಪ್‌ ಪಂದ್ಯ ಆಡಲು ಶ್ರೀಲಂಕಾ ಗ್ವಾಲಿಯರ್‌ನ ಕ್ಯಾಪ್ಟನ್‌ ರೂಪ್‌ಸಿಂಗ್‌ ಸ್ಟೇಡಿಯಂಗೆ ಬಂದಿತ್ತು. ಪಂದ್ಯದ ಮುನ್ನಾ ದಿನ, ತಂಡದ ನಾಯಕ ಅರ್ಜುನ ರಣತುಂಗಾ ಅವರನ್ನು ಆರೇಳು ಮಂದಿ ಮಾಧ್ಯಮದವರು ನೆಟ್ಸ್‌ ಬಳಿಯೇ ಸುತ್ತುವರಿದಿದ್ದರು. ಈಗಿನಂತೆ ಸಿಕ್ಕಾಬಟ್ಟೆ ಭದ್ರತೆ ಇರದ ದಿನಗಳು ಅವು. ‘ಏಕದಿನ ಪಂದ್ಯ ಬರೇ ಹೊಡಿ–ಬಡಿ ಬ್ಯಾಟ್ಸಮನ್ನರ ಸಾಮರ್ಥ್ಯಕ್ಕೆ ವೇದಿಕೆಯಾಗುತ್ತಿದೆಯಲ್ಲಾ’ ಎಂದು ಕೇಳಿದ ಪ್ರಶ್ನೆಗೆ ಅನುಭವಿ ಆಟಗಾರನ ತಕ್ಷಣದ ಮರುಪ್ರಶ್ನೆ ಹೀಗಿತ್ತು– ‘ಪಂದ್ಯದಲ್ಲಿ ಬರೇ ವಿಕೆಟ್‌ಗಳು ಬೀಳುತ್ತ ಇರುವುದನ್ನು ನೋಡಲು ಪ್ರೇಕ್ಷಕರು ದುಡ್ಡುಕೊಟ್ಟು ಮೈದಾನಕ್ಕೆ ಬರುತ್ತಾರೆಯೇ?.’

ಸರ್ವಕಾಲಕ್ಕೂ ಸಲ್ಲುವ ಮಾತು ಅದಾಗಿತ್ತು. ಅತಿ ವೇಗದ ಅರ್ಧ ಶತಕ, ವೇಗದ ಶತಕ, ವೇಗದ ದ್ವಿಶತಕ, ಹೆಚ್ಚು ಸಿಕ್ಸರ್‌ಗಳು, ಅತಿ ಹೆಚ್ಚು ಬೌಂಡರಿಗಳು.... ಹೀಗೆ ದಾಖಲೆಗಳು ಮೂಡುತ್ತಲೇ ಇವೆ. ಅವುಗಳನ್ನು ಮತ್ತೊಬ್ಬರು ಮುರಿಯುತ್ತಲೇ ಇದ್ದಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT